ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನ ಭೂಮಿ ಒತ್ತುವರಿ ತೆರವಿಗೆ ಆಗ್ರಹ

Last Updated 28 ಅಕ್ಟೋಬರ್ 2017, 9:26 IST
ಅಕ್ಷರ ಗಾತ್ರ

ರಾಯಚೂರು: ನಗರದ ಆಶಾಪುರ ರಸ್ತೆಯಲ್ಲಿರುವ ಸರ್ವೆ ನಂಬರ್‌ 1425/2ರ 1 ಎಕರೆ 2ಗುಂಟೆ ಮತ್ತು 1428/2ರ 3 ಎಕರೆ 32 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸ್ಮಶಾನಕ್ಕೆ ಮೀಸಲಿಟ್ಟು, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಒತ್ತುವರಿಗೆ ಸಹಕರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೈದರಾಬಾದ್‌ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಬಡಾವಣೆಗಳ ನಿವಾಸಿಗಳು ಶುಕ್ರವಾರ ರಸ್ತೆತಡೆ ನಡೆಸಿದರು.

ನಗರದ ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ  ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ವಾರ್ಡ್‌ ಸಂಖ್ಯೆ 1ರಿಂದ 6ರ ವರೆಗಿನ ಬಡಾವಣೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರು ತಲೆ ತಲಾಂತರಗಳಿಂದ ಈ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿದ್ದಾರೆ. ಆದರೆ, ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಸ್ಮಶಾನದಲ್ಲಿದ್ದ ಸಮಾಧಿಗಳನ್ನು ರಾತ್ರೋರಾತ್ರಿ ತೆರವುಗೊಳಿಸಿ ಜನರ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಮಶಾನಕ್ಕೆ ಬಳಕೆ ಮಾಡಲು ಈ ಭೂಮಿ ಹೊರತುಪಡಿಸಿದರೆ, ಯಾವುದೇ ಅಧಿಕೃತ ಸ್ಮಶಾನ ಈ ಬಡಾವಣೆಗಳಲ್ಲಿ ಇಲ್ಲ. ಶವಸಂಸ್ಕಾರಕ್ಕೆ ಸ್ಮಶಾನ ಭೂಮಿಯ ತೊಂದರೆ ಇದ್ದರೂ, ಪ್ರಭಾವಿಗಳು ಇರುವ ಭೂಮಿಯನ್ನು ಕಬಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು. ಈ ಭೂಮಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ನಡೆದಿದ್ದು, ರಾಜಿಸಂಧಾನದ ಪ್ರಕಾರ ಡಿಕ್ರಿ ಕೂಡ ಆಗಿದೆ.

ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಮ್ಯೂಟೇಶನ್‌ ಮಾಡುವಾಗ ದಾಖಲೆಗಳನ್ನು ಪರಿಶೀಲನೆ ನಡೆಸದೆ ಮ್ಯೂಟೇಶನ್‌ ಮಾಡಿಕೊಟ್ಟಿದ್ದಾರೆ. ಹಿಂದಿನ ಉಪವಿಭಾಗಾಧಿಕಾರಿ ಮಾಡಿದ ತಪ್ಪಿನಿಂದ ನಕಲಿ ದಾಖಲೆಗಳು ಸೃಷ್ಟಿಯಾಗಿವೆ ಎಂದು ಅವರು ಆರೋಪಿಸಿದರು.

ಈ ಭೂಮಿಯ ಬಿನ್‌ಶೇತ್ಕಿ ಅರ್ಜಿಯ ಪ್ರಕಾರ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರರು ಹಾಗೂ ಕಂದಾಯ ನಿರೀಕ್ಷಕರು ನೀಡಿದ ವರದಿಯಲ್ಲಿ ಮಸಣ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ತಮ್ಮ ಅಧೀನ ಅಧಿಕಾರಿಗಳು ತಮ್ಮ ಗಮನಕ್ಕೆ ತರದೇ ಬಿನ್‌ಶೇತ್ಕಿ ನೀಡುವ ಮೂಲಕ ತಪ್ಪು ಮಾಡಿದ್ದಾರೆ ಎಂದು ಆಪಾದಿಸಿದರು.

ಕೂಡಲೇ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ತಂತಿ ಬೇಲಿ ಹಾಕಬೇಕು. ಸ್ಮಶಾನ ಭೂಮಿಯೆಂದು ಆದೇಶ ಹೊರಡಿಸಬೇಕು. ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ 15– 20 ಎಕರೆ ಸ್ಮಶಾನ ಭೂಮಿಯ ಅವಶ್ಯಕತೆಯಿದ್ದು, ಭೂಮಿ ಒದಗಿಸಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿಗಳಾದ ರಾಮಾಂಜನೇಯಲು, ಗೋವಿಂದರಾಜ ಹೊಸೂರು, ಶಂಕರ್‌, ಕೊಂಡಮ್ಮ, ಈರಣ್ಣ, ಅಂಜಿ, ರಾಜು, ಯಲ್ಲಪ್ಪ, ಯಂಕಪ್ಪ, ಭೀಮಯ್ಯ, ಮಹೇಶ, ಗಣೇಶ, ಯಂಕಣ್ಣ, ಈರಣ್ಣ, ಸುರೇಶಬಾಬು, ನರಸಿಂಹ, ಈರಮ್ಮ, ನಾಗರಾಜ, ಆಂಜನೇಯ, ಶೀನು, ಬಂಗಾರಪ್ಪ, ಮಲ್ಲೇಶ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT