ಭಾರತದ ಮಿಂಚಿನ ಆಟ

ಶುಕ್ರವಾರ, ಜೂನ್ 21, 2019
22 °C
ನವನೀತ್‌, ನವಜ್ಯೋತ್‌ ಕೌರ್‌, ರಾಣಿಗೆ ತಲಾ ಎರಡು ಗೋಲು

ಭಾರತದ ಮಿಂಚಿನ ಆಟ

Published:
Updated:
ಭಾರತದ ಮಿಂಚಿನ ಆಟ

ಕಕಮಿಗಹರ, ಜಪಾನ್‌: ಗೋಲುಗಳ ಮಳೆ ಸುರಿಸಿದ ಭಾರತದ ಮಹಿಳಾ ಹಾಕಿ ತಂಡದವರು ಸಿಂಗಪುರ ತಂಡವನ್ನು ಬೆರಗಾಗಿಸಿದರು. ನವನೀತ್ ಕೌರ್‌, ನಾಯಕಿ ರಾಣಿ ರಾಂಪಾಲ್ ಮತ್ತು ನವಜ್ಯೋತ್ ಕೌರ್‌ ಅವರ ಅಮೋಘ ಆಟದ ಬಲದಿಂದ ಭಾರತ ಏಷ್ಯಾಕಪ್ ಮಹಿಳಾ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಏಕಪಕ್ಷೀಯ 10 ಗೋಲುಗಳ ಜಯ ಗಳಿಸಿತು.

ವಿಶ್ವಕಪ್‌ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಗುರಿಯೊಂದಿಗೆ ಇಲ್ಲಿಗೆ ಬಂದಿರುವ ಭಾರತ ತಂಡದವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ತಮಗಿಂತ ಕೆಳಗಿನ ಸ್ಥಾನದಲ್ಲಿರುವ ಸಿಂಗಪುರ ವಿರುದ್ಧ ಆರಂಭದಿಂದಲೇ ಪೂರ್ಣ ಆಧಿಪತ್ಯ ಸಾಧಿಸಿತು. ಆಕ್ರಮಣಕ್ಕೆ ಹೆಚ್ಚು ಒತ್ತು ಕೊಟ್ಟ ತಂಡ ಮೂರನೇ ನಿಮಿಷದಲ್ಲೇ ಫಲ ಕಂಡಿತು. ನವನೀತ್ ಕೌರ್‌ ಪಂದ್ಯದ ಮೊದಲ ಗೋಲು ಗಳಿಸಿ ಸಂಭ್ರಮಿಸಿದರು. 15 ಮತ್ತು 18ನೇ ನಿಮಿಷದಲ್ಲಿ ರಾಣಿ ರಾಂಪಾಲ್ ನಿರಂತರ ಎರಡು ಗೋಲು ಗಳಿಸಿ ಮಿಂಚಿದರು. ಮರುಕ್ಷಣದಲ್ಲೇ ಲಾಲ್‌ರೆಮ್ಸಿಯಾಮಿ ಗಳಿಸಿದ ಗೋಲಿನೊಂದಿಗೆ ತಂಡ ಉತ್ತಮ ಮುನ್ನಡೆ ಕಾಯ್ದುಕೊಂಡಿತು.

ಅಷ್ಟರಲ್ಲಿ ಸಿಂಗಪುರದ ನಿರೀಕ್ಷೆ ಕಮರಿ ಹೋಯಿತು. ಇದರ ಸಂಪೂರ್ಣ ಲಾಭ ಪಡೆದುಕೊಂಡ ಭಾರತದ ಮಹಿಳೆಯರು ಚೆಂಡನ್ನು ನಿರಂತರವಾಗಿ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. ದೀಪ್‌ ಗ್ರೇಸ್ ಎಕ್ಕಾ 25ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಬೆನ್ನಲ್ಲೇ ನವಜ್ಯೋತ್ ಕೌರ್‌ 30ನೇ ನಿಮಿಷದಲ್ಲಿ ಸಂಭ್ರಮ ಉಕ್ಕಿಸಿದರು. ನವನೀತ್ ಕೌರ್‌ 41ನೇ ನಿಮಿಷದಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. ಎದುರಾಳಿ ತಂಡದವರು ಈ ಆಘಾತದಿಂದ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗಲೇ ಗುರ್ಜಿತ್ ಕೌರ್‌ (41ನೇ ನಿಮಿಷ)  ಮತ್ತು ಸೋನಿಕಾ (45ನೇ ನಿಮಿಷ) ಮತ್ತಷ್ಟು ಆಘಾತ ನೀಡಿದರು. 50ನೇ ನಿಮಿಷದಲ್ಲಿ ನವಜ್ಯೋತ್ ಕೌರ್‌ ತಮ್ಮ ಎರಡನೇ ಗೋಲಿನೊಂದಿಗೆ ಸಂಭ್ರಮಿಸಿದರು. ‌

ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ನಿರಂತರ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಮೊದಲ ಅವಕಾಶದಲ್ಲಿ ಭಾರತದ ಪ್ರಯತ್ನವನ್ನು ಸಿಂಗಪುರದ ಗೋಲ್‌ಕೀಪರ್‌ ಫೆಲಿಸಾ ಲಾಯ್‌ ವಿಫಲಗೊಳಿಸಿದರು. ಎರಡನೇ ಅವಕಾಶವನ್ನು ಕೂಡ ಸದ್ಬಳಕೆ ಮಾಡಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌ನಲ್ಲೇ ಮುನ್ನಡೆ ಸಾಧಿಸಿದ ಭಾರತ ಎರಡನೇ ಕ್ವಾರ್ಟರ್‌ನಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಪರಿಣಾಮ 6–0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ದೀಪ್ ಗ್ರೇಸ್ ಎಕ್ಕಾಸದುಪಯೋಗ ಮಾಡಿಕೊಂಡರು. ಡ್ರ್ಯಾಗ್‌ ಫ್ಲಿಕ್ಕರ್‌ ಗುರ್ಜಿತ್ ಕೂಡ ಪೆನಾಲ್ಟ್ ಕಾರ್ನರ್ ಅವಕಾಶದಲ್ಲಿ ಗೋಲು ತಂದುಕೊಟ್ಟರು. ಮೂರನೇ ಕ್ವಾರ್ಟರ್‌ನಲ್ಲಿ ಮತ್ತೂ ಎರಡು ಗೋಲುಗಳು ಭಾರತಕ್ಕೆ ಲಭಿಸಿದವು. ಕೊನೆಯ 15 ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಗಳಿಸಿದರೆ ಭಾರತದ ಗೆಲುವಿನ ಅಂತರ ಇನ್ನೂ ಹೆಚ್ಚುತ್ತಿತ್ತು. ಉದ್ಘಾಟನಾ ಪಂದ್ಯದಲ್ಲಿ ಮಲೇಷ್ಯಾವನ್ನು ಚೀನಾ 5–4ರಿಂದ ಮಣಿಸಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry