ಸರ್ಕಾರಿ ಶಾಲೆ ಉಳಿವಿಗಾಗಿ ಸಮಾವೇಶ

ಗುರುವಾರ , ಜೂನ್ 20, 2019
26 °C

ಸರ್ಕಾರಿ ಶಾಲೆ ಉಳಿವಿಗಾಗಿ ಸಮಾವೇಶ

Published:
Updated:
ಸರ್ಕಾರಿ ಶಾಲೆ ಉಳಿವಿಗಾಗಿ ಸಮಾವೇಶ

*ಡಾ. ನಿರಂಜನಾರಾಧ್ಯ ವಿ. ಪಿ.

ಲಾ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಪ್ರಯತ್ನಗಳ ಭಾಗವಾಗಿ ಸಮುದಾಯವನ್ನು ಒಳಮಾಡಿಕೊಳ್ಳುವ ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಾ ಬಂದಿವೆ. 1848ರಲ್ಲಿ ಸಾವಿತ್ರಿಬಾಯಿ ಫುಲೆಯವರು ಉಸ್ಮಾನ್ ಶೈಖರ ಹಾಡಿಯಲ್ಲಿ ವಯಸ್ಕ ಹೆಣ್ಣುಮಕ್ಕಳಿಗಾಗಿ ಪ್ರಾರಂಭಿಸಿದ ಹೆಣ್ಣುಮಕ್ಕಳ ಶಾಲೆಯಿಂದ ಇಂದಿನ ಬೇಟಿ ಪಡಾವೋ ಯೋಜನೆಯವರೆಗೆ ಸಮುದಾಯ ಭಾಗವಹಿಸುವಿಕೆಯ ಕಥನಗಳು ವಿಫುಲವಾಗಿ ದೊರೆಯುತ್ತವೆ. ವಿಶೇಷವೆಂದರೆ, ಮೈಸೂರು ಪ್ರಾಂತ್ಯದಲ್ಲಿಯೂ ಸ್ವಾತಂತ್ರ್ಯಪೂರ್ವದಲ್ಲಿಯೇ ಈ ರೀತಿಯ ಪ್ರಯತ್ನಗಳು ನಡೆದಿರುವುದು. ಮೈಸೂರಿನ ಮಹಾರಾಜರು ಶಿಕ್ಷಣದ ಸಾರ್ವತ್ರೀಕರಣಕ್ಕೆ ಇಂತಹುದೇ ಪ್ರಯತ್ನಗಳನ್ನು ನಡೆಸಿದ್ದರೆಂಬುದು ಗಮನಾರ್ಹ. 1854ರ ವುಡ್ಸ್ ಅಯೊಗದ ವರದಿಯನ್ನು ಆಧರಿಸಿ ಮೈಸೂರು ರಾಜ್ಯಕ್ಕೆ ಒಂದು ಶಿಕ್ಷಣ ಯೋಜನೆಯನ್ನು ಅಂದಿನ ನ್ಯಾಯಾಂಗ ಅಯುಕ್ತರು ಸಿದ್ಧ ಪಡಿಸಿ, 1857ರಲ್ಲಿ ಭಾರತ ಸರ್ಕಾರದ ಅನುಮೋದನೆಯನ್ನು ಪಡೆದಿದ್ದರು. ಗಮನಿಸಬೇಕಾದ ಮತ್ತೊಂದು ವಿಶೇಷ ಅಂಶವೆಂದರೆ 1911ರಲ್ಲಿ ಪ್ರಾಥಮಿಕ ಶಿಕ್ಷಣ ಉಚಿತವೆಂದು ಸಾರುವ ಒಂದು ರಾಜಾಜ್ಞೆ(Royal ordinance)ಯನ್ನು ಹೊರಡಿಸಿದ್ದರು.

ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಿಲ್ಲವೆಂಬುದು ಸಾರ್ವತ್ರಿಕ ಸತ್ಯವನ್ನು ಇಂದು ಗುಣಾತ್ಮಕ ಶಿಕ್ಷಣಕ್ಕೆ ಕಟಿಬದ್ಧರಾಗಿರುವ ಎಲ್ಲರೂ ಒಪ್ಪುತ್ತಾರೆ. ಈ ಸತ್ಯವನ್ನು ಮನಗಂಡ ಸರ್ಕಾರಗಳು ಸ್ವಾತಂತ್ರ್ಯ ನಂತರ ಶಾಲಾ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಸಮುದಾಯವನ್ನು ಒಳಮಾಡಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಆಂಧ್ರಪ್ರದೇಶದ ಪ್ರಾಥಮಿಕ ಶಿಕ್ಷಣ ಯೋಜನೆ, ಶಿಕ್ಷಾಕರ್ಮಿ ಯೋಜನೆ, ಬಿಹಾರ ಶಿಕ್ಷಣ ಯೋಜನೆ, ಉತ್ತರ ಪ್ರದೇಶದ ಮೂಲಶಿಕ್ಷಣ ಯೋಜನೆ, ರಾಜಸ್ಥಾನದ ಲೋಕ ಜುಂಬಿಷ್ ಯೋಜನೆ, ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಯೋಜನೆಗಳು.

ನಮ್ಮ ರಾಜ್ಯದಲ್ಲಿ ಸಮುದಾಯದ ಮಾಲೀಕತ್ವ ಹಾಗೂ ಪಾಲ್ಗೊಳ್ಳುವಿಕೆಗೆ ದೇಶವೇ ಅನುಕರಣೆ ಮಾಡಬಹುದಾದ ಹಲವು ಪ್ರಯೋಗವನ್ನು ರಾಜ್ಯ ಸರ್ಕಾರವು ನಡೆಸುತ್ತಾ ಬಂದಿದೆ. ಸಮುದಾಯವನ್ನು ಸಾರ್ವತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಮೊದಲ ಪ್ರಯತ್ನವಾಗಿ ದಿನಾಂಕ 1988ರಲ್ಲಿ ಸರ್ಕಾರವು ಅದೇಶವೊಂದನ್ನು ಹೊರಡಿಸಿ, ಅಂದು ಜಾರಿಯಲ್ಲಿದ್ದ ಜಿಲ್ಲಾ ಪರಿಷತ್ತು ಹಾಗೂ ಮಂಡಲ ಪಂಚಾಯಿತಿಗಳನ್ನು ಮತ್ತು ಕೇಂದ್ರ ಸರ್ಕಾರದ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಶಾಲೆಗಳಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ’ಶಾಲಾಭಿವೃದ್ಧಿ ಸಮಿತಿ’ಗಳನ್ನು ’ಶೈಕ್ಷಣಿಕ ಸಮಿತಿ’ಗಳೆಂದು ಮರುನಾಮಕರಣ ಮಾಡುವ ತೀರ್ಮಾನ ಕೈಗೊಂಡಿತ್ತು. ಈ ಆದೇಶದಲ್ಲಿನ ಒಂದು ಮುಖ್ಯ ನ್ಯೂನತೆಯೆಂದರೆ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳ ಪಾಲಕರಿಗೆ ಅವಕಾಶ ನೀಡದೆ ಕೇವಲ ಜನಪ್ರತಿನಿಧಿಗಳು ಮತ್ತು ಊರಿನ ಗಣ್ಯವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ನಂತರ ಜುಲೈ 1995ರಲ್ಲಿ ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ರಾಜ್ಯದ ಎಲ್ಲಾ ಉಪನಿರ್ದೇಕರಿಗೆ ಬರೆದ ಪತ್ರದಲ್ಲಿ ರಾಜ್ಯ ಎಲ್ಲಾ ಶಾಲೆಗಳಲ್ಲಿ 9ರಿಂದ 11 ಜನರನ್ನೊಳಗೊಂಡ ’ಶಾಲಾಭಿವೃದ್ಧಿ ಸಮಿತಿ’ ರಚಿಸುವಂತೆ ಸೂಚನೆ ನೀಡಿದ್ದರು. ಈ ಪತ್ರದ ಅನ್ವಯ ಸಮಿತಿಯಲ್ಲಿ ಮೊದಲ ಬಾರಿಗೆ ಒಬ್ಬ ಪೋಷಕ ಪ್ರತಿನಿಧಿಗೆ ಅವಕಾಶ ಕಲ್ಪಿಸಲಾಗಿತ್ತು. ಮುಂದುವರಿದ ಸರ್ಕಾರವು ಇದೇ ವರ್ಷದಲ್ಲಿ ಮೊತ್ತೊಂದು ಅದೇಶವನ್ನು ಹೊರಡಿಸಿ ಪ್ರತಿಯೊಂದು ಗ್ರಾಮದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳಲು ಗ್ರಾಮ ಶಿಕ್ಷಣ ಸಮಿತಿಗಳನ್ನು ರಚಿಸುವಂತೆ ಅದೇಶಿಸಿಸಿತ್ತು . ಈ ಸಮಿತಿಯಲ್ಲಿ ಕನಿಷ್ಠ 7ರಿಂದ ಗರಿಷ್ಠ 15 ಸದಸ್ಯರಿದ್ದು ಪೋಷಕ ಪ್ರತಿನಿಧಿಯೊಬ್ಬರಿಗೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟಾರೆ, ಶಾಲಾಭಿವೃದ್ದಿ ಸಮಿತಿ /ಶಿಕ್ಷಣ ಸಮತಿ/ಗ್ರಾಮ ಶಿಕ್ಷಣ ಸಮಿತಿಗಳ ಮೂಲಕ ಶಾಲಾ ಶಿಕ್ಷಣದಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವ ಹಲವು ಪ್ರಯತ್ನಗಳಾಗಿದ್ದರೂ, ಈ ಎಲ್ಲ ಪ್ರಯತ್ನಗಳು ಮೂಲ ವಾರಸುದಾರರಾದ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ ತಾಯಿಗಿಂತಲೂ ಜನಪ್ರತಿನಿಧಿ ಮತ್ತು ಊರಿನ ಗಣ್ಯವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನಗಳಾಗಿದ್ದವು.

ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ ತಾಯಂದಿರನ್ನು ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಮತ್ತು ಮಹತ್ವದ ಬೆಳವಣಿಗೆಗಳು ತೀರಾ ಇತ್ತೀಚಿನವು. ಮೂಲವಾರಸುದಾರರಾದ, ಮಕ್ಕಳ ಪಾಲಕರನ್ನು ಒಳ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ, ಶಿಕ್ಷಣ ಕಾರ್ಯಪಡೆಯ ವರದಿಯ ಶಿಫಾರಸ್ಸಿನಂತೆ 28.04.2001ರಲ್ಲಿ ಸರ್ಕಾರವು ಕಾರ್ಯಕಾರಿ ಆದೇಶವನ್ನು ಹೊರಡಿಸಿ ರಾಜ್ಯದ ಎಲಾ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ತಮ್ಮ ಮಕ್ಕಳ ಏಳಿಗೆಯ ಬಗ್ಗೆ ಸದಾ ಕಾಳಜಿಯುಳ್ಳ ಪಾಲಕರು/ಪೋಷಕರು ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು (ಎಸ್‌ಡಿಎಮ್‌ಸಿ) ರಚಿಸುವಂತೆ ಸೂಚಿಸಿತು.

ಈ ಮಹತ್ವದ ಪ್ರಕ್ರಿಯೆಯಲ್ಲಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ಕೇಂದ್ರ ಪ್ರಾರಂಭದಿಂದಲೂ ಸರ್ಕಾರದ ಸಹಭಾಗಿಯಾಗಿ ಪೂರಕವಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಮೊದಲಿಗೆ, ಶಿಕ್ಷಣ ಕಾರ್ಯಪಡೆ ಶಿಫಾರಸ್ಸಿನ ಆಧಾರದ ಮೇಲೆ, ರಾಜ್ಯದ ಎಲ್ಲಾ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಹಂತದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಅಗತ್ಯವಾದ ನೀತಿ ಮತ್ತು ಆದೇಶವನ್ನು ಕಾನೂನಾತ್ಮಕವಾಗಿ ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಮಗು ಮತ್ತು ಕಾನೂನು ಕೇಂದ್ರದ ನೆರವಿನೊಂದಿಗೆ ವಿಸ್ತೃತ ಪ್ರಕ್ರಿಯೆಯನ್ನು ಕೈಗೊಂಡಿತ್ತು.

ಶಾಲಾ ಹಂತದ ಸಮಿತಿಗಳ ರಚನೆಯ ನಂತರ 2002ರಿಂದ ಇಲ್ಲಿಯವರೆಗೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಸಾಮರ್ಥ್ಯಾಭಿವೃದ್ಧಿಗಾಗಿ ಸಂಪನ್ಮೂಲ ಸಾಹಿತ್ಯವನ್ನು ರಚಿಸಲು ಮಗು ಮತ್ತು ಕಾನೂನು ಕೇಂದ್ರವು ಇಲಾಖೆಯ ಜೊತೆಗೂಡಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ರಚನೆಯಾದ ಮೂರು ವರ್ಷದ ನಂತರ ಶಾಲಾ ಶಿಕ್ಷಣ ಅಭಿವೃದ್ಧಿಯಲ್ಲಿ ಎಸ್‌ಡಿಎಮ್‌ಸಿಗಳ ಪಾತ್ರ ಮತ್ತು ಸಮಿತಿಗಳ ಕಾರ್ಯನಿರ್ವಹಣೆ ಕುರಿತಂತೆ 2004ರಲ್ಲಿ ಇಲಾಖೆಯ ಸಹಯೋಗದಲ್ಲಿ ಅಧ್ಯಯನವನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ, 2005ರಿಂದ 2006ರವರೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಗ್ರಾಮ ಪಂಚಾಯತಿಗಳ ಜೊತೆ ಬೆಸೆಯುವ ಕೆಲಸವನ್ನು ಪ್ರಾರಂಭಿಸಿತು. ಈ ಕೆಲಸದ ಭಾಗವಾಗಿ, ಆಳವಾದ ಹಾಗೂ ವಿಸ್ತೃತವಾದ ಸಂಶೋಧನೆಯ ಮೂಲಕ ಕರ್ನಾಟಕ ಗ್ರಾಮ ಪಂಚಾಯತಿಗಳ (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು) (ಮಾದರಿ) ಉಪವಿಧಿಗಳು 2006ನ್ನು ರಚಿಸುವ ಮೂಲಕ ಎಸ್‌ಡಿಎಮ್‌ಸಿಗಳಿಗೆ ಮತ್ತಷ್ಟು ಕಾನೂನಿನ ಬಲವನ್ನು ತುಂಬುವುದರ ಜೊತೆಗೆ ಶಾಲಾ ಆಡಳಿತ ವಿಕೇಂದ್ರೀಕರಣವನ್ನು ಪಂಚಾಯತಿಯಿಂದ ಶಾಲಾ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಈ ಎಲ್ಲ ಪ್ರಯತ್ನಗಳನ್ನು ಗುರುತಿಸಿದ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯಿದೆ ರಚನೆ ಸಂದರ್ಭದಲ್ಲಿ ಕರ್ನಾಟಕದ ಎಸ್‌ಡಿಎಮ್‌ಸಿ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಭಾಗವಾಗಿ ಅಳವಡಿಸಿಕೊಂಡಿದೆ. ದೇಶಾದ್ಯಂತ ಈ ಕಾಯಿದೆ ಏಪ್ರಿಲ್ 1, 2010ರಿಂದ ಜಾರಿಗೆ ಬಂದಿದೆ.

ಕಳೆದ ಏಳು ವರ್ಷಗಳಿಂದ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಶಾಲಾ ಹಂತದಲ್ಲಿ ಸಬಲೀಕರಣಗೊಳಿಸುವ ಜೊತೆ ಜೊತೆಗೆ ಎಸ್‌ಡಿಎಮ್‌ಸಿ ಸದಸ್ಯರನ್ನು ಪಂಚಾಯತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಒಗ್ಗೂಡಿಸುವ ಮೂಲಕ ಪಂಚಾಯತಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸದಸ್ಯರು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯನ್ನು ರಚಿಸುವ ಕೆಲಸಕ್ಕೆ ಸುಗಮಕಾರರಾಗಿ ಕೆಲಸ ನಿರ್ವಹಿಸಿದೆ. ಇಂದು ರಾಜ್ಯದಲ್ಲಿ, ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು ಪಂಚಾಯತಿ ಹಂತದಿಂದ ರಾಜ್ಯ ಹಂತದವರೆಗೆ ಇಲಾಖೆ, ಸ್ಥಳೀಯ ಸರ್ಕಾರ, ಸರ್ಕಾರ ಮತ್ತು ನಾಗರಿಕ ಸಮಾಜದ ಸಂಘ ಸಂಸ್ಥೆಗಳ ಜೊತೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ. ಕಳೆದ ಒಂದು ದಶಕದಿಂದ, ‘ಸರ್ಕಾರಿ ಶಾಲೆಗಳು ಉಳಿಯಲಿ-ಬೆಳೆಯಲಿ-ನೆರೆಹೊರೆಯ ಸಮಾನ ಶಾಲೆಗಳಾಗಲಿ’ ಎಂಬ ಧ್ಯೇಯವಾಕ್ಯದೊಂದಿಗೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ, ಅರ್ಥಾತ್ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಕಾಯಾ ವಾಚಾ ಮನಸಾ ನಿರ್ವಹಿಸುತ್ತಾ ಬಂದಿದೆ.

ಈಗಾಗಲೇ ಅನೇಕ ಪಂಚಾಯತಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿರುವ ವೇದಿಕೆಯು ಮೊದಲ ಬಾರಿಗೆ ಎಲ್ಲಾ 225 ತಾಲ್ಲೂಕುಗಳ ಪರವಾಗಿ ಪ್ರತಿನಿಧಿಸುವ ಸುಮಾರು 700 ಪ್ರಾತಿನಿಧಿಕ ಪ್ರತಿನಿಧಿಗಳನ್ನು ಒಳಗೊಂಡ ಪ್ರಥಮ ರಾಜ್ಯ ಮಟ್ಟದ ಸಮುದಾಯ ಶೈಕ್ಷಣಿಕ ಮಹಾ ಸಮಾವೇಶವನ್ನು ನಡೆಸುತ್ತಿದೆ. ಈ ಮಹಾ ಸಮಾವೇಶವನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮಗು ಮತ್ತು ಕಾನೂನು ಕೇಂದ್ರವು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಹಯೋಗದಲ್ಲಿ ನಡೆಸುತ್ತಿದೆ. 

***

ಪ್ರಥಮ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ

ಚಾಲನೆ: ತನ್ವೀರ್ ಸೇಠ್‌

ಅಧ್ಯಕ್ಷತೆ: ನ್ಯಾಯಮೂರ್ತಿ ಎಸ್‌. ರಾಜೇಂದ್ರ ಬಾಬು

ದಿಕ್ಸೂಚಿ ಭಾಷಣ: ಅಭಿವೃದ್ಧಿ ಆಯುಕ್ತ ವಿಜಯ ಭಾಸ್ಕರ್‌

ಸಮಾರೋಪ ಭಾಷಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯ ಅತಿಥಿ: ಚಂದ್ರಶೇಖರ ಪಾಟೀಲ

ಸಮಾರೋಪ ಸಮಾವೇಶದ ಅಧ್ಯಕ್ಷತೆ: ಎಚ್‌. ಅಂಜನೇಯ

ದಿನಾಂಕ: ಅ.30 ಮತ್ತು 31 ರಂದು ನಡೆಯಲಿದೆ.

ಸ್ಥಳ: ಶಿಕ್ಷಕರ ಸದನ, ಕೆ.ಜೆ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಬೆಂಗಳೂರು – 560001

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry