ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಒತ್ತಾಯಿಸಿ ಕಾಲ್ನಡಿಗೆ ಜಾಥಾ

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಳ್ಳಹಿಡಿದಿರುವ ಬೋರ್‌ವೆಲ್‌ ರಸ್ತೆಯನ್ನು ಸರಿಪಡಿಸಿ ಎಂದು ಕೂಗಿಕೊಳ್ಳುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಿವಿಗೊಡುತ್ತಿಲ್ಲ’
ಎಂದು ಆರೋಪಿಸಿ ಆರ್‌. ನಾರಾಯಣಪುರದ ನಿವಾಸಿಗಳು ಭಾನುವಾರ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟಿಸಿದರು.

ಸ್ಥಳೀಯರು, ಐಟಿ ಉದ್ಯೋಗಿಗಳು, ಮಕ್ಕಳು, ಹಿರಿಯ ನಾಗರಿಕರು ಸೇರಿ 200ಕ್ಕೂ ಹೆಚ್ಚು ಜನರು ಕಪ್ಪು ಉಡುಪು ಧರಿಸಿ ರಾಮಗೊಂಡನಹಳ್ಳಿಯಿಂದ ವರ್ತೂರುಕೋಡಿ, ವೈಟ್‌ಫೀಲ್ಡ್‌ ಮಾರ್ಗವಾಗಿ ನಲ್ಲೂರಹಳ್ಳಿಯ ಬೋರ್‌ವೆಲ್‌ ರಸ್ತೆವರೆಗೆ ಜಾಥಾ ನಡೆಸಿದರು.

‘ಬೇಕೇ... ಬೇಕು.. ಒಳ್ಳೆ ರಸ್ತೆ ಬೇಕು’, ‘ನಮಗೆ ಪಕ್ಕಾ ರಸ್ತೆ ಬೇಕು..’, ‘ನಮಗೆ ನಮ್ಮ ರಸ್ತೆಯನ್ನು ಮರುಕಳಿಸಿ..’, ‘ನಮ್ಮ ತೆರಿಗೆ ಹಣವನ್ನು ಕದಿಯುವುದನ್ನು ನಿಲ್ಲಿಸಿ..’, ‘ನಾವು ಮಕ್ಕಳು, ನಮಗೆ ಉತ್ತಮ ರಸ್ತೆ ಬೇಕು’ ‌ಎಂದು ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಎರಡು ವರ್ಷಗಳಿಂದ ರಸ್ತೆ ಹಾಳಾಗಿದೆ. ಜಲಮಂಡಳಿ ಅಧಿಕಾರಿಗಳಿಗೆ ಹೇಳಿದರೆ, ಬಿಬಿಎಂಪಿಗೆ ತಿಳಿಸಿ ಎನ್ನುತ್ತಾರೆ. ಹೀಗೆ ಹೊಣೆಯನ್ನು ವರ್ಗಾಯಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಜಲಮಂಡಳಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು, ಅದನ್ನು ಅರ್ಧಕ್ಕೆ ನಿಲ್ಲಿಸಿತು. ನಂತರ ಕಾವೇರಿ ನೀರಿಗಾಗಿ ಪೈಪ್‌ ಲೈನ್‌ ಅಳವಡಿಸಲು ಮತ್ತೆ ರಸ್ತೆ ಅಗೆಯಿತು. ಸತತ ಮಳೆಯಿಂದ ಈಗ ರಸ್ತೆ ಕೆಸರುಗದ್ದೆಯಾಗಿದೆ’ ಎಂದು ರಾಮಗೊಂಡನಹಳ್ಳಿ ನಿವಾಸಿ ಕೋಶಿ ವರ್ಗೀಸ್‌ ದೂರಿದರು.

‘ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. 40 ದಿನದೊಳಗೆ ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಅದಾದ ನಂತರ ಅವರು ಮತ್ತೆ ಸಂಪರ್ಕಕ್ಕೆ ಸಿಗಲೇ ಇಲ್ಲ’ ಎಂದು ಕಿಡಿಕಾರಿದರು.

‘1.2 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ. ಈ ಭಾಗದಲ್ಲಿ ಸುಮಾರು 2,500 ಜನ ವಾಸಿಸುತ್ತಿದ್ದು, ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಯುವಕರಿಗೇ ಕಷ್ಟವಾಗುತ್ತಿದೆ. ಹಿರಿಯ ನಾಗರಿಕರ ಪಾಡು ಹೇಳತೀರದು. ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರ್‌.ನಾರಾಯಣಪುರ ಆಸುಪಾಸಿನಲ್ಲಿ ಕೆಲವು ವರ್ಷಗಳ ಹಿಂದಷ್ಟೇ ವಸತಿ ಸಮುಚ್ಚಯಗಳುನಿರ್ಮಾಣಗೊಂಡಿವೆ. ಒಳಚರಂಡಿ ವ್ಯವಸ್ಥೆ, ಮೂಲ ಸೌಕರ್ಯ ಒದಗಿಸಲು ಪೈಪ್‌ಲೈನ್‌ ಅಳವಡಿಸುತ್ತಿದ್ದೇವೆ. 80 ಅಡಿಗೆ ರಸ್ತೆಗೆ ಮೀಸಲಿದ್ದ ಜಾಗವನ್ನು ವಸತಿ ಸಮುಚ್ಚಯದ ಮಾಲೀಕರು ಒತ್ತುವರಿ ಮಾಡಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೊಂದು ತಿಂಗಳಲ್ಲಿ ಜಲಮಂಡಳಿಯ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನಂತರ ರಸ್ತೆಯನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ಅವರು ಹೇಳಿದರು.

*


ಎಮ ಟ್ರಿನಿಡ್ಯಾಡ್‌ ತಂಡದ ಸದಸ್ಯರು ವಿಭಿನ್ನ ವೇಷಭೂಷಣ ಧರಿಸಿ ಪ್ರತಿಭಟನೆಯಲ್ಲಿ ಗಮನ ಸೆಳೆದರು –ಪ್ರಜಾವಾಣಿ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT