ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿ ತೆರಿಗೆ ದರಗಳ ಕಡಿತಕ್ಕೆ ಸಲಹೆ

ರೆಸ್ಟೋರೆಂಟ್‌ಗಳಿಗೆ ಶೇ 12ರಷ್ಟು ತೆರಿಗೆಗೆ ಜಿಎಸ್‌ಟಿ ಸಚಿವರ ತಂಡದ ಶಿಫಾರಸು
Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಡಿ (ಜಿಎಸ್‌ಟಿ) ತಯಾರಕರು ಮತ್ತು ರೆಸ್ಟೊರೆಂಟ್‌ಗಳಿಗೆ ವಿಧಿಸುವ ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ದರಗಳನ್ನು ಶೇ 1ರಷ್ಟಕ್ಕೆ ಇಳಿಸಬೇಕು ಎಂದು ರಾಜ್ಯಗಳ ಹಣಕಾಸು ಸಚಿವರ ತಂಡವು ಶಿಫಾರಸು ಮಾಡಿದೆ.

ಸದ್ಯಕ್ಕೆ ತಯಾರಕರಿಗೆ ಶೇ 2 ಮತ್ತು ರೆಸ್ಟೊರೆಂಟ್ಸ್‌ಗಳಿಗೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ವರ್ತಕರು ಶೇ 1ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ.

ಕಂಪೋಸಿಷನ್‌ ಸ್ಕೀಮ್‌ಗೆ ಒಳಪಡದ ಹವಾನಿಯಂತ್ರಿತ (ಏ.ಸಿ) ಮತ್ತು ಹವಾನಿಯಂತ್ರಣ ಇಲ್ಲದ (ನಾನ್‌ ಏ.ಸಿ) ರೆಸ್ಟೊರೆಂಟ್‌ಗಳ ಮೇಲೆ ವಿಧಿಸುತ್ತಿರುವ ತೆರಿಗೆ ವ್ಯತ್ಯಾಸ ಕೈಬಿಡಬೇಕು. ಅವುಗಳಿಗೆ ಏಕರೂಪವಾಗಿ ಶೇ 12ರಷ್ಟು ತೆರಿಗೆ ವಿಧಿಸಬೇಕು ಎಂದು ತಂಡ ಸಲಹೆ ನೀಡಿದೆ. ಅಸ್ಸಾಂ ಹಣಕಾಸು ಸಚಿವ ಹಿಮಂತ್‌ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಈ ತಂಡ ರಚಿಸಲಾಗಿದೆ.

ಕೋಣೆಗಳಿಗೆ ₹ 7,500ಕ್ಕಿಂತ ಹೆಚ್ಚಿನ ಬಾಡಿಗೆ ವಿಧಿಸುವ ಹೋಟೆಲ್‌ಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಬೇಕು ಎನ್ನುವುದು ತಂಡದ ಇನ್ನೊಂದು ಸಲಹೆಯಾಗಿದೆ.

ವರ್ತಕರಿಗಾಗಿ ಈ ತಂಡವು ಎರಡು ಬಗೆಯ ತೆರಿಗೆ ಸ್ವರೂಪದ ಸಲಹೆ ನೀಡಿದೆ.  ತೆರಿಗೆ ಮುಕ್ತ ಸರಕುಗಳ ಮಾರಾಟವನ್ನು ಒಟ್ಟು ವಾರ್ಷಿಕ ವಹಿವಾಟಿನಿಂದ ಪ್ರತ್ಯೇಕವಾಗಿಡಲು ಬಯಸುವ ವಹಿವಾಟುದಾರರು ಶೇ 1ರಷ್ಟು ತೆರಿಗೆ ಪಾವತಿಸಬಹುದು. ಒಟ್ಟಾರೆ ವಹಿವಾಟಿನ ಮೇಲೆ ತೆರಿಗೆಸಲ್ಲಿಸುವವರಿಗೆ ಶೇ 0.5ರಷ್ಟು ತೆರಿಗೆ ದರ ಅನ್ವಯಿಸಬೇಕು ಎನ್ನುವುದು ತಂಡದ ಸಲಹೆಯಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉದಾಹರಣೆಗೆ,  ತೆರಿಗೆ ವಿನಾಯ್ತಿಗೆ ಒಳಪಟ್ಟ ಮತ್ತು ಜಿಎಸ್‌ಟಿ ಅಡಿ ತೆರಿಗೆ ಪಾವತಿಸಬೇಕಾದ ಸರಕುಗಳ ವಹಿವಾಟು ನಡೆಸುವ ಮಾರಾಟಗಾರನ ವಾರ್ಷಿಕ ವಹಿವಾಟು ₹ 1 ಕೋಟಿ ಇರಲಿದೆ. ಇದರಲ್ಲಿ ₹ 40 ಲಕ್ಷದ ವಹಿವಾಟು ತೆರಿಗೆ ವಿನಾಯ್ತಿ ಪಡೆದ ಸರಕುಗಳ ಮಾರಾಟದ ಮೊತ್ತವಾಗಿರುತ್ತದೆ. ಉಳಿದ ₹ 60 ಲಕ್ಷಗಳ ವಹಿವಾಟು ತೆರಿಗೆಗೆ ಒಳಪಟ್ಟಿರುವ ಸರಕುಗಳಿಗೆ ಅನ್ವಯಿಸಿರುತ್ತದೆ. ಅಂತರರಾಜ್ಯ ಮಾರಾಟ ವಹಿವಾಟಿನಲ್ಲಿ ತೊಡಗಿರುವ ವರ್ತಕರು ಕೂಡ ‘ರಾಜಿ ತೆರಿಗೆ’ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದೂ ತಂಡ ಸಲಹೆ ನೀಡಿದೆ.

ತೆರಿಗೆದಾರರಿಂದ ಮಾಹಿತಿ ಸಂಗ್ರಹ

ಜಿಎಸ್‌ಟಿ ತೆರಿಗೆ ಸಲ್ಲಿಕೆಯ ತಂತ್ರಜ್ಞಾನ ಬೆನ್ನೆಲುಬು ಆಗಿರುವ ಜಿಎಸ್‌ಟಿಎನ್‌ ಜಾಲತಾಣವು ವಹಿವಾಟುದಾರರಿಂದ ಮಾಹಿತಿ ಕಲೆ ಹಾಕುವ ಸಮೀಕ್ಷೆಗೆ ಚಾಲನೆ ನೀಡಿದೆ.

‘ರಿಟರ್ನ್ಸ್‌ ಸಲ್ಲಿಸುವ ವಹಿವಾಟುದಾರರಿಗೆ ಈ ತಾಣದಲ್ಲಿ ಆಗಿರುವ ಅನುಭವಗಳ ವಿವರ ತಿಳಿದುಕೊಳ್ಳಲು, ಅವರ ಅಭಿಪ್ರಾಯ ಆಲಿಸಲು ಪ್ರತಿ ದಿನ 500 ದೂರವಾಣಿ ಕರೆಗಳನ್ನು ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತಗೊಂಡಿರುವ ಕರೆ ಕೇಂದ್ರಗಳು ವಹಿವಾಟುದಾರರಿಂದ ಮಾಹಿತಿ ಕಲೆ ಹಾಕುತ್ತಿವೆ’ ಎಂದು ಜಿಎಸ್‌ಟಿಎನ್‌ ಅಧ್ಯಕ್ಷ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ.

‘ವಹಿವಾಟುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡು, ತಾಂತ್ರಿಕ ಅಡಚಣೆಗಳನ್ನು ದೂರ ಮಾಡಿ ರಿಟರ್ನ್ಸ್‌ ಸಲ್ಲಿಕೆಯನ್ನು ಸುಲಲಿತಗೊಳಿಸುವುದಕ್ಕೆ ನಾವು ಸದ್ಯಕ್ಕೆ ಮೊದಲ ಆದ್ಯತೆ ನೀಡಿದ್ದೇವೆ’ ಎಂದು ಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT