ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4 ಲಕ್ಷ ವರದಕ್ಷಿಣೆ ವಾಪಸ್ ನೀಡಿದ ಮಾಜಿ ಪ್ರಾಂಶುಪಾಲ

ಮಗನ ಮದುವೆಗೆ ಪಡೆದಿದ್ದ ಹಣ
Last Updated 29 ಅಕ್ಟೋಬರ್ 2017, 19:37 IST
ಅಕ್ಷರ ಗಾತ್ರ

ಪಟ್ನಾ: ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಹಾಗೂ ಬಾಲ್ಯವಿವಾಹ ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರಂಭಿಸಿರುವ ಅಭಿಯಾನದಿಂದ ಪ್ರೇರಣೆಗೊಂಡು, ನಿವೃತ್ತ ಪ್ರಾಂಶುಪಾಲರೊಬ್ಬರು ತಮ್ಮ ಮಗನ ಮದುವೆಗೆ ಪಡೆದಿದ್ದ ₹4 ಲಕ್ಷ ವರದಕ್ಷಿಣೆಯನ್ನು ವಧುವಿನ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ.

‘ಭೋಜ್‌ಪುರದಲ್ಲಿ ಅಕ್ಟೋಬರ್ 4ರಂದು ನಡೆದಿದ್ದ ರ‍್ಯಾಲಿಯಲ್ಲಿ ನಿತೀಶ್ ಅವರು ವರದಕ್ಷಿಣೆ ಪಿಡುಗಿನ ಕುರಿತು ಭಾಷಣ ಮಾಡಿದ್ದರು. ಇದರಿಂದ ಪ್ರೇರಿತನಾಗಿ ನಾನು ವರದಕ್ಷಿಣೆ ಹಿಂದಿರುಗಿಸಿದ್ದೇನೆ’ ಎಂದು ಇದೇ ಜಿಲ್ಲೆಯ ನಿವಾಸಿಯಾಗಿರುವ ನಿವೃತ್ತ ಪ್ರಾಂಶುಪಾಲ ಹರೀಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಅವರ ಅಧಿಕೃತ ಕಚೇರಿಯಲ್ಲಿ ಭಾನುವಾರ ಅವರನ್ನು ಭೇಟಿ ಮಾಡಿ, ಸಿಂಗ್ ಈ ವಿಷಯ ತಿಳಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

ಜಮಾಲಪುರ ಗ್ರಾಮದ ಪ್ರಮೋದ್ ಸಿಂಗ್ ಎನ್ನುವವರ ಪುತ್ರಿ ಅನುರಾಧ ಅವರೊಂದಿಗೆ ತಮ್ಮ ಹಿರಿಯ ಪುತ್ರ ಪ್ರೇಮ್ ರಂಜನ್ ಸಿಂಗ್ ಅವರ ಮದುವೆ ನಡೆಸಲು ಹರೀಂದ್ರ ಕುಮಾರ್ ಸಿಂಗ್ ಈ ವರದಕ್ಷಿಣೆ ಪಡೆದಿದ್ದರು.

ವರದಕ್ಷಿಣೆ, ಬಾಲ್ಯ ವಿವಾಹ ನಿರ್ಮೂಲನೆಗಾಗಿ ನಿತೀಶ್ ಅವರು ಅಕ್ಟೋಬರ್ 2ರಂದು ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನ ಬೆಂಬಲಿಸಿ ಜನವರಿ 21ರಂದು ಮಾನವ ಸರಪಳಿ ರಚಿಸಲಾಗುವುದು ಎಂದೂ ಘೋಷಿಸಿದ್ದರು.

ಸಮಾಜಕ್ಕೆ ಮಾದರಿಯಾದ ಕ್ರಮ

ಭೇಟಿ ವೇಳೆ ಸಿಂಗ್‌ರನ್ನು ಆಲಿಂಗಿಸಿ ಅವರ ನಿರ್ಧಾರ ಕುರಿತು ಸಂತಸ ವ್ಯಕ್ತಪಡಿಸಿದ ನಿತೀಶ್, ‘ವರದಕ್ಷಿಣೆ ಹಿಂತಿರುಗಿಸಿರುವ ನಿವೃತ್ತ ಪ್ರಾಂಶುಪಾಲ ಹರೀಂದ್ರ ಕುಮಾರ್ ಸಿಂಗ್ ಅವರ ಕ್ರಮ ಸಮಾಜಕ್ಕೆ ಮಾದರಿ ಆಗುವಂತಹದ್ದು’ ಎಂದಿದ್ದಾರೆ.

ಅಭಿಯಾನದಲ್ಲಿ ಸಿಂಗ್ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಕೋರಲಾಗುವುದು ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT