ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಖರ್ಚಿಗೆ ನಿವೇಶನವನ್ನೇ ಮಾರಿದರು

ರೆಮ್ಕೊ ಸೊಸೈಟಿ ನಿವೇಶನ ಅಕ್ರಮ ಪರಭಾರೆ: ಸಹಕಾರ ಸಂಘಗಳ ವರದಿ
Last Updated 29 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಎಚ್‌ಇಎಲ್‌ (ರೆಮ್ಕೊ) ಎಂಪ್ಲಾಯಿಸ್‌ ಹೌಸ್‌ ಬಿಲ್ಡಿಂಗ್‌ ಕೊ– ಆಪರೇಟಿವ್‌ ಸೊಸೈಟಿಯ ಕೆಲವು ನಿರ್ದೇಶಕರು ಆಡಳಿತ ಮಂಡಳಿಯ ಅನುಮೋದನೆ ಪಡೆಯದೆಯೇ ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟಣಗೆರೆ 2ನೇ ಹಂತದ 2,400 ಚದರ ಅಡಿಯ ನಿವೇಶನವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಬಂದ ಹಣವನ್ನು ಚುನಾವಣಾ ಖರ್ಚಿಗಾಗಿ ಬಳಸಿದ್ದಾರೆ’ ಎಂದು ಸಹಕಾರ ಸಂಘಗಳ ವರದಿ ತಿಳಿಸಿದೆ.

‘ಸಂಘದ ಸದಸ್ಯರಲ್ಲವರಿಗೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಸೊಸೈಟಿಯ ಚಟುವಟಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಬಿಎಚ್‌ಇಎಲ್‌ ನೌಕರ ಅಶೋಕ ಕುಳ್ಳಿ ಅವರು ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ದೂರು ಸಲ್ಲಿಸಿದ್ದರು.

ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹಿರಿಯ ನಿರೀಕ್ಷಕ ಡಿ.ಸಿ. ಗಣೇಶ್‌ ಅವರಿಗೆ ನಿಬಂಧಕರು ನಿರ್ದೇಶನ ನೀಡಿದ್ದರು. ಅವರು ತನಿಖೆ ನಡೆಸಿ ಈ ವರ್ಷದ ಸೆಪ್ಟೆಂಬರ್‌ 27ರಂದು ವರದಿ ಸಲ್ಲಿಸಿದ್ದಾರೆ.

ಜ್ಯೇಷ್ಠತಾ ನಿಯಮ ಉಲ್ಲಂಘನೆ: ‘ಸಂಘಕ್ಕೆ 2015ರ ಮಾರ್ಚ್‌ 8ಕ್ಕೆ ಚುನಾವಣೆ ನಡೆದಿತ್ತು. ಅದಕ್ಕಿಂತ ಮುಂಚಿತವಾಗಿ (2014ರ ಡಿಸೆಂಬರ್‌ 8) ಪಟ್ಟಣಗೆರೆ ಎರಡನೇ ಹಂತದಲ್ಲಿ ಕೋಮಲಾ ಎಂಬುವರಿಗೆ 497ನೇ ನಿವೇಶನವನ್ನು ನೋಂದಣಿ ಮಾಡಿಸಲಾಗಿತ್ತು. ಆದರೆ, ಅವರಿಗೆ 2014ರ ಅಕ್ಟೋಬರ್‌ 28ರಂದು ಸದಸ್ಯತ್ವ ನೀಡಲಾಗಿತ್ತು. ಬಡಾವಣೆ ರಚನೆಯ ಸಮಯದಲ್ಲಿ ಅವರು ಮೂಲ ಸದಸ್ಯರಾಗಿರಲಿಲ್ಲ ಹಾಗೂ ನಿವೇಶನದ ಠೇವಣಿ ಪಾವತಿಸಿರಲಿಲ್ಲ.

ಸಹಕಾರ ಸಂಘಗಳ ಕಾಯ್ದೆ 30 ಬಿ ಅಡಿ ಸಕ್ಷಮ ಪ್ರಾಧಿಕಾರದಿಂದ ನೈಜ ಹಾಗೂ ಜ್ಯೇಷ್ಠತಾ ಪಟ್ಟಿಗೆ ಅನುಮೋದನೆ ಪಡೆದಿಲ್ಲ. ಬಹಿರಂಗ ಹರಾಜು ಪ್ರಕ್ರಿಯೆ ನಡೆಸದೆಯೇ ಈ ನಿವೇಶನವನ್ನು ₹60 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕು. ಅಕ್ರಮವಾಗಿ ಪರಭಾರೆ ಮಾಡಿದ ನಿರ್ದೇಶಕರನ್ನು ಸಹಕಾರ ಕಾಯ್ದೆ 1959ರ ಕಲಂ 29 (ಸಿ) ಅಡಿ ಅನರ್ಹಗೊಳಿಸಬೇಕು. ನಿವೇಶನ ನೋಂದಣಿ ರದ್ದುಪಡಿಸಿ ಸಂಘದ ವಶಕ್ಕೆ ಪಡೆಯಬೇಕು’ ಎಂದು ಶಿಫಾರಸು ಮಾಡಲಾಗಿದೆ.

ಸೊಸೈಟಿಯು ಪಟ್ಟಣಗೆರೆ, ಪಟ್ಟಣಗೆರೆ ಎರಡನೇ ಹಂತ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಅಡಿಗಾರಕಲ್ಲಹಳ್ಳಿಯಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಸೊಸೈಟಿ 194 ಮೂಲ ಸದಸ್ಯರನ್ನು ಹಾಗೂ 1400 ಸಹ ಸದಸ್ಯರನ್ನು ಹೊಂದಿದೆ.

‘ಪಟ್ಟಣಗೆರೆಯಲ್ಲಿ 23 ಎಕರೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದೆ. ಆಡಳಿತ ಮಂಡಳಿಯವರು ಇಲ್ಲಿ ಪ್ರತಿ ನಿವೇಶನವನ್ನು ₹66 ಲಕ್ಷಕ್ಕೆ ಮಾರಿದ್ದಾರೆ. ಆದರೆ, ದಾಖಲೆಗಳಲ್ಲಿ ₹33 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ತೋರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ’ ಎಂದು ಅಶೋಕ ಕುಳ್ಳಿ ಆರೋಪಿಸಿದರು.

14 ವರ್ಷ ಕಳೆದರೂ ಸಮುಚ್ಚಯ ಹಸ್ತಾಂತರ ಇಲ್ಲ
‘ಪ‍ಟ್ಟಣಗೆರೆ 2ನೇ ಹಂತದಲ್ಲಿ ನಿರ್ಮಿಸಿರುವ ಕಟ್ಟಡ ಸಮುಚ್ಚಯವನ್ನು 14 ವರ್ಷ ಕಳೆದರೂ ಸಂಘಕ್ಕೆ ವರ್ಗಾಯಿಸಿಲ್ಲ. ಇಲ್ಲೂ ಅವ್ಯವಹಾರ ನಡೆದಿದೆ’ ಎಂದು ವರದಿ ತಿಳಿಸಿದೆ.

‘ಸಂಘದ ನಿಧಿ ಬಳಸಿ 2003ರಲ್ಲಿ ಕಟ್ಟಡ ಸಮುಚ್ಚಯ ನಿರ್ಮಿಸಲಾಗಿತ್ತು. ಆಗ ಸಂಘದ ಅಧ್ಯಕ್ಷರಾಗಿದ್ದ ಶಂಕರ ಬೇಲೇರಿ ಅವರು ಅದನ್ನು ಅಂದಿನ ನಿರ್ದೇಶಕರಾದ ವಿಜಯಕುಮಾರ್‌, ಎಂ.ಎಸ್‌. ಬಾಲರಾಜ್‌ ಹಾಗೂ ಎಸ್‌.ಎ. ಮುತ್ತಗಿ ಅವರ ಹೆಸರಿಗೆ ನೋಂದಾಯಿಸಿದ್ದರು. ಸಂಘಕ್ಕೆ ಸೇರಿದ ಸ್ವತ್ತನ್ನು ಸಂರಕ್ಷಣೆ ಹಾಗೂ ಮೇಲ್ವಿಚಾರಣೆ ಮಾಡದೆ ನಿರ್ದೇಶಕರ ಹೆಸರಿಗೆ ನೋಂದಾಯಿಸಿರುವುದು ಸರಿಯಲ್ಲ.

ಈ ಬಗ್ಗೆ ವಿಚಾರಣೆ ನಡೆಸಿ ಅದನ್ನು ಸಂಘಕ್ಕೆ ವರ್ಗಾಯಿಸುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಈವರೆಗೆ ಆದೇಶ ಪಾಲನೆ ಆಗಿಲ್ಲ. ಹೀಗಾಗಿ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಬೇಕು ಹಾಗೂ ಸಮುಚ್ಚಯವನ್ನು ಸಂಘದ ವಶಕ್ಕೆ ಪಡೆಯಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT