ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಭಾನುವಾರ, ಜೂನ್ 16, 2019
28 °C

ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

Published:
Updated:
ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

ಬೆಳಗಾವಿ: ಮಂಗಳೂರು ವಿಶ್ವವಿದ್ಯಾಲಯ ತಂಡದವರು ಇಲ್ಲಿ ಸೋಮವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಪುರುಷರ ಹಾಗೂ ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಹಾಗೂ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ (10 ಕಿ.ಮೀ.) ಪಟಿಯಾಲದ ಪಂಜಾಬ್‌ ವಿಶ್ವವಿದ್ಯಾಲಯ ತಂಡದವರು ರನ್ನರ್ಸ್‌ ಅಪ್‌ ಆದರು. ಮಂಗಳೂರು ತಂಡ 79 ಪಾಯಿಂಟ್ಸ್‌, ಪಂಜಾಬ್‌ ತಂಡ 123 ಪಾಯಿಂಟ್ಸ್‌ ಕಲೆ ಹಾಕಿದರು.

ಪುರುಷರ ವಿಭಾಗದಲ್ಲಿ ಚಂಡಿಗಡದ ಪಂಜಾಬ್‌ ವಿ.ವಿ.ಯ ರಂಜಿತ್‌ ಕುಮಾರ್‌ (33ನಿ.14ಸೆ.), ಪುಣೆಯ ಸಾವಿತ್ರಿ ಬಾಯಿಫುಲೆ ವಿ.ವಿ.ಯ ತದ್ವಿ ಕಿಶನ್‌ (33ನಿ. 18 ಸೆ.) ಹಾಗೂ ಮಂಗಳೂರು ವಿ.ವಿ.ಯ ರಂಜಿತ್‌ ಕುಮಾರ್‌ ಪಾಟೀಲ (33ನಿ.18ಸೆ.) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ತಂಡ ಚಾಂಪಿಯನ್‌ಷಿಪ್‌ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ ಮೊದಲ ಆರು ತಂಡಗಳಿಗೆ ಟ್ರೋಫಿ ನೀಡಲಾಯಿತು. ಮಂಗಳೂರು ವಿ.ವಿ, ಪಂಜಾಬ್ ವಿ.ವಿ, ಪಟಿಯಾಲದ ಪಂಜಾಬಿ ವಿ.ವಿ, ರೋಹ್ಟಕ್‌ನ ಎಂ.ಡಿ. ವಿ.ವಿ, ಕುರುಕ್ಷೇತ್ರದ ಕುರುಕ್ಷೇತ್ರ ವಿ.ವಿ ಹಾಗೂ ಪುಣೆಯ ಸಾವಿತ್ರಿಬಾಯಿ ಫುಲೆ ವಿ.ವಿ ಟ್ರೋಫಿ ಪಡೆದವು.

ಮಹಿಳೆಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ಜೆ. ಸಂಜೀವಿನಿ, ವರ್ಷಾ ದೇವಿ ಹಾಗೂ ಡಿಂಪಲ್‌ ಸಿಂಗ್‌

ಮಹಿಳೆಯರ ವಿಭಾಗದಲ್ಲಿ ಸಾವಿತ್ರಿಬಾಯಿ ಫುಲೆ ವಿ.ವಿ.ಯ ಜೆ. ಸಂಜೀವಿನಿ (37 ನಿ. 29 ಸೆ.), ಕುರುಕ್ಷೇತ್ರ ವಿ.ವಿ.ಯ ವರ್ಷಾದೇವಿ (37ನಿ.52ಸೆ) ಹಾಗೂ ಗೋರಖ್‌ಪುರ ದೀನದಯಾಳ್‌ ಉಪಾಧ್ಯಾಯ ವಿ.ವಿಯ ಡಿಂಪಲ್‌ ಸಿಂಗ್‌ (38ನಿ. 07 ಸೆ.) ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ತಂಡ ಚಾಂಪಿಯನ್‌ಷಿಪ್‌ ವಿಭಾಗದಲ್ಲಿ ಗೋರಖ್‌ಪುರ ದೀನದಯಾಳ್‌ ಉಪಾಧ್ಯಾಯ ವಿ.ವಿ., ಕೊಟ್ಟಾಯಂನ ಮಹಾತ್ಮ ಗಾಂಧಿ ವಿ.ವಿ, ಮಂಗಳೂರು ವಿ.ವಿ., ಪಟಿಯಾಲದ ಪಂಜಾಬಿ ವಿ.ವಿ, ಕೇರಳದ ಕ್ಯಾಲಿಕಟ್‌ ವಿ.ವಿ. ಹಾಗೂ ಪುಣೆಯ ಸಾವಿತ್ರಿಬಾಯಿ ಫುಲೆ ವಿ.ವಿ ಮೊದಲ ಆರು ಸ್ಥಾನ ಪಡೆದವು. ವಿಜೇತ ತಂಡಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಗುರದೀಪ್‌ ಸಿಂಗ್ ಹಾಗೂ ಕುಲಪತಿ ಡಾ.ಕರಿಸಿದ್ದಪ್ಪ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು.

‘ಸತತ 3ನೇ ಬಾರಿಗೆ ಸಮಗ್ರ ಪ್ರಶಸ್ತಿ ಗೆದ್ದಿದ್ದೇವೆ. ಹೋದ ಬಾರಿ ಮಂಗಳೂರಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಚಾಂಪಿಯನ್‌ಷಿಪ್‌ ಆಗಿದ್ದೆವು’ ಎಂದು ವ್ಯವಸ್ಥಾಪಕ ತಿಲಕ್‌ ಶೆಟ್ಟಿ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಪುರುಷರ ತಂಡದ ರಂಜಿತ್‌ ಕೆ. ಪಾಟೀಲ, ಕುಂಬಾರ್‌ ಕಾಂತಿಲಾಲ್‌, ರಾಬಿನ್‌ ಸಿಂಗ್‌, ಸತೀಶ್‌ ಯಾದವ್‌, ಹರಿಭಕ್ಷ್‌ ಹಾಗೂ ಅನಿಲ್‌ ಕುಮಾರ್‌, ಮಹಿಳೆಯರ ತಂಡದ ಆರತಿ ಪಾಟೀಲ, ರಿಶು, ಸೈಲಿ ಸತೀಶ್‌, ಜ್ಯೋತಿ ಚವಾಣ, ಚೈತ್ರಾ ದೇವಾಡಿಗ ಮತ್ತು ಸುಮಾ ಸಮಗ್ರ ಚಾಂಪಿಯನ್‌ಷಿಪ್‌ ಎತ್ತಿಹಿಡಿದು ಸಂಭ್ರಮಿಸಿದರು. ಮೂಡುಬಿದಿರೆ ಆಳ್ವಾಸ್‌ ಕಾಲೇಜಿನವರೇ ಈ ತಂಡದಲ್ಲಿ ಬಹುತೇಕ ಸ್ಪರ್ಧಿಗಳು ಇದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry