7

ಗೂಗಲ್ ರಿಸರ್ಚ್ ಎಂಜಿನ್

Published:
Updated:
ಗೂಗಲ್ ರಿಸರ್ಚ್ ಎಂಜಿನ್

ಯಾವುದಾದರೂ ಮಾಹಿತಿ ಬೇಕಿದ್ದರೆ ಗೂಗಲ್‌ ಮೊರೆ ಹೋಗುತ್ತೇವೆ. ಹೀಗಾಗಿ ಹಲವರಿಗೆ ಗೂಗಲ್‌ ಉತ್ತಮ ಸರ್ಚ್‌ ಎಂಜಿನ್ ಎಂದು ಮಾತ್ರ ಗೊತ್ತು. ಇನ್ನು ಕೆಲವರಿಗೆ ಅದೊಂದು ಸಂಶೋಧನಾ ಕೇಂದ್ರವಾಗಿಯೂ ಗೊತ್ತು. ಇಲ್ಲಿ ಮನುಕುಲದ ಒಳಿತಿಗಾಗಿ ವಿಶ್ವಕ್ಕೆ ಹೊಸ ಆಯಾಮ ನೀಡುವಂತಹ ಹಲವು ಸಂಶೋಧನೆಗಳೂ ನಡೆಯುತ್ತಿವೆ. ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

ಕ್ಯಾಲಿಕೋ...

‘ನೂರು ವರ್ಷ ಸುಖವಾಗಿ ಬಾಳು’ ಎಂದು ದೊಡ್ಡವರು ಆಶೀರ್ವಾದ ಮಾಡುತ್ತಾರೆ. ಆದರೆ ಪ್ರಸ್ತುತ ಹಲವರ ಆಯಸ್ಸು 60 ವರ್ಷ ದಾಟುವುದು ಕಷ್ಟವಾಗಿದೆ. ಇದಕ್ಕೆ ಪ್ರಮುಖ ಕಾರಣ. ಮಾರಣಾಂತಿಕ ಕಾಯಿಲೆಗಳು. ಇವುಗಳ ನಿರ್ನಾಮಕ್ಕೆಂದೇ ಗೂಗಲ್ ಪಣ ತೊಟ್ಟಿದೆ. ಈ ಕಾಯಿಲೆಗಳ ಬಗ್ಗೆ ‘ಕ್ಯಾಲಿಕೊ’ ಎಂಬ ಸಂಸ್ಥೆ ಮೂಲಕ ಸಂಶೋಧನೆಗಳು ಮಾಡುತ್ತಿದೆ. ಕಾಲಿಕೊ ಪೂರ್ಣ ಹೆಸರು ಕಾಲಿಫೋರ್ನಿಯಾ ಲೈಫ್‌ ಕಂಪೆನಿ.

ವಿಶ್ವದಾದ್ಯಂತ ಇಲಿಗಳ ಮೇಲೆ ಪ್ರಯೋಗ ಮಾಡುತ್ತಿದೆ. ‘ನೇಕೆಡ್‌ ಮೋಲ್‌’ ತಳಿಯ ಇಲಿಗಳು ಇತರೆ ತಳಿಯ ಇಲಿಗಳಿಗೆ ಹೋಲಿಸಿದರೆ ಹತ್ತುಪಟ್ಟು ಹೆಚ್ಚು ಕಾಲ ಜೀವಿಸುತ್ತಿವೆ. ಇದು ಹೇಗೆ ಸಾಧ್ಯವಾಗುತ್ತಿದೆ ಎಂಬುದನ್ನು ತಿಳಿಯಲು ಅವುಗಳ ಜೀವ ಕಣಗಳ ಬಗ್ಗೆ ಸಂಶೋಧನೆ ಮಾಡುತ್ತಿದೆ. ಈ ರಹಸ್ಯ ಭೇದಿಸಿದರೆ ಮನುಷ್ಯ ರೋಗಗಳಿಗೆ ತುತ್ತಾಗದಂತೆ ಸುಖವಾಗಿ ನೂರು ವರ್ಷ ಬಾಳಬಹುದು.

ಸೈಡ್ ವಾಕ್‌ ಟಾಕ್‌

ಈಗಾಗಲೇ ಹಲವು ಗ್ರಾಮಗಳು ಖಾಲಿ ಆಗಿವೆ. ಪಟ್ಟಣ ಪ್ರದೇಶಗಳಲ್ಲಿ ಜನಸಾಂದ್ರತೆ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ಮಹಾನಗರಗಳ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ವರ್ತಮಾನವೇ ಹೀಗಿದ್ದರೆ, ಇನ್ನು ಭವಿಷ್ಯ ಹೇಗಿರಬಹುದು?

ಈ ಉಪದ್ರವವನ್ನು ತಪ್ಪಿಸುವುದಕ್ಕಾಗಿಯೇ ಗೂಗಲ್‌ ಸಂಸ್ಥೆ ಒಂದು ಯೋಜನೆ ಆರಂಭಿಸಿದೆ. ಇದರ ಹೆಸರು ‘ಸೈಡ್ ವಾಕ್‌ ಟಾಕ್‌’. ಸೆನ್ಸರ್‌ಗಳು, ಡೇಟಾ, ಕನೆಕ್ಟಿವಿಟಿ... ಈ ಮೂರು ಅಂಶಗಳ ಸಹಾಯದೊಂದಿಗೆ ನಗರ ಜೀವನವನ್ನು ಸರಳ ಮಾಡುವುದು ಇದರ ಉದ್ದೇಶ. ಆಗಾಗ್ಗೆ ರಸ್ತೆಗಳ ಸಂಚಾರ ದಟ್ಟಣೆ ಸಮಾಚಾರವನ್ನು ವಾಹನ ಚಾಲಕರಿಗೆ ತಿಳಿಸುವುದು, ಕಾರು ಪಾರ್ಕಿಂಗ್‌ ಸ್ಥಳದ ಬಗ್ಗೆ ಮಾಹಿತಿ ನೀಡುವುದು. ಪಾದಚಾರಿಗಳ ಅನುಕೂಲಕ್ಕಾಗಿ ಸ್ಮಾರ್ಟ್‌ ಟ್ರಾಫಿಕ್‌ ದೀಪಗಳನ್ನು ಅಳವಡಿಸುವುದು... ಇತ್ಯಾದಿ ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.

***

ಡೀಪ್ ಮೈಂಡ್‌

ಕೃತಕ ಬುದ್ಧಿಮತ್ತೆಯು ಮನುಷ್ಯನ ಬುದ್ಧಿಶಕ್ತಿಗೆ ಸವಾಲು ಎಸೆಯುತ್ತಿದೆ . ಈ ಬುದ್ಧಿಶಕ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಲಂಡನ್‌ನ ಡೀಪ್‌ಮೈಂಡ್‌ ಸಂಸ್ಥೆಯನ್ನು ಮೂರು ವರ್ಷಗಳ ಹಿಂದೆ ಗೂಗಲ್ ಖರೀದಿಸಿದೆ. ಈ ಸಂಸ್ಥೆಯ ಹೆಸರಲ್ಲೇ ಸಂಶೋಧನೆಗಳನ್ನು ಆರಂಭಿಸಿದೆ.

ಬುದ್ಧಿಶಕ್ತಿಯಲ್ಲಿ ಮನುಷ್ಯನನ್ನು ಸೋಲಿಸುವಂಥ ಶಕ್ತಿಯುತವಾದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಈ ಸಂಸ್ಥೆ ಅಭಿವೃದ್ಧಿಪಡಿಸಿದ ಅಲ್ಫಾಗೋ ಎಂಬ ತಂತ್ರಾಂಶ ‘ಗೋ’ ಎಂಬ ಕ್ರೀಡೆಯಲ್ಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದೆ! ತಾರ್ಕಿಕವಾಗಿ ಯೋಚಿಸಿ ಗೆಲ್ಲಬೇಕಾದ ಕ್ರೀಡೆಯಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಗೆಲುವು ಸಾಧಿಸಿದೆ. ಡೀಪ್‌ಮೈಂಡ್ ಸಂಸ್ಥೆಯ ಸಹಾಯದಿಂದ ಗೂಗಲ್, ತನ್ನ ಡೇಟಾ ಸೆಂಟರ್‌ಗಳಲ್ಲಿ ವಿದ್ಯುತ್‌ ಬಳಕೆಯನ್ನು ಶೇ 40ರಷ್ಟು ಕಡಿಮೆ ಮಾಡಿದೆ. ಅಲ್ಲದೆ ಚಾಲಕರಹಿತ ವಾಹನಗಳಲ್ಲೂ ಈ ತಂತ್ರಜ್ಞಾನವನ್ನು ಬಳಸುತ್ತಿದೆ.

***

ವೆರಿಲೀ ಲೈಫ್ ಸೈನ್ಸ್‌

ಮನುಷ್ಯನ ಆರೋಗ್ಯ ಕಾಪಾಡುವುದಕ್ಕೆ ಅಗತ್ಯವಿರುವ ಅಧ್ಯಯನಗಳು, ಸಂಶೋಧನೆಗಳು ‘ವೆರಿಲಿ’ ಸಂಸ್ಥೆಯ ಪ್ರಯೋಗಾಲಯಗಳಲ್ಲಿ ನಡೆಯುತ್ತಿವೆ. ಈ ಸಂಸ್ಥೆ ಅಭಿವೃದ್ಧಿಪಡಿಸಿದ ಅತ್ಯುತ್ತಮ ಪರಿಕರ, ಗ್ಲೂಕೋಸ್‌ ಮಟ್ಟವನ್ನು ಆಗಾಗ್ಗೆ ಗುರುತಿಸುವ ‘ಕಾಂಟಾಕ್ಟ್ಯ್‌ ಲೆನ್ಸ್’. ಮಧುಮೇಹದಿಂದ ಬಳಲುತ್ತಿರುವವರಿಗಾಗಿ ಇದನ್ನು ತಯಾರಿಸಲಾಗಿದೆ. ಆರೋಗ್ಯ ಸಮಸ್ಯೆಗಳನ್ನು ಗುರುತಿಸುವಂಥ ಗಡಿಯಾರವನ್ನೂ ವೆರಿಲಿ ಲ್ಯಾಬ್ ಸಂಶೋಧನೆ ಮೂಲಕ ತಯಾರಿಸಲಾಗಿದೆ.

ಡೆಂಗಿ, ಮಲೇರಿಯಾದಂತಹ ಜ್ವರಗಳನ್ನು ನಿಯಂತ್ರಿಸಲು ಇಲ್ಲಿ ಸಂಶೋಧನೆಗಳು ನಡೆಯುತ್ತಿವೆ. ರೋಗಗಳನ್ನು ಹರಡುವ ಸೊಳ್ಳೆಗಳ ಪುನರ್‌ ಉತ್ಪತ್ತಿಯನ್ನು ನಿಯಂತ್ರಿಸುವ ಮೂಲಕ ರೋಗ ಹರಡದಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಈ ಯೋಜನೆಗೆ ‘ಡಿಬಗ್’ ಎಂದು ನಾಮಕರಣ ಮಾಡಲಾಗಿದೆ. ಸಮುದ್ರದ ನೀರನ್ನು ಇಂಧನವಾಗಿ ಬಳಸುವ ಸಂಶೋಧನೆಗಳೂ ಇಲ್ಲಿ ನಡೆಯುತ್ತಿವೆ.

***

ಗೂಗಲ್ ಎಕ್ಸ್‌

ಇದು ಕೆಲವು ಯೋಜನೆಗಳ ಸಮೂಹ. ಇಲ್ಲಿ ಪ್ರಾಜೆಕ್ಟ್‌ ವಿಂಗ್‌, ಪ್ರಾಜೆಕ್ಟ್‌ ಗ್ಲಾಸ್‌, ಪ್ರಾಜೆಕ್ಟ್ ಲೂನ್ ಹೆಸರಿನಲ್ಲಿ ಹಲವು ಸಂಶೋಧನೆಗಳು ನಡೆಯುತ್ತಿವೆ. ಕುಗ್ರಾಮಗಳು, ದ್ವೀಪ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಅಂತರ್ಜಾಲ ಸಂಪರ್ಕ ಒದಗಿಸುವುದು ಪ್ರಾಜೆಕ್ಟ್‌ ಲೂನ್‌ನ ಉದ್ದೇಶ.

ಇದರ ಅಂಗವಾಗಿ ವೈರ್‌ಲೆಸ್‌ ರೌಟರ್‌ಗಳನ್ನು ಅವಳವಡಿಸಿದ ಬಲೂನ್‌ಗಳನ್ನು ವಾಯುಮಂಡಲಕ್ಕೆ ತೇಲಿಬಿಟ್ಟು, ಅದರ ಮೂಲಕ ಮೊಬೈಲ್‌ಗಳಿಗೆ, ಕಂಪ್ಯೂಟರ್‌ಗಳಿಗೆ ಡೇಟಾ ಒದಗಿಸಲಾಗುತ್ತದೆ. ಇನ್ನು ಪ್ರಾಜೆಕ್ಟ್‌ ವಿಂಗ್‌ ಎಂಬುದು ಡ್ರೋನ್‌ನಂಥ ಹಾರುವ ಪರಿಕರಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸುವುದು. ಪ್ರಾಜೆಕ್ಟ್‌ ಗ್ಲಾಸ್ ಎಂಬುದು ಅಂತರ್ಜಾಲ ಸೌಲಭ್ಯ ಒದಗಿಸುವಂತಹ ಕನ್ನಡಕವನ್ನು ತಯಾರಿಸುವುದು. ಆದರೆ ಈ ಕನ್ನಡಕದ ಬೆಲೆ ತುಸು ದುಬಾರಿಯಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry