ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದಲ್ಲಿ ಹಿರಿಯಜ್ಜಿಯ ಮೋಡಿ

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದ ಈಜುಕೊಳದಲ್ಲಿ ಮಹಿಳೆಯರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆ ನಡೆಯುತ್ತಿತ್ತು. 80 ವರ್ಷಕ್ಕಿಂತ ಮೇಲಿನವರ ಸ್ಪರ್ಧೆ ಅದಾಗಿದ್ದರಿಂದ ಸಹಜವಾಗಿ ಎಲ್ಲರಲ್ಲೂ ಕುತೂಹಲ ಮನೆಮಾಡಿತ್ತು. ಪ್ರೇಕ್ಷಕರ ಚಪ್ಪಾಳೆಯ ನಡುವೆ ನೀರಿಗೆ ಧುಮುಕಿದ ಹಿರಿಯಜ್ಜಿ ಯರು ಯಾವುದೇ ಅಳುಕಿಲ್ಲದ ಈಜಿದರು.

ಮೊದಲಿಗರಾಗಿ ಗುರಿಮುಟ್ಟಿದ ಗುಜರಾತ್‌ನ ವಡೋದರ ನಿವಾಸಿ ಭಗವತಿ ಓಜಾ ಗೆಲುವಿನ ಚಿಹ್ನೆ ತೋರಿಸಿ ಮಂದಹಾಸ ಬೀರಿದಾಗ ಎಲ್ಲರ ಮೊಗದಲ್ಲೂ ನಗು ಅರಳಿತು. 80ರ ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತಿರುವ ಓಜಾ 14ನೇ ರಾಷ್ಟ್ರೀಯ ಮಾಸ್ಟರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನದ ಗೌರವ ಪಡೆದುಕೊಂಡರು.

ಬುಧವಾರ 100 ಮೀ. ಫ್ರೀಸ್ಟೈಲ್‌ ಮತ್ತು 50 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಗಳಲ್ಲಿ ಚಿನ್ನ ಜಯಿಸಿದ ಅವರು ಗುರುವಾರ 50 ಮೀ. ಫ್ರೀಸ್ಟೈಲ್‌ ಮತ್ತು 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 2016 ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಓಜಾ ಆರು ಪದಕ ಜಯಿಸಿದ್ದರು.

ಸ್ತ್ರೀರೋಗ ತಜ್ಞೆಯಾಗಿ ಹಲವು ವರ್ಷ ಸೇವೆ ಸಲ್ಲಿಸಿರುವ ಓಜಾ ಎಳೆ ವಯಸ್ಸಿನಲ್ಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ ವೈದ್ಯಕೀಯ ಶಿಕ್ಷಣ, ವೈದ್ಯ ವೃತ್ತಿ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಕಾರಣ ಕ್ರೀಡಾಪಟುವಾಗಿ ಬೆಳೆಯಲು ಆಗಲಿಲ್ಲ.

ವೈದ್ಯ ವೃತ್ತಿಯಿಂದ ವಿರಮಿಸಿದ ಬಳಿಕ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದರು. ‘ಹೆಚ್ಚಿನವರು 60 ವರ್ಷ ದಾಟಿದ ಬಳಿಕ ಇನ್ನು ಸಾಧಿಸಲು ಏನೂ ಇಲ್ಲ ಎಂದು ಭಾವಿಸಿ ಎಲ್ಲ ಚಟುವಟಿಕೆಗಳಿಂದ ದೂರ ಉಳಿಯುವರು. ಆದರೆ ನಾನು 65ನೇ ವಯಸ್ಸಿನ ಬಳಿಕ ಮಾಸ್ಟರ್ಸ್‌ ಕೂಟಗಳಲ್ಲಿ ಪಾಲ್ಗೊಳ್ಳತೊಡಗಿದೆ’ ಎಂದು ತಮ್ಮ ಸಾಧನೆಗಳನ್ನು ಒಂದೊಂದಾಗಿ ಬಿಡಿಸಿಟ್ಟರು.

‘ಕಳೆದ 15 ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇನೆ. ಪ್ರತಿ ಪದಕ ನನ್ನ ಉತ್ಸಾಹವನ್ನು ಹೆಚ್ಚಿಸಿದೆ. ಆದ್ದರಿಂದ ಈ ವಯಸ್ಸಿನಲ್ಲೂ ಈಜುಕೊಳಕ್ಕೆ ಧುಮುಕಲು ಸಾಧ್ಯವಾಗುತ್ತಿದೆ’ ಎಂದು ಹೇಳಿದರು. 2005 ರಿಂದ ಮಾಸ್ಟರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಅವರು ಒಟ್ಟು 55 ಪದಕಗಳನ್ನು ಗೆದ್ದುಕೊಂಡಿದ್ದಾರೆ.

1936 ರಲ್ಲಿ ಜನಿಸಿದ ಭಗವತಿ ಇದೇ 17 ರಂದು 81ನೇ ವಯಸ್ಸಿಗೆ ಕಾಲಿಡುವರು. ಕುಟುಂಬ ಸದಸ್ಯರ ಬಗ್ಗೆ ಕೇಳಿದಾಗ, ‘ನಾನು ಈಗಲೂ ಮಿಸ್‌ ಭಗವತಿ. ಮದುವೆಯಾಗಿಲ್ಲ’ ಎನ್ನುತ್ತಾ ನಗು ಬೀರಿದರು.

ಪ್ರಶಸ್ತಿಗಳು ಹಲವು: ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಭಗವತಿ ಅವರನ್ನು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. 2016 ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ‘ವಯೋಶ್ರೇಷ್ಠ ಸಮ್ಮಾನ್‌’ ಸ್ವೀಕರಿಸಿದ್ದರು. ಕ್ರೀಡೆ ಮತ್ತು ಸಾಹಸ ಚಟುವಟಿಕೆಗಳಲ್ಲಿ ಶ್ರೇಷ್ಠ ಸಾಧನೆ ತೋರಿದ್ದಕ್ಕೆ ಈ ಗೌರವ ಲಭಿಸಿತ್ತು. ಕಳೆದ ವರ್ಷ ಗುಜರಾತ್‌ ಸರ್ಕಾರದ ‘ಜೀವಮಾನದ ಶ್ರೇಷ್ಠ ಸಾಧನೆ’ ಪ್ರಶಸ್ತಿ ಪಡೆದಿದ್ದರು.

2016ರ ವಡೋದರ ಅಂತರರಾಷ್ಟ್ರೀಯ ಹಾಫ್ ಮ್ಯಾರಥಾನ್‌ನಲ್ಲಿ ಕ್ರಿಕೆಟಿಗರಾದ ಯೂಸುಫ್‌ ಪಠಾಣ್‌ ಮತ್ತು ಇರ್ಫಾನ್‌ ಪಠಾಣ್‌ ಜತೆ ಓಜಾ ಕೂಡಾ ರಾಯಭಾರಿಯಾಗಿದ್ದರು.

ಸೈಕ್ಲಿಂಗ್‌ನಲ್ಲೂ ಸಾಧನೆ
ಈ ಹಿರಿಯಜ್ಜಿ ಈಜು ಸ್ಪರ್ಧೆಗಿಂತ ಹೆಚ್ಚಿನ ಸಾಧನೆಯನ್ನು ಸೈಕ್ಲಿಂಗ್‌ನಲ್ಲಿ ಮಾಡಿದ್ದಾರೆ. 2011 ರಲ್ಲಿ (ತಮ್ಮ 75ರ ಹರೆಯದಲ್ಲಿ) ಕೋಲ್ಕತ್ತದಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದರು. ‘ಗೋ ಗ್ರೀನ್‌ ಸೈಕ್ಲಿಂಗ್‌ ಯಾತ್ರೆ’ ತಂಡದ ಸದಸ್ಯರಾಗಿ ಈ ಸಾಧನೆ ಮಾಡಿದ್ದರು.

ಸುಮಾರು 2,500 ಕಿ.ಮೀ ದೂರ ಕ್ರಮಿಸಲು 31 ದಿನಗಳನ್ನು ತೆಗೆದುಕೊಂಡಿದ್ದರು. ಸೈಕಲ್‌ನಲ್ಲಿ ಈ ದೂರ ಕ್ರಮಿಸಿದ ಹಿರಿಯ ಮಹಿಳೆ ಎಂಬ ಗೌರವ ಅವರಿಗೆ ಒಲಿದಿತ್ತು. 2013 ರಲ್ಲಿ ವಡೋದರಿಂದ ವಾಘಾ ಗಡಿಗೆ ಮತ್ತು 2014 ರಲ್ಲಿ ಗುಜರಾತ್‌ನ ಕಚ್‌ನಿಂದ ಕೇರಳದ ಕೊಚ್ಚಿವರೆಗೆ ಸೈಕಲ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT