ಗುರುವಾರ , ಫೆಬ್ರವರಿ 25, 2021
30 °C

ಗಣಪತಿ ಆತ್ಮಹತ್ಯೆ: ತನಿಖೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಪತಿ ಆತ್ಮಹತ್ಯೆ: ತನಿಖೆ ಚುರುಕು

ಮಡಿಕೇರಿ: ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಕೊಡಗು ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ತನಿಖೆ ಚುರುಕುಗೊಳಿಸಿದೆ.

ಚೆನ್ನೈ ಸಿಬಿಐ ಕಚೇರಿಯ ಐವರು ಅಧಿಕಾರಿಗಳ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣದ ಖಾಸಗಿ ದೂರಿನ ವಿಚಾರಣೆ ನಡೆಯುತ್ತಿದೆ. ಗುರುವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ತಂಡವು, ಸಿಐಡಿ ಸಲ್ಲಿಸಿದ್ದ ‘ಬಿ–ರಿಪೋರ್ಟ್‌’ನ ಪ್ರತಿಗೆ ಕೋರಿ ಅರ್ಜಿ ಸಲ್ಲಿಸಿತು.

ಮಂಗಳವಾರ ರಾತ್ರಿ ಸೋಮವಾರ ಪೇಟೆ ತಾಲ್ಲೂಕಿನ ಕುಶಾಲನಗರ ಸಮೀಪದ ರಂಗ ಸಮುದ್ರದ ಗಣಪತಿ ನಿವಾಸದಲ್ಲಿ ಅವರ ತಂದೆ ಎಂ.ಕೆ.ಕುಶಾಲಪ್ಪ, ತಾಯಿ ಜಾಜಿ ಪೂವಮ್ಮ, ಸಹೋದರ ಎಂ.ಕೆ.ಮಾಚಯ್ಯ ಅವರ ಹೇಳಿಕೆ ಪಡೆದುಕೊಂಡಿದೆ. ‘ಇನ್ನಷ್ಟು ದಾಖಲೆ ಸಂಗ್ರಹಿಸಿದ ಬಳಿಕ ಮತ್ತೊಮ್ಮೆ ಮಾಹಿತಿ ಪಡೆಯುತ್ತೇವೆ’ ಎಂದು ಕುಟುಂಬದ ಸದಸ್ಯರಿಗೆ ತನಿಖಾ ತಂಡವು ತಿಳಿಸಿದೆ.

2016ರ ಜುಲೈ 7ರಂದು ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿನಾಯಕ ವಸತಿಗೃಹದ ಕೊಠಡಿಯನ್ನೂ ಪರಿಶೀಲಿಸಿ, ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ. ತನಿಖಾ ತಂಡವು ಶುಕ್ರವಾರ ಮಂಗಳೂರಿಗೆ ತೆರಳಲಿದ್ದು, ಗಣಪತಿ ಪತ್ನಿ ಕೆ.ಕೆ.ಪಾವನಾ, ಪುತ್ರ ನೇಹಲ್‌ ಹೇಳಿಕೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಪೊಲೀಸರು ಹಾಗೂ ಅವರ ಸಂದರ್ಶನ ನಡೆಸಿದ್ದ ಖಾಸಗಿ ವಾಹಿನಿಯ ಸಿಬ್ಬಂದಿಯ ವಿಚಾರಣೆ ಮಾತ್ರ ಬಾಕಿಯಿದೆ.

ಪ್ರಕರಣದ ಮಾಹಿತಿಯನ್ನು ಗುಟ್ಟಾಗಿ ಸಂಗ್ರಹಿಸುತ್ತಿರುವ ತನಿಖಾ ತಂಡವು ಸ್ಥಳೀಯ ಪೊಲೀಸರ ನೆರವನ್ನೂ ಪಡೆದಿಲ್ಲ. ವಿವಿಧ ಸ್ಥಳಗಳಿಗೆ ದಿಢೀರ್‌ ಭೇಟಿ ನೀಡಿ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗುತ್ತಿದೆ.

ಸಿಬಿಐ ಕಚೇರಿಯ ಎಸ್‌.ಪಿ ಎ.ಶರವಣನ್‌ ದಾಖಲಿಸಿರುವ ಪ್ರಥಮ ವರ್ತಮಾನ ವರದಿಯಲ್ಲಿ (ಎಫ್‌ಐಆರ್‌) ಸಚಿವ ಕೆ.ಜೆ.ಜಾರ್ಜ್‌ ಒಂದನೇ ಆರೋಪಿ, ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ ಎರಡು ಹಾಗೂ ಎ.ಎಂ.ಪ್ರಸಾದ್‌ ಅವರನ್ನು ಮೂರನೆಯ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.