ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವೈದ್ಯರಿಂದ ರಾಜ್ಯದಾದ್ಯಂತ ಪ್ರತಿಭಟನೆ: ಆರೋಗ್ಯ ಸೇವೆ ವ್ಯತ್ಯಯ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕ ಶುಕ್ರವಾರ ಹೊರ ರೋಗಿಗಳ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಬೆಳಿಗ್ಗೆ 8ಗಂಟೆಗೆ ಪ್ರಾರಂಭವಾಗುವ ಪ್ರತಿಭಟನೆ 24 ತಾಸು ನಡೆಯುತ್ತದೆ. ಇದಕ್ಕೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದ್ದು, ತುರ್ತು ಚಿಕಿತ್ಸೆ ಹೊರತುಪಡಿಸಿ ಎಲ್ಲಾ ತಪಾಸಣೆಗಳು ಸ್ಥಗಿತಗೊಳಿಸಲು ನಿರ್ಧರಿಸಿವೆ. ‘40,000 ಸಂಸ್ಥೆಗಳ ಸುಮಾರು 60,000 ವೈದ್ಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಐಎಂಎ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಬಿ. ವೀರಪ್ಪ ತಿಳಿಸಿದರು.

ಯಾವೆಲ್ಲ ಸಂಸ್ಥೆಗಳ ಬೆಂಬಲ: ‘ಸಣ್ಣ, ಮಧ್ಯಮ ಮತ್ತು ಬೃಹತ್‌ ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳು, ಕರ್ನಾಟಕ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ವಿವಿಧ ತಜ್ಞ ವೈದ್ಯರ ಸಂಘಟನೆಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್, ರಕ್ತನಿಧಿಗಳು ಪ್ರತಿಭಟನೆಗೆ ಬೆಂಬಲಿಸಿವೆ’ ಎಂದು ಮಾಹಿತಿ ನೀಡಿದರು.

‘ಒಂದು ಕಡೆ ಗುಂಪು ಕಟ್ಟಿಕೊಂಡು ಅಥವಾ ಜಾಥಾ ನಡೆಸಿ ಪ್ರತಿಭಟಿಸುವುದಿಲ್ಲ. ಖಾಸಗಿ ವೈದ್ಯರಿಗೆ ಮಾರಕವಾಗಿರುವ ತಿದ್ದುಪಡಿಗಳನ್ನು ಕೈಬಿಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ನೀಡುತ್ತೇವೆ. ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಕ್ಕೆ ಸಾರ್ವಜನಿಕರಿಗೆ ಕ್ಷೇಮೆ ಕೋರಿ, ನಮಗೆ ಬೆಂಬಲ ನೀಡುವಂತೆ ಕರಪತ್ರಗಳನ್ನು ಹಂಚಿದ್ದೇವೆ’ ಎಂದು ವಿವರಿಸಿದರು.

ಸರ್ಕಾರಿ ವೈದ್ಯರ ಕಡ್ಡಾಯ ಹಾಜರಿಗೆ ಆದೇಶ

ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ ವೈದ್ಯರು ಸೇವೆ ಸ್ಥಗಿತಗೊಳಿಸಲಿರುವುದರಿಂದ ಜನರಿಗೆ ತೊಂದರೆ ಆಗದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಎಲ್ಲ ವೈದ್ಯರು ಮತ್ತು ವೈದ್ಯಕೀಯ ಸಹಾಯಕರು (ಶುಕ್ರವಾರ) ರಜೆ ರದ್ದುಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕಲ್ಯಾಣ ಸೇವೆಗಳ ಆಯುಕ್ತ ಮನೋಜ್‌ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗಿಗಳಿಗೆ ಅನಾನುಕೂಲ ಆಗದಂತೆ ತ್ವರಿತ ಸೇವೆ ದೊರೆಯುವಂತೆ ಮಾಡಲಾಗುವುದು. ಖಾಸಗಿ ವೈದ್ಯರ ಒಂದು ದಿನದ ಮುಷ್ಕರ ಆಗಿರುವುದರಿಂದ ವೈದ್ಯರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು ಆಯಾಯ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ  ಚರ್ಚಿಸಬೇಕು ಮನೋಜ್‌ ಕುಮಾರ್‌ ಮೀನಾ ಹೇಳಿದರು.

ಮಾತುಕತೆಗೆ ಕರೆದಿಲ್ಲ

ರಾಜ್ಯ ಸರ್ಕಾರ ಮಾತುಕತೆಗೆ ಕರೆದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಗೌರವ ಕಾರ್ಯದರ್ಶಿ ಡಾ. ಬಿ.ವೀರಣ್ಣ ತಿಳಿಸಿದರು.

ಮುಖ್ಯಮಂತ್ರಿ ಸಂಘದ ಪದಾಧಿಕಾರಿ ಒಬ್ಬರನ್ನು ಕರೆದಿದ್ದರು. ಅದು ಅಧಿಕೃತ ಆಹ್ವಾನ ಆಗಿಲ್ಲದ ಕಾರಣ ಅವರು ಹೋಗಲಿಲ್ಲ. ಸರ್ಕಾರ ಕರೆದರೆ ಸಂಘದ ಎಲ್ಲ ಪದಾಧಿಕಾರಿಗಳೂ ಹೋಗುತ್ತೇವೆ ಎಂದು ಅವರು ಹೇಳಿದರು.

ಮುಷ್ಕರ ನಡೆಸದಂತೆ ಮುಖ್ಯಮಂತ್ರಿ ಮನವಿ

ಖಾಸಗಿ ಆಸ್ಪತ್ರೆ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಬಾರದು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

‘ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಈಗಾಗಲೇ ಒಂದು ಬಾರಿ ಚರ್ಚೆ ನಡೆಸಲಾಗಿದೆ. ಅವರ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸುತ್ತದೆ. ಇದೆಲ್ಲವೂ ಸದನದಲ್ಲಿ ನಿರ್ಧಾರ ಆಗಬೇಕಿದೆ’ ಎಂದು ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಬಳಿಕ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು. ಈ ಸಮಿತಿ ಅನೇಕ ಸಭೆಗಳನ್ನು ನಡೆಸಿ ಹಲವು ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ. ಮಸೂದೆ ಪರಿಷ್ಕರಿಸಿ, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಬಂದ್‌ನಿಂದ ಏನೆಲ್ಲ ವ್ಯತ್ಯಯ

* ಔಷಧ ಅಂಗಡಿಗಳು ಇರುವುದಿಲ್ಲ

* ಕ್ಲಿನಿಕ್‌ಗಳು ಬಂದ್‌ ಆಗಲಿವೆ

* ರಕ್ತನಿಧಿಗಳು ಕಾರ್ಯನಿರ್ವಹಿಸುವುದಿಲ್ಲ

* ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ತಪಾಸಣೆ ಇರುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT