ಶನಿವಾರ, ಫೆಬ್ರವರಿ 27, 2021
25 °C

‘₹200ಕ್ಕಿಂತ ಅಧಿಕ ಬೆಲೆ: ಬಿಲ್‌ ಕೇಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘₹200ಕ್ಕಿಂತ ಅಧಿಕ ಬೆಲೆ: ಬಿಲ್‌ ಕೇಳಿ’

ಹಾವೇರಿ: ‘₹200ಕ್ಕಿಂತ ಅಧಿಕ ಬೆಲೆಯ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಬಿಲ್‌ ಕೇಳಿ ಪಡೆಯಬೇಕು. ಆಗ ಮಾತ್ರ ಆ ವಸ್ತುವಿನ ತೆರಿಗೆ ಸರ್ಕಾರಕ್ಕೆ ಸೇರುತ್ತದೆ’ ಎಂದು ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಗಳ ಇಲಾಖೆಯ ಅಧೀಕ್ಷಕ ರವೀಂದ್ರ ಕಟಗೇರಿ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ನಡೆದ ‘ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಜಿಎಸ್‌ಟಿ ಅಡಿಯಲ್ಲಿ ಜೀವನಾವಶ್ಯಕ ವಸ್ತುಗಳಾದ ಹಾಲು, ಶಿಶು ಆಹಾರ ಮತ್ತಿತರ ಪ್ರಮುಖ ವಸ್ತುಗಳ ಮೇಲೆ ತೆರಿಗೆ ವಿಧಿಸಿಲ್ಲ. ಅಲ್ಲದೇ, ಈ ಹಿಂದೆ ರಾಜ್ಯದಿಂದ ರಾಜ್ಯಕ್ಕೆ ತೆರಿಗೆಯಲ್ಲಿ ವ್ಯತ್ಯಾಸ ಇರುತ್ತಿತ್ತು. ಆದರೆ, ಜಿಎಸ್‌ಟಿಯಿಂದಾಗಿ ಒಂದು ದೇಶ ಒಂದೇ ತೆರಿಗೆ ವ್ಯಾಪ್ತಿಗೆ ಬಂದಿದೆ ಎಂದರು.

ಜಿಎಸ್‌ಟಿಯಲ್ಲಿ ಹಲವು ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್‌ ಶೇ 17ರಿಂದ ಶೇ 5ಕ್ಕೆ, ಎಲ್‌ಇಡಿ ಬಲ್ಬ್‌ ಶೇ 15ರಿಂದ ಶೇ 12ಕ್ಕೆ, ಬ್ರಾಂಡ್‌ ರಹಿತ ತುಪ್ಪ ಶೇ 6ರಿಂದ ಶೂನ್ಯಕ್ಕೆ, ಹೆಲ್ಮೆಟ್‌ ಶೇ 25ರಿಂದ ಶೇ 15ಕ್ಕೆ, ಸಿಮೆಂಟ್‌ ಶೇ 8ರಿಂದ ಶೇ 5ಕ್ಕೆ ಇಳಿಸಲಾಗಿದೆ. ಅಲ್ಲದೇ, ಹಲವು ವಸ್ತುಗಳ ತೆರಿಗೆಗಳನ್ನು ಶೂನ್ಯಗೊಳಿಸಲಾಗಿದೆ ಎಂದರು.

ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಗಳ ಇಲಾಖೆಯ ವಿಭಾಗೀಯ ಅಧೀಕ್ಷಕ ಸುರೇಶ್ ಎಂ. ಎಸ್‌, ಮಾತನಾಡಿ, ‘ಜಿಎಸ್‌ಟಿ ಎಲ್ಲರಿಗೂ ಹೊಸದು. ಉದ್ದಿಮೆದಾರರು, ವ್ಯಾಪಾರಸ್ಥರು ಹೆಚ್ಚಿನ ಒತ್ತು ಕೊಟ್ಟು ಸಮರ್ಪಕ ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಭವಿಷ್ಯದ ವ್ಯವಹಾರಕ್ಕೆ ಸಹಾಯವಾಗುತ್ತದೆ’ ಎಂದರು.

‘ಜಿಎಸ್‌ಟಿಯಂತಹ ಹೊಸ ಪದ್ಧತಿಯ ಬಗ್ಗೆ ಮಾಹಿತಿ ಕೊರತೆ ಇದ್ದರೆ, ಮುಕ್ತವಾಗಿ ಪ್ರಶ್ನಿಸಿ, ಸಮರ್ಪಕ ಉತ್ತರ ಪಡೆದುಕೊಳ್ಳಿ. ಇಲ್ಲವಾದರೆ, ಇಲಾಖೆಗೆ ಪತ್ರ ಬರೆದರೆ, ಮೇಲಧಿಕಾರಿಗೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು’ ಎಂದರು.

ಸಂವಾದ: ಹಾನಗಲ್‌ನ ವರ್ತಕರಾದ ಜಿಲಾನಿ ಮುಲ್ಲಾ ಮಾತನಾಡಿ, ‘ಜಿಎಸ್‌ಟಿ –1 ಮತ್ತು ಜಿಎಸ್‌ಟಿ –3ಬಿ ಕಾಲಂಗಳಲ್ಲಿ ಒಂದೇ ಮಾಹಿತಿಯನ್ನು ತುಂಬುವುದರಿಂದ ಏನು ಲಾಭ’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಸುರೇಶ ಎಂ.ಎಸ್‌. ‘ಜಿಎಸ್‌ಟಿ 3ಬಿ ಡಿಸೆಂಬರ್‌ ವರೆಗೆ ಮಾತ್ರ ನಿಗದಿಯಾಗಿದ್ದು, ಬಹುಶಃ ಆ ಬಳಿಕ ಅದು ರದ್ದಾಗಬಹುದು’ ಎಂದರು. ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಕೆ.ಬಾಬು, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ರುಕ್ಸಾನಾ ಬಾನು ಆರ್. ಗುಡಿಗೇರಿ ಹಾಗೂ ಮೊಹಮ್ಮದ್ ಇರ್ಫಾನ್ ಉಲ್ಲಾ ಇದ್ದರು ಕಾರ್ಯಾಗಾರದ ಕುರಿತು ಪ್ರಚಾರ ಹಾಗೂ ಮಾಹಿತಿ ಇಲ್ಲದ ಕಾರಣ ವರ್ತಕರ ಸಂಖ್ಯೆ ಬೆರಳೆಣಿಕೆ ಮಾತ್ರ ಇತ್ತು. ಅಲ್ಲದೇ, ಗುರುವಾರ ಹಾವೇರಿ ಮಾರುಕಟ್ಟೆ ದಿನವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.