ಶುಕ್ರವಾರ, ಮಾರ್ಚ್ 5, 2021
24 °C

ಎಟಿಪಿ ರ‍್ಯಾಂಕಿಂಗ್‌: ಮೂರು ವರ್ಷಗಳ ನಂತರ ಭಾರಿ ಕುಸಿತ ಕಂಡ ಸಾನಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

ಎಟಿಪಿ ರ‍್ಯಾಂಕಿಂಗ್‌: ಮೂರು ವರ್ಷಗಳ ನಂತರ ಭಾರಿ ಕುಸಿತ ಕಂಡ ಸಾನಿಯಾ

ನವದೆಹಲಿ (ಪಿಟಿಐ): ನಿರಂತರವಾಗಿ ಸ್ಥಿರ ಸಾಮರ್ಥ್ಯ ಮೆರೆದ ಭಾರತದ ಟೆನಿಸ್ ಆಟಗಾರ ದಿವಿಜ್ ಶರಣ್‌ ಇದಕ್ಕೆ ಫಲ ಕಂಡಿದ್ದಾರೆ. ಸೋಮವಾರ ಪ್ರಕಟಗೊಂಡ ಎಟಿಪಿ ಪಟ್ಟಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಅವರು 50ರ ಒಳಗಿನ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

ಇದೇ ವೇಳೆ ಭಾರತದ ಭರವಸೆಯ ಆಟಗಾರ್ತಿ ಸಾನಿಯಾ ಮಿರ್ಜಾ ಭಾರಿ ಹಿನ್ನಡೆ ಕಂಡಿದ್ದು 10ರ ಒಳಗಿನ ಸ್ಥಾನವನ್ನು ಕಳೆದುಕೊಂಡಿದ್ದಾರೆ. 2013ರ ನಂತರ ಇದೇ ಮೊದಲ ಬಾರಿ ಅವರು ಈ ಸ್ಥಿತಿ ಕಂಡಿದ್ದಾರೆ.

ಎಡಗೈ ಆಟಗಾರ ದಿವಿಜ್‌ ಶರಣ್‌ ಇತ್ತೀಚೆಗೆ ನಡೆದ ಮೂರು ‍ಪ್ರಮುಖ ಟೂರ್ನಿಗಳಲ್ಲಿ ಫೈನಲ್ ಹಂತಕ್ಕೆ ತಲುಪಿದ್ದಾರೆ. ಈ ಪೈಕಿ ಎಟಿಪಿ 250 ಯುರೋಪಿಯನ್‌ ಓಪನ್‌ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಬ್ರೆಸ್ಟ್‌ ಮತ್ತು ತಾಷ್ಕಂಟ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. ಫ್ರೆಂಚ್ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದರು.

ಇದರ ಫಲವಾಗಿ ಅವರು ಒಂದು ಸ್ಥಾನ ಏರಿಕೆ ಕಂಡಿದ್ದು 50ನೇ ಸಂಖ್ಯೆಯಲ್ಲಿ ವಿರಾಜಮಾನರಾಗಿದ್ದಾರೆ. ಇದರೊಂದಿಗೆ ಭಾರತದ ಇಬ್ಬರು ಆಟಗಾರರು 50ರ ಒಳಗಿನ ಸ್ಥಾನ ಗಳಿಸಿದಂತಾಗಿದೆ. ರೋಹನ್ ಬೋಪಣ್ಣ ಅವರು ಈಗಾಗಲೇ 15ನೇ ಸ್ಥಾನದಲ್ಲಿದ್ದು ಗಮನ ಸೆಳೆದಿದ್ದಾರೆ.

ದೆಹಲಿ ಈ ಆಟಗಾರ ಇತ್ತೀಚೆಗೆ ತಮ್ಮ ಜೋಡಿ ಪುರವ್ ರಾಜ ಅವರಿಂದ ಡಬಲ್ಸ್‌ನಿಂದ ಬೇರ್ಪಟ್ಟಿದ್ದರು. ಆದರೂ ಅವರ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ. ಹೊಸ ಪಟ್ಟಿಯಲ್ಲಿ ಪುರವ್‌ ರಾಜ 62ನೇ ಸ್ಥಾನದಲ್ಲಿದ್ದಾರೆ. ಲಿಯಾಂಡರ್ ಪೇಸ್‌ (70) ಹಾಗೂ ಜೀವನ್‌ ನೆಡುಂಚೆರಿಯನ್‌ (97) 100ರ ಒಳಗೆ ಇರುವ ಭಾರತದ ಇತರ ಆಟಗಾರರು.

ಗ್ರ್ಯಾನ್‌ಸ್ಲ್ಯಾಂ ಗೆಲ್ಲುವ ವಿಶ್ವಾಸ

ನಾನು ಮತ್ತು ನನ್ನ ಜೋಡಿ ರೋಚಕವಾಗಿ ಸೋತ ಪಂದ್ಯಗಳಲ್ಲಿ ನಮ್ಮ ಎದುರಾಳಿ ಆಗಿದ್ದವರೆಲ್ಲರೂ ಗ್ರ್ಯಾನ್‌ಸ್ಲಾಂ ಗೆದ್ದವರು. ಅವರನ್ನು ಕೆಲವು ಸಂದರ್ಭಗಳಲ್ಲಿ ಸೋಲಿಸುವುದಕ್ಕೂ ನಮಗೆ ಸಾಧ್ಯವಾಗಿದೆ. ಇದು ಗ್ರ್ಯಾನ್‌ಸ್ಲಾಂ ಗೆಲ್ಲಲು ನಮಗೂ ಸಾಧ್ಯ ಎಂಬ ಭರವಸೆ ಮೂಡಿಸಿದೆ’ ಎಂದು ದಿವಿಜ್ ಹೇಳಿದರು.

‘ಎಟಿಪಿ ರ‍್ಯಾಂಕಿಂಗ್‌ನ ಅಗ್ರ 30ರ ಒಳಗೆ ಸ್ಥಾನ ಗಳಿಸುವುದು ನನ್ನ ಮುಂದಿನ ಗುರಿ. ಇದು ಸಾಧ್ಯವಾದರೆ ಮಾಸ್ಟರ್ಸ್ ಸೀರಿಸ್‌ಗಳಲ್ಲಿ ಆಡಲು ಅವಕಾಶ ಸಿಗಲಿದೆ. ನನಗೆ ಈಗ ಲಭಿಸುತ್ತಿರುವ ಪ್ರೋತ್ಸಾಹದಿಂದ ಇದು ಸುಲಭ ಸಾಧ್ಯ ಎಂಬ ಭರವಸೆ ಇದೆ’ ಎಂದು ಅವರು ತಿಳಿಸಿದರು.

ವಿಷ್ಣುವರ್ಧನ್‌ ಪ್ರಗತಿ

ಭಾರತದ ಮತ್ತೊಬ್ಬ ಭರವಸೆಯ ಆಟಗಾರ ವಿಷ್ಣುವರ್ಧನ್‌ 16 ಸ್ಥಾನಗಳ ಏರಿಕೆ ಕಂಡಿದ್ದು 118ಕ್ಕೇರಿದ್ದಾರೆ. ಅವರು ತಮ್ಮ ಜೋಡಿ ಎನ್‌.ಶ್ರೀರಾಮ್‌ ಬಾಲಾಜಿ ಅವರ ಜೊತೆ ಇತ್ತೀಚೆಗೆ ಮುಕ್ತಾಯಗೊಂಡ ಶೆನ್ಜೆನ್‌ ಚಾಲೆಂಜ್ ಟೂರ್ನಿಯ ಪ್ರಶಸ್ತಿ ಗೆದ್ದಿದ್ದರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮೂರು ಸ್ಥಾನಗಳ ಕುಸಿತ ಕಂಡು 12ನೇ ಸ್ಥಾನಕ್ಕೆ ಇಳಿದಿದ್ದಾರೆ. 2013ರ ಮಾರ್ಚ್‌ ಮೂರರಿಂದ ಅವರು ನಿರಂತರವಾಗಿ ಅಗ್ರ 10ರ ಒಳಗೆ ಸ್ಥಾನ ಪಡೆದಿದ್ದರು. 2016ರ ವರ್ಷ ಪೂರ್ತಿ ಡಬಲ್ಸ್‌ನಲ್ಲಿ ಅವರು ಅಗ್ರಸ್ಥಾನದಲ್ಲಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ 140ನೇ ಸ್ಥಾನದಲ್ಲಿ ಮುಂದುವರಿದಿದ್ದು ರಾಮಕುಮಾರ್ ರಾಮನಾಥನ್‌ 148 ಸ್ಥಾನ ಗಳಿಸಿದ್ದಾರೆ. ಪ್ರಜ್ಞೇಶ್ ಗುನ್ನೇಶ್ವರನ್‌ 225, ಸುಮಿತ್ ನಗಾಲ್‌ 331 ಮತ್ತು ಬಾಲಾಜಿ 350ನೇ ಸ್ಥಾನದಲ್ಲಿದ್ದಾರೆ. ಡಬ್ಲ್ಯುಟಿಎ ಪಟ್ಟಿಯಲ್ಲಿ ಅಂಕಿತಾ ರೈನಾ 281 ಸ್ಥಾನಗಳೊಂದಿಗೆ ಭಾರತದ ಅಗ್ರ ಆಟಗಾರ್ತಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಕರ್ಮನ್ ಕೌರ್‌ ಥಾಂಡಿ (307) ಮತ್ತು ಪ್ರಾಂಜಲ ಯಡ್ಲಪಳ್ಳಿ (483) ನಂತರದ ಸ್ಥಾನಗಳಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.