ಬುಧವಾರ, ಫೆಬ್ರವರಿ 24, 2021
23 °C

ಮನೆ ಮನೆ ಭೇಟಿಗೆ ಷಾ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮನೆ ಮನೆ ಭೇಟಿಗೆ ಷಾ ಚಾಲನೆ

ಅಹಮದಾಬಾದ್‌: ಅಭಿವೃದ್ಧಿಯ ಸಂದೇಶವನ್ನು ಮನೆ ಮನೆಗೆ ತಲುಪಿಸುವುದಕ್ಕಾಗಿ ‘ಗುಜರಾತ್‌ ಗೌರವ ಮಹಾ ಸಂಪರ್ಕ ಅಭಿಯಾನ’ ಎಂಬ ಆರು ದಿನಗಳ ಕಾರ್ಯಕ್ರಮಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮಂಗಳವಾರ ಚಾಲನೆ ನೀಡಿದ್ದಾರೆ.

ರಾಜ್ಯದ 50 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳ ಮತದಾರರನ್ನು ನೇರವಾಗಿ ಸಂಪರ್ಕಿಸುವುದು ಈ ಅಭಿಯಾನದ ಉದ್ದೇಶ. ಷಾ ಅವರು ಹಿಂದೆ ಪ್ರತಿನಿಧಿಸಿದ್ದ ನರನ್‌ಪುರ ವಿಧಾನಸಭಾ ಕ್ಷೇತ್ರದಿಂದ ಅಭಿಯಾನಕ್ಕೆ ಚಾಲನೆ ನೀಡಿದರು. ಅಭಿಯಾನದ ಭಾಗವಾಗಿ ಷಾ ಅವರು ಹತ್ತು ನಿವಾಸಿ ಸಂಘಗಳ ಸದಸ್ಯರನ್ನು ಭೇಟಿಯಾದರು.

ಭಾರಿ ಸಂಖ್ಯೆಯ ಕಾರ್ಯಕರ್ತರ ಜತೆಗೆ ಷಾ ಅವರು ಕೆಲವು ಮನೆಗಳಿಗೆ ಹೋಗಿ ಮತ ಯಾಚಿಸಿದರು. 1998 ರಿಂದ ಇತ್ತೀಚಿನವರೆಗೆ ಈ ಕ್ಷೇತ್ರವನ್ನು ಷಾ ಅವರು ಪ್ರತಿನಿಧಿಸಿದ್ದರು. ಕೆಲವು ತಿಂಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರವೊಂದರ ಪ್ರತಿಗಳನ್ನು ಮನೆ ಮನೆಗೆ ವಿತರಿಸಲಾಯಿತು. ಮುಖ್ಯಮಂತ್ರಿ ವಿಜಯ ರೂಪಾಣಿ, ಮಾಜಿ ಮುಖ್ಯಮಂತ್ರಿ ಆನಂದಿ ಬೆನ್‌ ಪಟೇಲ್‌ ಮುಂತಾದ ನಾಯಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. 

ಗುಜರಾತಿನಲ್ಲಿ ಡಿ. 9 ಮತ್ತು 14ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿ. 18ರಂದು ಮತ ಎಣಿಕೆ ನಡೆಸಲಾಗುವುದು.

ಡಿ.14ರ ಸಂಜೆವರೆಗೆ ಮತದಾನೋತ್ತರ ಸಮೀಕ್ಷೆಗೆ ಅವಕಾಶವಿಲ್ಲ: ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟಣೆಗೆ ಡಿಸೆಂಬರ್ 14ರ ಸಂಜೆವರೆಗೂ ಅವಕಾಶವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಡಿ. 9ಕ್ಕೆ ಹಿಮಾಚಲ ಪ್ರದೇಶದಲ್ಲಿ ಮತದಾನ ಮುಕ್ತಾಯವಾದರೂ ಡಿ. 14ರಂದು ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನ ಮುಗಿಯುವವರೆಗೆ ಸಮೀಕ್ಷೆ ಬಹಿರಂಗಪಡಿಸುವಂತಿಲ್ಲ ಎಂದು ಆಯೋಗ ಸ್ಪಷ್ಟ ಸೂಚನೆ ನೀಡಿದೆ. ಪತ್ರಿಕೆ, ಟಿ.ವಿ, ರೇಡಿಯೊ ಅಥವಾ ಅಂತರ್ಜಾಲ ಮಾಧ್ಯಮಗಳು ನಿಯಮ ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದೆ.

***

ಹಿಮಾಚಲ: ಬಹಿರಂಗ ಪ್ರಚಾರ ಅಂತ್ಯ

ಶಿಮ್ಲಾ:
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಬಹಿರಂಗ ‍ಪ್ರಚಾರ ಮಂಗಳವಾರ ಕೊನೆಗೊಂಡಿದೆ. 9ರಂದು ಮತದಾನ ನಡೆಯಲಿದೆ.

ಉಳಿದ ದಿನಗಳಲ್ಲಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಾರಿಯ ಪ್ರಚಾರದ ವ್ಯಾಪ್ತಿ ಮತ್ತು ಅಬ್ಬರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿತ್ತು.

ಈ ಬಾರಿ ಪಕ್ಷಗಳಿಗೆ ಪ್ರಚಾರ ಮಾಡಲು ಸಿಕ್ಕಿದ್ದು 12 ದಿನಗಳು ಮಾತ್ರ. ಇದು ಇತ್ತೀಚಿನ ಚುನಾವಣೆಗಳಲ್ಲಿಯೇ ಅತ್ಯಂತ ಅಲ್ಪಾವಧಿಯ ಚುನಾವಣಾ ಪ್ರಚಾರ. ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಮತ ಎಣಿಕೆ ಡಿಸೆಂಬರ್‌ 18ರಂದು ನಡೆಯಲಿದೆ.

ವಿಧಾನಸಭೆಯ ಒಟ್ಟು ಸದಸ್ಯ ಬಲ 68 ಆಗಿದ್ದು, ಕಾಂಗ್ರೆಸ್‌ 36 ಶಾಸಕರನ್ನು ಹೊಂದಿದೆ. ಬಿಜೆಪಿ ಸದಸ್ಯರ ಸಂಖ್ಯೆ 26. ಉಳಿದವರು ಪಕ್ಷೇತರರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.