ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀ ರಿಂಗ್ ಲೋಕದಲ್ಲಿ...

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸೀರೆ ಸೆರಗಿಗೆ ಕೀಲಿಕೈಯನ್ನು ಸಿಕ್ಕಿಸಿಟ್ಟುಕೊಳ್ಳುವ ಮಹಿಳೆಯರು ಹಲವರು. ಮನೆಯ ಬೀರುವಿನ ಕೀಲಿಕೈ ಇಟ್ಟುಕೊಳ್ಳಲು ಅಂದವಾದ ಬೆಳ್ಳಿಯ ಆಭರಣ ಮಾಡಿಸಿ ಅದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದೊಂದು ನಿತ್ಯ ಬಳಸುವ ಆಭರಣದಂತೆಯೇ ಆಗಿರುವ ಉದಾಹರಣೆಯೂ ಇದೆ. ಕೌಟುಂಬಿಕ ಧಾರಾವಾಹಿಗಳಲ್ಲಿ ಈಗಲೂ ‘ಕೀ ಬಂಚ್‌’ ಇಟ್ಟುಕೊಳ್ಳುವವಳೇ ಮನೆಯ ಒಡತಿ.

ಆದರೆ, ನಿತ್ಯ ಜೀವನದಲ್ಲಿ ಕೀಲಿ ಕೈ ಇಟ್ಟುಕೊಳ್ಳಲೇಬೇಕಾದದ್ದು ಎಲ್ಲರಿಗೆ ಅನಿವಾರ್ಯ. ಅವುಗಳೊಂದಿಗೆ ಗುರುತಿಗಾಗಿ ಒಂದಿಲ್ಲೊಂದು ವಸ್ತುವನ್ನು ಜೋಡಿಸಿಟ್ಟುಕೊಳ್ಳುವ ರೂಢಿ ಕಳೆದ ಕೆಲ ದಶಕಗಳಿಂದ ಬೆಳೆದಿದೆ. ಜನರ ಮನದಿಂಗಿತಕ್ಕೆ ಅನುಗುಣವಾಗಿ ಇವುಗಳ ಮಾರುಕಟ್ಟೆಯೂ ಅಷ್ಟೇ ವಿಸ್ತರಿಸಿದೆ. ವೈವಿಧ್ಯಮಯವಾಗಿಯೂ ಇದೆ.

ಹಲವು ಕಂಪೆನಿಗಳು, ಬ್ಯಾಂಕ್‌ಗಳು ಜಾಹೀರಾತಿಗಾಗಿ ಕೀಲಿ ಕೈಗಳನ್ನು ಇಡುವ ರಿಂಗ್‌ಗಳನ್ನು ಹೊರತರುತ್ತಿವೆ. ಕಂಪೆನಿಯ ಹೆಸರಿನ ಮೊದಲ ಅಕ್ಷರವುಳ್ಳದ್ದು, ಅಥವಾ ಲೋಗೊ ಇರುವಂಥವು ಕಂಡು ಬರುತ್ತವೆ. ಅಥವಾ ಒಳ್ಳೆಯ ಸಂದೇಶ ಸಾರುವಂಥ ವಸ್ತುಗಳೂ ಈ ರಿಂಗ್‌ಗಳ ಜತೆ ಇರುತ್ತವೆ. ಥರಥರದ ಕೀ ರಿಂಗ್‌ಗಳನ್ನು ಒಟ್ಟು ಮಾಡಿಟ್ಟುಕೊಳ್ಳುವ ಹವ್ಯಾಸವುಳ್ಳವರೂ ಕಾಣ ಸಿಗುತ್ತಾರೆ.

ಹಳೆಯದರ ಸ್ಮರಣೆಗಾಗಿ, ಮಾದರಿ ವ್ಯಕ್ತಿಯನ್ನು ಸ್ಮರಿಸಿಕೊಳ್ಳಲು, ನಂಬಿಕೆಗಳಿಗನುಗುಣವಾಗಿಯೂ ಇವುಗಳ ಫ್ಯಾಷನ್‌ ಬೆಳೆದುಬಂದಿದೆ. ಅಲಂಕಾರಿಕ ವಸ್ತುಗಳು, ಮ್ಯಾಗ್ನೆಟ್‌ಗಳುಳ್ಳವೂ ಇಲ್ಲಿವೆ. ಚಿಕ್ಕ ಬೊಂಬೆಗಳು, ಪ್ರಾಣಿಗಳು, ಪಕ್ಷಿಗಳ ಮಾದರಿ, ದಿಕ್ಸೂಚಿ, ಭೂಮಿಯ ಮಾದರಿ, ಅಲಂಕಾರಿಕ ವಸ್ತುಗಳು ಅಂದ ಹೆಚ್ಚಿಸುತ್ತವೆ.

ಧಾರ್ಮಿಕ ಮಹತ್ವ ಸಾರುವ ವಸ್ತುಗಳನ್ನು ಇಷ್ಟಪಡುವ ಮಂದಿಯೇನೂ ಕಡಿಮೆಯಿಲ್ಲ. ಗಣಪತಿಯ ಮುಖವುಳ್ಳ ಆಕರ್ಷಕ ಕೀ ರಿಂಗ್‌ಗಳ ಮಾದರಿ ಎಷ್ಟು ಬೇಕಾದರೂ ಸಿಗುತ್ತವೆ. ಕೃಷ್ಣನ ಮಾದರಿಯದ್ದೂ ಬೇಡಿಕೆ ಹೊಂದಿದೆ. ಶಂಖ, ಚಕ್ರ, ಗದೆ, ಬಾಣ ಹೀಗೆ ದೇವರ ಆಯುಧಗಳೆಲ್ಲವೂ ಈಗ ಪ್ಲಾಸ್ಟಿಕ್‌, ರಬ್ಬರ್‌ ಹಾಗೂ ಲೋಹಗಳಲ್ಲಿ ಚಿಕ್ಕ ಚಿಕ್ಕ ಕೀ ಚೈನ್‌ಗಳಲ್ಲಿ ಅವತಾರ ತಾಳಿವೆ. ಮಕ್ಕಳ ಕಾರ್ಟೂನ್‌ ಪಾತ್ರಗಳಾದ ಬಾಲಕೃಷ್ಣ, ಛೋಟಾ ಭೀಮ್‌, ಡೋರೆಮನ್ ಮೊದಲಾದವೂ ಬಂದು ಮಕ್ಕಳನ್ನು ಆಕರ್ಷಿಸುತ್ತವೆ

ಉಪಯುಕ್ತವಾದವೂ ಇವೆ

ಷೋಕಿಗಾಗಿ ಇರುವವು ಹಲವಾದರೆ, ಉಪಯುಕ್ತ ಕೀರಿಂಗ್‌ಗಳೂ ಇವೆ. ಬಾಟಲ್‌ ಓಪನರ್‌, ನೇಲ್‌ ಕಟರ್‌, ಯುಎಸ್‌ಬಿ ಡ್ರೈವ್‌, ವಾಚ್‌, ವಿಶಲ್‌ ಇರುವಂಥವು ಕೀಲಿ ಕೈಗಳನ್ನು ಒಟ್ಟಿಗೆ ಇಡಲಷ್ಟೇ ಅಲ್ಲ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೂ ಸಹಾಯ ಒದಗಿಸುತ್ತವೆ. 40 ವರ್ಷಗಳ ಕ್ಯಾಲೆಂಡರ್‌ ತೋರಿಸುವಂಥ ಮಾದರಿಯೂ ಲಭ್ಯವಿವೆ.

ಈಚೆಗೆ ಅತ್ಯುಪಯುಕ್ತವಾಗಿ ಬಂದಿರು ವುದೆಂದರೆ ‘ಪೆಪ್ಪರ್‌ ಸ್ಪ್ರೇ ಇರುವಂಥ ಕೀ ರಿಂಗ್‌’. ಇವರು ಮಾರುಕಟ್ಟೆಯಲ್ಲಿ, ಆನ್‌ಲೈನ್‌ನಲ್ಲಿ ಲಭ್ಯವಿವೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಇಂಥ ಸಂದರ್ಭದಲ್ಲಿ ಇದು ಸ್ವ ರಕ್ಷಣೆಗೆ ಆಯುಧವಾಗಿಯೂ ಬಳಕೆಯಾಗಬಹುದು. ಚಿಕ್ಕ ಚೂರಿಗಳ ಮಾದರಿಯವೂ ಮೆಚ್ಚುಗೆ ಗಳಿಸಿವೆ.

ಕೀಲಿ ಕೈಗಳು ಇಲ್ಲದಿದ್ದರೂ ಕಾಲೇಜು ವಿದ್ಯಾರ್ಥಿಗಳ ಬ್ಯಾಗ್‌ಗಳಿಗೆ ಹತ್ತಾರು ಕೀ ರಿಂಗ್‌ ಗಳು ತೂಗಿ ಬಿದ್ದಿರುವುದನ್ನು ಕಾಣುತ್ತೇವೆ. ಇಷ್ಟರ ಮಟ್ಟಿಗೆ ಇವುಗಳ ಮೋಹ ಯುವಜನರನ್ನು ಆವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT