ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ಒಪ್ಪಿಗೆ ನೀಡಿಲ್ಲ’

ಕುಟುಂಬದ ಹಿಡಿತದಲ್ಲಿ ಪಕ್ಷ ಅಪಾದನೆ ಮುಕ್ತಿಗೆ ಈ ನಿರ್ಧಾರ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ
Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬುಳ್ಳಾಪುರ (ಶಿವಮೊಗ್ಗ ತಾ:) ‘ಜೆಡಿಎಸ್ ಒಂದು ಕುಟುಂಬದ ಹಿಡಿತದಲ್ಲಿದೆ ಎಂಬ ಅಪವಾದದಿಂದ ಹೊರಬರಲು ಈ ಬಾರಿ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಹಾಗಾಗಿ, ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಒಪ್ಪಿಗೆ ನೀಡಿಲ್ಲ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಬುಳ್ಳಾಪುರದಲ್ಲಿ ಗ್ರಾಮವಾಸ್ತವ್ಯ ಹೂಡಿ, ಸಿ. ಕರಿಬಸಪ್ಪ ಹಾಗೂ ಶಿವಕುಮಾರ ನಾಯ್ಕ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಒಂದು ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಇದ್ದಂತೆ ನಮ್ಮ ಕುಟುಂಬದಲ್ಲೂ ಕೆಲವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಕಾರ್ಯಕರ್ತರಿಂದಲೂ ಅವರಿಗೇ ಟಿಕೆಟ್‌ ನೀಡುವಂತೆ ಒತ್ತಡ ಬರುತ್ತಿದೆ. ಆದರೆ, ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಕೆಲವು ಕಠಿಣ ತೀರ್ಮಾನ ಅನಿವಾರ್ಯ. ಅದನ್ನೆ ನೆಪವಾಗಿಟ್ಟುಕೊಂಡು ಕೆಲವರು ಪ್ರಜ್ವಲ್‌ ರೇವಣ್ಣ ರಾಜಕೀಯಕ್ಕೆ ಬರುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ ಎಂದು ವದಂತಿ ಹಬ್ಬಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಥೆಗಳ ಒಡೆಯರಿಗಷ್ಟೇ ಲಾಭ:
ವೀರಶೈವ–ಲಿಂಗಾಯತರ ಒಡಕಿನ ಲಾಭ ಪಡೆಯಲು ಜೆಡಿಎಸ್ ಎಂದೂ ಪ್ರಯತ್ನಿಸುವುದಿಲ್ಲ. ಆ ಸಮುದಾಯ ಒಗ್ಗೂಡಬೇಕು. ಸದಾ ಒಗ್ಗಟಿನಿಂದ ಇರಬೇಕು ಎಂದು ಧಾರ್ಮಿಕ ಗುರುಗಳಿಗೆ ಮನವಿ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪ ಸಂಖ್ಯಾತರ ಸ್ಥಾನ ದೊರೆತರೆ ಅದರ ಲಾಭವಾಗುವುದು ದೊಡ್ಡದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿಕೊಂಡವರಿಗೆ. ಆ ಸಮಾಜದ ಬಡವರು, ರೈತರು, ಸಂಕಷ್ಟದಲ್ಲಿ ಇರುವವರಿಗೆ ಯಾವುದೇ ಲಾಭವಿಲ್ಲ. ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಾಭ ಮಾಡಿಕೊಂಡವರು ತಮ್ಮ ಸಮಾಜದ ಎಷ್ಟು ಜನರಿಗೆ ಉಚಿತ ಸೀಟು ನೀಡಿದ್ದಾರೆ ಎಂದು ಪ್ರಶ್ನಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಹಾಸಿಗೆ, ದಿಂಬು ತೆಗೆದುಕೊಂಡು ಹೋಗುತ್ತಿದ್ದರು ಎಂದಿದ್ದಾರೆ. ಮೂಲ ಸೌಕರ್ಯಗಳು ಇಲ್ಲದ ಊರುಗಳಲ್ಲಿ ವಾಸ್ತವ್ಯ ಮಾಡುವಾಗ ಅಷ್ಟೊಂದು ಜನರಿಗೆ ಅಲ್ಲಿನ ಬಡವರು ಹೇಗೆ ಸೌಕರ್ಯ ಕಲ್ಪಿಸುತ್ತಾರೆ ಎಂಬ ಕನಿಷ್ಠ ಜ್ಞಾನವೂ ಮುಖ್ಯಮಂತ್ರಿಗೆ ಇಲ್ಲ. ಮೈಸೂರಿನ ಬಂಬೂಬಜಾರ್‌ನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಪರಿಣಾಮ ಅಲ್ಲಿನ ಎಲ್ಲರಿಗೂ ಮನೆ ನಿರ್ಮಿಸಿಕೊಡಲು ಸಾಧ್ಯವಾಯಿತು. ಸುವರ್ಣ ಗ್ರಾಮ ಯೋಜನೆ ರೂಪಿಸಲು ನೆರವಾಯಿತು ಎಂದು ಸಮರ್ಥಿಸಿಕೊಂಡರು.

ಬೇಸಿಗೆ ಸಮೀಪಿಸುವ ಮೊದಲೇ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ ಆರಂಭವಾಗಿದೆ. ಸರ್ಕಾರಕ್ಕೆ ಸಾಕಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದ್ದರೂ, ಕಿಕ್‌ಬ್ಯಾಕ್ ಕಾರಣಕ್ಕಾಗಿ ಹೊರಗಿನಿಂದ ಖರೀದಿಸಲಾಗುತ್ತಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಯೂ ತಡೆ ರಹಿತ ವಿದ್ಯುತ್ ಪೂರೈಸುತ್ತದೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT