ಶುಕ್ರವಾರ, ಮಾರ್ಚ್ 5, 2021
16 °C
ಕೊಹ್ಲಿ ಬಳಗದ ಎದುರು ನಾಲ್ವರು ಬೌಲರ್‌ಗಳು ಕಣಕ್ಕೆ

ವಿಭಿನ್ನ ತಂತ್ರಕ್ಕೆ ಮೊರೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಭಿನ್ನ ತಂತ್ರಕ್ಕೆ ಮೊರೆ

ಕೋಲ್ಕತ್ತ (ಪಿಟಿಐ): ಪಾಕಿಸ್ತಾನದ ವಿರುದ್ಧ ದುಬೈನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬಳಸಿದ ತಂತ್ರಗಳು ಯಶಸ್ಸು ಕಂಡಿವೆ. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲೂ ವಿಭಿನ್ನ ತಂತ್ರಗಳನ್ನು ಬಳಸಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕ ದಿನೇಶ್ ಚಾಂದಿಮಲ್‌ ತಿಳಿಸಿದರು.

‘‍ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐದು ಮಂದಿ ಬೌಲರ್‌ಗಳು ಮತ್ತು ಆರು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕೆ ಇಳಿಸಿದ್ದೆವು. ಅಲ್ಲಿನ ಪರಿಸ್ಥಿತಿಯಲ್ಲಿ ಈ ತಂತ್ರ ಯಶಸ್ಸು ಕಂಡಿತು. ಆದರೆ ಭಾರತ ವಿರುದ್ಧದ ಸರಣಿಯಲ್ಲಿ ನಾಲ್ವರು ಬೌಲರ್ಗಳು ಮತ್ತು ಏಳು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಬಳಸುವುದು ಉತ್ತಮ’ ಎಂದು ಅವರು ಇಲ್ಲಿ ಗುರುವಾರ ನಡೆದ ಅಭ್ಯಾಸದ ನಡುವೆ ಹೇಳಿದರು.

‘ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದು ಜಯ ಗಳಿಸುವುದು ಸುಲಭವಲ್ಲ ಎಂಬುದು ವಾಸ್ತವ. ಆದರೆ ಭಾರತ ತಂಡದಲ್ಲಿ ಅತ್ಯುತ್ತಮ ಬೌಲರ್‌ಗಳು ಇರುವುದರಿಂದ ಆಲ್‌ರೌಂಡರ್‌ಗಳನ್ನು ಕಣಕ್ಕೆ ಇಳಿಸುವುದು ಉತ್ತಮ ಎಂದೆನಿಸುತ್ತದೆ. ಆದರೂ ಕೊನೆಗೆ ಪಿಚ್‌ ಪರಿಶೀಲಿಸಿದ ನಂತರವೇ ತಂಡವನ್ನು ಅಂತಿಮಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

ಭಾರತ ತಂಡದ ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಮೂರು ಪಂದ್ಯಗಳ ಟೆಸ್ಟ್ ಸರಣಿ ಸೇರಿದಂತೆ ಎಲ್ಲ ಮಾದರಿಯ ಸರಣಿಗಳಲ್ಲೂ ಲಂಕಾ ಸೋತಿತ್ತು. ಆದರೆ ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2–0ಯಿಂದ ಲಂಕಾ ಗೆದ್ದಿತ್ತು. ಇದು ತಂಡದ ಭರವಸೆಯನ್ನು ಹೆಚ್ಚಿಸಿದೆ.

‘ಭಾರತ ಈಗ ಅತ್ಯುತ್ತಮ ತಂಡ. ಎರಡು ವರ್ಷಗಳಲ್ಲಿ ಈ ತಂಡ ಅನೇಕ ಸರಣಿಗಳನ್ನು ಗೆದ್ದಿದೆ. ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ಆಟವಾಡಿದೆ. ಹೀಗಾಗಿ ಆಟಗಾರರು ಭಾರತದ ಸವಾಲನ್ನು ದಿಟ್ಟವಾಗಿ ಎದುರಿಸಲು ಸಜ್ಜಾಗಿದ್ದಾರೆ. ಭಾರತದಲ್ಲಿ ಆಡುವುದು ದೊಡ್ಡ ಸವಾಲು. ಹಾಗೆಂದು ಹಳೆಯ ಲೆಕ್ಕಾಚಾರವನ್ನು ನೋಡುತ್ತ ನಾವು ಆತಂಕಪಡುವುದಿಲ್ಲ. ಇಲ್ಲಿ ಖುಷಿಯಿಂದಲೇ ಆಡಲಿದ್ದೇವೆ’ ಎಂದು ಅವರು ಅಭಿಪ್ರಾಯಪಟ್ಟರು.

ಅಶ್ವಿನ್‌–ಜಡೇಜ ಎದುರಿಸಲು ತಂತ್ರ

ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರನ್ನು ಎದುರಿಸಲು ತಂಡ ಪ್ರತ್ಯೇಕ ತಂತ್ರಗಳನ್ನು ಹೆಣೆಯಲಿದೆ ಎಂದು ಚಾಂದಿಮಲ್ ಹೇಳಿದರು.

‘ಒಂದು ತಂಡವಾಗಿ ನಮ್ಮಲ್ಲಿ ಸಾಕಷ್ಟು ಸಾಮರ್ಥ್ಯ ಇದೆ. ಅದನ್ನು ಕಾರ್ಯರೂಪಕ್ಕೆ ಇಳಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಟೆಸ್ಟ್ ಸರಣಿಗಳಲ್ಲಿ ಭಾರತದಲ್ಲಿ ಶ್ರೀಲಂಕಾ ಉತ್ತಮ ಸಾಧನೆ ಮಾಡಿಲ್ಲ. ಅದರಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಕೋಲ್ಕತ್ತದಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದಲ್ಲೇ ಉತ್ತಮ ಲಯ ಕಂಡುಕೊಳ್ಳುವುದು ನಮ್ಮ ಉದ್ದೇಶ’ ಎಂದು ಅವರು ಭರವಸೆಯಿಂದ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.