7

ಅಧಿಕಾರಕ್ಕಾಗಿ ಭ್ರಷ್ಟಾಚಾರದ ಮೇಲೆ ಪ್ರಹಾರ

Published:
Updated:
ಅಧಿಕಾರಕ್ಕಾಗಿ ಭ್ರಷ್ಟಾಚಾರದ ಮೇಲೆ ಪ್ರಹಾರ

ಭ್ರಷ್ಟಾಚಾರ ನಿಗ್ರಹದ ಹೊಣೆಯನ್ನು ವಹಿಸಿಕೊಂಡಿರುವ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶದಂತೆ ಅಲ್ಲಿನ 11 ರಾಜ ಕುಮಾರರು, ಮೂವರು ಸಚಿವರು, ಹತ್ತು ಮಾಜಿ ಸಚಿವರು ಮತ್ತು ಹತ್ತಾರು ಪ್ರಭಾವಿ ವ್ಯಕ್ತಿಗಳನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿದೆ. ಕಳೆದ ಎಂಟು ದಶಕಗಳಲ್ಲಿ ಆ ದೇಶದಲ್ಲಿ ಇಷ್ಟೊಂದು ತೀವ್ರವಾದ ಕ್ರಮಗಳನ್ನು ಯಾರೂ ಕೈಗೊಂಡಿರಲಿಲ್ಲ. ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬ, ಮಧ್ಯಪ್ರಾಚ್ಯದ ವಾರನ್‌ ಬಫೆಟ್‌ ಎಂದು ಕರೆಸಿಕೊಳ್ಳುವ ಉದ್ಯಮಿ ಅಲಾವಲೀದ್‌ ಬಿನ್‌ ತಲಾಲ್‌ ಅವರೂ ಬಂಧಿತರಲ್ಲಿ ಸೇರಿದ್ದಾರೆ. ಹಾಗಾಗಿ ಭ್ರಷ್ಟಾಚಾರದ ವಿರುದ್ಧ ನಡೆದ ಈ ಕಾರ್ಯಾಚರಣೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಸೌದಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆಯೇ?

ಮರುಭೂಮಿಗಳ ನಾಡು ಸೌದಿಯ ಭಾರಿ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳು ಮರೀಚಿಕೆಯಾಗಿಯೇ ಉಳಿಯುತ್ತವೆ ಎಂಬ ಆರೋಪ ಹುರುಳಿಲ್ಲದ್ದೇನಲ್ಲ. ರಾಜವಂಶಕ್ಕೆ ಸೇರಿದವರು ಮತ್ತು ಪ್ರಭಾವಿಗಳ ಲಂಚದ ಬೇಡಿಕೆಯಿಂದಾಗಿ ಸರ್ಕಾರದ ವತಿಯಿಂದ ಕೈಗೊಳ್ಳಲಾಗುವ ಯೋಜನೆಗಳ ವೆಚ್ಚ ಹತ್ತಾರು ಪಟ್ಟು ಹೆಚ್ಚಳವಾಗುತ್ತಿದೆ. ಯೋಜನೆಗಳು ವಿಳಂಬವಾಗುತ್ತವೆ ಮತ್ತು ಕೆಲವು ಯೋಜನೆಗಳು ಯಾವತ್ತೂ ಪೂರ್ಣಗೊಳ್ಳುವುದೇ ಇಲ್ಲ. ಬಂದರು ನಗರ ಜಿದ್ದಾದಲ್ಲಿ ಅತ್ಯಾಧುನಿಕ ಒಳಚರಂಡಿ ನಿರ್ಮಾಣಕ್ಕಾಗಿ ಸೌದಿಯ ಶತಕೋಟ್ಯಧಿಪತಿ ಉದ್ಯಮಿಯೊಬ್ಬರು ಸಾವಿರಾರು ಕೋಟಿ ರಿಯಾಲ್‌ ಪಡೆದಿದ್ದರು. ಆ ವ್ಯಕ್ತಿ ಯಾವ ಕೆಲಸವನ್ನೂ ಮಾಡದೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದ್ದರು. 2009ರಲ್ಲಿ ಭಾರಿ ಪ್ರವಾಹ ಉಂಟಾದಾಗ ನೀರೆಲ್ಲವೂ ಜಿದ್ದಾ ನಗರಕ್ಕೆ ನುಗ್ಗಿತು. ನೂರಕ್ಕೂ ಹೆಚ್ಚು ಜನ ಸತ್ತರು. ಒಳಚರಂಡಿ ವ್ಯವಸ್ಥೆ ಇಲ್ಲ ಎಂಬುದು ಎಲ್ಲರಿಗೂ ತಿಳಿದದ್ದು ಆಗಲೇ. ಯೋಜನೆಗಳ ಹೆಸರಿನಲ್ಲಿ ಹಣ ಪಡೆದು ಏನನ್ನೂ ಮಾಡುವುದಿಲ್ಲ ಎಂಬುದು ಜನರಿಗೆ ಮತ್ತು ಆಡಳಿತ ವರ್ಗಕ್ಕೆ ಗೊತ್ತಿರುವ ರಹಸ್ಯ.

ರಾಜವಂಶಕ್ಕೆ ಸೇರಿದವರು ಯುರೋಪ್‌ ಮತ್ತು ಅಮೆರಿಕದಲ್ಲಿ ಭಾರಿ ಆಸ್ತಿಗಳನ್ನು ಹೊಂದಿದ್ದಾರೆ. ಖಾಸಗಿ ವಿಮಾನಗಳು, ಐಷಾರಾಮಿ ವಿಹಾರ ಹಡಗುಗಳನ್ನು ಖರೀದಿಸಿದ್ದಾರೆ. ಚಿನ್ನವನ್ನೇ ಹಾಸಿದ ಭಾರಿ ಅರಮನೆಗಳಲ್ಲಿ ವಾಸಿಸುತ್ತಾರೆ. ಕಂಡದ್ದೆಲ್ಲವನ್ನೂ ಕೊಳ್ಳುತ್ತಾರೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಈತನಕ ಅವರನ್ನು ಯಾರೂ ಕೇಳಿಲ್ಲ. ಸರ್ಕಾರದ ಹಣವನ್ನೇ ಬಾಚಿ ಬಾಚಿ ಅವರು ಖರ್ಚು ಮಾಡುತ್ತಾರೆ. ಹಾಗಾಗಿ ಭ್ರಷ್ಟಾಚಾರ ಎಂಬುದು ಅಲ್ಲಿನ ಸಾಮಾನ್ಯ ವ್ಯವಸ್ಥೆ ಎಂದೇ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಆರೋಪಿಗಳ ವಿಚಾರಣೆ ವ್ಯವಸ್ಥೆ ಏನು?

ರಾಜ ವಂಶಕ್ಕೆ ಸೇರಿದವರು ಆಡಳಿತ ನಡೆಸುವುದಷ್ಟೇ ಅಲ್ಲದೆ ಸರ್ಕಾರದ ಜತೆಗೆ ವ್ಯಾಪಾರವನ್ನೂ ನಡೆಸುತ್ತಾರೆ. ಯೋಜನೆಗಳ ಗುತ್ತಿಗೆ ಪಡೆಯುತ್ತಾರೆ, ಸರ್ಕಾರಕ್ಕೆ ಬೇಕಾದ ಸಾಧನಗಳನ್ನು ಪೂರೈಸುತ್ತಾರೆ. ಇಂತಹ ವ್ಯವಹಾರಗಳಲ್ಲಿ ಹಿತಾಸಕ್ತಿ ಸಂಘರ್ಷ ಇದೆ ಎಂದು ಯಾರಿಗೂ ಅನಿಸಿದ್ದೇ ಇಲ್ಲ. ಇದನ್ನೆಲ್ಲ ನಿಯಂತ್ರಿಸಲು ಅಲ್ಲಿ ಯಾವುದೇ ಕಾನೂನು ಇಲ್ಲ. ರಾಜ ನೀಡುವ ಆದೇಶಗಳು, ಇಸ್ಲಾಂ ಕಾನೂನಿನಿಂದ ಪಡೆದುಕೊಂಡ ಅಂಶಗಳೇ ಇಲ್ಲಿನ ನಿಯಮಗಳು. ಯಾವುದು ಭ್ರಷ್ಟಾಚಾರ ಎಂಬ ವ್ಯಾಖ್ಯೆಯೂ ಇಲ್ಲ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯೂ ಇಲ್ಲ. ಹಾಗಾಗಿ ‘ಭ್ರಷ್ಟಾಚಾರ’ ಆರೋಪದಲ್ಲಿ ಬಂಧನಕ್ಕೆ ಒಳಗಾದವರ ವಿಚಾರಣೆ ರಾಜನ (ಅಥವಾ ಯುವರಾಜನ) ಮರ್ಜಿಗೆ ಅನುಗುಣವಾಗಿಯೇ ನಡೆಯಬಹುದು.

ಭ್ರಷ್ಟಾಚಾರ ನಿಗ್ರಹದ ಉದ್ದೇಶದಿಂದ ಮಾತ್ರ ಬಂಧನ ನಡೆದಿದೆಯೇ?

2015ರಲ್ಲಿ ಅಧಿಕಾರಕ್ಕೆ ಬಂದ ದೊರೆ ಸಲ್ಮಾನ್‌ಗೆ ಈಗ 81 ವರ್ಷ ವಯಸ್ಸು. 32ರ ಯುವಕ ಮೊಹಮ್ಮದ್‌ ಬಿನ್‌ ಸಲ್ಮಾನ್‌ ದೊರೆಯ ಅಚ್ಚುಮೆಚ್ಚಿನ ಮಗ. ಅಧಿಕಾರದ ಸಂಪೂರ್ಣ ನಿಯಂತ್ರಣ ಮೊಹಮ್ಮದ್‌ ಕೈಯಲ್ಲಿಯೇ ಇದೆ. ಆದರೆ ಸೌದಿಯಲ್ಲಿ ರಾಜ ವಂಶಕ್ಕೆ ಸೇರಿದ ಸಾವಿರಾರು ಜನರಿದ್ದಾರೆ. ನಾಲ್ಕು ಪ್ರಾಂತ್ಯಗಳನ್ನು ಒಗ್ಗೂಡಿಸಿ 1932ರಲ್ಲಿ ಸೌದಿ ಅರೇಬಿಯಾ ದೇಶ ಸ್ಥಾಪನೆಯಾಯಿತು. ಅಂದಿನಿಂದ ಇತ್ತೀಚಿನವರೆಗೆ ಅಲ್ಲಿ ಅಧಿಕಾರಕ್ಕಾಗಿ ಯಾವುದೇ ಕ್ರಾಂತಿ ನಡೆದಿಲ್ಲ. ರಾಜಕುಟುಂಬದ ಸಾವಿರಾರು ಜನರ ನಡುವೆ ಅಧಿಕಾರ ಹಂಚಿಕೆಯಾಗಿದೆ ಮತ್ತು ಆ ಮೂಲಕ ಸಮತೋಲನ ಸಾಧಿಸಲಾಗುತ್ತಿತ್ತು. ಸೇನೆಯಲ್ಲಿ ಮೂರು ವಿಭಾಗಗಳಿವೆ– ಸೇನೆ, ಆಂತರಿಕ ಭದ್ರತಾ ಘಟಕ ಮತ್ತು ನ್ಯಾಷನಲ್ ಗಾರ್ಡ್‌. ರಾಜ ಕುಟುಂಬ ಮತ್ತು ಪ್ರಮುಖ ಧಾರ್ಮಿಕ ಕೇಂದ್ರಗಳ ರಕ್ಷಣೆ ನ್ಯಾಷನಲ್ ಗಾರ್ಡ್‌ನ ಹೊಣೆ. ಈ ಎಲ್ಲದಕ್ಕೂ ಬೇರೆ ಬೇರೆ ಮುಖ್ಯಸ್ಥರಿದ್ದರು. ಆದರೆ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗೆ ಮೊದಲು ನ್ಯಾಷನಲ್‌ ಗಾರ್ಡ್‌ ಮುಖ್ಯಸ್ಥ ಹುದ್ದೆಯಿಂದ ರಾಜಕುಮಾರ ಮುತೈಬ್‌ ಅವರನ್ನು ವಜಾ ಮಾಡಲಾಗಿತ್ತು. ಈಗ ಸೇನೆಯ ಎಲ್ಲ ಮೂರು ವಿಭಾಗಗಳ ನಿಯಂತ್ರಣ ಮೊಹಮ್ಮದ್‌  ಕೈಯಲ್ಲಿದೆ.

ಹಿಂದಿನ ರಾಜ ಅಬ್ದುಲ್ಲಾ ಅವರ ಮಗ ಮುತೈಬ್‌, ಸೌದಿ ರಾಜನ ಸ್ಥಾನದ ಮೇಲೆ ಕಣ್ಣಿಟ್ಟಿರುವ ವ್ಯಕ್ತಿ. ಅಲಾವಲೀದ್‌ ತಲಾಲ್‌ ಜಾಗತಿಕ ಮಟ್ಟದಲ್ಲಿ ಪ್ರಭಾವಿ. ಬಂಧನಕ್ಕೆ ಒಳಗಾಗಿರುವ ಇತರ ರಾಜಕುಮಾರರೂ ಸಾಕಷ್ಟು ಪ್ರಭಾವಿಗಳೇ. ಹಾಗಾಗಿ ಸೌದಿಯ ಮುಂದಿನ ದೊರೆ ಆಗುವುದಕ್ಕೆ ಇರುವ ಅಡ್ಡಿಗಳನ್ನೆಲ್ಲ ನಿವಾರಿಸುವುದೇ ಮೊಹಮ್ಮದ್‌ನ ಮುಖ್ಯ ಉದ್ದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇತರ ಸುಧಾರಣಾ ಕ್ರಮಗಳ ಹಿಂದಿನ ಉದ್ದೇಶ?

ಸಲ್ಮಾನ್‌ ದೊರೆಯಾದ ಮೇಲೆ ಯುವರಾಜ ಮೊಹಮ್ಮದ್‌ ಸಲಹೆಯಂತೆ ಹಲವು ಸುಧಾರಣಾ ಕ್ರಮಗಳು ಜಾರಿಯಾಗಿವೆ. ‘ವಿಷನ್‌ 2030’ ಎಂಬ ಮುನ್ನೋಟವನ್ನು ಬಹಿರಂಗಪಡಿಸಿರುವ ಮೊಹಮ್ಮದ್‌, ತಮ್ಮ ದೇಶವನ್ನು ತೈಲ ಮಾರಾಟದ ಮೇಲಿನ ಅವಲಂಬನೆಯಿಂದ ತಪ್ಪಿಸುವ ಯೋಜನೆ ಪ್ರಕಟಿಸಿದ್ದಾರೆ. ಸೌದಿ ಅರೇಬಿಯಾ ಹೂಡಿಕೆಯ ದೊಡ್ಡತಾಣ ಆಗಬೇಕು ಎಂಬ ಕನಸನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ವಾಹನ ಚಾಲನೆ ಮಾಡುವುದಕ್ಕೆ ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ, ಧಾರ್ಮಿಕ ಸುಧಾರಣೆಗಳು ನಡೆದಿವೆ. ಪ್ರಭಾವಿಗಳಾಗಿದ್ದ ಮೌಲ್ವಿಗಳ ಕೈಯಿಂದ ಹಲವು ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ.

ಜನರು ನಿಯಮ ಪಾಲಿಸುವಂತೆ ನೋಡಿಕೊಳ್ಳುವ ಅಧಿಕಾರ ಮೌಲ್ವಿಗಳಿಗೆ ಇತ್ತು. ಆದರೆ ಇನ್ನು ಮುಂದೆ ಅವರು ಯಾರನ್ನೂ ಬಂಧಿಸುವಂತಿಲ್ಲ ಎಂದು ಆದೇಶಿಸಲಾಗಿದೆ. ಮೂಲಭೂತವಾದಿ ಚಿಂತನೆಯ ಹಲವು ಮೌಲ್ವಿಗಳನ್ನು ಬಂಧಿಸಲಾಗಿದೆ. ‘ಇಸ್ಲಾಂ ಮಾತ್ರವೇ ಶ್ರೇಷ್ಠ’ ಎಂದು ಹೇಳಿಕೊಂಡು ತಿರುಗದಂತೆ ಮೌಲ್ವಿಗಳಿಗೆ ತಾಕೀತು ಮಾಡಲಾಗಿದೆ. ಉಳಿದ ಧರ್ಮಗಳನ್ನು ಗೌರವದಿಂದ ಕಾಣುವಂತೆ ಬೋಧಿಸಲು ತಿಳಿಸಲಾಗಿದೆ.

ಈ ಸುಧಾರಣಾ ಕ್ರಮಗಳ ಉದ್ದೇಶವೂ ಅಧಿಕಾರ ಕೇಂದ್ರೀಕರಣವೇ ಆಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಧಿಕಾರ ಕೇಂದ್ರಗಳಾಗಿದ್ದ ಧಾರ್ಮಿಕ ಮುಖಂಡರು ಮೂಲೆಗುಂಪಾಗಿದ್ದಾರೆ. ಪ್ರತಿಸ್ಪರ್ಧಿಗಳಾಗಿದ್ದ ರಾಜಕುಮಾರರು ಸೆರೆಮನೆ ಸೇರಿದ್ದಾರೆ. ‘ಭ್ರಷ್ಟಾಚಾರ’ದ ವಿರುದ್ಧ ಸಾರಿರುವ ಸಮರಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ. ಸೌದಿಯ ಪ್ರಜೆಗಳಲ್ಲಿ ಶೇ 60ರಷ್ಟು 30ರೊಳಗಿನ ವಯಸ್ಸಿನವರು. ಆಧುನಿಕಗೊಳ್ಳುವ ಯೋಚನೆ ಯುವಜನರಿಗೆ ಇಷ್ಟವಾಗಿದೆ. ಅಧಿಕಾರವನ್ನು ತನ್ನ ಮುಷ್ಟಿಯಲ್ಲಿ ಇರಿಸಿಕೊಳ್ಳಲು ಮೊಹಮ್ಮದ್‌ಗೆ ಇದು ಇನ್ನಷ್ಟು ನೆರವಾಗಬಹುದು.

* * *

ಮುಂದೇನಾಗಬಹುದು?

ದಶಕಗಳ ಕಾಲ ಪ್ರಶಾಂತವಾಗಿದ್ದ ಸೌದಿಯಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ರಾಜಕುಮಾರರನ್ನು ಸೆರೆಯಲ್ಲಿಟ್ಟಿರುವುದು ಅಲ್ಲಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2015ರಲ್ಲಿ ರಜೆ ಕಳೆಯಲು ರಿವೇರಾಕ್ಕೆ ಹೋಗಿದ್ದ ಮೊಹಮ್ಮದ್‌ ಅಲ್ಲಿ ಕಣ್ಣಿಗೆ ಬಿದ್ದ ಐಷಾರಾಮಿ ವಿಹಾರ ಹಡಗನ್ನು ಸುಮಾರು ₹3,500 ಕೋಟಿ ಕೊಟ್ಟು ಖರೀದಿ ಮಾಡಿದ್ದರು. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲಿ ಅದುಬಿಸಿ ಕೇಳಿದ್ದಾರೆ. ಮೊಹಮ್ಮದ್ ನಡೆಸಿರುವುದು ‘ಕರಾಳ ಪ್ರಹಸನ’ ಎಂದು ಅವರು ಹೇಳಿದ್ದಾರೆ.

ಮೊಹಮ್ಮದ್‌ ವಿರುದ್ಧ ಬಂಡಾಯ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ. ಸುತ್ತಲಿನ ದೇಶಗಳ ಜತೆಗೂ ಸಂಘರ್ಷಕ್ಕೆ ಇಳಿದಿರುವ ಮೊಹಮ್ಮದ್‌ ವಿರುದ್ಧ ಆ ದೇಶಗಳ ಬೆಂಬಲವೂ ಬಂಡಾಯಕ್ಕೆ ದೊರೆಯಬಹುದು. ಸೌದಿ ಅರೇಬಿಯಾವನ್ನು ಬಹುದೊಡ್ಡ ಹೂಡಿಕೆ ತಾಣವಾಗಿಸುವ ಯೋಜನೆಗೆ ಈಗಿನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ದೊಡ್ಡ ಪೆಟ್ಟು ನೀಡುತ್ತದೆ. ಜಗತ್ತಿನ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿರುವ ತಲಾಲ್‌ ಅವರನ್ನು ಬಂಧಿಸಿರುವುದು ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸಬಹುದು. ಅಸ್ಥಿರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂದೇಟು ಹಾಕಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry