ಮಂಗಳವಾರ, ಮಾರ್ಚ್ 2, 2021
26 °C

ದೇಶದ ಪರಿವರ್ತನೆಗೆ ಸತತ ಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಪರಿವರ್ತನೆಗೆ ಸತತ ಶ್ರಮ

ಮನಿಲಾ: 21ನೇ ಶತಮಾನ ಭಾರತದ್ದಾಗಲು ಕಷ್ಟ ಪಟ್ಟು ದುಡಿಯುವಂತೆ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ದೇಶವನ್ನು ಸಂಪೂರ್ಣವಾಗಿ ಬದಲಾಯಿಸಿ, ಹೊಸ ಎತ್ತರಕ್ಕೆ ಕೊಂಡೊಯ್ಯಲು ಬೇಕಾದ ಎಲ್ಲ ಶ್ರಮವನ್ನು ತಮ್ಮ ಸರ್ಕಾರ ಹಾಕುತ್ತಿದೆ ಎಂದೂ ಹೇಳಿದರು.

ಆಸಿಯಾನ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮನಿಲಾಕ್ಕೆ ಭೇಟಿ ನೀಡಿರುವ ಮೋದಿ ಸೋಮವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

‘ಕಷ್ಟಗಳು ಇರಬಹುದು. ಆದರೆ, ಒಮ್ಮೆ ಅವುಗಳನ್ನು ದಾಟಿದರೆ ಭಾರತ ಹೊಸ ಎತ್ತರಕ್ಕೆ ಏರುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಭಾರತವು ಎಲ್ಲದರಲ್ಲೂ ಅಂತರರಾಷ್ಟ್ರೀಯ ಮಾನದಂಡಕ್ಕೆ ಸರಿಸಮನಾಗಿರಬೇಕು ಎಂಬುದನ್ನು ಖಾತ್ರಿಪಡಿಸಿಕೊಂಡು, ದೇಶವನ್ನು ಸಂಪೂರ್ಣವಾಗಿ ಬದಲಾಯಿಸುವ ಗುರಿಯೊಂದಿಗೆ ಶ್ರಮ ಹಾಕುತ್ತಿದ್ದೇವೆ’ ಎಂದು ಹೇಳಿದರು.

ಶಾಂತಿಗೆ ಕೊಡುಗೆ: ‘ಜಾಗತಿಕ ಶಾಂತಿಗೆ ಭಾರತ ಯಾವಾಗಲೂ ಕೊಡುಗೆ ನೀಡುತ್ತಾ ಬಂದಿದೆ. ಎರಡು ವಿಶ್ವ ಮಹಾ ಯುದ್ಧಗಳಲ್ಲಿ ಶಾಂತಿಗಾಗಿ ದೇಶದ 1.25 ಲಕ್ಷ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ನಮ್ಮ ತುಕಡಿಯೇ ಅತ್ಯಂತ ದೊಡ್ಡದು. ಭಾರತ ಮಹಾತ್ಮ ಗಾಂಧಿ ಅವರ ನೆಲ. ಶಾಂತಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ’ ಎಂದು ಬಣ್ಣಿಸಿದರು.

ಸ‌ರ್ಕಾರ ಆರಂಭಿಸಿರುವ ಸ್ವಚ್ಛ ಭಾರತ, ಜನ ಧನ ಯೋಜನೆ, ಉಜ್ವಲ ಯೋಜನೆಗಳನ್ನೂ ಅವರು ಪ್ರಸ್ತಾಪಿಸಿದರು.

‘ಯಾವ ಭಾರತೀಯನಿಗೆ ಸ್ವಚ್ಛತೆ ಬೇಡ? ಮಹಾತ್ಮ ಗಾಂಧೀಜಿ ಅವರು ಎಲ್ಲಿ ಬಿಟ್ಟುಹೋಗಿದ್ದರೋ ಅಲ್ಲಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ್ದೆವು. ಇದುವರೆಗೆ ಭಾರತದ 2.25 ಲಕ್ಷ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ’ ಎಂದು ಹೇಳಿದರು.

‘ಒಂದು ಕಾಲದಲ್ಲಿ ಅಡುಗೆ ಅನಿಲ ಸಂಪರ್ಕ ಪಡೆಯುವುದು ದೊಡ್ಡ ಸಾಧನೆಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ 3.5 ಕೋಟಿಗಿಂತಲೂ ಹೆಚ್ಚು ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ’ ಎಂದರು.

ವಿರೋಧ ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮೋದಿ, ‘ಹಗರಣಗಳಲ್ಲಿ ಎಷ್ಟು ಹಣ ಹೋಯಿತು ಎಂದು 2014ರ ಮೊದಲು ಜನರು ಕೇಳುತ್ತಿದ್ದರು. ಈಗ ಎಷ್ಟು ಹಣ ಬಂದಿದೆ ಎಂದು ಕೇಳುತ್ತಿದ್ದಾರೆ’ ಎಂದರು.

₹500 ಮತ್ತು ₹1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿರುವುದರ ಜೊತೆಗೆ ಸರ್ಕಾರ ಕೈಗೊಂಡ ಸರಣಿ ಸುಧಾರಣಾ ಕ್ರಮಗಳು ದೇಶದ ಅರ್ಥವ್ಯವಸ್ಥೆಯ ದೊಡ್ಡ ಭಾಗವನ್ನು ಕ್ರಮಬದ್ಧಗೊಳಿಸಲು ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆಸಿಯಾನ್‌ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಜಿಎಸ್‌ಟಿ ಜಾರಿ, ದಿವಾಳಿತನದ ವಿರುದ್ಧ ಕೈಗೊಂಡ ಕ್ರಮ, ಹಣಕಾಸು ವಲಯದಲ್ಲಿ ಪಾರದರ್ಶಕತೆ ಕೈಗೊಳ್ಳಲು ಹಣಕಾಸು ವಹಿವಾಟಿಗೆ ಆಧಾರ್‌ ಜೋಡಣೆ ಮಾಡುವ ನಿರ್ಧಾರ ಸೇರಿದಂತೆ ಸರ್ಕಾರ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳನ್ನು ಉಲ್ಲೇಖಿಸಿದರು.

ನೋಟು ರದ್ದತಿ ನಿರ್ಧಾರವು ಭಾರತದ ಅರ್ಥವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿರುವಾಗಲೇ ಮೋದಿ ಅವರು ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.