ಗುರುವಾರ , ಮಾರ್ಚ್ 4, 2021
29 °C

ಇದು ಹಾರರ್‌ ಸಿನಿಮಾ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಹಾರರ್‌ ಸಿನಿಮಾ ಅಲ್ಲ

ಈ ಸಿನಿಮಾದ ಹೆಸರು ‘ಮಂತ್ರಂ’. ಇದರ ಪೋಸ್ಟರ್‌ ಹಾಗೂ ಟ್ರೇಲರ್‌ ಗಮನಿಸಿದರೆ, ಇದೊಂದು ಹಾರರ್ ಸಿನಿಮಾ ಅನಿಸುತ್ತದೆ. ಆದರೆ ’ಅಷ್ಟು ಮಾತ್ರವೇ ಅಲ್ಲ, ಅದಕ್ಕೂ ಮಿಗಿಲಾಗಿದ್ದು ಈ ಸಿನಿಮಾದಲ್ಲಿ ಇದೆ’ ಎಂದು ಹೇಳಿಕೊಂಡಿದೆ ಸಿನಿಮಾ ತಂಡ.

ಸಿನಿಮಾ ಬಗ್ಗೆ ಪತ್ರಕರ್ತರ ಜೊತೆ ಮಾತನಾಡಲು ನಿರ್ದೇಶಕ ಎಸ್.ಎಸ್. ಸಜ್ಜನ್ ಹಾಗೂ ನಿರ್ಮಾಪಕ ಅಮರ್ ಚೌಧರಿ ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ನಾಯಕ ಶಮಂತ್ ಶೆಟ್ಟಿ ಹಾಗೂ ನಾಯಕಿ ಪಲ್ಲವಿ ರಾಜು ಕೂಡ ಇದ್ದರು. ಟ್ರೇಲರ್‌ ತೋರಿಸಿದ ನಂತರ ಮಾತು ಆರಂಭಿಸಿದರು ಸಜ್ಜನ್ ಅವರು.

‘ಟ್ರೇಲರ್‌ ವೀಕ್ಷಿಸಿದ ನಿಮಗೆ ಇದೊಂದು ಮಾಮೂಲಿ ಭೂತದ ಕಥೆ ಎಂದು ಅನಿಸಿರಬಹುದು. ಆದರೆ ಇದರಲ್ಲಿ ವಿಶೇಷವೊಂದಿದೆ. ಈ ಸಿನಿಮಾದ ಟ್ರೇಲರ್‌ನಲ್ಲಿ ತೋರಿಸಿದ್ದಕ್ಕಿಂತಲೂ ಹೆಚ್ಚಿನದು ಸಿನಿಮಾದಲ್ಲಿ ಇದೆ’ ಎಂದರು ಸಜ್ಜನ್.

‘ಏನಿದೆ ಅಂಥದ್ದು’ ಎಂದು ಪ್ರಶ್ನಿಸಿದಾಗ, ‘ನಾವು ನಮ್ಮೆದುರಿನ ಸಮಸ್ಯೆಗಳನ್ನು ಪರಿಹರಿಸುವತ್ತ ಆಲೋಚನೆ ನಡೆಸುತ್ತಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ನಮಗೊಂದು ಮಂತ್ರ ಬೇಕು. ಇಂಥದ್ದೊಂದು ಸಂದೇಶವನ್ನು ಈ ಸಿನಿಮಾ ನೀಡುತ್ತದೆ’ ಎಂದರು. ಆದರೆ ತಮ್ಮ ಸಿನಿಮಾ ಹೇಳುವುದು ಏನನ್ನು ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಅಂದಹಾಗೆ, ಈ ಸಿನಿಮಾ ಚಿತ್ರೀಕರಣದ ವೇಳೆ ಒಟ್ಟು ಒಂಬತ್ತು ಜನರಿಗೆ ಗಾಯಗಳಾಗಿವೆಯಂತೆ. ಅಷ್ಟೂ ಜನರಿಗೆ ಗಾಯ ಆಗಿರುವುದು ಬಲಗಾಲಿಗೆ ಎಂದರು ಸಜ್ಜನ್.

ಈ ಸಿನಿಮಾದ ಚಿತ್ರೀಕರಣ ರಾಯಚೂರು ಹಾಗೂ ಬೆಂಗಳೂರಿನಲ್ಲಿ ಒಟ್ಟು 45 ದಿನಗಳಲ್ಲಿ ನಡೆದಿದೆ ಎಂದು ತಂಡ ಹೇಳಿದೆ. ಶಮಂತ್ ಶೆಟ್ಟಿ ಅವರಿಗೆ ಇದು ನಾಯಕ ನಟನಾಗಿ ಮೊದಲ ಸಿನಿಮಾ. ನಾಯಕಿ ಪಲ್ಲವಿಗೆ ಇದು ಎರಡನೇ ಅವಕಾಶ.

ಟ್ರೇಲರ್‌ ಬಿಡುಗಡೆಗೆ ಬಂದಿದ್ದ ನಟ ವಿಜಯ ರಾಘವೇಂದ್ರ ಅವರು, ಇಡೀ ತಂಡಕ್ಕೆ ಶುಭ ಕೋರಿದರು. ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ, ರಶೀದ್ ಖಾನ್ ಅವರ ಸಂಗೀತ, ರಾಜಶೇಖರ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.