ಆಯ್ಕೆ ಸಮಿತಿ ಮುಖ್ಯಸ್ಥ ರಾಜೀನಾಮೆ

ಮುಂಬೈ: ಗೋವಾದಲ್ಲಿ ನಡೆಯುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ (ಐಎಫ್‌ಎಫ್‌ಐ) ಎರಡು ಚಿತ್ರಗಳನ್ನು ಕೈಬಿಟ್ಟ ಸಂಬಂಧ ಪನೋರಮಾ ವಿಭಾಗದ ಚಿತ್ರಗಳ ಆಯ್ಕೆ ಸಮಿತಿಯ ಮುಖ್ಯಸ್ಥ, ಚಿತ್ರಕರ್ಮಿ ಸುಜಯ್ ಘೋಷ್ ರಾಜೀನಾಮೆ ನೀಡಿದ್ದಾರೆ. ಅವರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
13 ತೀರ್ಪುಗಾರರ ಸಮಿತಿ ಶಿಫಾರಸು ಮಾಡಿದ್ದ ಸಿನಿಮಾಗಳ ಪಟ್ಟಿಯಿಂದ ಮಲಯಾಳದ ‘ಎಸ್ ದುರ್ಗಾ’ ಮತ್ತು ಮರಾಠಿಯ ‘ನ್ಯೂಡ್’ ಚಿತ್ರಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಿದೆ. ಆದರೆ ಸಚಿವಾಲಯವುಈ ಸಂಬಂಧ ಯಾವುದೇ ಹೇಳಿಕೆ ನೀಡಿಲ್ಲ.
2017ನೇ ಸಾಲಿನ ರಾಟ್ಟರ್‌ಡ್ಯಾಮ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಎಸ್ ದುರ್ಗಾ’ ಚಿತ್ರವು ‘ಹಿವೋಸ್ ಟೈಗರ್’ ಪ್ರಶಸ್ತಿಯನ್ನು ಪಡೆದಿದೆ.
ಇದೇ 20ರಿಂದ 28ರವರೆಗೆ ಚಿತ್ರೋತ್ಸವ ನಡೆಯಲಿದೆ.
ಅಸಂಬದ್ಧ ಕ್ರಮ
‘ಚಿತ್ರೋತ್ಸವದಿಂದ ಸಿನಿಮಾಗಳನ್ನು ಕೈಬಿಟ್ಟಿರುವುದು ಅಸಂಬದ್ಧ’ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ. ‘ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಆಗುತ್ತಿದೆ. ಇಂಥ ವಿವೇಚನೆ ಇಲ್ಲದ ಸೆನ್ಸಾರ್‌ಶಿಪ್ ವಿರುದ್ಧ ಸೃಜನಶೀಲ ಸಮುದಾಯವು ಸಿಡಿದೇಳಲು ಇದು ಸೂಕ್ತ ಸಮಯ’ ಎಂದು ಅವರು ಕರೆ ನೀಡಿದ್ದಾರೆ.
ದೂರು ದಾಖಲು
ಗೋವಾ ಚಿತ್ರೋತ್ಸವದಿಂದ ಮಲಯಾಳದ ‘ಎಸ್ ದುರ್ಗಾ’ ಚಿತ್ರವನ್ನು ಹೊರಗಿಟ್ಟಿರುವುದಕ್ಕೆ, ನಿರ್ದೇಶಕ ಸನಲ್ ಕುಮಾರ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಐಎಫ್‌ಎಫ್‌ಐ ಅಧಿಕಾರಿಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.