ಗುರುವಾರ , ಫೆಬ್ರವರಿ 25, 2021
30 °C

ಸಹಕಾರಿ ಕ್ಷೇತ್ರದಿಂದ ರೈತರ ಬದುಕು ಹಸನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಕಾರಿ ಕ್ಷೇತ್ರದಿಂದ ರೈತರ ಬದುಕು ಹಸನು

ಕೋಲಾರ: ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಮಹಿಳೆಯರು ಮತ್ತು ರೈತರ ಬದುಕು ಹಸನಾಗುತ್ತಿದೆ. ಈ ಸತ್ಯ ಅರಿತು ಸೊಸೈಟಿ ಆಡಳಿತ ಮಂಡಳಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸಲಹೆ ನೀಡಿದರು.

ಜಿಲ್ಲಾ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಸಹಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿರುವ ಸಹಕಾರಿ ಸಪ್ತಾಹಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಸೊಸೈಟಿಗಳ ಆಡಳಿತ ಮಂಡಳಿ ಸದಸ್ಯರು ಸಾಲಕ್ಕಾಗಿ ಬರುತ್ತೀರಿ. ಆದರೆ, ಸಹಕಾರಿ ರಂಗದ ಅಭಿವೃದ್ಧಿಗೆ ಸಾಕಾರವಾಗುವ ಇಂತಹ ಕಾರ್ಯಕ್ರಮಗಳಿಗೆ ಗೈರಾಗುತ್ತೀರಿ ಎಂದು ವಿಷಾದಿಸಿದರು.

ಜಿಲ್ಲೆಯ ಸಹಕಾರಿ ರಂಗದಲ್ಲಿ ಈ ಹಿಂದೆ ನಡೆದಿರುವ ತಪ್ಪು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇವೆ. ಸಹಕಾರಿ ರಂಗದ ಗತ ವೈಭವದ ಮರುಸ್ಥಾಪನೆಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ನ.16ರಂದು ಸಹಕಾರಿ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮ ಕೋಲಾರದಲ್ಲಿ ನಡೆಯಲಿದ್ದು, 10 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಗೌರವ ಸಿಗುತ್ತಿದೆ: ಸಹಕಾರಿ ಸಂಸ್ಥೆಗಳಲ್ಲಿ ಉತ್ತಮ ಆಡಳಿತ ನಡೆಯುತ್ತಿರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿದೆ. ಬೇರೆ ಯಾವುದೇ ಕ್ಷೇತ್ರದ ಮೂಲಕ ಜನರಿಗೆ ಸೌಕರ್ಯ ಕಲ್ಪಿಸಲು ಸಾಧ್ಯವಿಲ್ಲ, ಆ ಕಾರ್ಯ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು. ರೈತರಿಗೆ ಕೃಷಿ, ತೋಟಗಾರಿಕೆ ಮತ್ತು ಹೈನೋದ್ಯಮದ ಬಗ್ಗೆ ತರಬೇತಿ ನೀಡಲಾಗುವುದು. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಮಾತೃ ಸಂಸ್ಥೆ: ಸಹಕಾರಿ ಸಂಘಗಳು ರೈತರ ಪಾಲಿಗೆ ಮಾತೃ ಸಂಸ್ಥೆ ಇದ್ದಂತೆ. ಅಧಿಕಾರಕ್ಕಾಗಿ ಪೈಪೋಟಿ ಮಾಡುವುದನ್ನು ಬಿಟ್ಟು ಆರೋಗ್ಯಕರ ಸಂಘ ಅಭಿವೃದ್ಧಿಗೆ ಸ್ಪರ್ಧೆ ಮಾಡೋಣ. ಇದರಿಂದ ರೈತ ಹಿತ ಕಾಪಾಡಲು ಸಹಾಯವಾಗುತ್ತದೆ ಎಂದು ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.ನಾಗರಾಜ್ ಸಲಹೆ ನೀಡಿದರು.

ಜಿಲ್ಲಾ ಸಹಕಾರಿ ಯೂನಿಯನ್‌ ಉಪಾಧ್ಯಕ್ಷ ಎನ್.ಕೃಷ್ಣೇಗೌಡ, ನಿರ್ದೇಶಕರಾದ ಆರ್.ನಾರಾಯಣಗೌಡ, ಕೆ.ಎಂ.ನಾಗರಾಜ್, ಡಿ.ಆರ್.ರಾಮಚಂದ್ರೇಗೌಡ, ರುದ್ರಸ್ವಾಮಿ, ಎಚ್.ಕೃಷ್ಣಪ್ಪ, ಕೆ.ಎಂ.ವೆಂಕಟಸ್ವಾಮಿ, ಸುರೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ, ಪ್ರಕಾಶ್, ಕೋಚಿಮುಲ್ ಉಪ ವ್ಯವಸ್ಥಾಪಕ ಎ.ಸಿ.ಶ್ರೀನಿವಾಸಗೌಡ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.