ಭಾನುವಾರ, ಜೂಲೈ 12, 2020
22 °C

ವಿಜ್ಞಾನವನ್ನು ಕುತೂಹಲಕರವಾಗಿ ಬೋಧಿಸಿ: ನಾರಾಯಣಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜ್ಞಾನವನ್ನು ಕುತೂಹಲಕರವಾಗಿ ಬೋಧಿಸಿ: ನಾರಾಯಣಮೂರ್ತಿ

ಬೆಂಗಳೂರು: ‘ವಿಜ್ಞಾನದ ಪರಿಕಲ್ಪನೆಗಳನ್ನು ಆಸಕ್ತಿಯಿಂದ ಪಾಠ ಹೇಳಿದರೆ ವಿದ್ಯಾರ್ಥಿಗಳು ವಿಜ್ಞಾನದತ್ತ  ಆಕರ್ಷಿತರಾಗುತ್ತಾರೆ’ ಎಂದು ಇನ್ಫೋಸಿಸ್‌ ಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದರು.

ವಿಜ್ಞಾನ ಪರಿಭಾಷೆ ಮತ್ತು ಸಮಾಜ ವಿಷಯದ ಕುರಿತು ಬುಧವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಆಕರ್ಷಕವಾಗಿ ಹೇಳಬೇಕು. ಇದರಿಂದ ಯುವ ಮನಸ್ಸುಗಳ ಮೇಲೆ ಪ್ರಭಾವ ಉಂಟಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೋಚಕ ಸಂಗತಿಗಳು ನಿತ್ಯವೂ ನಡೆಯುತ್ತಿರುತ್ತದೆ. ಅವುಗಳ ಬಗ್ಗೆ ಮಾಧ್ಯಮಗಳೂ ಜನರಿಗೆ ಮಾಹಿತಿ ನೀಡಬೇಕು ಎಂದರು.

‘ವಿದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲಿ ಪತ್ರಿಕೆಗಳಲ್ಲಿ ವಿಜ್ಞಾನದ ವರದಿಗಾರಿಕೆಯ ಪ್ರತ್ಯೇಕ ವಿಭಾಗ ಇಲ್ಲ. ವಿಜ್ಞಾನದ ಬರವಣಿಗೆ ಕೌಶಲ ಕಲಿಸುವ ಪ್ರತ್ಯೇಕ ಕೋರ್ಸ್‌ ಕೂಡ ಇಲ್ಲ. ಇದರಿಂದ ವಿಜ್ಞಾನದ ಮಹತ್ವದ ಸಂಗತಿಗಳು ಜನರಿಗೆ ತಲುಪುತ್ತಿಲ್ಲ. ಮಾಧ್ಯಮಗಳ ಪ್ರಮುಖರಿಗೆ ಈ ಬಗ್ಗೆ ಆಸಕ್ತಿ ಇಲ್ಲ’ ಎಂದು ಅವರು ವಿಷಾದಿಸಿದರು.

ಮಾಧ್ಯಮಗಳಲ್ಲಿ ರಾಜಕೀಯ ಮತ್ತಿತರ ರೋಚಕ ವಿಷಯಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಜನರನ್ನು ದಾರಿ ತಪ್ಪಿಸುವ ವಿಜ್ಞಾನದ ವಿಷಯಗಳನ್ನು ಬಳಸಿಕೊಳ್ಳಲಾಗುತ್ತದೆ. ಜನರಿಗೆ ತಿಳಿವಳಿಕೆ ನೀಡಬೇಕಾದ ಮಹತ್ವದ ವಿಜ್ಞಾನದ ವಿಷಯಗಳಿಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ  ಪಿ.ಬಲರಾಂ ಮಾತನಾಡಿ, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ, ಕುಲಾಂತರಿ ತಳಿ ತಂತ್ರಜ್ಞಾನ, ಕಾಂಡಕೋಶ ತಂತ್ರಜ್ಞಾನ, ಕೃತಕ ಬುದ್ಧಿ ಮತ್ತೆ  ಮುಂತಾದ ವಿಷಯಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಅಲ್ಲದೆ, ಪಠ್ಯದಲ್ಲಿ ಇಲ್ಲದ ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.