ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ವಚ್ಛತೆಯ ತಾಣವಾದ ಸರ್ಕಾರಿ ಆಸ್ಪತ್ರೆ

ಕುಷ್ಟಗಿ ಸುತ್ತಲಿನ ಬಯಲೇ ಬಹಿರ್ದೆಸೆಯ ತಾಣ, ಪುರಸಭೆ ನಿರ್ಲಕ್ಷ್ಯ
Last Updated 16 ನವೆಂಬರ್ 2017, 11:10 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕು ಕೇಂದ್ರದಲ್ಲಿರುವ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಆವರಣ ಮತ್ತು ಸುತ್ತಲಿನ ವಾತಾವರಣ ಅಸ್ವಚ್ಛತೆ ತಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಆಸ್ಪತ್ರೆಗೆ ಹೊಂದಿಕೊಂಡಿರುವ ಬಲ ಭಾಗದಲ್ಲಿ ಪುರಸಭೆಗೆ ಸೇರಿದ ರಸ್ತೆ ಸಾರ್ವಜನಿಕರ ಬಯಲು ಬಹಿರ್ದೆಸೆ ತಾಣವಾಗಿದ್ದು, ರಾತ್ರಿ ಮತ್ತು ಬೆಳಗಿನ ಜಾವ ರಸ್ತೆಯಲ್ಲಿಯೇ ಮಲವಿಸರ್ಜನೆ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಕಾಲಿಡುವುದಕ್ಕೂ ಜಾಗ ಇಲ್ಲದಂತಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ, ವೈದ್ಯರು ನಾಗರಿಕರು ಹೇಳಿದರು.

ವೈದ್ಯಾಧಿಕಾರಿ ಹೇಳಿಕೆ: ಆಸ್ಪತ್ರೆ ಸುತ್ತಲಿನ ಪರಿಸರ ಮಾಲಿನ್ಯ ಕುರಿತು ಪುರಸಭೆ ಅಧ್ಯಕ್ಷ, ಮುಖ್ಯಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ ತಿಳಿಸಿದ್ದಾರೆ.

ವೈದ್ಯಕೀಯ ತ್ಯಾಜ್ಯ: ಸರ್ಕಾರಿ ಆಸ್ಪತ್ರೆ ಸುತ್ತಲಿನ ಸ್ಥಿತಿ ಒಂದು ರೀತಿಯದಾದರೆ ಆವರಣದೊಳಗೆ ಜೈವಿಕ ತ್ಯಾಜ್ಯವನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಅತ್ಯಂತ ಅಪಾಕಾರಿ ಎಂದು ಹೇಳಲಾಗುವ ಸೋಂಕು ಸಹಿತ ಚುಚ್ಚುಮದ್ದಿನ ಸೂಜಿ, ಸಿರಿಂಜ್‌, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸಂಗ್ರಹವಾಗುವ ರಕ್ತಸಿಕ್ತ ತ್ಯಾಜ್ಯ, ಬಟ್ಟೆ, ಅರಳೆ ರಾಶಿಯಾಗಿ ಬಿದ್ದಿದೆ ಎಂದು ಸುತ್ತಲಿನ ಜನರು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರಿಗಳು ಹೇಳಿದ್ದು: ಆಸ್ಪತ್ರೆಯ ಪ್ರತ್ಯೇಕ ಮತ್ತು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಿ ಇಡಲಾಗುತ್ತಿರುವ ವೈದ್ಯಕೀಯ ತ್ಯಾಜ್ಯ (ಮೆಡಿಕಲ್‌ ವೇಸ್ಟ್‌)ವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಹೊಣೆಯನ್ನು ದಾವಣಗೆರೆ ಮೂಲದ ಸೂರ್ಯಕಾಂತ ಬಯೋ ಮೆಡಿಕಲ್‌ ಸಂಸ್ಥೆಗೆ ವಹಿಸಲಾಗಿದ್ದು ಬಯಲಲ್ಲಿ ಬಿಸಾಡುವುದಿಲ್ಲ, ಚಿಂದಿ ಆರಿಸುವ ಮಕ್ಕಳು ಒಳಗೆ ಬರುವುದಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು ಮತ್ತು ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಸೈಯದ್‌ ರಹೀಮ್‌ ಸ್ಪಷ್ಟಪಡಿಸಿದರು.

ಸೋಂಕು ಸಹಿತ ತ್ಯಾಜ್ಯ, ಸಿರಂಜ್‌ಗಳನ್ನು ಬಿಸಾಡಿದರೆ ವಾತಾವರಣ ಕಲುಷಿತಗೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ವಿಷಯದಲ್ಲಿ ಕೆಲಸಗಾರರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಆದರೂ ಸ್ಥಳ ಪರಿಶೀಲನೆ ನಡೆಸುವುದಾಗಿ ಡಾ.ಆನಂದ ಗೋಟೂರು ಹೇಳಿದರು.

***

ಆಸ್ಪತ್ರೆ ಒಳ ಹೊರಗಿನ ಅವ್ಯವಸ್ಥೆಯನ್ನು ಅನೇಕ ಬಾರಿ ಶಾಸಕರ ಗಮನಕ್ಕೆ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ.
–ರವೀಂದ್ರ ಬಾಕಳೆ, ಕಸಾಪ ಜಿಲ್ಲಾ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT