3

ಬಗೆಬಗೆ ರುಚಿಕರ ಇಡ್ಲಿಗಳು

Published:
Updated:
ಬಗೆಬಗೆ ರುಚಿಕರ ಇಡ್ಲಿಗಳು

ಸಬ್ಬಕ್ಕಿ ಇಡ್ಲಿ

ಬೇಕಾಗುವ ವಸ್ತುಗಳು: ಒಂದು ಕಪ್ ಸಬ್ಬಕ್ಕಿ, ಒಂದು ಕಪ್ ಇಡ್ಲಿರವೆ, ಎರಡೂವರೆ ಕಪ್ ಮೊಸರು, ಒಂದು ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕಿ ಸೋಡ (ಬೇಕಿದ್ದರೆ ಮಾತ್ರ).

ಮಾಡುವ ವಿಧಾನ: ಒಲೆಯ ಮೇಲೆ ಬಾಣಲೆ ಇಟ್ಟು ತುಪ್ಪ ಹಾಕಿ. ಬಿಸಿಯಾದಾಗ ಸಬ್ಬಕ್ಕಿ ಹಾಕಿ. ಮೂರು ನಿಮಿಷ ಹುರಿದು ಕೆಳಗಿಳಿಸಿ. ನಂತರ ಇಡ್ಲಿ ರವೆ, ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಇಡೀ ರಾತ್ರಿ ನೆನೆಸಿ. ಬೆಳಿಗ್ಗೆ ನೀರು ಬೇಕ್ಕಿದ್ದ ಬೆರೆಸಿ ಹದ ಮಾಡಿಕೊಳ್ಳಿ. ಉಪ್ಪು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಇಡ್ಲಿ ತಟ್ಟೆಗೆ ಎಣ್ಣೆ ಪಸೆ ಮಾಡಿ ಹಿಟ್ಟು ಹಾಕಿ 15-20 ನಿಮಿಷ ಬೇಯಿಸಿ. ಚಟ್ನಿಯೊಂದಿಗೆ ಸವಿಯಿರಿ.

*

ಬಾಳೆಹಣ್ಣಿನ ಇಡ್ಲಿ

ಬೇಕಾಗುವ ವಸ್ತುಗಳು:
ಒಂದು ಕಪ್ ಇಡ್ಲಿ ಅಕ್ಕಿ, ಎರಡು ಕಪ್ ಸಣ್ಣಗೆ ಚೂರು ಮಾಡಿದ ಬಾಳೆ ಹಣ್ಣು, ಕಾಲು ಕಪ್ ಬೆಲ್ಲದ ಪುಡಿ, ಕಾಲು ಕಪ್ ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಇಡ್ಲಿ ಅಕ್ಕಿಯನ್ನು ನಾಲ್ಕು ಗಂಟೆ ನೀರಿನಲ್ಲಿ ನೆನೆಸಿ. ನಂತರ ತೊಳೆದು, ಬೆಲ್ಲ ಸೇರಿಸಿ ತರಿ ತರಿಯಾಗಿ ರುಬ್ಬಿ. ಬಾಳೆ ಹಣ್ಣು ಸಣ್ಣಗೆ ಹೆಚ್ಚಿ ಹಿಟ್ಟಿನೊಂದಿಗೆ ಬೆರೆಸಿ. ನಂತರ ತೆಂಗಿನ ತುರಿ, ಉಪ್ಪು ಸೇರಿಸಿ ತುಪ್ಪ ಸವರಿದ ಇಡ್ಲಿ ತಟ್ಟೆಗೆ ಹಾಕಿ 15-20 ನಿಮಿಷ ಉಗಿಯಲ್ಲಿ ಬೇಯಿಸಿ. ಜೇನುತುಪ್ಪ, ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿ.

*

ಮುಳ್ಳುಸೌತೆ ಇಡ್ಲಿ

ಬೇಕಾಗುವ ವಸ್ತುಗಳು:
ಸಿಪ್ಪೆ ಮತ್ತು ತಿರುಳು ತೆಗೆದು ತುರಿದ ಎರಡು ಕಪ್ ಮುಳ್ಳುಸೌತೆ, ಒಂದು ಕಪ್ ಇಡ್ಲಿ ರವೆ, ಒಂದು ಕಪ್ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಇಡ್ಲಿರವೆಯನ್ನು ಸ್ವಲ್ಪ ಬೆಚ್ಚಗೆ ಹುರಿದು, ತೊಳೆದು ಕಾಲು ಗಂಟೆ ನೆನೆಸಿ. ನಂತರ ತೊಳೆದು, ನೀರು ಬಸಿದು, ತೆಂಗಿನ ತುರಿ ಮುಳ್ಳುಸೌತೆ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಎಣ್ಣೆ ಪಸೆ ಮಾಡಿದ ಇಡ್ಲಿಪಾತ್ರೆಯಲ್ಲಿಟ್ಟು 15-20 ನಿಮಿಷ ಉಗಿಯಲ್ಲಿ ಬೇಯಿಸಿ. ಈಗ ರುಚಿಯಾದ ಮುಳ್ಳುಸೌತೆ ಇಡ್ಲಿ ಚಟ್ನಿ ಸಾಂಬಾರಿನೊಂದಿಗೆ ಸವಿಯಲು ಸಿದ್ಧ.

*

ಕಾರ್ನ್ ಬಟಾಣಿ ರವೆ ಇಡ್ಲಿ

ಬೇಕಾಗುವ ವಸ್ತುಗಳು:
ಎಂಟು ಚಮಚ ಎಣ್ಣೆ, ಕಾಲು ಚಮಚ ಸಾಸಿವೆ, ಎರಡು ಹಸಿಮೆಣಸು, ಕಾಲು ಕಪ್ ಹಸಿ ಬಟಾಣಿ, ಕಾಲು ಕಪ್ ಸ್ವೀಟ್ ಕಾರ್ನ್, ಒಂದು ಕಪ್ ಮೀಡಿಯಂ ರವೆ, ಕಾಲು ಕಪ್ ತುರಿದ ಕ್ಯಾರೆಟ್, ಎರಡು ಚಮಚ ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು, ಕಾಲು ಕಪ್ ಮೊಸರು, ಸ್ವಲ್ಪ ನೀರು.

ಮಾಡುವ ವಿಧಾನ: ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಹಸಿಮೆಣಸು, ಸಿಹಿ ಜೋಳ, ಬಟಾಣಿ ಹಾಕಿ ಸ್ವಲ್ಪ ಹುರಿದು, ನಂತರ ರವೆ ಹಾಕಿ ಐದು ನಿಮಿಷ ಹುರಿದು, ಕೆಳಗಿಳಿಸಿ. ತಣ್ಣಗಾದ ಮೇಲೆ ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಉಪ್ಪು, ಮೊಸರು ಸ್ವಲ್ಪ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 30 ನಿಮಿಷ ಇಡಿ. ನಂತರ ಎಣ್ಣೆ ಪಸೆ ಮಾಡಿದ ಇಡ್ಲಿ ಬಟ್ಟಲಿಗೆ ಹಿಟ್ಟು ಹಾಕಿ ಇಡ್ಲಿ ಪಾತ್ರೆಯಲ್ಲಿಟ್ಟು 15-20 ನಿಮಿಷ ಉಗಿಯಲ್ಲಿ ಬೇಯಿಸಿ. ಈಗ ರುಚಿಯಾದ ಪೌಷ್ಟಿಕ ಇಡ್ಲಿ ಕಾಯಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry