6

ಮಾತು ಧ್ಯಾನವಾದರೆ ದೃಷ್ಟಿಯೆಲ್ಲವೂ ಸೃಷ್ಟಿ

Published:
Updated:
ಮಾತು ಧ್ಯಾನವಾದರೆ ದೃಷ್ಟಿಯೆಲ್ಲವೂ ಸೃಷ್ಟಿ

ಮಾತನ್ನು ‘ಕೇಳು’ವಂತೆ ರಾವಣನನ್ನು ಹಲವರು ಪ್ರಾರ್ಥಿಸಿಕೊಳ್ಳುವ ಸಂದರ್ಭಗಳು ರಾಮಾಯಣದಲ್ಲಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದವು ಎರಡು ಸಂದರ್ಭಗಳು. ಒಂದು: ಸೀತೆಯನ್ನು ಅಪಹರಿಸಲು ರಾವಣ ಹೊಂಚುಹಾಕುವ ಸಂದರ್ಭದಲ್ಲಿ ಅವನಿಗೆ ಹಿತವಾದವನ್ನು ಹೇಳುವುದು; ಮತ್ತೊಂದು: ತನ್ನ ವಶದಲ್ಲಿರುವ ಸೀತೆಯನ್ನು ರಾಮನಿಗೆ ಒಪ್ಪಿಸಿ, ಯುದ್ಧವನ್ನು ತಪ್ಪಿಸುವಂತೆ ಅವನಿಗೆ ಬುದ್ಧಿಹೇಳುವ ಪ್ರಸಂಗ. ಮೊದಲನೆಯದರಲ್ಲಿ ರಾವಣನಿಗೆ ಬುದ್ಧಿಯ ಮಾತನ್ನು ಹೇಳುವವನು ಮಾರೀಚ; ಎರಡನೆಯ ಪ್ರಸಂಗದಲ್ಲಿ ವಿಭೀಷಣ ಅವನಿಗೆ ಬುದ್ಧಿಯ ಮಾತನ್ನು ಹೇಳುತ್ತಾನೆ. ಮಾರೀಚನ ಮಾತು ಅರಣ್ಯಕಾಂಡದಲ್ಲಿದೆ; ವಿಭೀಷಣನ ಮಾತು ಯುದ್ಧಕಾಂಡದಲ್ಲಿದೆ. ಈ ಎರಡೂ ಪ್ರಸಂಗಗಳಲ್ಲಿ ಮಾರೀಚ ಮತ್ತು ವಿಭೀಷಣ ಹೇಳುವ ಮಾತು ಒಂದೇ; ಯಥಾವತ್ತು ಆ ಮಾತುಗಳನ್ನೇ ವಾಲ್ಮೀಕಿ ತಂದಿರುವುದು ಕಾಕತಾಳೀಯವಲ್ಲ. ಇಡಿಯ ರಾಮಾಯಣವೇ ಮಾತಿನ ಏಳು–ಬೀಳುಗಳ ಕಥನ ಎನ್ನುವುದನ್ನು ಕವಿ ಧ್ವನಿಸಿದ್ದಾನೆ. ರಾಮನಿಗೆ ಒಂದು ಮಾತನ್ನು ಒಮ್ಮೆ ಹೇಳಿದರಷ್ಟೆ ಸಾಕು; ಆದರೆ ರಾವಣನಿಗೆ ಎಷ್ಟು ಸಲ ಎಂಥ ಮಾತನ್ನು ಆಡಿದರೂ, ಅವನಿಗೆ ಇಪ್ಪತ್ತು ಕಿವಿಯಿದ್ದರೂ, ಕೇಳಲಾರ. ಮಾತನ್ನು ಮೋಸಕ್ಕೆ ಮಾತ್ರವೇ ಬಳಸಿಕೊಂಡು ವ್ಯಕ್ತಿತ್ವದಲ್ಲಿ ಜಾರಿದವನು ಅವನು ಎಂಬುದನ್ನು ವಾಲ್ಮೀಕಿ ಮಾರ್ಮಿಕವಾಗಿ ಹೇಳುತ್ತಿರುವಂತಿದೆ. ರಾವಣನಿಗೆ ಮಾರೀಚ–ವಿಭೀಷಣರು ಹೇಳಿದ ಆ ಮಾತುಗಳು ಇವು:

ಸುಲಭಾಃ ಪುರುಷಾಃ ರಾಜನ್ ಸತತಂ ಪ್ರಿಯವಾದಿನಃ |

ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

(ಎಲೈ ರಾಜ! ಪ್ರಿಯವಾದ ಮಾತನ್ನು ಆಡತಕ್ಕವರು ಯಾವಾಗಲೂ ಸುಲಭವಾಗಿ ದೊರೆಯುತ್ತಾರೆ. ಆದರೆ ಅಪ್ರಿಯವಾದರೂ ಹಿತಕರವಾದ ಮಾತನ್ನು ಆಡತಕ್ಕವರು ದುರ್ಲಭ; ಆ ಮಾತನ್ನು ಕೇಳತಕ್ಕವರೂ ದುರ್ಲಭ.)

ಕಾವ್ಯಪರಂಪರೆಯನ್ನು ಸೃಷ್ಟಿಸುವಂತೆ ಮಾತು ಇತಿಹಾಸವನ್ನೂ ನಿರ್ಮಿಸಬಲ್ಲದು. ಈ ಅರಿವು ವಾಲ್ಮೀಕಿಗಷ್ಟೆ ಅಲ್ಲ, ಆ ಪರಂಪರೆಯಲ್ಲಿ ಬಂದ ಇತರ ಕವಿಗಳಿಗೂ ಇದೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಭವಭೂತಿ; ಅವನ ‘ಉತ್ತರರಾಮಚರಿತಮ್‌’ ನಾಟಕ ಆರಂಭವಾಗುವುದೇ ಮಾತಿನ ಪ್ರಶಂಸೆಯ ಮೂಲಕ.

ಇದಂ ಕವಿಭ್ಯಃ ಪೂರ್ವೇಭ್ಯೋ ನಮೋವಾಕಂ ಪ್ರಶಾಸ್ಮಹೇ |

ವಿಂದೇಮ ದೇವತಾಂ ವಾಚಮಮೃತಾಮಾತ್ಮನಃ ಕಲಾಮ್‌||

(ಹಿಂದಿನ ಕವಿಗಳಿಗೆ ಈಗ ಈ ನಮಸ್ಕಾರವಾಕ್ಯವನ್ನು ಉಚ್ಚರಿಸುತ್ತೇವೆ. ಅಮರಳೂ ಆತ್ಮನ ಕಲಾಸ್ವರೂಪಳೂ ಆದ ಭಗವತಿ ವಾಣಿಯು ನಮಗೆ ಪ್ರಾಪ್ತಳಾಗಲಿ!)

ಈ ಶ್ಲೋಕಕ್ಕೆ ಪಾಠಾಂತರವೂ ಉಂಟು.

ಮುಂದೆ ಕೂಡ ಮಾತಿನ ಗುಣ–ದೋಷಗಳ ಬಗ್ಗೆ ಮಾತುಕತೆಗಳಾಗುತ್ತವೆ. ‘ಹೆಣ್ಣಿನ ಬಗ್ಗೆಯೂ ಮಾತಿನ ಬಗ್ಗೆಯೂ ಜನರಿಗೆ ತಿರಸ್ಕಾರವೇ ಇರುತ್ತದೆ’ ಎಂಬ ಮಾತು ಕಥೆಯ ಓಟಕ್ಕೆ ಪೂರಕವಾದುದಷ್ಟೆ ಅಲ್ಲ, ಅದು ಮಾತಿಗೂ ವ್ಯಕ್ತಿತ್ವಕ್ಕೂ ಸಮಾಜಕ್ಕೂ ಇರುವ ನಂಟಿನ ಬಗ್ಗೆಯೂ ಮೀಮಾಂಸೆಯಂತಿದೆ. ರಾಮನ ಬಾಯಿಂದ ಭವಭೂತಿ ಹೇಳಿಸಿರುವ ಮಾತೊಂದು ಹೀಗಿದೆ:

ಲೌಕಿಕಾನಾಂ ಹಿ ಸಾಧೂನಾಮರ್ಥಂ ವಾಗನುವರ್ತತೇ |

ಋಷಿಣಾಂ ಪುನರಾದ್ಯಾನಾಂ ವಾಚಮರ್ಥೋsನುಧಾವತಿ||

(ಲೋಕದಲ್ಲಿ ಸತ್ಪುರುಷರು ಎನಿಸಿಕೊಂಡವರ ಮಾತುಗಳು ಸಾಮಾನ್ಯವಾಗಿ ವಸ್ತುವನ್ನು ಅನುಸರಿಸಿಯೇ ಇರುತ್ತವೆ; ಆದರೆ ಪ್ರಾಚೀನ ಮಹರ್ಷಿಗಳು ಆಡಿದ ಮಾತಿಗೆ ಅನುಸಾರವಾಗಿ ವಸ್ತುಗಳು ಓಡಿಬರುತ್ತವೆ.)

ಮಾತು ಮತ್ತು ಅರ್ಥದ ಸಂಬಂಧ ಮಾತಿನಷ್ಟೇ ಹಳೆಯದಾದುದು. ಮಾತು–ಅರ್ಥಗಳು ಲೌಕಿಕರೂಪದಲ್ಲಿ ಲೋಕವ್ಯವಹಾರಕ್ಕೂ, ದರ್ಶನವಾಗಿ ಅಲೌಕಿಕರೂಪದಲ್ಲೂ, ಲೌಕಿಕವನ್ನೂ ಅಲೌಕಿಕವನ್ನೂ ಬೆಸೆಯುವ ಕಾವ್ಯರೂಪದಲ್ಲಿಯೂ ನಮಗೆ ಒದಗುತ್ತಿರುತ್ತವೆ. ಮಾತಿನ ಶಕ್ತಿಯನ್ನೂ ಸೊಗಸನ್ನೂ ವೇದಮಂತ್ರವೊಂದು ಕಾವ್ಯದ ಮಾರ್ಗದಲ್ಲಿಯೇ ಹೀಗೆ ನಿರೂಪಿಸಿದೆ:

ಉತ ತ್ವಃ ಪಶ್ಯನ್ನ ದದರ್ಶ ವಾಚಮ್‌ ಉತ ತ್ವಃ ಶೃಣ್ವನ್ನ ಶೃಣೋತ್ಯೇನಾಂ |

ಉತೋ ತ್ವಸ್ಮೈ ತನ್ವಂ ವಿ ಸಸ್ರೇ ಜಾಯೇವ ಪತ್ಯ ಉಶತೀ ಸುವಾಸಾಃ ||

(ಒಬ್ಬನು ನೋಡುತ್ತಿದ್ದರೂ ಈ ವಾಕ್‌–ತತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲಾಗಲಿಲ್ಲ; ಇನ್ನೊ

ಬ್ಬನು ಈ ವಾಕ್‌–ತತ್ತ್ವವನ್ನು ಕೇಳುತ್ತಿದ್ದರೂ ಕೇಳಿಸಿಕೊಳ್ಳುವುದಿಲ್ಲ. ಪತಿಯ ಸಂಗವನ್ನು ಅಪೇಕ್ಷಿಸಿ, ಉತ್ತಮವಾದ ವಸ್ತ್ರಾದಿಗಳಿಂದ ಅಲಂಕೃತಳಾದ ಪತ್ನಿಯು ತನ್ನ ಪತಿಗೆ ಮಾತ್ರವೇ ಅವಳ ಸುಂದರವಾದ ಸ್ವರೂಪವನ್ನು ಪ್ರಕಟಪಡಿಸುವಂತೆ, ಇನ್ನೊಬ್ಬನಿಗೆ ತನ್ನ ಶರೀರವನ್ನು ವಾಕ್‌–ತತ್ತ್ವ ಪ್ರಕಾಶಗೊಳಿಸುತ್ತದೆ.)

ಮಾತನ್ನು ನಾವು ಕೇಳುತ್ತಿದ್ದರೂ ‘ಕೇಳುತ್ತಿರುವುದಿಲ್ಲ’; ಆದರೆ ಕವಿಯಾದವನು ಆಡುವ ಮಾತನ್ನಷ್ಟೇ ಅಲ್ಲ; ಆಡದ ಮಾತನ್ನೂ ಕೇಳಬಲ್ಲ, ಅಥವಾ ಹೀಗೆ ಕೇಳಬಲ್ಲವನೇ ಕವಿಯಾದಾನು.

ಶಬ್ದ ಮತ್ತು ಅರ್ಥ ಎಂಬ ‘ಎರಡು’ ತತ್ತ್ವಗಳನ್ನು ‘ಒಂದಾಗಿ’ ಕಾಣಿಸಿರುವ ಕಾಲಿದಾಸನ ಮಾತು ನಮಗೆ ತಿಳಿದಿದೆಯಷ್ಟೆ (ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ). ಅರ್ಥವಿರದೆ ಮಾತು ‘ಮಾತೇ’ ಆಗದು. ಪ್ರಪಂಚದ ವ್ಯವಹಾರ ನಡೆಯುತ್ತಿರುವುದೇ ಮಾತಿನ ಮೂಲಕ. ಎಂದರೆ ಪ್ರಪಂಚವನ್ನು ಅನುಸರಿಸಿ ಮಾತು ಅರ್ಥದ ಬಟ್ಟೆಯನ್ನು ಧರಿಸುತ್ತಿರುತ್ತದೆ. ಆದರೆ ಮಾತೇ ಒಂದು ಸ್ವತಂತ್ರ ಪ್ರಪಂಚವನ್ನು ಸೃಷ್ಟಿಸುವಂಥ ಮಾತನ್ನು ಉತ್ತರರಾಮಚರಿತದ ಶ್ಲೋಕವೂ ವೇದಮಂತ್ರವೂ ಹೇಳುತ್ತಿವೆ. ಭವಭೂತಿಯ ಮಾತು ನಾಟಕದ ಹೊರಗೆಯೂ ಸಲ್ಲುವಂಥದ್ದು. ಋಷಿಗಳೆಂದರೆ ಕವಿಯೂ ಹೌದು ತಾನೆ? ಕವಿಜಗತ್ತು ಸೃಷ್ಟಿಯಾಗುವ ಬಗ್ಗೆಯೂ ಭವಭೂತಿ ಇಲ್ಲಿ ಸೂಚಿಸುತ್ತಿರಬಹುದೆ? ವಿಶ್ವವನ್ನು ಸೃಷ್ಟಿಸುವವನು ಬ್ರಹ್ಮ. ಅವನಿಗೆ ಅವನೇ ಮಾದರಿ; ಇನ್ನೊಂದು ಸೃಷ್ಟಿಯನ್ನು ನೋಡಿ ಅವನು ಸೃಷ್ಟಿಕಾರ್ಯವನ್ನು ಮಾಡಲು ಸಾಧ್ಯವಿಲ್ಲವಷ್ಟೆ! ಅಂತೆಯೇ ಕವಿಯಾದವನು ಕೂಡ ‘ಕಾವ್ಯ’ ಎನ್ನುವ ಅವನ ಸೃಷ್ಟಿಯನ್ನು ಸ್ವತಂತ್ರವಾಗಿಯೇ ಸೃಷ್ಟಿಸುತ್ತಾನೆ.

‘ಉತ್ತರರಾಮಚರಿತ’ದ ಕರ್ತೃವಾದ ಭವಭೂತಿಯನ್ನು ನಾಟಕದಲ್ಲಿ ಹೆಸರಿಸು

ವಾಗ ಅವನ ವಾಕ್‌–ಸಿದ್ಧಿಯನ್ನು ಪ್ರಶಂಸಿ

ಸಲಾಗಿದೆ. ಅಲ್ಲಿ ಹೋಲಿಕೆಯಾಗಿ ಬ್ರಹ್ಮ ಮತ್ತು ವಾಗ್ದೇವಿಯನ್ನೇ ತರಲಾಗಿರು

ವುದು ಕೂಡ ಆಕಸ್ಮಿಕ ಎನಿಸುವುದಿಲ್ಲ: ‘ಯಂ ಬ್ರಹ್ಮಾಣಮಿಯಂ ದೇವೀ ವಾಗ್ವಶ್ಯೇನುವರ್ತತೇ.’  ‘ಯಾವ ಬ್ರಹ್ಮನನ್ನು ಈ ವಾಗ್ದೇವತೆಯು ಸೇವಕಳಂತೆ ಹಿಂಬಾಲಿಸುವಳೋ’ ಎಂದು ಭವಭೂತಿಯನ್ನು ಸಾಕ್ಷಾತ್‌ ಬ್ರಹ್ಮನಿಗೂ ಅವನ ಕವಿತಾಸಾಮರ್ಥ್ಯವನ್ನು ಸರಸ್ವತಿಗೂ ಹೋಲಿಸಿರುವುದು ಕೂಡ ಆಕಸ್ಮಿಕವಾದುದಲ್ಲ. ಶಿವ–ಪಾರ್ವತಿ, ಬ್ರಹ್ಮ–ಸರಸ್ವತಿ – ಹೀಗೆ ಮಾತು–ಅರ್ಥ, ದರ್ಶನ–ವರ್ಣನಗಳನ್ನು ಗಂಡ–ಹೆಂಡತಿಯರಂತೆ ಕಂಡರಿಸಿರುವುದು ಕೂಡ ಆಕಸ್ಮಿಕ ವಿದ್ಯಮಾನವಲ್ಲ.

ವಾಲ್ಮೀಕಿಯ ಮುಖಕಮಲದಿಂದ ಈಗ  ‘ಮಾತು’ – ಸರಸ್ವತೀ – ಪ್ರಕಟವಾಗಿದ್ದಾಳೆ. ಈಗ ಹೆಂಡತಿಯನ್ನು ಪ್ರೀತಿಯಿಂದ ಹುಡುಕಿಕೊಂಡು ಬರುವ ಗಂಡನಂತೆ, ಬ್ರಹ್ಮ ಪ್ರತ್ಯಕ್ಷನಾಗಲೇಬೇಕು! ವಾಲ್ಮೀಕಿಯ ಮಾತನ್ನು ಕುರಿತ ಮೌನಧ್ಯಾನವನ್ನು ಕೇಳಿಸಿಕೊಂಡ ಬ್ರಹ್ಮ ಅವನ ಮುಂದೆ ಈಗ ಪ್ರಕಟವಾದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry