7

ಕಸ್ತೂರಿಬಾ ಶಿಶು ವಿಹಾರ ಚುನಾವಣೆ ರದ್ದುಮಾಡಿ

Published:
Updated:
ಕಸ್ತೂರಿಬಾ ಶಿಶು ವಿಹಾರ ಚುನಾವಣೆ ರದ್ದುಮಾಡಿ

ದೊಡ್ಡಬಳ್ಳಾಪುರ: ಮಹಿಳಾ ಸಮಾಜ ಕಸ್ತೂರಿಬಾ ಶಿಶು ವಿಹಾರಕ್ಕೆ 2012ರಿಂದ ಇಲ್ಲಿಯವರೆಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗಳನ್ನು ನಡೆಸದೇ ಡಿಸೆಂಬರ್‌ 3 ರಂದು ಚುನಾವಣೆ ನಡೆಸಲು ಮುಂದಾಗಿರುವುದು ಕಾನೂನುಬಾಹಿರವಾಗಿದೆ. ಚುನಾವಣೆಯನ್ನು ರದ್ದುಗೊಳಿಸಿ ಸರ್ವ ಸದಸ್ಯರ ಸಭೆಯನ್ನು ಮಾತ್ರ ನಡೆಸಬೇಕು ಎಂದು ಮಹಿಳಾ ಸಮಾಜದ ಸದಸ್ಯೆ ಎನ್‌.ಎಲ್‌.ವಸುಂಧರ ರೆಡ್ಡಿ ಆಗ್ರಹಿಸಿದ್ದಾರೆ.

ಅವರು ನಗರದ ಮಹಿಳಾ ಸಮಾಜದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಾಜದ ನಿಯಮಾವಳಿ ಪ್ರಕಾರ ಪ್ರತಿ ವರ್ಷ ಚುನಾವಣೆ ನಡೆದು ಹೊಸ ಕಾರ್ಯಕಾರಿ ಸಮಿತಿ ಆಯ್ಕೆಯಾಗಬೇಕು. ಆದರೆ, ಕನಿಷ್ಠ ಪಕ್ಷ ವರ್ಷಕ್ಕೆ ಒಂದು ಬಾರಿಯೂ ಸರ್ವ ಸದಸ್ಯರ ಸಭೆ ನಡೆಸಿ ಸದಸ್ಯರ ಮುಂದೆ ಸಮಾಜದ ಲೆಕ್ಕಪತ್ರಗಳು, ಕಾರ್ಯಕ್ರಮಗಳ ಮಾಹಿತಿಯನ್ನು ತಿಳಿಸಿಲ್ಲ ಎಂದರು.

ಯಾವುದೇ ನೋಂದಾಯಿತ ಸಂಘದ ಚುನಾವಣೆ ನಡೆಯಬೇಕಾದರೆ ಸರ್ವ ಸದಸ್ಯರ ಸಭೆ ನಡೆಯಬೇಕು. ಸದಸ್ಯರ ಒಪ್ಪಿಗೆ ನಂತರ ಚುನಾವಣೆ ದಿನಾಂಕ ಘೋಷಣೆಯಾಗಬೇಕು. ಆದರೆ ಯಾವೊಬ್ಬ ಸದಸ್ಯರ ಗಮನಕ್ಕೂ ಬಾರದಂತೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಚುನಾವಣೆ ನಡೆಸುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಜಿಲ್ಲಾ ಸಹಕಾರ ಸಂಘಗಳ ನೋಂದಾಣಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಸದಸ್ಯೆ ಎನ್‌.ಸಿ.ಲಕ್ಷ್ಮೀ ಮಾತನಾಡಿ, ಸಮಾಜದಲ್ಲಿ ಆರ್ಥಿಕ ಶಿಸ್ತು ಇಲ್ಲದೆ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸದಾ ಮನವಿಗಳನ್ನು ಸಲ್ಲಿಸಿ ಉತ್ತರ ನೀಡುವಂತೆ ಕೇಳಲಾಗಿದೆ. ಇಷ್ಟಾದರೂ ಒಂದು ದಿನವೂ ಲೆಕ್ಕಪತ್ರಗಳ ಹಾಗೂ ಸರ್ವ ಸದಸ್ಯರ ಸಭೆಯ ಬಗ್ಗೆ ಉತ್ತರ ನೀಡಿಲ್ಲ ಎಂದು ಟೀಕಿಸಿದರು.

ಕಾರ್ಯಕಾರಿ ಸಮಿತಿಯಲ್ಲಿನ ಕೆಲ ಸದಸ್ಯರು ಭ್ರಷ್ಟಾಚಾರ ನಡೆಯುತ್ತಿದ್ದರೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ಚುನಾವಣೆ ನಡೆದರೆ ಸೋಲುವ ಭೀತಿಯಿಂದ ಸಮಾಜದ ಸದಸ್ಯರ ಪಟ್ಟಿಯನ್ನು ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾ ಸಹಕಾರ ಸಂಘಗಳ ನೋಂದಣಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸುಳ್ಳು ಮಾಹಿತಿಯನ್ನು ನೀಡಿ ಸಮಾಜದ ಪರವಾನಿಗಿ ನವೀಕರಿಸಿಕೊಂಡಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಕೆ.ಎಸ್‌.ಪ್ರಭಾ, ರೇಣುಕಾ,ಮಂಜುಳಾ, ಭಾರತಿ, ಶಾಂತಮ್ಮ, ಮಂಜು, ರುಕ್ಷ್ಮೀಣಿ, ರೇಣುಕಾ, ಲತಾ, ಎಚ್‌.ಎಸ್‌.ರೇವತಿ, ಭಾರತಿ ಹಾಜರಿದ್ದರು.

ಸ್ತ್ರೀ ಪರ ಒಂದೂ ಕಾರ್ಯಕ್ರಮ ಇಲ್ಲ

ಸದಸ್ಯರಾದ ಶಾಂತಮ್ಮ ಮಾತನಾಡಿ, ಮಹಿಳೆಯರ ಪರವಾಗಿ ಕೆಲಸ ಮಾಡಬೇಕಿರುವ ಮಹಿಳಾ ಸಮಾಜ ಎಂದೂ ಸಹ ಸ್ತ್ರೀಯರಪರವಾದ ಒಂದೂ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದರು.

ಹಣ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆಯೇ ಹೊರತು ಮಹಿಳೆಯರಿಗೆ ಯಾವುದೇ ಉಪಯೋಗ ಇಲ್ಲದಾಗಿದೆ. ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಚುನಾವಣೆಯ ಬಗ್ಗೆ ಸಮಾಜದ ಸದಸ್ಯರಿಗೆ ಪತ್ರಗಳೇ ತಲುಪಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry