5

ಆಮೆಗತಿ ಕಾಮಗಾರಿ: ಜನರಿಗೆ ದೂಳಿನ ಕಿರಿಕಿರಿ

Published:
Updated:
ಆಮೆಗತಿ ಕಾಮಗಾರಿ: ಜನರಿಗೆ ದೂಳಿನ ಕಿರಿಕಿರಿ

ಕೊಳ್ಳೇಗಾಲ: ನಗರದ ಬಹುತೇಕ ಕಡೆ ದೂಳುಮಯ ವಾತಾವರಣ ನಿರ್ಮಾಣವಾಗಿದ್ದು, ಜನರು ನಿತ್ಯ ಬವಣೆ ಅನುಭವಿಸುವಂತಾಗಿದೆ. ಮುಖ್ಯವಾಗಿ, ರಾಷ್ಟ್ರೀಯ ಹೆದ್ದಾರಿ 209ರ ಸುತ್ತಮುತ್ತ ವಾಸಿಸುವ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು ದೂಳು ಕುಡಿಯುವುದು ಅನಿವಾರ್ಯವಾಗಿದೆ.

ಮುಡಿಗುಂಡ ಬಡಾವಣೆಯಿಂದ ಹೊಸ ಅಣಗಳ್ಳಿ ಬಡಾವಣೆಯವರೆಗೆ ರಾಷ್ಟ್ರೀಯ ಹೆದ್ದಾರಿಯ 6.4 ಕಿ.ಮೀ. ವಿಸ್ತರಣೆಯ 32 ಕೋಟಿ ವೆಚ್ಚದ ಕಾಮಗಾರಿ ಸುಮಾರು 6 ತಿಂಗಳಿನಿಂದ ಸಾಗುತ್ತಿದೆ. ಆಮೆಗತಿಯ ವೇಗದಿಂದ ಸಾರ್ವಜನಿಕರಿಗೆ ನಿತ್ಯವೂ ದೂಳಿನ ಕಿರಿಕಿರಿ ಉಂಟಾಗುತ್ತಿದೆ.

ಮನೆಯಿಂದ ಹೊರಬಂದರೆ ಸಾಕು, ಮೈತುಂಬಾ ದೂಳು ಆವರಿಸಿಕೊಳ್ಳುತ್ತದೆ. ಕೆಲವರಿಗೆ ದೂಳಿನಿಂದ ಅಲರ್ಜಿಯಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಕಾಮಗಾರಿಯ ವಿಳಂಬದಿಂದಾಗಿ ದೂಳಿನ ಕಾಟದಿಂದ ಮುಕ್ತಿ ಸಿಗದೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ನಗರದ ಪ್ರತಿಷ್ಠಿತ ಶಾಲೆ ಮತ್ತು ಕಾಲೇಜುಗಳು ಈ ಹೆದ್ದಾರಿ ಪಕ್ಕದಲ್ಲಿಯೇ ಇವೆ. ದೂಳಿನಿಂದಾಗಿ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸುವಂತಾಗಿದೆ.

ಹಲವು ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 4ರಂದು ನಗರಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಈ ಸಂಬಂಧ ಅ. 24ರಂದು ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಜಿಲ್ಲಾಧಿಕಾರಿ ಬಿ. ರಾಮು ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು.

ಬಳಿಕ ಕೆಲವು ದಿನ ಕಾಮಗಾರಿ ತುಸು ವೇಗ ಪಡೆದುಕೊಂಡಿತ್ತು. ಆದರೆ, ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮ ಮುಂದೂಡಿದ್ದರಿಂದ ಮತ್ತೆ ಚುರುಕು ಕಳೆದುಕೊಂಡು ಕುಂಠಿತಗೊಂಡಿದೆ.

‘ನಗರದ ಪ್ರಗತಿಯ ದೃಷ್ಟಿಯಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ಯಾವುದೇ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುತ್ತಿಲ್ಲ’ ಎನ್ನುವುದು ಸಾರ್ವಜನಿಕರ ಆರೋಪ.

‘ಹೆದ್ದಾರಿ ಕಾಮಗಾರಿಯಿಂದಾಗಿ ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ರಸ್ತೆಯಲ್ಲಿ ಹಳ್ಳಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಈಗಲಾದರೂ ನಗರಸಭೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಬೇಕು’ ಎಂದು ಬಡಾವಣೆಯ ನಿವಾಸಿಯೊಬ್ಬರು ಒತ್ತಾಯಿಸಿದರು.

* * 

ದೂಳಿನಿಂದ ರಸ್ತೆಯಲ್ಲಿ ಓಡಾಡಲು ತೊಂದರೆಯಾಗಿದೆ. ನೀರು ಸಿಂಪಡಿಸಿ ಕಾಮಗಾರಿ ನಡೆಸಿದರೆ ದೂಳು ನಿಯಂತ್ರಣವಾಗುತ್ತದೆ. ಆದರೆ, ಈ ಕೆಲಸ ಆಗುತ್ತಿಲ್ಲ

ಪಿ. ನಿಶಾಂತ್

ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry