7

ದೇವಸ್ಥಾನ, ಮಠಗಳಿಗೆ ಹೋಗಬೇಡಿ

Published:
Updated:
ದೇವಸ್ಥಾನ, ಮಠಗಳಿಗೆ ಹೋಗಬೇಡಿ

ಕನಕಗಿರಿ: ಮಡಿವಂತಿಕೆ, ಜಾತಿ ವ್ಯವಸ್ಥೆ ಪೋಷಿಸುವ ದೇವಸ್ಥಾನ, ಮಠಗಳಿಗೆ ಯಾರೂ ಹೋಗಬಾರದು ಎಂದು ತಿಂಥಿಣಿ ಬ್ರೀಜ್ ನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ನವಲಿ ಗ್ರಾಮದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಹಾಲುಮತ ಕುರುಬ ಸಮಾಜದ ವತಿಯಿಂದ ಭಾನುವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶೋಷಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳು ಮಡಿವಂತಿಕೆ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಬೇಕು. ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು’ ಎಂದು ಕರೆ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿ ಸಹಿಸದ ಕೆಲವರು ಹತಾಶೆಯಿಂದ ಅವರನ್ನು ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಭಿವೃದ್ಧಿ ಚಿಂತನೆ, ಭ್ರಷ್ಟಾಚಾರ ರಹಿತ ಆಡಳಿತ ಮಾದರಿ’ ಎಂದು ಬಣ್ಣಿಸಿದರು.

ಶಾಸಕ ಶಿವರಾಜ ತಂಗಡಗಿ ಮಾತನಾಡಿ, ‘ಬಸವಣ್ಣ, ಮಹರ್ಷಿ ವಾಲ್ಮೀಕಿ, ಕನಕದಾಸ, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸುವುದು ಬೇಡ. ಜಯಂತಿ ಆಚರಣೆ ತೋರಿಕೆಗೆ ಆಗಬಾರದು’ ಎಂದರು. ಟಿಪ್ಪು ಸುಲ್ತಾನ್ ಒಬ್ಬ ಶ್ರೇಷ್ಠ ಆಡಳಿತಗಾರ. ಯಾವುದೇ ಒಂದು ಧರ್ಮದ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸುತ್ತಿಲ್ಲ ಎಂದು ಹೇಳಿದರು.

ಮಾಜಿ ಸಚಿವ ನಾಗಪ್ಪ ಸಾಲೋಣಿ ಮಾತನಾಡಿ, ‘ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ ಅವರು ಸಮಾಜದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವುದಾಗಿ ಹೇಳಿದ್ದ ಭರವಸೆಯನ್ನು ಈಡೇರಿಸಿಲ್ಲ’ ಎಂದು ದೂರಿದರು. ನೀಕಿತ್‌ರಾಜ ತುಮಕೂರು, ಜೀವನಸಾಬ ಬಿನ್ನಾಳ ಉಪನ್ಯಾಸ ನೀಡಿದರು.

ಕನಕ ಗುರು ಪೀಠದ ಮೈಸೂರು ವಿಭಾಗದ ಶಿವಾನಂದಪುರಿ, ಬಸಾಪಟ್ಟಣದ ಸಿದ್ದರಾಮಯ್ಯ , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮಾತನಾಡಿದರು.

ಗ್ರಾಮದ ಹಿರಿಯ ಮುಖಂಡ ನೀಲಕಂಠಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೀರ್ಲೂಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ಸದಸ್ಯರಾದ ಭಾಗ್ಯವತಿ ಮಾಣಿಕಬೋಲಾ, ಅಮರೇಶ ಗೋನಾಳ, ಸ್ವಾತಿ ಮೋಹನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಗೌಡ, ಉಪಾಧ್ಯಕ್ಷ ಕನಕಪ್ಪ ತಳವಾರ, ಸದಸ್ಯರಾದ ಬಸಂತಗೌಡ, ಗವಿಸಿದ್ದಪ್ಪ, ಕಾರಟಗಿ ವಿಶೇಷ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ, ಉಪಾಧ್ಯಕ್ಷ ರಡ್ಡೆಪ್ಪ ಖ್ಯಾಡೆದ, ಸದಸ್ಯರಾದ ರಾಮಚಂದ್ರ ನಾಯಕ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಮುಂಡರಗಿ ಇದ್ದರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಉತ್ತೀರ್ಣರಾದ ಜಗದೀಶ ಬಳಗಾನೂರು ಅವರನ್ನು ಸನ್ಮಾನಿಸಲಾಯಿತು. ನರಹರಿ, ಅಮರೇಶ ಮೈಲಾಪುರ ನಿರೂಪಿಸಿದರು. ಇದಕ್ಕೂ ಮುನ್ನ ಕನದಾಸರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜದ ಆಶೋತ್ತರ ಈಡೇರಿಸುವಲ್ಲಿ ವಿಫಲರಾಗಿದ್ದು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ

ಕೆ. ವಿರೂಪಾಕ್ಷಪ್ಪ,

ಮಾಜಿ ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry