4

ನೌಕರಿ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ

Published:
Updated:
ನೌಕರಿ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ

ಕಾರವಾರ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಗರದ ಕೋಡಿಬಾಗದ ವಿಜಯ್‌ ಗಜನೀಕರ ಎಂಬಾತ 30ಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದು, ಹಣ ಕಳೆದುಕೊಂಡವರು ಸೋಮವಾರ ಈತನನ್ನು ಹಿಡಿದು ಇಲ್ಲಿನ ನಗರ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಈತ ಕೋಲ್ಕತ್ತದಿಂದ ಸೋಮವಾರ ಕೋಡಿಬಾಗದ ಮನೆಗೆ ಮರಳಿದ್ದ. ವಂಚನೆಗೊಳಗಾದ ಚಂದ್ರಕಾಂತ್ ವೈಂಗಣಕರ್ ಹಣ ಮರಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಅವರಿಗೆ ಕಲ್ಲಿನಿಂದ ಹೊಡೆಯಲು ಯತ್ನಿಸಿದಾಗ ಇತರರ ಸಹಕಾರದಲ್ಲಿ ಹಿಡಿದು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.

ವಂಚನೆ ಹೇಗೆ?

ಕೋಲ್ಕತ್ತದ ಈಸ್ಟರ್ನ್‌ ರೈಲ್ವೆಯಲ್ಲಿ ‘ಬಿ’ ದರ್ಜೆ ನೌಕರ ಎಂದು ಎಲ್ಲರನ್ನು ನಂಬಿಸಿದ್ದ ವಿಜಯ್‌, ‘ನಮ್ಮ ಬಾಸ್‌ಗೆ ಮಮತಾ ಬ್ಯಾನರ್ಜಿ ಪರಿಚಯ ಇದೆ’ ಎಂದು ಹೇಳಿಕೊಂಡಿದ್ದ. ಅಲ್ಲದೇ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 2015ರಲ್ಲಿ ಸ್ಥಳೀಯ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ.

‘ಕೆಲಸ ಗಿಟ್ಟಿಸಲು ಮಮತಾ ಬ್ಯಾನರ್ಜಿ, ಪೊಲೀಸರು, ರೈಲ್ವೆ ಇಲಾಖೆ ಮೇಲಧಿಕಾರಿಗಳಿಗೆ ಲಕ್ಷಗಟ್ಟಲೇ ಕಮಿಷನ್ ಕೊಡಬೇಕಾಗುತ್ತದೆ ಎಂದು ಹೇಳಿದ ವಿಜಯ್‌ ‘ಸಿ’ ದರ್ಜೆಯ ಹುದ್ದೆಗೆ ₹ 6 ಲಕ್ಷ, ‘ಡಿ’ ದರ್ಜೆಯ ನೌಕರಿಗೆ ₹ 4.5 ಲಕ್ಷ ಹಣ ಪಡೆದಿದ್ದಾನೆ’ ಎಂದು ಚಂದ್ರಕಾಂತ ಆರೋಪಿಸಿದರು.

‘ವಂಚನೆ ಬಯಲಿಗೆ ಬಾರದೆಂದು ಹಣ ಕೊಟ್ಟವರ 5– 10 ಮಂದಿಯ ಬ್ಯಾಚ್‌ ಮಾಡಿ, ಒಂದೊಂದೆ ಬ್ಯಾಚ್‌ ಅನ್ನು ಕೋಲ್ಕತ್ತಕ್ಕೆ ಕರೆಯಿಸಿಕೊಂಡು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಅದರ ವರದಿ ಕೂಡ ನೀಡಿದ್ದ. ಬಳಿಕ ಕೆಲವರಿಗೆ ಮೂರು ತಿಂಗಳು ಅಲ್ಲಿನ ರೈಲ್ವೇ ಕ್ವಾರ್ಟ್ರಸ್‌ನಲ್ಲಿ ತರಬೇತಿ ಕೂಡ ಕೊಡಿಸಿದ್ದ. ಈ ವೇಳೆ ಅಲ್ಲಿಗೆ ಬರುವವರ ಬಳಿಯ ಎಟಿಎಂನಿಂದ ನಗದು ರೂಪದಲ್ಲಿಯೇ ಹಣ ಪಡೆದುಕೊಂಡ. ಅದಾದ ಬಳಿಕ ಕೆಲವರಿಗೆ ತರಬೇತಿಯಲ್ಲಿ ಉತ್ತೀರ್ಣರಾಗಿದ್ದೀರಿ ಎಂದು ನಕಲಿ ಪ್ರಮಾಣಪತ್ರವನ್ನೂ ಕೂಡ ಕಳುಹಿಸಿದ್ದಾನೆ. ರೈಲ್ವೆ ಇಲಾಖೆಯ ಬಟ್ಟೆ, ಷೋಗಳನ್ನು ಕೂಡ ಒದಗಿಸಿದ್ದಾನೆ’ ಎಂದು ವಿವರಿಸಿದರು.

ಹಣ ನೀಡಿ ಒಂದೂವರೆ ವರ್ಷ ಕಳೆದರೂ ಕೆಲಸ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದರೆ, ‘ಸ್ವಲ್ಪ ಸಮಯ ಹಿಡಿಯುತ್ತದೆ. ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಅಂತ ನಂಬಿಸುತ್ತಿದ್ದ. ಆದರೆ ಈತ ರೈಲ್ವೆ ಇಲಾಖೆಯಲ್ಲಿ ನೌಕರಿಯಲ್ಲಿಲ್ಲ. ವಂಚನೆ ಮಾಡುವುದೇ ಆತನ ಕಾಯಕ ಎಂಬುದು ತಡವಾಗಿ ತಿಳಿದುಬಂದಿದೆ ಎಂದರು.

‘ಈತ ಮಂಜುನಾಥ್ ಎಂಬುವವನ ಜತೆಗೂಡಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ ಹಾಗೂ ಅಂಕೋಲಾದ ಯುವಕರಿಗೆ ವಂಚಿಸಿದ್ದಾನೆ. ಈತನಿಂದ ವಂಚನೆಗೊಳಗಾದವರಲ್ಲಿ ಗೋವಾದವರು ಸೇರಿದ್ದಾರೆ ಎನ್ನಲಾಗಿದೆ’ ಎಂದು ಹೇಳಿದರು.

* * 

ವಿಜಯ್‌ ಗಜನೀಕರ ವಿರುದ್ಧ ಹಲವರು ದೂರು ನೀಡಿದ್ದು, ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು.

ನವೀನ್‌ಕುಮಾರ್‌ ನಾಯ್ಕ

ಸಬ್‌ಇನ್‌ಸ್ಪೆಕ್ಟರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry