7

ಬಿಡುಗಡೆಯಾಗದ ವೃದ್ಧಾಪ್ಯ ವೇತನ ‘ಭಾಗ್ಯ’

Published:
Updated:

ವಿಜಯಪುರ: ‘ನಮ್ಮ ಮಕ್ಳು ನಮ್ಮಿಂದ ಬ್ಯಾರಿ ಅದಾರಿ. ನಮ್ಗಂತೂ ದುಡ್ಯಾಕ ಆಗಾಲ್ರೀ. ಸರ್ಕಾರ ಕೊಡ್ತಿದ್ದ ಪಗಾರದಾಗ ಜೀವ್ನಾ ಮಾಡಾಕತ್ತೇವಿ. ನಾಲ್ಕಾರ್ ತಿಂಗಳಿಂದ ಪಗಾರ ಬರಲಾರದಕ್ಕ ಹೊಟ್ಟಿ ತುಂಬಿಸ್ಕೋಳೋದು ಬಾಳ ಕಷ್ಟ ಆಗ್ಯಾದ ನೋಡ್ರಿ...

ಪಗಾರದ ಸಲುವಾಗಿ ದಿನಾ ಪೋಸ್ಟ್‌ ಆಫೀಸ್‌ಗೆ ಅಲ್ದಾಡಿ ಸಾಕಾಗ್ಯಾದ. ಪೋಸ್ಟ್‌ಮನ್‌ಗೆ ಕೇಳಿದ್ರೆ ಸರ್ಕಾರದಿಂದ ರೊಕ್ಕ ಬಂದಿಲ್ಲ. ಬಂದ ಮೇಲೆ ಬಾ ಅಂತಾನ. ಪಗಾರ ಬರ್ತಾದ ಅಂತ ಊರಾಗ ಅಂಗಡಿಯವರು ಉದ್ರಿ ಕೊಡ್ತೀದ್ರು. ಈಗ ಅವ್ರು ಕೊಡೋದನ್ನೇ ನಿಲ್ಸ್ಯಾರ. ಹಿಂಗಾದ್ರ ನಾವು ಬದುಕೋದು ಹೆಂಗ್ರೀ... ಹೆಂಗರಾ ಮಾಡಿ ನಮ್ಗ ಪಗಾರ ಕೊಡ್ಸಿ ಪುಣ್ಯಾ ಕಟ್ಕೋರಿ...’ ವಿಜಯಪುರ ತಾಲ್ಲೂಕು ಜಂಬಗಿ ಗ್ರಾಮದ ವಯೋವೃದ್ಧರ ಅಳಲಿದು.

ರಾಜ್ಯ ಸರ್ಕಾರ ಪ್ರತಿ ತಿಂಗಳು ವಯೋವೃದ್ಧರಿಗೆ ಸಹಾಯಧನದ ರೂಪದಲ್ಲಿ ವಿತರಿಸುವ ₨ 500, ಕಳೆದ ಐದಾರು ತಿಂಗಳಿಂದ ಕೈಗೆ ದೊರೆಯದಿರುವುದರಿಂದ ಕಂಗಾಲಾಗಿ, ವಿಜಯಪುರ ಜಿಲ್ಲಾಧಿಕಾರಿ ಬಳಿ ತಮ್ಮ ಆತಂಕ ತೋಡಿಕೊಳ್ಳಲು ಸೋಮವಾರ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ವಯೋವೃದ್ಧರ ಗುಂಪು ‘ಪ್ರಜಾವಾಣಿ’ ಬಳಿ ತಮ್ಮ ಅಸಹಾಯಕ ಸ್ಥಿತಿಯನ್ನು ಬಿಚ್ಚಿಟ್ಟಿತು.

‘ಮೊದಲ ಬಾರಿ ಪಗಾರ ಬಾರದಿದ್ದಾಗ ಪೋಸ್ಟ್‌ಮನ್‌ಗೆ ಕೇಳ್ದೆ. ಪಾಸ್‌ಬುಕ್‌ಗೆ ಆಧಾರ್‌ ಕಾರ್ಡ್‌ ಕೊಟ್ರ ಬರ್ತಾವ ಅಂದ್ರು. ಯಾರೋ ಸಾಹಿಬ್ರು ಊರಿಗಿ ಬಂದಿದ್ರು. ಐವತ್ತು ರೂಪಾಯಿ ರೊಕ್ಕ ಕೊಟ್ಟು, ಆಧಾರ್‌ ಕಾರ್ಡ್‌ ಕೊಟ್ಟೆ. ಮತ್ತ ಮುಂದಿನ ತಿಂಗಳ ಆಗಿಲ್ಲ ಅಂದ್ರು. ಮತ್ತ ಕೊಟ್ಟೆ. ಈಗ ಕೇಳಿದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಅನ್ನಾಕತ್ತಾರ. ಊರಾಗ ಏಳು ನೂರು ಜನಾ ಅದೇವಿ ಪಗಾರ ತಗೋಳೋರು. ಯಾರಿಗೂ ಆಗಿಲ್ಲ. ಯಾವಾಗ ಬರ್ತಾವೋ ಆ ದೇವರೇ ಕಾಪಾಡಬೇಕು ನಮ್ಮನ್ನ...’ ಎಂದು ದುಂಡಪ್ಪ ಮಸೂತಿ ಆಗಸದತ್ತ ಮುಖ ಮಾಡಿದರು.

‘ಮನ್ಯಾಗ ನಾನು ನನ್ನ ಹೆಂಡ್ತಿ ಇಬ್ರೇ ಅದೇವಿ. ದುಡ್ಕೋಂಡು ತಿನ್ಬೇಕು ಅಂದ್ರ ಇಬ್ರಿಗೂ ಕುಂತ್ರ ಏಳಾಕ ಬರಲ್ಲ. ಎದ್ರ ಕುಂದ್ರಾಕ ಬರಲ್ಲ. ಇಂಥ ಸ್ಥಿತಿನಾಗ ಹೆಂಗಾರ ದುಡಿಯೋದು. ಸರ್ಕಾರ ತಿಂಗ್ಳಾ ₹ 500 ಕೊಡ್ತಿತ್ತು ಅಂತ ಜೀವನ್ದ ಬಗ್ಗೆ ತಲಿಕೆಡಿಸಿಕೊಂಡಿರಲಿಲ್ಲ. ಆದ್ರ ಈಗ ಚಿಂತಿ ಹತ್ಯಾದ. ಹೆಂಡ್ತೀಗಿ ಒಂದೂವರೆ ವರ್ಷದಿಂದ ಪಗಾರ ಆಗಿಲ್ಲ. ನಂದು ಆರು ತಿಂಗಳದಿಂದ ಆಗಿಲ್ಲ. ದೌಡ ಪಗಾರ ಆದ್ರ ಚಲೋ ಆಗ್ತಾದ ನೋಡ್ರಿ. ನಮ್ಮ ಕಷ್ಟ ಹೇಳ್ಕೋಳಾಕ ಡಿಸಿ ಬಳಿಗೆ ಬಂದು ಕುಂತೇವಿ. ಅವರಾದರೂ ನಮ್ಗ ಒಳ್ಳೇದ ಮಾಡ್ತಾರೇನ ನೋಡೋಣ’ ಎಂದು ದುಂಡಪ್ಪ ಅಂಕಲಗಿ ಆಶಾವಾದ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರದಿಂದ ಈಗಾಗಲೇ ಹಣ ಬಿಡುಗಡೆಯಾಗಿದೆ. ಅಂಚೆ ಇಲಾಖೆಯಲ್ಲಿ ನೂತನ ಸಾಫ್ಟ್‌ವೇರ್ ಅಳವಡಿಸುತ್ತಿರುವ ಕಾರಣ ಮೂರ್ನಾಲ್ಕು ತಿಂಗಳಿಂದ ವೇತನದಲ್ಲಿ ವಿಳಂಬವಾಗಿದೆ. ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ₨ 50 ಪಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry