7

ಬಾಟಲಿಯಲ್ಲೇ ಗಿಡ ನೆಡಿ ಕೈತೋಟ ಮಾಡಿ

Published:
Updated:
ಬಾಟಲಿಯಲ್ಲೇ ಗಿಡ ನೆಡಿ ಕೈತೋಟ ಮಾಡಿ

ದೈನಂದಿನ ಬಳಕೆಗೆ ಬೇಕಾದ ಸೊಪ್ಪು, ತರಕಾರಿ ಮತ್ತು ಹೂವುಗಳನ್ನು ಮನೆಯಲ್ಲೇ ಬೆಳೆಯಬೇಕು ಎಂಬ ಮಹತ್ವಾಕಾಂಕ್ಷಿಗಳಿಗೆ ಇಲ್ಲೊಂದು ಅದ್ಭುತವಾದ, ಮತ್ತಷ್ಟೇ ಸರಳವಾದ ಉಪಾಯವಿದೆ. ಇರುವ ಅರ್ಧ ಅಡಿ ಜಾಗದಲ್ಲೇ ಹತ್ತಾರು ಬಗೆಯ ಗಿಡಗಳನ್ನು ಬೆಳೆದು ಹೆಮ್ಮೆಯಿಂದ ಬೀಗುವ ಅವಕಾಶವಿದು. ಇದು, ಬಳಸಿ ಬಿಸಾಡುವ ಬಾಟಲಿಗಳಿಂದಲೇ ಮಾಡಬಹುದಾದ ಕೈತೋಟ.

‌ಪ್ರತಿಯೊಬ್ಬರ ಮನೆಯಲ್ಲಿಯೂ ತಂಪು ಪಾನೀಯದ ಬಾಟಲಿಗಳು ಇದ್ದೇ ಇರುತ್ತವೆ. ಎರಡು ಲೀಟರ್‌ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಬಾಟಲಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಬಾಟಲಿಯ ಹೊಟ್ಟೆಯನ್ನು ಹರಿತವಾದ ಚಾಕು ಅಥವಾ ಕಟ್ಟರ್‌ನಿಂದ ಅರ್ಧ ಅಡಿ ಉದ್ದಕ್ಕೆ ಮತ್ತು ಆರರಿಂದ ಎಂಟು ಇಂಚು ಅಗಲಕ್ಕೆ ಕತ್ತರಿಸಿ ತೆಗೆಯಬೇಕು.

ಹೆಚ್ಚುವರಿ ನೀರು ಹರಿದುಹೋಗುವಂತೆ ಬಾಟಲಿಗಳ ತಳಭಾಗದಲ್ಲಿ ಪುಟಾಣಿ ರಂಧ್ರಗಳನ್ನು ಕೊರೆಯಬೇಕು. ಮುಚ್ಚಳ ತೆಗೆಯಬಾರದು. ಗೊಬ್ಬರ ಮಿಶ್ರಿತ ಮಣ್ಣನ್ನು ಬಾಟಲಿಯ ಹೊಟ್ಟೆಗೆ ತುಂಬಿಸಿ ನಿಮ್ಮಿಷ್ಟದ ತರಕಾರಿ, ಹೂವು ಅಥವಾ ಸೊಪ್ಪಿನ ಗಿಡವನ್ನೋ, ಬೀಜವನ್ನೋ ನೆಡಬೇಕು.

ಮುಂದಿನ ಹಂತ ಅದಕ್ಕೆ ನೀರುಣಿಸಿ ಸಾಮಾನ್ಯವಾಗಿ ಕುಂಡದಲ್ಲಿನ ಗಿಡಗಳನ್ನು ಪೋಷಿಸಿದಂತೆಯೇ ಪೋಷಿಸುವುದು. ಆಲೂಗಡ್ಡೆ, ಹೂಕೋಸು, ಎಲೆಕೋಸು, ಈರುಳ್ಳಿ ಕೋಡು, ಪುದೀನಾ, ಕೊತ್ತಂಬರಿ ಸೊಪ್ಪು, ಮೂಲಂಗಿ, ಕ್ಯಾರೆಟ್‌, ಬದನೆ ಹೀಗೆ ಸಣ್ಣ ಸಣ್ಣ ಗಿಡಗಳನ್ನು ಬೆಳೆಯಬಬಹುದು. ಪೊದೆಗಳಾಗಿ ಹಬ್ಬುವ ಗಿಡಗಳಿಗೆ ಬಾಟಲಿ ಕೈತೋಟ ಸೂಕ್ತವಲ್ಲ. ಹೂವು ಮತ್ತು ಸೊಪ್ಪಿನ ವಿಚಾರದಲ್ಲಿಯೂ ಹಾಗೆಯೇ.

ಅಡುಗೆ ಎಣ್ಣೆಯ ಪಾರದರ್ಶಕ ಕ್ಯಾನ್‌ಗಳು ಹಾಗೂ ನೀರಿನ ಕ್ಯಾನ್‌ಗಳನ್ನೂ ಇದೇ ಮಾದರಿಯಲ್ಲಿ ಬಳಸಬಹುದು. ಈ ಕ್ಯಾನ್‌ಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಯಬಹುದು.

ಲಭ್ಯವಿರುವಷ್ಟು ಜಾಗದಲ್ಲೇ ಅಥವಾ ನಿಗದಿತ ಜಾಗದಲ್ಲಿ ಬಗೆ ಬಗೆಯ ಗಿಡಗಳನ್ನು ನೆಡಲು ಬಯಸುವವರು ಚಪ್ಪಲಿ ಸ್ಟ್ಯಾಂಡ್‌ ಮಾದರಿಯ ಅಟ್ಟಳಿಗೆ ನಿರ್ಮಿಸಿ ಈ ಬಾಟಲಿಗಳನ್ನು ಒಪ್ಪವಾಗಿ ಜೋಡಿಸಿ ಇಡಬಹುದು. ಹೀಗೆ ಮಾಡಿದಲ್ಲಿ, ಮೇಲಿನ ಬಾಟಲಿಗಳಿಂದ ಹರಿದು ಬಂದ ಹೆಚ್ಚುವರಿ ನೀರು ಕೆಳಗಿನ ಬಾಟಲಿಗಳಿಗೆ ಹನಿ ನೀರಿನಂತೆ ಪೂರೈಕೆಯಾಗುತ್ತದೆ. ಹಾಗಾಗಿ ಕೆಳಗಿನ ಗಿಡಗಳಿಗೆ ಅಗತ್ಯವಿದ್ದಷ್ಟೇ ನೀರು ಉಣಿಸಿದರಾಯಿತು.

ಈ ಮಾದರಿಯ ಕೈತೋಟವನ್ನು ಕಿಟಕಿಗಳ ಹೊರಭಾಗದಲ್ಲಿ, ಪ್ಯಾಸೇಜ್‌ನಲ್ಲಿ, ಬಾಲ್ಕನಿಯಲ್ಲಿ ಕೂಡಾ ಮಾಡಬಹುದು. ತಾರಸಿ ಮೇಲೆ ಅವಕಾಶವಿದ್ದರೆ ಇನ್ನಷ್ಟು ವಿಶಾಲವಾಗಿ ನಿರ್ಮಿಸಬಹುದು. ಇದೇ ಬಾಟಲಿಗಳನ್ನು ಅರ್ಧಕ್ಕೆ ಕತ್ತರಿಸಿದರೆ ನೆಟ್ಟಗೆ ನಿಲ್ಲಿಸಿ ಗಿಡಗಳನ್ನು ನೆಡಬಹುದು. ವರ್ಟಿಕಲ್‌ ಗಾರ್ಡನ್‌ ಮಾದರಿಯಲ್ಲಿ ನಿಮ್ಮ ಕೈತೋಟ ಸಿದ್ಧವಾಗುತ್ತದೆ.

ಕಸದ ತೊಟ್ಟಿ ಸೇರುವ ಬಾಟಲಿಗಳನ್ನು ಹೀಗೆ ಸದುಪಯೋಗಪಡಿಸಿಕೊಂಡು ಮನೆಯಲ್ಲೇ ಪುಟಾಣಿ ಕೈತೋಟ ನಿರ್ಮಿಸುವ ಯೋಚನೆ ನಿಮಗೂ ಬಂತೇ? ವ್ಹಾವ್‌!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry