7

ಮಲೆನಾಡಿನ ಕಡುಬು, ತೊಗರಿಬೇಳೆ ಗೊಜ್ಜು

Published:
Updated:
ಮಲೆನಾಡಿನ ಕಡುಬು, ತೊಗರಿಬೇಳೆ ಗೊಜ್ಜು

ಮಲೆನಾಡು ಪ್ರಾಕೃತಿಕ ಸೌಂದರ್ಯದಷ್ಟೇ ಅಡುಗೆಗೂ ಹೆಸರುವಾಸಿ. ಮಲೆನಾಡಿನ ಜನರು ನಾವು ಕಂಡು, ಕೇಳಿರಿಯದ ಸೊಪ್ಪು, ತರಕಾರಿಯ ಮೂಲಕ ವಿಧ ವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಅದು ಆರೋಗ್ಯರಕ್ಷಣೆಯ ಜೊತೆಗೆ ಬಾಯಿಗೂ ರುಚಿ ನೀಡುತ್ತದೆ. ಮಲೆನಾಡಿನ ವಿಶೇಷ ಗೋವೆಕಾಯಿ ಕಡುಬು ಮತ್ತು ತೊಗರಿಬೇಳೆ ಗೊಜ್ಜು ಹಾಗೂ ಪಳದ್ಯ ತಯಾರಿಸುವ ಬಗೆಯನ್ನು ತಿಳಿಸಿದ್ದಾರೆ ಸುಶೀಲಾ ಜೋಷಿ

ಚೀನಿಕಾಯಿ/ಗೋವೆಕಾಯಿ ಕಡುಬು

ಬೇಕಾಗುವ ಸಾಮಗ್ರಿಗಳು

ಅಕ್ಕಿ – 1ಲೋಟ

ಚೀನಿಕಾಯಿ/ಗೋವೆಕಾಯಿ – 1

ಬೆಲ್ಲ – 1/2ಕಪ್‌

ಏಲಕ್ಕಿ ಪುಡಿ – ಸ್ವಲ್ಪ

ಬಾಳೆಎಲೆ – ಅಗತ್ಯ ಇದ್ದಷ್ಟು

ತಯಾರಿಸುವ ವಿಧಾನ

ಒಂದು ಲೋಟ ಅಕ್ಕಿಯನ್ನು ಎರಡು ಗಂಟೆ ನೆನೆಸಿಡಿ. ಚೀನಿಕಾಯಿಯನ್ನು ಹೋಳು ಮಾಡಿ ಎರಡು ಕಪ್‌ ಆಗುವಷ್ಟು ತುಂಡರಿಸಿ ಇಟ್ಟುಕೊಳ್ಳಿ, ಒಂದು ಕಪ್‌ ಅಕ್ಕಿಗೆ, ಎರಡು ಕಪ್‌ ಹೋಳು ಅಳತೆಯಾಗುವಂತೆ ನೋಡಿಕೊಳ್ಳಿ. ಅಕ್ಕಿ ನೆನೆದ ಮೇಲೆ ಹೋಳು ಸೇರಿಸಿ, ಅದಕ್ಕೆ ಅರ್ಧ ಕಪ್‌ ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ರುಬ್ಬಿಕೊಳ್ಳಿ. ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗೆ ರುಬ್ಬಿ.

ಬಾಳೆಎಲೆಯನ್ನು ಗ್ಯಾಸ್‌ ಮೇಲಿಟ್ಟು ಬಾಡಿಸಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಬಾಡಿಸಿಕೊಂಡ ಬಾಳೆಎಲೆಗೆ ಹಚ್ಚಿ. ನಂತರ ಎಲೆಯನ್ನು ನಾಲ್ಕೂ ಕಡೆಯಿಂದ ಮಡಚಿ, ಇದನ್ನು ಸಣ್ಣ ಹಬೆಯಲ್ಲಿ ಸುಮಾರು ಒಂದೂವರೆ ಗಂಟೆ ಬೇಯಿಸಿ. ಘಮಘಮಿಸುವ ಚೀನಿಕಾಯಿ ಕಡುಬು ಸವಿಯಲು ಸಿದ್ಧವಾಗುತ್ತದೆ.

* * 

ತೊಗರಿಬೇಳೆ ಗೊಜ್ಜು

ಬೇಕಾಗುವ ಸಾಮಗ್ರಿಗಳು

ತೊಗರಿಬೇಳೆ – 1ಕಪ್‌

ಕೊತ್ತಂಬರಿ – 1ಚಮಚ

ಜೀರಿಗೆ – 1ಚಮಚ

ಮೆಂತ್ಯ – 1/2ಚಮಚ

ಎಳ್ಳು – 1/2ಚಮಚ

ಮೆಣಸು – 4ರಿಂದ5

ಉಪ್ಪು – ರುಚಿಗೆ ತಕ್ಕಷ್ಟು

ಹುಣಸೆಹಣ್ಣು – ಸ್ವಲ್ಪ

ಕಾಯಿತುರಿ – 1ಕಪ್‌

ತಯಾರಿಸುವ ವಿಧಾನ: ಉಪ್ಪಿಗಿಂತ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಉಪ್ಪು, ಹುಣಸೆಹಣ್ಣು ಮತ್ತು ಕಾಯಿತುರಿಯನ್ನು ಹುರಿದ ಪದಾರ್ಥಗಳಿಗೆ ಸೇರಿಸಿ ರುಬ್ಬಿ. ಇದಕ್ಕೆ ಇಂಗು, ಸಾಸಿವೆ ಹಾಕಿ ಒಗ್ಗರಣೆಯನ್ನು ಕೊಟ್ಟರೆ ತೊಗರಿಬೇಳೆ ಗೊಜ್ಜು ಸಿದ್ಧ.

* *

ಬೂದುಗುಂಬಳ ಪಳದ್ಯ

ಬೇಕಾಗಿರುವ ಸಾಮಗ್ರಿಗಳು

ಬೂದುಗುಂಬಳ – 1ದೊಡ್ಡದು

ನೀರು – ಬೇಯಲು ಅಗತ್ಯ ಇದ್ದಷ್ಟು

ಉಪ್ಪು – ರುಚಿಗೆ

ಬೆಲ್ಲ – ಸ್ವಲ್ಪ

ಕಾಯಿತುರಿ – 1ಬಟ್ಟಲು

ಕೊತ್ತಂಬರಿ– 1ಚಮಚ

ಮೆಣಸಿನಕಾಯಿ – 4-5

ಸಾಸಿವೆ– 1ಚಮಚ

ಅರಿಶಿಣಪುಡಿ – ಸ್ವಲ್ಪ

ತಯಾರಿಸುವ ವಿಧಾನ: ಬೂದುಗುಂಬಳವನ್ನು ದೊಡ್ಡದಾಗಿ ಹೋಳು ಮಾಡಿಕೊಳ್ಳಿ. ಇದಕ್ಕೆ ಅಗತ್ಯ ಇರುವಷ್ಟು ನೀರು, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಬೇಯಲು ಇಡಿ.

ಇದಕ್ಕೆ ಸೇರಿಸಲು ಮಸಾಲೆ ತಯಾರಿಸಬೇಕು. ಅದಕ್ಕಾಗಿ ಕಾಯಿತುರಿ, ಕೊತ್ತಂಬರಿ, ಮೆಣಸಿನಕಾಯಿ, ಸಾಸಿವೆ ಮತ್ತು ಅರಿಶಿಣಪುಡಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅತ್ತ ಬೂದುಗುಂಬಳ ಬೇಯುತ್ತಿದ್ದಂತೆಯೇ ರುಬ್ಬಿಟ್ಟ ಮಸಾಲೆಯನ್ನು ಕಾಯಿ ಇನ್ನೊಂದು ಸುತ್ತು ಬೇಯಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry