3

ಕುಸಿದ ಯೆಮನ್‌ಗೆ ‘ಮಾರಿಬ್‌’ ಆಶಾಕಿರಣ

Published:
Updated:
ಕುಸಿದ ಯೆಮನ್‌ಗೆ ‘ಮಾರಿಬ್‌’ ಆಶಾಕಿರಣ

ಯೆಮನ್‍ನ ಬಹುಭಾಗ ಬರಗಾಲದತ್ತ ಸಾಗುತ್ತಿರುವುದರ ನಡುವೆಯೇ ದೂಳು ತುಂಬಿದ ಮರುಭೂಮಿ ಪಟ್ಟಣ ಮಾರಿಬ್‍ನ ಜನರು ಹಿಂದೆಂದೂ ರುಚಿ ನೋಡಿಲ್ಲದ ಪಿಜ್ಜಾ, ಹ್ಯಾಂಬರ್ಗರ್‌ ಮತ್ತು ಐಸ್ ಕ್ರೀಮ್ ಖರೀದಿಸಬಹುದಾಗಿದೆ. ವಾಯು ದಾಳಿ ಮತ್ತು ಸಂಘರ್ಷದಿಂದಾಗಿ ಇತರ ಪಟ್ಟಣಗಳು ಮತ್ತು ನಗರಗಳು ಅವಶೇಷಗಳಿಂದ ತುಂಬಿ ಹೋಗಿದ್ದರೆ ಈ ಪಟ್ಟಣ ಮಾತ್ರ ಬೆಳೆಯುತ್ತಿದೆ. ಇಟ್ಟಿಗೆ ಗೂಡುಗಳು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಮರಳಿನ ಮೇಲೆ ಪಟ್ಟಣ ವಿಸ್ತಾರಗೊಳ್ಳುತ್ತಲೇ ಇದೆ. ಅರಬ್ ಜಗತ್ತಿನ ಅತ್ಯಂತ ಬಡ ದೇಶವಾದ ಯೆಮನ್‍ನಲ್ಲಿ ಯುದ್ಧದಿಂದಾಗಿ ತೀವ್ರವಾದ ಮಾನವೀಯ ಬಿಕ್ಕಟ್ಟು ಎದುರಾಗಿದ್ದರೆ ಆಶಾವಾದವೇ ಇಲ್ಲದ ದೇಶದಲ್ಲಿ ಮಾರಿಬ್ ಆಶಾಕಿರಣವಾಗಿ ಹೊರಹೊಮ್ಮಿದೆ.

ಗುಂಪುಗಳ ನಡುವಣ ಹೋರಾಟದಿಂದಾಗಿ ದೇಶ ವಿಭಜಿತವಾಗಿದ್ದರೆ ತೈಲದ ವರಮಾನ ಮತ್ತು ಬುಡಕಟ್ಟು ರಾಜಕಾರಣದ ಮೂಲಕ ಮಾರಿಬ್‍ನ ಪ್ರಾಂತೀಯ ಸರ್ಕಾರ ಯುದ್ಧದ ಹೊಡೆತವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. ಇತರೆಡೆ ಕಾಣಸಿಗದ ಸುರಕ್ಷತೆ ಮತ್ತು ಸೇವೆಗಳನ್ನು ಒದಗಿಸುತ್ತಿದೆ. ಇತರೆಡೆಗೆ ಹೋಲಿಸಿದರೆ ಇಲ್ಲಿ ಇರುವ ಸ್ಥಿರತೆಯಿಂದಾಗಿ ಯೆಮನ್‍ನಿಂದ ಪರಾರಿಯಾಗುತ್ತಿರುವ ಜನರು ಇಲ್ಲಿಗೆ ಬರುತ್ತಿದ್ದಾರೆ. ಕೆಲವರು ತಮ್ಮಲ್ಲಿರುವ ಹಣವನ್ನು ತಂದು ಇಲ್ಲಿ ಆಸ್ತಿ ಖರೀದಿ ಮಾಡುತ್ತಿದ್ದಾರೆ ಮತ್ತು ವ್ಯಾಪಾರಗಳನ್ನು ಆರಂಭಿಸುತ್ತಿದ್ದಾರೆ.

‘ಬೆರಳುಗಳಿಂದ ಬಂಡೆ ಕೊರೆಯುವಂತೆ ಇದು ಅಸಾಧಾರಣ ಸನ್ನಿವೇಶದಲ್ಲಿನ ಯಶಸ್ಸು’ ಎಂದು ಮಾರಿಬ್‍ನ ಕತೆಯನ್ನು ಸೇಫರ್ ತೈಲ ಕಂಪೆನಿಯ ಉತ್ಪಾದನಾ ಮೇಲ್ವಿಚಾರಕ ಅಬ್ದುಲ್ ರಜಾಖ್ ನಖೀಬ್ ಬಣ್ಣಿಸುತ್ತಾರೆ. ಬೆರಳಿನಲ್ಲಿ ಬಂಡೆ ಕೊರೆಯುವುದು ಎನ್ನುವುದು ಅಸಾಧಾರಣವಾದುದನ್ನು ಸಾಧಿಸಿದ್ದನ್ನು ಬಣ್ಣಿಸಲು ಇರುವ ಯೆಮನ್‌ ನುಡಿಗಟ್ಟು.

ತನ್ನ ಸುತ್ತಲೂ ಎಲ್ಲವೂ ಕುಸಿದು ಬಿದ್ದಿದ್ದರೂ ಸಹಜ ಸ್ಥಿತಿಯ ಭಾವವನ್ನು ಸೃಷ್ಟಿಸುವುದರ ಜತೆಗೆ ಪ್ರಗತಿಯನ್ನೂ ಸಾಧಿಸಲು ಮಾರಿಬ್ ಶ್ರಮಿಸುತ್ತಿರುವುದನ್ನು ಪಶ್ಚಿಮದ ಪತ್ರಕರ್ತರು ಮತ್ತು ಸಂಶೋಧಕರ ಜತೆಗೆ ಅಲ್ಲಿಗೆ ನಾಲ್ಕು ದಿನಗಳ ಭೇಟಿ ನೀಡಿದ್ದಾಗ ನಾನು ಕಂಡೆ.

ಯೆಮನ್ ಬಗ್ಗೆ ಸಂಶೋಧನೆ ನಡೆಸುವ ಸನಾ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಈ ಪ್ರವಾಸವನ್ನು ಆಯೋಜಿಸಿತ್ತು. ಯೆಮನ್‍ನ ಯುವ, ಉತ್ಸಾಹಿ ಸಂಶೋಧಕ ಫರೀ ಅಲ್ ಮುಸ್ಲಿಮಿ ಈ ಪ್ರವಾಸದ ನೇತೃತ್ವ ವಹಿಸಿಕೊಂಡಿದ್ದರು. ಯೆಮನ್ ದೇಶವನ್ನು ಅಂತರರಾಷ್ಟ್ರೀಯ ಸಮುದಾಯ ನಿರ್ಲಕ್ಷಿಸಿರುವುದು ಎರಡರ ನಾಶಕ್ಕೂ ಕಾರಣವಾಗುತ್ತದೆ ಎಂಬ ಚಿಂತೆ ತಮ್ಮದು ಎಂದು ಮುಸ್ಲಿಮಿ ಹೇಳಿದರು.

‘ಯೆಮನ್‍ನ ಯುದ್ಧವನ್ನು ನಾವು ಈಗಲೇ ನಿಲ್ಲಿಸುವುದಕ್ಕೆ ಸಾಧ್ಯವಾಗದು, ಆದರೆ, ಕನಿಷ್ಠಪಕ್ಷ ಈ ಬಗ್ಗೆ ಹೆಚ್ಚು ಹೆಚ್ಚು ಸಂವಾದ ನಡೆಯುವಂತೆ ನೋಡಿಕೊಳ್ಳಬಹುದು. ಜಗತ್ತನ್ನು ಯೆಮನ್‍ಗೆ ಕರೆತರಲು ಮತ್ತು ಜಗತ್ತಿನೆಡೆಗೆ ಯೆಮನ್ ದೇಶವನ್ನು ಒಯ್ಯಲು ನಾವು ಬಯಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಮಾರಿಬ್‍ನ ಅಸಾಧಾರಣ ಯಶಸ್ಸು ಯೆಮನ್ ದೇಶ ಬಹುಪಾಲು ಕುಸಿದು ಬಿದ್ದಿರುವುದರ ಸಂಕೇತವಾಗಿದೆ. ಆಯಾ ಪ್ರಾಂತ್ಯಗಳೇ ತಮ್ಮ ಜನರಿಗೆ ಜೀವನಾವಶ್ಯಕ ಮೂಲಸೌಕರ್ಯ ಒದಗಿಸಲಿ ಎಂದು ಯೆಮನ್ ಸರ್ಕಾರ ಕಣ್ಣುಮುಚ್ಚಿ ಕುಳಿತು ಬಿಟ್ಟಿದೆ. ಸೌದಿ ಅರೇಬಿಯಾದ ಜತೆಗೆ ಉತ್ತಮ ಸಂಬಂಧ, ತೈಲ ಮತ್ತು ಅನಿಲ ನಿಕ್ಷೇಪಗಳು ಮತ್ತು ಪ್ರಗತಿಪರ ಧೋರಣೆಯ ಗವರ್ನರ್‌ರಿಂದಾಗಿ ಮಾರಿಬ್‍ಗೆ ಈ ಯಶಸ್ಸು ಸಾಧ್ಯವಾಗಿದೆ. ಹಾಗಾಗಿ ಇತರೆಡೆಗಳಲ್ಲಿಯೂ ಇದನ್ನು ಪುನರಾವರ್ತಿಸುವುದು ಸುಲಭವಲ್ಲ. ಇಲ್ಲಿ ಪ್ರಗತಿ ಸಾಧ್ಯವಾಗಿದ್ದರೂ ಭದ್ರತೆಯ ಅಪಾಯ ಮತ್ತು ಬಡತನ ಈಗಲೂ ಇದೆ.

ಮಾರಿಬ್‍ನ ಯಶಸ್ಸಿನ ಕೇಂದ್ರದಲ್ಲಿ ಇರುವ ವ್ಯಕ್ತಿ ಈ ಪ್ರಾಂತ್ಯದ ಗವರ್ನರ್, ನಮ್ಮ ಆತಿಥೇಯ ಸುಲ್ತಾನ್ ಅಲ್ ಅರದಾಹ್. ಸಶಸ್ತ್ರ ವಾಹನ ಬೆಂಗಾವಲು ಪಡೆ ಕಳುಹಿಸಿ ಅವರು ನಮ್ಮನ್ನು ವಿಮಾನ ನಿಲ್ದಾಣದಿಂದ ಬರ ಮಾಡಿಕೊಂಡಿದ್ದರು, ನಾವಿದ್ದ ಹೋಟೆಲ್‍ಗೆ ರಕ್ಷಣೆ ಒದಗಿಸಿದ್ದರು ಮತ್ತು ನಮ್ಮನ್ನು ಪಟ್ಟಣದಲ್ಲಿ ಸುತ್ತಾಡಿಸಿದ್ದರು.  ಪಟ್ಟಣದ ಅಭಿವೃದ್ಧಿಯನ್ನು ತೋರಿಸುವುದರ ಜತೆಗೆ ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳುವುದು ಅವರ ಸ್ಪಷ್ಟ ಉದ್ದೇಶವಾಗಿತ್ತು. ಈ ಉದ್ದೇಶ ಈಡೇರಿತು ಕೂಡ. ನಮ್ಮ ಭೇಟಿಯ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಯೆಮನ್‍ನ ಅಧ್ಯಕ್ಷ ಮತ್ತು ಪ್ರಧಾನಿಯವರು ಅರದಾಹ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದಾರೆ.

ಮಾರಿಬ್‍ನ ಪ್ರಗತಿ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಕೆಲವೇ ವರ್ಷಗಳ ಹಿಂದಿನವರೆಗೆ ಈ ಪ್ರದೇಶದಲ್ಲಿ ಕೆಲವೇ ಕೆಲವು ಟಾರು ರಸ್ತೆಗಳು ಇದ್ದವು. ಬುಡಕಟ್ಟುಗಳ ನಡುವೆ ಸಂಘರ್ಷ ಸಾಮಾನ್ಯವಾಗಿತ್ತು. ಅಲ್ ಕೈದಾದ ಯೆಮನ್ ಘಟಕ ಈ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ಅಮೆರಿಕದ ಡ್ರೋನ್ ದಾಳಿಗಳು ಜನರನ್ನು ಉಗ್ರರು ಎಂದು ಭಾವಿಸಿ ಕೊಲ್ಲವುದು ದಿನವೂ ನಡೆಯುತ್ತಿತ್ತು.

ಅಲ್ ಕೈದಾ ಸಂಘಟನೆಗೆ ಆರ್ಥಿಕ ಮತ್ತು ಇತರ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಅರದಾಹ್ ಸಹೋದರ ಖಾಲಿದ್ ಮೇಲೆ ಅಮೆರಿಕವು ಮೇ ತಿಂಗಳಲ್ಲಿ ನಿಷೇಧ ಹೇರಿತು. ಈ ಆರೋಪವನ್ನು ನಿರಾಕರಿಸುವ ಅರದಾಹ್, ಇದು ರಾಜಕೀಯ ವಿರೋಧಿಗಳ ಅಪಪ್ರಚಾರ ಎಂದು ಹೇಳುತ್ತಾರೆ.

ಜನಪ್ರಿಯ ಬುಡಕಟ್ಟು ನಾಯಕ ಮತ್ತು ಚತುರ ರಾಜಕಾರಣಿ ಅರದಾಹ್ 2012ರಲ್ಲಿ ಈ ಪ್ರದೇಶದ ಗವರ್ನರ್ ಆದರು. ಆಗ ದೇಶ ರಾಜಕೀಯ ಬಿಕ್ಕಟ್ಟಿನತ್ತ ಸಾಗುತ್ತಿತ್ತು. ರಾಜಧಾನಿ ಸನಾ ನಗರವನ್ನು ವಶಪಡಿಸಿಕೊಂಡಿದ್ದ ಹುಥಿ ಬಂಡುಕೋರರು ಕೆಲ ವರ್ಷಗಳ ಬಳಿಕ ಮಾರಿಬ್ ಪಟ್ಟಣದ ಮೇಲೆಯೂ ದಾಳಿ ನಡೆಸಿದರು. ಸ್ಥಳೀಯ ಯೋಧರು ಮತ್ತು ಸೌದಿ ಅರೇಬಿಯಾ ಹಾಗೂ ಅದರ ಮಿತ್ರ ದೇಶಗಳ ವಾಯುದಾಳಿಯಿಂದಾಗಿ ಹಿಮ್ಮೆಟ್ಟುವ ತನಕ ಅವರು ಪಟ್ಟಣವನ್ನು ಸುತ್ತುವರಿದಿದ್ದರು.

‘ಈ ದಾಳಿಯನ್ನು ಎದುರಿಸುವುದು ಮಾರಿಬ್‍ನ ವಿಧಿಯಾಗಿತ್ತು. ಒಂದೆಡೆ ಈ ಅಪಾಯವನ್ನು ಎದುರಿಸುತ್ತಲೇ ಮತ್ತೊಂದೆಡೆ ನಾವು ಪಟ್ಟಣವನ್ನು ಕಟ್ಟುವುದನ್ನು ಮುಂದುವರಿಸಿದೆವು’ ಎಂದು ಅರದಾಹ್ ವಿವರಿಸುತ್ತಾರೆ. ಯುದ್ಧ ಕೊನೆಗೊಳಿಸುವ ಮಾತುಕತೆ ಯಾವುದೇ ಫಲ ಕೊಡದೆ ಮುರಿದುಬಿತ್ತು. ಬಳಿಕ ಅರದಾಹ್ ತಮ್ಮ ಗಮನವನ್ನು ಈ ಪ್ರದೇಶಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಅವರಿಗೆ ಕೆಲವು ಅನುಕೂಲಗಳೂ ಇವೆ. ಯೆಮನ್‍ನ ಬಹುಪಾಲು ತೈಲ ಮತ್ತು ಅನಿಲ ಉತ್ಪಾದನೆ ಮಾರಿಬ್‍ನಲ್ಲಿಯೇ ನಡೆಯುತ್ತದೆ. ಇದರ ಶೇ 20ರಷ್ಟನ್ನು ಅರದಾಹ್ ಸರ್ಕಾರ ತೆರಿಗೆ ರೂಪದಲ್ಲಿ ಸಂಗ್ರಹಿಸುತ್ತದೆ. ಇದು ಸಂಬಳ ನೀಡಲು ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ.

ಈಗ ಪಟ್ಟಣದಲ್ಲಿ ರಸ್ತೆಗಳಿವೆ, ಫುಟ್‍ಬಾಲ್ ಕ್ರೀಡಾಂಗಣವೊಂದನ್ನು ನಿರ್ಮಿಸಲಾಗುತ್ತಿದೆ. ಇದರ ನೆಲಹಾಸನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಅರದಾಹ್ ಅವರ ಹೊಸ ಯೋಜನೆ. ಅರದಾಹ್ ಸೇರಿ ಮಾರಿಬ್‍ನ ಬುಡಕಟ್ಟು ಮುಖಂಡರ ಜತೆ ಸೌದಿ ಅರೇಬಿಯಾ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿದೆ. ಇದು ಹುಥಿ ಬಂಡುಕೋರರ ಮೇಲೆ ವಾಯು ದಾಳಿ ನಡೆಸುವುದು ಮತ್ತು ಮಾರಿಬ್‍ನಲ್ಲಿ ಸೇನಾ ನೆಲೆಯೊಂದನ್ನು ಸ್ಥಾಪಿಸುವವರೆಗೆ ಮುಂದುವರಿದಿದೆ.

ಮಾರಿಬ್‍ನಲ್ಲಿ ಇರುವುದು ಸುರಕ್ಷಿತ ಎಂಬ ಭಾವ ಯೆಮನ್‍ನ ಇತರ ಭಾಗಗಳ ಜನರನ್ನು ಇಲ್ಲಿಗೆ ಆಕರ್ಷಿಸುತ್ತಿದೆ. ಹಾಗಾಗಿ ಇಲ್ಲಿನ ಜನಸಂಖ್ಯೆ ಹೆಚ್ಚುತ್ತಲೇ ಇದೆ. ನಿಖರವಾದ ಅಂಕಿ ಅಂಶಗಳನ್ನು ಪಡೆಯುವುದು ಕಷ್ಟ. ಆದರೂ ವಿಶ್ವಸಂಸ್ಥೆಯ ಮಾಹಿತಿ ಪ್ರಕಾರ ಯೆಮನ್‍ನ ಇತರೆಡೆಗಳಿಂದ ವಲಸೆ ಬಂದ 73 ಸಾವಿರ ಜನರು ಮಾರಿಬ್‍ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಮಾರಿಬ್‍ನಲ್ಲಿ ಮೊದಲು ಇದ್ದ ಜನರ ಸಂಖ್ಯೆ 3.4 ಲಕ್ಷ. ನಿರಾಶ್ರಿತರ ಸಂಖ್ಯೆ ವಿಶ್ವಸಂಸ್ಥೆಯ ಅಂದಾಜಿಗಿಂತಲೂ ಬಹಳ ಹೆಚ್ಚು ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ.

ಭದ್ರತೆಯ ಕಾರಣದಿಂದಾಗಿ ಮುಕ್ತವಾಗಿ ತಿರುಗಾಡುವುದಕ್ಕೆ ನಮಗೆ ಸಾಧ್ಯವಿರಲಿಲ್ಲ. ಹಾಗಿದ್ದರೂ ಗವರ್ನರ್ ಕಡೆಯ ಜನರು ನಮ್ಮನ್ನು ಕರೆದೊಯ್ದಾಗ ಇನ್ನೂ ಪೂರ್ಣವಾಗದ ಕಟ್ಟಡಗಳಲ್ಲಿ ಕಿಟಕಿ, ಬಾಗಿಲುಗಳಿಗೆ ಪ್ಲಾಸ್ಟಿಕ್ ಹಾಳೆಗಳು ಮತ್ತು ಕಾರ್ಡ್‍ಬೋಡ್ ಇರಿಸಿ ನಿರಾಶ್ರಿತ ಜನರು ಆಶ್ರಯ ಪಡೆದಿರುವುದನ್ನು ನಾನು ಕಂಡಿದ್ದೇನೆ.

ದಂತಕತೆಯಾಗಿದ್ದ ರಾಣಿ ಶೇಬಾಳಿಗೆ ಸಂಬಂಧಿಸಿದ ಸ್ಥಳೀಯ ಚಾರಿತ್ರಿಕ ತಾಣಗಳನ್ನು ನಿರ್ಲಕ್ಷಿಸಲಾಗಿದ್ದು ಅಲ್ಲೆಲ್ಲ ಕಸ ತುಂಬಿ ಹೋಗಿದೆ. ಹಿಂಸಾಚಾರದಿಂದಾಗಿ ಪ್ರವಾಸಿಗರು ಈ ಕಡೆ ಬಾರದೆ ವರ್ಷಗಳೇ ಆಗಿವೆ ಮತ್ತು ಸದ್ಯಕ್ಕೆ ಯಾರೂ ಬರುವ ಲಕ್ಷಣವೂ ಇಲ್ಲ.

ಗವರ್ನರ್ ಕಚೇರಿ ಸಮೀಪದ ದೊಡ್ಡ ಡೇರೆಯಲ್ಲಿ ಸಾಂಸ್ಕೃತಿಕ ಸಂಜೆಯೊಂದನ್ನು ಆಯೋಜಿಸಲಾಗಿತ್ತು. ಸಂಗೀತಕ್ಕೆ ತಕ್ಕಂತೆ ನರ್ತಕರು ಮರಳಿನ ಮೇಲೆ ಹೆಜ್ಜೆ ಹಾಕಿದರು. ಕೆಂಚು ಕೂದಲಿನ ವ್ಯಕ್ತಿಯೊಬ್ಬ ವಿಷಾದದ ಧ್ವನಿಯಲ್ಲಿ ‘ಚಿನ್ನ ಕಳೆದುಕೊಂಡವರು ಅದನ್ನು ಆಭರಣದ ಅಂಗಡಿಯಲ್ಲಿ ಪತ್ತೆ ಮಾಡಬಹುದು, ಆದರೆ ತಾಯ್ನಾಡನ್ನು ಕಳೆದುಕೊಂಡರೆ ಅದನ್ನು ಎಲ್ಲಿಯೂ ಪತ್ತೆ ಮಾಡಲಾಗದು’ ಎಂದು ಹಾಡಿದ.

‘ಯೆಮನ್‍ನ ಎಲ್ಲ ಜನರಿಗೆ ಮಾರಿಬ್ ಆಶ್ರಯತಾಣವಾಗಿದೆ’ ಎಂದು ಹೇಳಿದವರು ಮಾಧ್ಯಮ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಖಾಲಿಕ್. ತಮ್ಮ ಪಟ್ಟಣವನ್ನು ಹುಥಿ ಬಂಡುಕೋರರು ವಶಕ್ಕೆ ಪಡೆದ ಬಳಿಕ ಅವರು ಮಾರಿಬ್‍ಗೆ ಓಡಿ ಬಂದು ಇಲ್ಲಿನ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ.

ಸಂಘರ್ಷದಿಂದಾಗಿ ವಿಶ್ವವಿದ್ಯಾಲಯವನ್ನು ಮುಚ್ಚಲಾಗಿತ್ತು, ಕಳೆದ ವರ್ಷ 2,700 ವಿದ್ಯಾರ್ಥಿಗಳೊಂದಿಗೆ ಪುನರಾರಂಭಿಸಲಾಯಿತು. ಈಗ ಇಲ್ಲಿ 5,000 ವಿದ್ಯಾರ್ಥಿಗಳಿದ್ದಾರೆ. ಟಿನ್ ಬಳಸಿ ಹೊಸ ತರಗತಿ ಕೋಣೆಗಳನ್ನು ಕಟ್ಟಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಅಲ್ಲಿನ ಆಡಳಿತ ನೋಡಿಕೊಳ್ಳುತ್ತಿರುವವರು ಹೇಳಿದರು.

ಸ್ಥಳೀಯರೊಂದಿಗೆ ಚೆನ್ನಾಗಿ ಬೆರೆತಿದ್ದೇವೆ ಎಂದು ಬೇರೆ ಬೇರೆ ಸ್ಥಳಗಳಿಂದ ವಲಸೆ ಬಂದ ವಿದ್ಯಾರ್ಥಿಗಳು ಹೇಳಿದರು. ಭೌತವಿಜ್ಞಾನ ಕಲಿಯುತ್ತಿರುವ ಇಬ್ಬರು ಬುರ್ಖಾಧಾರಿ ಯುವತಿಯರನ್ನೂ ಭೇಟಿಯಾದೆ. ಅವರಲ್ಲೊಬ್ಬಳು ರಸ್ಮಿಯಾ ಮಟ್‍ಕೂರ್. ಹುಥಿ ಬಂಡುಕೋರರ ದಮನಕ್ಕೆ ಸೌದಿ ಅರೇಬಿಯಾ ನಡೆಸುತ್ತಿರುವ ವಾಯುದಾಳಿಯಲ್ಲಿ ತಾವು ಸತ್ತು ಹೋಗಬಹುದು ಎಂಬ ಭಯದಿಂದ ತನ್ನ ಹೆತ್ತವರು ಇಲ್ಲಿಗೆ ಓಡಿ ಬಂದರು ಎಂದು ರಸ್ಮಿಯಾ ತಿಳಿಸಿದಳು. ಆಕೆಯ ಗೆಳತಿ ಶೀಮಾ ಮೊಹ್ಸಿನ್ ಮಾರಿಬ್‍ನವಳೇ. ಹೊಸ ರೆಸ್ಟೊರೆಂಟ್‍ಗಳು, ಒಳ್ಳೆಯ ರಸ್ತೆಗಳು, ಮಕ್ಕಳಿಗಾಗಿ ಉದ್ಯಾನಗಳು- ಮಾರಿಬ್ ಬದಲಾದ ಬಗೆಗೆ ಶೀಮಾ ಆಶ್ಚರ್ಯ ವ್ಯಕ್ತಪಡಿಸಿದಳು.

ಯುದ್ಧ ಮುಗಿದಿಲ್ಲ. ನಾವು ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ದಿನ ಹುಥಿಗಳು ಹಾರಿಸಿದ್ದು ಎಂದು ಹೇಳಲಾದ ರಾಕೆಟ್ ಬಯಲು ಪ್ರದೇಶದಲ್ಲಿ ಬಂದು ಬಿತ್ತು. ಇನ್ನೊಂದೆಡೆ ನಡೆದ ಸ್ಫೋಟದಲ್ಲಿ ಬಾಲಕನೊಬ್ಬ ಬಲಿಯಾಗಿದ್ದ. ನಾವು ಅಲ್ಲಿ ತಲುಪಿದ ಮೊದಲ ರಾತ್ರಿ ಅಲ್ ಕೈದಾ ಉಗ್ರರು ಎಂದು ಹೇಳಲಾದ ನಾಲ್ವರು ಡ್ರೋನ್ ದಾಳಿಯಲ್ಲಿ ಸತ್ತು ಹೋದರು. ಇದು ಅಮೆರಿಕದ ದಾಳಿ ಆಗಿರಬಹುದು ಎಂದು ಸ್ಥಳೀಯರು ಹೇಳಿದರು.

ಪಟ್ಟಣದ ಒಂದು ಮೂಲೆಯಲ್ಲಿ ಹುತಾತ್ಮರ ಸಮಾಧಿ ಸ್ಥಳ ಇದೆ. ಮರಳಿನ ಸಮಾಧಿಗಳು ಮತ್ತು ಅದರ ಮೇಲೆ ಹೂತಿರುವ ಕಲ್ಲುಗಳು ಕಣ್ಣೋಟದ ಕೊನೆಯವರೆಗೂ ಸಾಗಿವೆ. ಕೆಲವು ವರ್ಷಗಳ ಹಿಂದೆ ಇದು ಇರಲಿಲ್ಲ. ಆದರೆ ಈಗ ಸಾವಿರಾರು ಗಂಡಸರು, ಹೆಂಗಸರು ಮತ್ತು ಮಕ್ಕಳ ಮೃತದೇಹಗಳನ್ನು ತನ್ನೊಳಗೆ ಇರಿಸಿಕೊಂಡಿದೆ.

ಮಾರಿಬ್‍ನ ಜನರಲ್ ಆಸ್ಪತ್ರೆಯಲ್ಲಿರುವ ರೋಗಿಗಳಲ್ಲಿ ಹೆಚ್ಚಿನವರು ಯುದ್ಧ ಸಂತ್ರಸ್ತರು. ನೆಲಬಾಂಬ್‍ಗಳಿಂದ ಕಾಲು ಕಳೆದುಕೊಂಡವರಿಗೆ ಜೋಡಿಸುವುದಕ್ಕಾಗಿ ಕೃತಕ ಕಾಲು ತಯಾರಿಸುವ ಕೇಂದ್ರವೊಂದು ಇಲ್ಲಿ ಇದೆ. ಗಾಯಗೊಂಡ ಯೋಧರು ಆಸ್ಪತ್ರೆಯಲ್ಲಿ ತುಂಬಿ ಹೋಗಿದ್ದು ಮಕ್ಕಳ ಚಿಕಿತ್ಸಾ ವಾರ್ಡ್‍ನಲ್ಲಿಯೂ ಗಾಯಗೊಂಡ ಯುವಕರೇ ಇದ್ದಾರೆ. ಒಂದು ಕೋಣೆಯಲ್ಲಿ ಆರು ರೋಗಿಗಳು ಇದ್ದಾರೆ. ಒಬ್ಬ ವ್ಯಕ್ತಿಯ ದೇಹವಿಡೀ ಬ್ಯಾಂಡೇಜ್ ಸುತ್ತಿದ್ದು ಆತ ಅಳುತ್ತಿದ್ದಾನೆ. ‘ಸೇನಾ ನೆಲೆ ಪ್ರವೇಶಿಸಿದ ಆತನ ಕಾರನ್ನು ಸ್ಫೋಟಿಸಲಾಗಿತ್ತು’ ಎಂದು ಅಲ್ಲಿದ್ದ ದಾದಿಯರು ಹೇಳಿದರು. ಮತ್ತೊಬ್ಬನ ತೋಳು ಮುರಿದಿದೆ, ತೋಳಿನಲ್ಲಿ ಗುಂಡಿನ ತೂತು ಇದೆ. ಇನ್ನೊಬ್ಬನ ಹೊಟ್ಟೆಗೆ ಸ್ನೈಪರ್ ಬಂದೂಕಿನಿಂದ ಗುಂಡು ಹಾರಿಸಲಾಗಿದೆ.

ಮತ್ತೊಂದು ಕೊಠಡಿಯಲ್ಲಿದ್ದ ಆರು ಮಂದಿಯಲ್ಲಿ ಒಬ್ಬ 20 ವರ್ಷದ ಯೋಧ ಖಲೀಲ್ ಅಲ್ ಕುವಾಲ್. ಈತ ನೆಲಬಾಂಬಿನ ಮೇಲೆ ಕಾಲಿಟ್ಟು ಎಡಗಾಲು ಕಳೆದುಕೊಂಡಿದ್ದರೆ ಮತ್ತೊಂದು ಕಾಲು ತುಂಬಾ ನೆಲಬಾಂಬ್‍ನಿಂದ ಸಿಡಿದ ಚೂಪು ವಸ್ತುಗಳು ತೂತು ಕೊರೆದಿವೆ. ‘ನನಗೊಂದು ಕೃತಕ ಕಾಲು ದೊರೆತರೆ ಮತ್ತೆ ಯುದ್ಧರಂಗಕ್ಕೆ ಹೋಗುತ್ತೇನೆ’ ಎಂದು ಆತ ಹೇಳಿದ.

ಯುದ್ಧವನ್ನು ಕೊನೆಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ, ‘ದೇವರ ಬಳಿ ಮಾತ್ರ ಇದಕ್ಕೆ ಪರಿಹಾರ ಇದೆ’ ಅಂದ.

ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪಿಸಲು ಶ್ರಮಿಸುತ್ತಿದ್ದರೂ ಹಲವು ಸಮಸ್ಯೆಗಳು ಇವೆ ಎಂದು ಗವರ್ನರ್ ಅರದಾಹ್ ಹೇಳಿದರು.

ತನ್ನ ಗಂಡ ಮೊಹ್ಸಿನ್ ಅಲ್ ಅವಾದಿಯನ್ನು ಆತನ ಮೊಬೈಲ್ ಅಂಗಡಿಯಿಂದ ಯೋಧರು ಎಳೆದುಕೊಂಡು ಹೋಗಿದ್ದಾರೆ ಎಂದು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಸೊಮಯ ಸನೀ ಹೇಳಿದರು. ಆತನ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ಪ್ರಕಟವಾದ ಹೇಳಿಕೆಯಲ್ಲಿ ಸ್ಥಳೀಯ ರಾಜಕೀಯ ಮುಖಂಡನನ್ನು ಟೀಕಿಸಲಾಗಿತ್ತು ಎಂಬುದು ಆತನ ಮೇಲೆ ಇರುವ ಆರೋಪ. ಆ ಬಳಿಕ ಸನೀ ಮತ್ತು ಆಕೆಯ ಪುಟ್ಟ ಮಗು ಆತನನ್ನು ಕಂಡಿಲ್ಲ.

‘ವ್ಯಕ್ತಿಯೊಬ್ಬ ಅಪರಾಧಿಯಾಗಿದ್ದರೂ ಆತನನ್ನು ಎಲ್ಲಿಯೋ ಇರಿಸಿ ಕುಟುಂಬದ ಸದಸ್ಯರಿಗೆ ಯಾವುದೇ ಮಾಹಿತಿ ನೀಡದಿರುವುದು ಸರಿಯಲ್ಲ’ ಎಂಬುದು ಸನೀಯ ನೋವಿನ ನುಡಿ. ಈ ಪ್ರಾಂತ್ಯದ ಭದ್ರತಾ ಮುಖ್ಯಸ್ಥನನ್ನಾಗಿ ಹೊಸ ವ್ಯಕ್ತಿಯನ್ನು ನೇಮಿಸಿದ್ದನ್ನು ಪ್ರತಿಭಟಿಸಿದ್ದಕ್ಕೆ ತಾನು ಮತ್ತು ತನ್ನ ಸಹೋದ್ಯೋಗಿಗಳ ಮೇಲೆ ಭದ್ರತಾ ಪಡೆಗಳು ಹಲ್ಲೆ ನಡೆಸಿದ್ದವು ಎಂದು ಸ್ಥಳೀಯ ಯುವಕರ ಸಂಘದ ಮುಖ್ಯಸ್ಥ ಖಾಲಿದ್ ಬಗಲನ್ ತಿಳಿಸಿದ್ದಾರೆ. ಸಹೋದ್ಯೋಗಿಗಳಲ್ಲಿ ಒಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದರೆ ಇತರ ಮೂವರನ್ನು ಇನ್ನೂ ಬಿಟ್ಟಿಲ್ಲ ಎಂದು ಖಾಲಿದ್ ಹೇಳಿದರು.

ಯೆಮನ್‍ನ ಇತರ ಭಾಗಗಳಿಗೆ ಹೋಲಿಸಿದರೆ ಇಂತಹ ಘಟನೆಗಳು ಮಾರಿಬ್‍ನಲ್ಲಿ ಕಡಿಮೆ. ಆದರೆ ರಾಜಕೀಯ ಕಾರಣಗಳಿಗಾಗಿಯೇ ಜನರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿರುವ ಹತ್ತಕ್ಕೂ ಹೆಚ್ಚು ಪ್ರಕರಣಗಳು ತಮಗೆ ಗೊತ್ತು ಎಂದು ಮಾನವ ಹಕ್ಕು ಕಾರ್ಯಕರ್ತ ಸದಮ್ಅಲ್ ಅದ್ವಾರ್ ಹೇಳಿದರು. ‘ರಾಜಕೀಯ ಪ್ರಕರಣಗಳು ನ್ಯಾಯಾಲಯದ ವರೆಗೆ ತಲುಪುವುದೇ ಇಲ್ಲ’ ಎಂದು ಅವರು ತಮ್ಮ ಅನುಭವ ತಿಳಿಸಿದರು.

ಇಷ್ಟೆಲ್ಲಾ ಇದ್ದರೂ ಪಟ್ಟಣದ ಅಭಿವೃದ್ಧಿ ಜನರನ್ನು ಸೆಳೆಯುತ್ತಿದೆ, ಮಾರಿಬ್ ಬಿಟ್ಟು ಹೋಗಿದ್ದವರೂ ಮರಳುತ್ತಿದ್ದಾರೆ. ಮೂಲಭೂತ ಭದ್ರತೆ ಒದಗಿಸಿದರೆ ಯೆಮನ್‍ನ ಅಭಿವೃದ್ಧಿಯ ಸಾಧ್ಯತೆಯನ್ನು ಮಾರಿಬ್‍ನ ನಿದರ್ಶನ ಎತ್ತಿ ತೋರಿಸುತ್ತಿದೆ.

ಪರ್ಷಿಯಾ ಕೊಲ್ಲಿ ಪ್ರದೇಶದ ಉದ್ದಕ್ಕೂ ವ್ಯಾಪಾರಗಳನ್ನು ಹೊಂದಿದ್ದ ದೊಡ್ಡ ವ್ಯಾಪಾರಿ ಕುಟುಂಬವೊಂದು ಯೆಮನ್‍ನಲ್ಲಿ 2011ರಲ್ಲಿ ಸಂಘರ್ಷ ತೀವ್ರಗೊಂಡಾಗ ಈ ದೇಶದಲ್ಲಿದ್ದ ವ್ಯಾಪಾರವನ್ನು ಮುಚ್ಚಿ ದೇಶ ಬಿಟ್ಟು ಹೋಗಿತ್ತು ಎಂದು ಈ ವ್ಯಾಪಾರ ಸಮೂಹದ ವ್ಯವಸ್ಥಾಪಕ ಮೊಹಮ್ಮದ್ ಜುಬಾಯೀನ್ ಹೇಳಿದರು. ಈಗ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಸುಮಾರು ಐದು ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಯೊಂದಿಗೆ ಅವರು ಮರಳಿದ್ದಾರೆ.

ಇದೇ ಕುಟುಂಬ 2006ರಲ್ಲಿ ಆರಂಭಿಸಿದ್ದ ಮಾಲ್, ಮುಚ್ಚುವ ಹಂತಕ್ಕೆ ಬಂದಿತ್ತು. ಬಹುಕಾಲದಿಂದ ಖಾಲಿ ಬಿದ್ದಿದ್ದ 104 ಅಂಗಡಿಗಳು ಈಗ ತೆರೆದಿವೆ.

ಹಾಗಾಗಿ ಅವರು ಇನ್ನಷ್ಟು ಮಾಲ್‌ಗಳನ್ನು ಕಟ್ಟುವ ಉತ್ಸಾಹವನ್ನೂ ಹೊಂದಿದ್ದಾರೆ. ‘ಮಾರಿಬ್‍ನಲ್ಲಿ ಮಾಲ್‍ಗಳಿಗೆ ಭವಿಷ್ಯವಿದೆ’ ಎಂಬುದು ಜುಬಾಯೀನ್‍ನ ಆಶಾವಾದ.

ದಿ ನ್ಯೂಯಾರ್ಕ್ ಟೈಮ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry