7

ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ

Published:
Updated:
ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ

ಯಾದಗಿರಿ: ‘ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಇಬ್ಬರೂ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು’ ಎಂದು ಸಿಪಿಐ ಮೌನೇಶ್ವರ ಪಾಟೀಲ ಹೇಳಿದರು. ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸರು ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್‌ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈಶಾನ್ಯ ವಲಯ ಕಲಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ನ.24ರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಐಜಿಪಿ ಅಲೋಕ್ ಕುಮಾರ್ ನಿರ್ಧರಿಸಿದ್ದಾರೆ. ಬೈಕ್ ಸವಾರರು ಹೆಲ್ಮೆಟ್ ಧರಿಸಲೇಬೇಕು. ಭಾರಿ ಚಕ್ರದ ವಾಹನ ಚಾಲಕರು ಬೆಲ್ಟ್ ಧರಿಸಿಕೊಂಡು ಚಾಲನೆ ಮಾಡಬೇಕು. ಆಟೊ ಡ್ರೈವರ್‌ಗಳು ಸಮವಸ್ತ್ರ ಧರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಇನ್ನು ಮುಂದೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದರೆ ಕಾನೂನಿನ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ವಾಹನ ಸವಾರರ ಬಳಿ ವಾಹನ ಚಾಲನೆ ಪರವಾನಗಿ, ವಾಹನ ನೋಂದಣಿ ದಾಖಲೆ, ವಿಮೆ ಇತ್ಯಾದಿಗಳ ನಕಲು ಪ್ರತಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಇದು ಕೇವಲ ನಗರಕ್ಕೆ ಮಾತ್ರವಲ್ಲ ಎಲ್ಲಾ ತಾಲ್ಲೂಕಿನಲ್ಲಿಯೂ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಯಾವುದೇ ಕಾರಣಕ್ಕೂ ಕುಂಟು ನೆಪಗಳಿಗೆ ಅವಕಾಶ ನೀಡಲಾಗದು’ ಎಂದು ತಿಳಿಸಿದರು.

ನಗರ ಠಾಣೆ ಪಿಎಸ್ಐ ಮಹಾಂತೇಶ ಸಜ್ಜನ್ ಮಾತನಾಡಿ, ‘ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಇಲಾಖೆ ಜಾರಿಗೊಳಿಸಿರುವ ಕಾನೂನುಗಳನ್ನು ಸಾರ್ವಜನಿಕರು ಪರಿಪಾಲನೆ ಮಾಡಿಕೊಂಡು ಇಲಾಖೆಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ರಸ್ತೆ ಸುರಕ್ಷತಾ ಅಭಿಯಾನದ ಕುರಿತು ನಡೆದ ಬೈಕ್‌ ರ‍್ಯಾಲಿ ಸುಭಾಶ್ಚಂದ್ರ ಬೋಸ್‌ ವೃತ್ತದ ಮಾರ್ಗದಿಂದ ಕನಕ ವೃತ್ತ, ಗಾಂಧಿ ವೃತ್ತ, ಗಂಜ್‌ ವೃತ, ಸ್ಟೇಷನ್ ರಸ್ತೆ ಮಾರ್ಗವಾಗಿ ಸುಭಾಶ್ಚಂದ್ರ ವೃತ್ತ ತಲುಪಿತು. ಅಭಿಯಾನದಲ್ಲಿ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಹರಿಬಾ ಜಮಾದಾರ, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು

* * 

ರಸ್ತೆ ಅಪಘಾತಗಳು ದಿನೇದಿನೇ ಹೆಚ್ಚುತ್ತಿದ್ದು, ರಸ್ತೆ ನಿಯಮಗಳ ಪರಿಪಾಲನೆಯಿಂದ ದುರ್ಘಟನೆಗಳನ್ನು ನಿಯಂತ್ರಿಸಬಹುದು. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು.

ಮೌನೇಶ್ವರ ಪಾಟೀಲ

ಸಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry