ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ವಿರೋಧಿ ಧರ್ಮಸಂಸತ್ತು: ದ್ವಾರಕಾನಾಥ್

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನದ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದರೆ, ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ವಿರುದ್ಧ ತಂತ್ರ ನಡೆದಿದೆ’ ಎಂದು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕಾನಾಥ್‌ ಆತಂಕ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ‘ಸಾಮಾಜಿಕ ನ್ಯಾಯ: ಕನ್ನಡ ಪರಂಪರೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯ ಪರಂಪರೆಗೆ ರಾಜ್ಯದಲ್ಲಿ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಶೋಷಿತರಿಗೆ ಮೀಸಲಾತಿ ನೀಡುವ ಪರಿಕಲ್ಪನೆ ಅದರಲ್ಲಿ ಪ್ರಧಾನವಾದುದು. ಮೀಸಲಾತಿಯನ್ನು ವಿರೋಧಿಸುವ ಮನಸುಗಳನ್ನು ಪ್ರಜಾಪ್ರಭುತ್ವ ವಿರೋಧಿಗಳೆಂದೇ ವ್ಯಾಖ್ಯಾನಿಸಬೇಕು. ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಂತಹ ಮನಸಿನವರು ಎಂದು ಟೀಕಿಸಿದರು.

‘ಸಂವಿಧಾನವನ್ನು ಬದಲಾಯಿಸಬೇಕು ಎಂದು ವಿಶ್ವೇಶತೀರ್ಥರು ಹೇಳಿದ್ದಾರೆ. ಅವರ ಮಾತಿನಲ್ಲಿ ಸಂವಿಧಾನದ ಯಾವ ಭಾಗವನ್ನು ಬದಲಿಸಬೇಕು ಎಂಬುದು ಸ್ಪಷ್ಟವಾಗಿಲ್ಲ. ಧರ್ಮಸಂಸತ್ತಿನ ತಿರುಳನ್ನು ಗಮನಿಸಿದರೆ ಸಂವಿಧಾನ ವಿರೋಧಿಯಾದ ಚಿಂತನೆ ಕಾಣುತ್ತದೆ. ಅದಕ್ಕೆ ವಿಶ್ವೇಶತೀರ್ಥರೇ ನಾಯಕರು ಎನ್ನುವುದು ಸ್ಪಷ್ಟವಾಗುತ್ತಿದೆ’ ಎಂದು ಅವರು ವಿಶ್ಲೇಷಿಸಿದರು.

‘ಸಾಮಾಜಿಕ ನ್ಯಾಯ ಪರಂಪರೆ ರಾಜ್ಯದಲ್ಲಿ ಮೊದಲು ಆರಂಭವಾಗಿದ್ದು ಟಿಪ್ಪುವಿನ ಕಾಲದಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ದೇವರಾಜ ಅರಸು ಆ ಪರಂಪರೆಯನ್ನು ಮುಂದುವರಿಸಿದರು. ಟಿಪ್ಪುವಿನ ಕಾಲದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ದಲಿತರಿಗೆ ಭೂಮಿ ಸಿಕ್ಕಿತು. ಪುರೋಹಿತಶಾಹಿಯಿಂದ ಒಕ್ಕಲಿಗರು, ಕುರುಬರು, ಬೇಡರಿಗೆ ಭೂಮಿ ಮರಳಿ ಸಿಕ್ಕಿತು. ಸಾಮಾಜಿಕ ನ್ಯಾಯ ವಿರೋಧಿಸುವವರು ಟಿಪ್ಪುವನ್ನೂ ವಿರೋಧಿಸುತ್ತಾರೆ‘ ಎಂದು ವ್ಯಾಖ್ಯಾನಿಸಿದರು.

‘ಪ್ರಾಚೀನ ಹಾಗೂ ಮಧ್ಯಕಾಲೀನ ಕಾವ್ಯ ಪರಂಪರೆಯಲ್ಲಿ ಸಾಮಾಜಿಕ ನ್ಯಾಯ’ ಕುರಿತು ಮಾತನಾಡಿದ ಸಾಹಿತಿ ಕೆ.ವೈ.ನಾರಾಯಣ ಸ್ವಾಮಿ, ‘ಹಳಗನ್ನಡದಲ್ಲಿ ಸಾಮಾಜಿಕ ನ್ಯಾಯ ಪರಂಪರೆ ಪ್ರಖರವಾಗಿದೆ. ಜಾತಿ ಪದ್ಧತಿಯನ್ನು ಮೊದಲು ವಿರೋಧಿಸಿದ್ದು ಪಂಪ; ಅವನ ನಂತರ ವಚನಗಳಲ್ಲಿ ಜಾತಿಯ ವಿರುದ್ಧ ಚಳವಳಿ ನಡೆಯಿತು. ಪಂಪ ಭಾರತದಲ್ಲಿ ಯುದ್ಧದ ವಿರುದ್ಧ ಧ್ವನಿ ಎದ್ದಿತು. ರನ್ನನ ಗದಾಯುದ್ಧದಲ್ಲೂ ಇದು ಮುಂದುವರಿಯಿತು. ಕನ್ನಡ ಸಾಹಿತ್ಯ ಪರಂಪರೆಯನ್ನು ಓದಿದರೆ ಸಾಮಾಜಿಕ ನ್ಯಾಯದ ದಾರಿ ಕಾಣುತ್ತದೆ’ ಎಂದರು.

‘ಕನ್ನಡ ಮೌಖಿಕ ಪರಂಪರೆಯಲ್ಲಿ ಸಾಮಾಜಿಕ ನ್ಯಾಯದ ನಿರೂಪಣೆ’ ಕುರಿತು ಮಾತನಾಡಿದ ಮಳಲಿ ವಸಂತಕುಮಾರ್, ಮೌಖಿಕ ಕಾವ್ಯ ಜನಜೀವನಕ್ಕೆ ಹತ್ತಿರ; ಶಿಷ್ಟ ಕಾವ್ಯ ಗಾಳಿಗೋಪುರವಿದ್ದಂತೆ. ಮಲೆ ಮಹದೇಶ್ವರ, ಸಿದ್ದಪ್ಪಾಜಿ ಕಾವ್ಯಗಳಲ್ಲಿ ಜನಪರವಾಗಿ ಹೋರಾಡಿದ ಸ್ಥಳೀಯ ನಾಯಕರ ಚಿತ್ರಣವಿದೆ. ದಾರಿತಪ್ಪಿದವರನ್ನು ಸರಿದಾರಿಗೆ ಕರೆತಂದವರ ಕಥೆ ಇಲ್ಲಿ ಸಿಗುತ್ತದೆ’ ಎಂದು ವ್ಯಾಖ್ಯಾನಿಸಿದರು.

ವಿಚಾರ ತೀವ್ರತೆಯ ಅಪಾಯ: ಎಡ ಹಾಗೂ ಬಲಪಂಥೀಯರು ತಮ್ಮ ತೀವ್ರ ವಿಚಾರಧಾರೆಯಿಂದ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಸಮಾಜಕ್ಕೆ ಯಾವುದೇ ರೀತಿಯ ನೈತಿಕ ಮಾರ್ಗವನ್ನು ಇವರು ತೋರುತ್ತಿಲ್ಲ ಎಂದು ‘ಆಧುನಿಕ ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ನ್ಯಾಯ’ ಕುರಿತು ಮಾತನಾಡಿದ ಮೊಗಳ್ಳಿ ಗಣೇಶ್ ಹೇಳಿದರು.

ಪಾಪು ಮಾತಿಗೆ ಖಂಡನೆ
ಕುವೆಂಪು ಅವರ ನಾಡಗೀತೆಯನ್ನು ಖಂಡಿಸಿರುವ ಪಾಟೀಲ ಪುಟ್ಟಪ್ಪ ಅವರನ್ನು ಖಂಡಿಸಬೇಕು ಎಂದು ಮಳಲಿ ವಸಂತಕುಮಾರ್‌ ಹೇಳಿದರು.

’ವಂದೇ ಮಾತರಂ’ ಹೇಳಿದರೆ ಮಾತ್ರ ಕಾರ್ಯಕ್ರಮದಲ್ಲಿ ಮಾತನಾಡುವುದಾಗಿ ಪಾಪು ಹೇಳಿದ್ದಾರೆ. ಈ ಹಿಂದೆ ಅವರು ಹೈದರಾಬಾದ್‌ ಕರ್ನಾಟಕವನ್ನು ರಾಜ್ಯದಿಂದ ಬೇರ್ಪಡಿಸಬೇಕು ಎಂದು ಹೇಳಿ ಅವಿವೇಕ ತೋರಿದ್ದರು. ಈಗ ಕುವೆಂಪು ಅವರ ನಾಡಗೀತೆಯನ್ನು ಖಂಡಿಸಿ ಮತ್ತೊಂದು ಅವಿವೇಕ ತೋರಿದ್ದಾರೆ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT