3

ಜಿಂಬಾಬ್ವೆ ಸಡಗರ ಅಲ್ಪಾಯುವೇ?

Published:
Updated:
ಜಿಂಬಾಬ್ವೆ ಸಡಗರ ಅಲ್ಪಾಯುವೇ?

ಸಾವಿರ ಸಾವಿರ ಜನರು ಬ್ಯಾನರುಗಳನ್ನು ಬೀಸುತ್ತಾ, ಘೋಷಣೆಗಳನ್ನು ಮೊಳಗಿಸುತ್ತಾ ಬೀದಿಗಳಲ್ಲಿ ಜಮಾಯಿಸಿದರು. ಪ್ರಜೆಗಳು ಬಹುಕಾಲದಿಂದ ಕಂಡಿದ್ದ ಕನಸು ತಮ್ಮ ತಾಯ್ನಾಡು ಜಿಂಬಾಬ್ವೆಗೆ ಇನ್ನೇನು ಕಾಲಿಡಲಿದ್ದ ಕ್ಷಣಗಳು ಅವು. ಅಲ್ಲಿ ನೆರೆದಿದ್ದವರೆಲ್ಲರ ನಾಲಿಗೆ ಮೇಲೆ ಗುನುಗುತ್ತಿದ್ದುದು ಒಂದೇ ಒಂದು ಹೆಸರು- ರಾಬರ್ಟ್ ಮುಗಾಬೆ.

ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ಕಳೆದ ಶನಿವಾರ ಮುಗಾಬೆ ಮತ್ತು ಅವರ ಪತ್ನಿ ಗ್ರೇಸ್ ಪದಚ್ಯುತಿಗೆ ಒತ್ತಾಯಿಸಿದ ಜನಸಾಗರವಲ್ಲ ಅದು. ದೇಶಾಂತರಗೊಂಡು ನೆರೆಯ ಮೊಜಾಂಬಿಕ್ ಅನ್ನು ಪ್ರಧಾನ ನೆಲೆಯಾಗಿಸಿಕೊಂಡಿದ್ದ ಮುಗಾಬೆ 1980ರ ಜನವರಿಯಲ್ಲಿ ತವರು ನಾಡಿಗೆ ಹಿಂದಿರುಗಿದ ಸಂದರ್ಭದಲ್ಲಿ ಸಡಗರದಿಂದ ನೆರೆದಿದ್ದ 1.5 ಲಕ್ಷದಷ್ಟಿದ್ದ ಜನಸ್ತೋಮ ಅದು.

ಮುಗಾಬೆ ವಾಪಸ್ಸಾಗಿದ್ದು, ಆಫ್ರಿಕಾ ಖಂಡದಲ್ಲಿ ಬ್ರಿಟಿಷರ ಕಟ್ಟಕಡೆಯ ವಸಾಹತು ನೆಲವಾದ ಜಿಂಬಾಬ್ವೆಯಲ್ಲಿ ಅಲ್ಪಸಂಖ್ಯಾತ ಶ್ವೇತವರ್ಣೀಯರ ಆಡಳಿತಾಧಿಕಾರದ ಏಳುಬೀಳಿನ ಸ್ಥಿತ್ಯಂತರದ ಆರಂಭದಲ್ಲಿ. ಆನಂತರದ ಕೆಲ ವಾರಗಳಲ್ಲಿ ಏನೆಲ್ಲಾ ಘಟನೆಗಳು ನಡೆದವು. ಮುಗಾಬೆ ಅವರು ಹತ್ಯೆ ಯತ್ನಗಳಿಂದ ಪಾರಾದರು; ಲಂಡನ್‍ನಲ್ಲಿ ಬ್ರಿಟಿಷರ ಸಮಕ್ಷಮದಲ್ಲಿ 1979ರಲ್ಲಿ ಏರ್ಪಟ್ಟ ಶಾಂತಿ ಒಪ್ಪಂದದಿಂದ ಹೊರನಡೆಯುವುದಾಗಿ ಅವರು ಬೆದರಿಕೆಯೊಡ್ಡಿದರು; 1980ರ ಏಪ್ರಿಲ್ 18ರಂದು ರಾಷ್ಟ್ರದ ಸ್ವಾತಂತ್ರ್ಯಕ್ಕೆ ಎಡೆಮಾಡಿಕೊಟ್ಟ ಚುನಾವಣೆಯಲ್ಲಿ ಅವರು ಅಭೂತಪೂರ್ವ ಜಯ ದಾಖಲಿಸಿದ್ದರು.

ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಕೆಲಸ ಮಾಡುತ್ತಿದ್ದ ನಾನು ಸರಿಯಾಗಿ ಮಧ್ಯರಾತ್ರಿಯ ಆ ಕ್ಷಣದಲ್ಲಿ, ರುಫರೊ ಕ್ರೀಡಾಂಗಣದಲ್ಲಿ ನಡೆದಿದ್ದ ಸಮಾರಂಭದ ನಡುವೆ, ‘ಜಿಂಬಾಬ್ವೆ ಉದಯ’ದ ಸುದ್ದಿಯನ್ನು ಪ್ರಕಟಿಸಲು ದೂರವಾಣಿ ಹಿಡಿದು ಸಜ್ಜಾಗಿ ನಿಂತಿದ್ದೆ. ಬ್ರಿಟಿಷ್ ರಾಜಕುಮಾರ ಚಾರ್ಲ್ಸ್‌ ಅವರು ಅಲ್ಲಿ ಪಾಲ್ಗೊಂಡಿದ್ದ ಗಣ್ಯರಲ್ಲಿ ಒಬ್ಬರಾಗಿದ್ದರು. ಅದರೊಂದಿಗೆ, 1890ರಲ್ಲಿ ಆರಂಭಗೊಂಡಿದ್ದ ವಸಾಹತು ಕಾಲಘಟ್ಟವೊಂದರ ಅಂತ್ಯವಾಗಿತ್ತು.

ಕೃಷಿ ಭೂಮಿ, ಬಂಗಾರ ಮತ್ತಿತರ ಖನಿಜ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟು ಜಿಂಬಾಬ್ವೆಗೆ ಕಾಲಿಟ್ಟ ಬ್ರಿಟಿಷರು ಆ ರಾಷ್ಟ್ರಕ್ಕೆ ಹೊಸ ಗಡಿಗಳನ್ನು ಸೃಷ್ಟಿಸಿದರು. ಅಷ್ಟೇ ಅಲ್ಲ, ಕಟ್ಟಾ ವಸಾಹತುಶಾಹಿಯಾದ ಸೆಸಿಲ್ ಜಾನ್ ರೋಡ್ಸ್ ಹೆಸರು ನೆನಪಿಸುವಂತೆ ಆ ರಾಷ್ಟ್ರಕ್ಕೆ ಹೊಸದಾಗಿ ‘ರೊಡೇಷಿಯಾ’ ಎಂದು ಮರುನಾಮಕರಣವನ್ನೂ ಮಾಡಿದರು. ಕೆಲವರಂತೂ ಜಿಂಬಾಬ್ವೆಯನ್ನು ಆಫ್ರಿಕಾದ ಎಲ್ ಡೊರಾಡೊ ಎಂದೇ ಭಾವಿಸಿ ಅಪಾರ ಸಂಪತ್ತಿನ ನಿರೀಕ್ಷೆಯಿಂದ ಅಲ್ಲಿ ನೆಲೆಯಾಗಲು ನಿರ್ಧರಿಸಿದರು.

ಜಿಂಬಾಬ್ವೆಯಲ್ಲಿ 1980ರಲ್ಲಿ ಕಂಡುಬಂದ ಸಂಭ್ರಮ, ಪುನರುಜ್ಜೀವದ ಸೆಲೆಗಳು ಮುಗಾಬೆ ಅವರ 37 ವರ್ಷಗಳ ನಿರಂತರ ಹಾಗೂ ಹೆಚ್ಚೆಚ್ಚು ನಿರಂಕುಶವಾಗುತ್ತಾ ಬಂದ ಆಡಳಿತದಲ್ಲಿ ಬತ್ತುತ್ತಾ ಹೋದವು. ಆದರೆ ಕಳೆದ ವಾರ ಮುಗಾಬೆ ಅವರ ಪದಚ್ಯುತಿಗೆ ಘೋಷಣೆಗಳು ಮೊಳಗಿದ ಸಂದರ್ಭದಲ್ಲಿ ಆ ಸಡಗರದ ಸೆಲೆಗಳು ಪುನಃ ಗರಿಗೆದರಿದವು.

ರಾಷ್ಟ್ರವು ಸ್ವತಂತ್ರಗೊಂಡ ಆರಂಭದ ಕೆಲವು ತಿಂಗಳುಗಳು ಮಧುಚಂದ್ರದ ದಿನಗಳಾಗಿದ್ದವು ಎಂಬುದನ್ನು ಹರಾರೆಯಲ್ಲಿ ನೆಲೆಸಿದ್ದ ಒಬ್ಬ ಶ್ವೇತವರ್ಣೀಯನಾಗಿ ನಾನು ಹೇಳುತ್ತೇನೆ. ಸೇನಾ ವಿಜಯವನ್ನು ಘೋಷಿಸಿಕೊಳ್ಳಲಾಗದ ಹೊರತು ಯುದ್ಧ ಕೊನೆಗೊಳ್ಳಬಾರದೆಂದು ಬಯಸಿದ್ದ ಮುಗಾಬೆ, ಬಾಂಧವ್ಯ ಮರುಸ್ಥಾಪನೆಯ ಕುರುಹಾಗಿ ಆ ಪರಿಯ ಆಡಳಿತ ನಡೆಸಿದ್ದರು.

ಆದರೆ ರಾಷ್ಟ್ರದ ಆಗ್ನೇಯ ಭಾಗದ ‘ಎನ್‍ದೆಬೆಲ್’ ಸಮುದಾಯದ ಪಾಲಿಗೆ ಈ ಸಾಮರಸ್ಯ ಅಲ್ಪಾವಧಿಯಲ್ಲೇ ಕೊನೆಗೊಂಡಿತು. ಎನ್‍ದೆಬೆಲ್ ಅಲ್ಪಸಂಖ್ಯಾತರ ಪ್ರತಿರೋಧ ದಮನಿಸಿ, ಒಂದೊಮ್ಮೆ ಹೋರಾಟದ ರೂವಾರಿಯಾಗಿದ್ದ ಅದರ ನಾಯಕ ಜೋಷುವಾ ಎಂಕೊಮೊ ಅವರನ್ನು ಮೂಲೆಗುಂಪು ಮಾಡಬೇಕು ಎಂಬುದು ಮುಗಾಬೆ ಅವರ ಚೊಚ್ಚಲ ನಿರ್ಣಾಯಕ ರಾಜಕೀಯ ನಡೆಗಳಲ್ಲಿ ಒಂದಾಗಿತ್ತು.

ಬುಲವಾಯೊ ಉಪನಗರವಾದ ಎನ್‍ತುಂಬೇನ್‌ನಲ್ಲಿ ಎಂಕೊಮೊ ಮತ್ತು ಮುಗಾಬೆ ಅವರ ವಿಮೋಚನಾ ಸೇನಾಪಡೆಗಳ ಗೆರಿಲ್ಲಾಗಳು 1980ರ ನವೆಂಬರ್‌ನಲ್ಲಿ ಪರಸ್ಪರ ಗುಂಡಿನ ಮಳೆಗರೆಯುತ್ತಿದ್ದಾಗ ಸುರಕ್ಷತೆಗಾಗಿ ನಾನು ಪಟ್ಟ ಶ್ರಮ ಇನ್ನೂ ನೆನಪಿದೆ. ಮುಗಾಬೆಯು ಉತ್ತರ ಕೊರಿಯಾದಿಂದ ತರಬೇತು ಪಡೆದ 5ನೇ ಬ್ರಿಗೇಡ್ ಅನ್ನು ಭಿನ್ನಮತೀಯರನ್ನು ಹೊಸಕಿಹಾಕಲು ನೊಕೊಮೋದ ಕೇಂದ್ರಭಾಗವಾದ

ಮೆಟಾಬೆಲಿಲ್ಯಾಂಡ್‍ಗೆ ರವಾನಿಸುವುದರೊಂದಿಗೆ ಇದು ಇನ್ನಷ್ಟು ಹಿಂಸಾತ್ಮಕ ರೂಪ ತಾಳಿತು. ಬಹುಪಾಲು ನಾಗರಿಕರು ಸೇರಿ ಕನಿಷ್ಠ 10,000 ಜನ ಈ ಹತ್ಯಾಕಾಂಡಕ್ಕೆ ಬಲಿಯಾದರು.

‘ದಿ ಜಿಂಬಾಬ್ವೆಯನ್’ ವಾರಪತ್ರಿಕೆಯ ಸಂಪಾದಕ ವಿಲ್ಫ್ ಎಂಬಂಗಾ ಅವರ ಪ್ರಕಾರ, ಇದೀಗ ಮುಗಾಬೆ ಅವರ ಸ್ಥಾನಕ್ಕೆ ಝನು-ಪಿಎಫ್ ಪಕ್ಷದ ಮುಖ್ಯಸ್ಥರಾಗಿ ಹಾಗೂ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಮ್ಮರ್ಸನ್ ನನ್‍ಗುವಾ ಅವರೇ ಆ ನರಮೇಧದ ಸಂದರ್ಭದಲ್ಲಿ ಬೇಹುಗಾರಿಕಾ ಸೇವೆಗಳ ನೇತೃತ್ವ ವಹಿಸಿದ್ದರು.

‘ನನ್‍ಗುವಾ, ನಿರಂತರ ಜಾಗೃತಿಗೆ ಹೆಸರಾದ ಜಿಂಬಾಬ್ವೆಯ ಬೇಹುಗಾರಿಕಾ ಸಂಸ್ಥೆಯನ್ನು ಭೀತಿ ಹುಟ್ಟಿಸುವ ಗಣ್ಯರ ಕುತಂತ್ರದ ತಂಡವನ್ನಾಗಿ ಪರಿವರ್ತಿಸಿದವರು’ ಎಂದು ಎಂಬಂಗಾ ಅವರು ‘ದಿ ಗಾರ್ಡಿಯನ್’ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ತನ್ನ ನೇತಾರ ಮುಗಾಬೆ ಅವರಂತೆಯೇ ಹಲವಾರು ವರ್ಷಗಳಿಂದ ಚುನಾವಣಾ ಹಿಂಸೆ, ಅಪಹರಣಗಳು, ಸುಲಿಗೆ, ರಾಷ್ಟ್ರೀಯ ಸಂಪನ್ಮೂಲದ ಕೊಳ್ಳೆ ಸೇರಿದಂತೆ ಹಲವಾರು ಆರೋಪಗಳಿಗೆ ಅವರು ಗುರಿಯಾಗಿದ್ದಾರೆ.

ಕಳೆದ ಭಾನುವಾರ ಮುಗಾಬೆ ಮತ್ತು ಅವರ ಪತ್ನಿಯನ್ನು ನಾಯಕತ್ವದಿಂದ ವಜಾಗೊಳಿಸಿದ ಝನು- ಪಿಎಫ್ ಪಕ್ಷದ ಗಣ್ಯರು ಈಗಲೂ ವಿಮೋಚನಾ ಹೋರಾಟದ ಬಗ್ಗೆ ಪ್ರಸ್ತಾಪಿಸುವ ಮೂಲಕವೇ ತಮ್ಮ ಬಗ್ಗೆ ತಾವು ಬಣ್ಣಿಸಿಕೊಳ್ಳಲು ಇಷ್ಟಪಡುತ್ತಾರೆ. ವಿಮೋಚನಾ ಸಮರದ ಮುಂದಾಳುಗಳೆಂದು ಹೇಳಿಕೊಂಡವರು ಹರಾರೆಯಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಸಂಘಟಿಸಿದ್ದಾರೆ. ಮುಗಾಬೆ ಯಾವ ಗಣ್ಯರನ್ನು

ಸಂತುಷ್ಟಗೊಳಿಸುವುದು ಅತ್ಯಗತ್ಯ ಎಂದು ಭಾವಿಸಿದ್ದರೋ ಆ ಪ್ರಕಾರ 2000ನೇ ವರ್ಷದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಕೃಷಿಭೂಮಿಗಳ ವಾರಸುದಾರರಾದವರೂ ಇವರೇ.

ಇಷ್ಟಾದರೂ ಈಗಿನ ಬಹುತೇಕ ಜಿಂಬಾಬ್ವೆಯನ್ನರಿಗೆ ತನ್ನ ನೆಲವನ್ನು ಜರ್ಜರಿತಗೊಳಿಸಿದ ಈ ಸಂಘರ್ಷದ ನೇರವಾದ ನೆನಪು ಇಲ್ಲ. ‘ಅದೊಂದು ಕ್ರೂರ ಹಾಗೂ ಹೇಯವಾದ ಯುದ್ಧವಾಗಿತ್ತು; ರೊಡೇಷಿಯಾ ಪಡೆಗಳು ಪೊದೆಗಳಲ್ಲಿ ಅಡಗಿ, ಅಲ್ಲಿನ ಕಾಲುಹಾದಿಗಳಲ್ಲಿ ನೆಲಬಾಂಬ್‍ಗಳನ್ನು ಹುದುಗಿಸಿ ರಕ್ತಸಿಕ್ತ ದಾಳಿ ನಡೆಸುತ್ತಿದ್ದವು; ಪ್ರಮುಖವಾಗಿ ನೆರೆ ರಾಷ್ಟ್ರಗಳಾದ ಜಾಂಬಿಯಾ ಮತ್ತು ಮೊಜಾಂಬಿಕ್‍ಗಳಲ್ಲಿ ನೆಲೆಗಳನ್ನು ಹೊಂದಿದ್ದ ಗೆರಿಲ್ಲಾಗಳ ಮೇಲೆ ಮುಗಿಬೀಳುತ್ತಿದ್ದವು’ ಎಂಬುದು ಅವರಿಗೆ ಗೊತ್ತಿಲ್ಲ.

ನಕಲಿ ಮತದಾನ, ನಿರಂಕುಶ ಆಡಳಿತ, ಸ್ವಾತಂತ್ರ್ಯವು ಆರ್ಥಿಕ ಕುಸಿತಕ್ಕೆ ಎಡೆಮಾಡಿಕೊಟ್ಟಿದ್ದು - ಹೀಗೆ ಪ್ರತಿಯೊಂದು ಅವಸ್ಥೆಯಲ್ಲೂ ನನ್‍ಗುವಾ ಅವರು ಮುಗಾಬೆಯವರೊಂದಿಗೆ ಹೆಗಲಿಗೆ ಹೆಗಲಾಗಿದ್ದರು. ಕೆಲವರು ನನ್‍ಗುವಾ ಅವರನ್ನು ‘ಅಧ್ಯಕ್ಷರ ಆಣತಿಯನ್ನು ಕಾರ್ಯರೂಪಕ್ಕೆ ಇಳಿಸುವವ’ ಎಂದು ವ್ಯಾಖ್ಯಾನಿಸಿದ್ದೂ ಉಂಟು.

ಈ ಇಬ್ಬರು ನಾಯಕರಲ್ಲೂ ಕೆಲವು ಸಾಮ್ಯತೆಗಳಿವೆ. ಇಬ್ಬರೂ ಒರಟು ವಾತಾವರಣದಲ್ಲೇ ಬೆಳೆದವರು. ಸಂಪತ್ತಿಗೆ ನಿಷ್ಠೆ ತೋರುವ ನಿಯಮಗಳೇನು ಎಂಬುದನ್ನು ಇಬ್ಬರೂ ಬಲ್ಲರು. ಮುಗಾಬೆ, 1980ರಲ್ಲಿ ಗೆಲುವು ಸಾಧಿಸಿದಾಗ, ಎಲ್ಲರನ್ನೂ ಒಳಗೊಳ್ಳಿಸಿಕೊಳ್ಳುವ ಹಾಗೂ ವಾಸ್ತವಿಕ ನೆಲೆಗಟ್ಟಿಗೆ ಒತ್ತು ನೀಡುವ ಭರವಸೆಗಳನ್ನು ನೀಡಿದ್ದರು. ಇದೀಗ ನನ್‍ಗುವಾ ಅವೇ ವಾಗ್ದಾನಗಳನ್ನು ಪುನರುಚ್ಚರಿಸುವ ಲಕ್ಷಣಗಳಿವೆ.

ಅಧಿಕಾರಸ್ಥ ಝನು- ಪಿಫ್ ಗಣ್ಯರ ಬಾಂಧವ್ಯ ಬಿಗಿಯಾಗಿರುವುದರಲ್ಲಿ ಈ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿಯೇ ನನ್‍ಗುವಾ ಪಕ್ಷದ ಹೊಸ ಮುಖ್ಯಸ್ಥರಾಗಿ ಆಯ್ಕೆಯಾದಾಗ ಕೆಲವರಿಗೆ ‘ಏನೂ ಬದಲಾಗಬಾರದು ಎನ್ನುವುದಾದರೆ ಪ್ರತಿಯೊಂದೂ ಬದಲಾಗಬೇಕು’ ಎಂಬ ವಿಡಂಬನೋಕ್ತಿ ನೆನಪಾಗಿರಬಹುದು.

ಜೇಸನ್ ಬರ್ಕ್ ಅವರು ‘ದಿ ಅಬ್ಸರ್ವರ್’ನಲ್ಲಿ ಅಭಿಪ್ರಾಯ ಪಟ್ಟಿರುವ ಪ್ರಕಾರ, ‘ಮುಗಾಬೆ ಅವರ ಉಚ್ಚಾಟನೆಯು ಜಿಂಬಾಬ್ವೆಯ ಆಡಳಿತಾರೂಢ ಗಣ್ಯರೊಳಗೆ ಆಗಿರುವ ಅಧಿಕಾರ ವಿಕೇಂದ್ರೀಕರಣವೇ ಹೊರತು ಬೇರೇನೂ ಅಲ್ಲ; ಇದು ಜನಕ್ರಾಂತಿ ಅಲ್ಲ’.

ಆದರೆ ಇದರಲ್ಲಿ ಕೆಲವು ವ್ಯತ್ಯಾಸಗಳಿವೆ. ಮುಗಾಬೆ ಅವರು ಅಧಿಕಾರ ವಹಿಸಿಕೊಂಡಾಗ ಆರ್ಥಿಕತೆ ಮತ್ತು ಮೂಲಸೌಕರ್ಯ ಸ್ಥಿತಿ ಉತ್ತಮವಾಗಿತ್ತು. ಬ್ರಿಟಿಷ್ ಒಡೆತನದ ಕೃಷಿಭೂಮಿಗಳಲ್ಲಿ ರಾಷ್ಟ್ರಕ್ಕೆ ಬೇಕಾಗುವಷ್ಟು ಆಹಾರಧಾನ್ಯಗಳ ಉತ್ಪಾದನೆ ಆಗುತ್ತಿತ್ತು. ತಂಬಾಕಿನಿಂದ ವಿದೇಶಿ ವಿನಿಮಯ ಬರುತ್ತಿತ್ತು. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ರಸ್ತೆಗಳು ಇದ್ದವು.

ಇದೀಗ ನನ್‍ಗುವಾ ಅವರಿಗೆ ಇವುಗಳ ಬೆಂಬಲ ಇಲ್ಲ. ಮುಗಾಬೆ ಅವರು 1980ರಲ್ಲಿ ಅಧಿಕಾರ ವಹಿಸಿಕೊಂಡಾಗ ಹತ್ತಾರು ಸಾವಿರ ಜಿಂಬಾಬ್ವೆಯನ್ನರು ಅವರನ್ನು ಸ್ವಾಗತಿಸಿದ್ದರು. ಆದರೆ ಇದೀಗ ಹರಾರೆಯ ಬೀದಿಗಳಿಗೆ ಇಳಿದಿರುವ ಮುಗಾಬೆ ಭಿನ್ನಮತೀಯರಿಗೆ ಆ ಸನ್ನಿವೇಶ ಇಲ್ಲ; ಮುಗಾಬೆಯೋತ್ತರ ಅವಧಿಯಲ್ಲಿ ಚರಿತ್ರೆ ಮರುಕಳಿಸದಿದ್ದರೆ ಅಷ್ಟೇ ಸಾಕು ಎಂಬ ಭಾವನೆ ಮಾತ್ರ ಅವರಲ್ಲಿ ಮನೆಮಾಡಿದೆ.

–ದಿ ನ್ಯೂಯಾರ್ಕ್ ಟೈಮ್ಸ್

*–ಆಲನ್‌ ಕೊವೆಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry