7

ಹಸಿ ಕಡಲೆ ಗಿಡಗಳಿಗೆ ಭಾರಿ ಬೇಡಿಕೆ

Published:
Updated:
ಹಸಿ ಕಡಲೆ ಗಿಡಗಳಿಗೆ ಭಾರಿ ಬೇಡಿಕೆ

ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಬಸ್‌ನಿಲ್ದಾಣಗಳಲ್ಲಿ ಹಸಿ ಕಡಲೆ ಗಿಡಗಳ ಮಾರಾಟ ಭರದಿಂದ ನಡೆಯುತ್ತಿದೆ. ಆದರೆ ಈ ಬಾರಿ ಹಸಿ ಕಡಲೆ ಗಿಡದ ದರವನ್ನು ಕೇಳಿ ಜನರಿಗೆ ಶಾಕ್ ಹೊಡೆದಂತಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಹಸಿ ಕಡಲೆ ಗಿಡಗಳ ಮಾರಾಟ ಕಾರ್ಯ ನಡೆಯುತ್ತದೆ. ಈ ಹಸಿ ಕಡಲೆಯನ್ನು ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಮೆಕ್ಕೆಜೋಳ ಬೆಳೆ ಕಟಾವು ಮಾಡಿದ ನಂತರ ಈ ಹಸಿ ಕಡಲೆಯನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದ ಕಾರಣದಿಂದಾಗಿ ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ.

ಪ್ರತಿ ವರ್ಷ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಕಪ್ಪು ಮಣ್ಣಿನ ಭೂಮಿಯಲ್ಲಿ ಹಸಿ ಕಡಲೆಯನ್ನು ಬೆಳೆಯುತ್ತಿದ್ದರು. ಆದರೆ ಈ ಬಾರಿ 5 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಸಿ ಕಡಲೆ ಬಿತ್ತನೆಯಾಗಿದೆ. ಈ ಕಾರಣದಿಂದಾಗಿ ಮಾರಾಟಗಾರರು ನೆರೆಯ ಜಿಲ್ಲೆಗಳಿಂದ ಹಸಿಕಡಲೆ ಗಿಡಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಒಂದು ಕೆ.ಜಿ. ಹಸಿ ಕಡಲೆ ಗಿಡ ₹ 20ರಿಂದ ₹ 25 ದರ ಇತ್ತು. ಆದರೆ ಈ ಬಾರಿ ಒಂದು ಕೆ.ಜಿ ಹಸಿ ಕಡಲೆ ಗಿಡದ ಬೆಲೆ ₹ 60ಕ್ಕೆ ಮಾರಾಟವಾಗುತ್ತಿದೆ. ಜನರು ಅನಿವಾರ್ಯವಾಗಿ ದರ ಹೆಚ್ಚಿದ್ದರೂ ಹಸಿ ಕಡಲೆ ಗಿಡಗಳನ್ನು ಖರೀದಿಸುತ್ತಿರುವುದರಿಂದ ಭಾರಿ ಬೇಡಿಕೆ ಬಂದಿದೆ.

‘ನೆರೆಯ ಹಾವೇರಿ, ರಾಣೆಬೆನ್ನೂರು ಪಟ್ಟಣದಿಂದ ಹಸಿ ಕಡಲೆಯನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಅಲ್ಲಿ ಒಂದು ಕೆ.ಜಿ. ಹಸಿ ಕಡಲೆ ದರ ₹ 30 ಇದ್ದು, ಅಲ್ಲಿಂದ ತರುವುದಕ್ಕೆ ಸಾರಿಗೆ ವೆಚ್ಚ ಸೇರಿ ನಮಗೆ ₹ 40 ದರ ತಗಲುತ್ತದೆ. ಸ್ಥಳೀಯವಾಗಿ ₹ 60ರ ದರದಲ್ಲಿ ಹಸಿ ಕಡಲೆಯನ್ನು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮಾರಾಟಗಾರ ಅಕ್ರಮ್‌ ಭಾಷಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry