7

ಸಾಕ್ಷರತೆಯ ಅರಿವಿಗೆ ಮೂಡಿಸಲು ಪ್ರಯತ್ನ

Published:
Updated:

ಕಡೂರು: ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ಹೊರಟಿರುವ ಬೆಂಗಳೂರಿನ ಅರುಣ್ ಶನಿವಾರ ಕಡೂರಿಗೆ ಬಂದು, ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸಿದರು.

‘ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಾಗಿರುವುದು ಸಾಕ್ಷರತೆ. ಅದರಿಂದ ದೈನಂದಿನ ಜೀವನವನ್ನು ಸುಗಮ ವಾಗಿ ನಡೆಸಲು ಬೇಕಾದ ಜ್ಞಾನ ದೊರೆಯುತ್ತದೆ. ವಿದ್ಯಾರ್ಥಿಗಳು ತಾವು ಕಲಿಯುವುದರ ಜತೆಗೆ ತಮ್ಮ ಸುತ್ತಮುತ್ತಲಿನವರಿಗೂ ಸಾಕ್ಷರರಾಗಲು ಪ್ರೇರೇಪಿಸಬೇಕು. ಎಲ್ಲರು ಸಾಕ್ಷರರಾದರೆ ನಮ್ಮ ದೇಶ ಜಾಗತಿಕವಾಗಿ ಮುಂದುವರೆ ಯುತ್ತದೆ’ ಎಂದರು.

ಕಡೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಚ್. ಶ್ರೀನಿವಾಸ್, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಎಚ್.ಎ. ಪ್ರಸನ್ನ, ಮುಖ್ಯ ಶಿಕ್ಷಕ ಎಂ. ಹರೀಶ್ ಇದ್ದರು.

ರೋಟರಿ ಕ್ಲಬ್ ಸದಸ್ಯ: ಸಿವಿಲ್ ಎಂಜಿನಿಯರ್ ಆಗಿರುವ ಅರುಣ್ ಅವರು ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಸದಸ್ಯ. ಉದ್ಯಮಿಯಾಗಿರುವ ಅರುಣ್ ಅವರಿಗೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಆಶಯವಿತ್ತು. ಇವರ ಕಲ್ಪನೆಗೆ ನೀರೆರೆದವರು ಸಹಪಾಠಿ ರೋಷನ್. ಇದಕ್ಕೆ ಸರಿಯಾಗಿ ರೋಟರಿ ಸಂಸ್ಥೆಯ ಭಾರತ ಸಾಕ್ಷರತಾ ಮಿಷನ್ ಹಮ್ಮಿಕೊಂಡಿರುವ ರಾಷ್ಟ್ರ ವ್ಯಾಪಿ ಕಾರ್ಯಕ್ರಮ ಪೂರಕವಾಯಿತು. ಇಬ್ಬರೂ ಸೇರಿ ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿದರು.

ದಾರಿಯು ದ್ದಕ್ಕೂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿಯ ವಿದ್ಯಾರ್ಥಿಗಳಿಗೆ ಸಾಕ್ಷರ ತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

‘ಅಕ್ಟೋಬರ್ 30ರಿಂದ ಆರಂಭಿಸಿರುವ ಇವರ ಕಾಲ್ನಡಿಗೆ 750 ಕಿ.ಮೀ ಕ್ರಮಿಸಿದೆ. ಪ್ರತಿ ಊರಿನಲ್ಲೂ ತಮ್ಮ ಉದ್ದೇಶವನ್ನು ಕೇಳಿದ ಜನರು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದ್ದಾರೆ. ನಮ್ಮನ್ನು ಕಂಡು ಮಾಡಲು ಕೆಲಸವಿಲ್ಲ ಎಂದು ಲೇವಡಿ ಮಾಡಿದವರಿಗೂ ಕಡಿಮೆ ಇಲ್ಲ. ಆದರಿಂದ ನಮ್ಮ ಉತ್ಸಾಹಕ್ಕೆ ಭಂಗ ಬಂದಿಲ್ಲ. ತಮಿಳುನಾಡಿನ ಸತ್ಯಮಂಗಲಂ ಬಳಿ 35 ಕಿ.ಮೀ ದೂರವನ್ನು ಕಾಲ್ನಡಿಗೆಗೆ ಅರಣ್ಯ ಇಲಾಖೆಯವರು ನಿಷೇಧ ಮಾಡಿರುವುದರಿಂದ ಅಲ್ಲಿ ಮಾತ್ರ ಬಸ್‌ನಲ್ಲಿ ಬಂದಿದ್ದೇವೆ.

ಪಟ್ಟಣ ಪ್ರದೇಶಗಳಲ್ಲಿ ರೋಟರಿ ಕ್ಲಬ್‌ನವರು ರಾತ್ರಿ ತಂಗಲು ಸಹಕರಿಸುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ದೇವಸ್ಥಾನ ಅಥವಾ ಶಾಲೆಯ ಜಗಲಿ ಮುಂತಾದ ಕಡೆ ಮಲಗಿಕೊಂಡು ಬೆಳಿಗ್ಗೆ ಮತ್ತೆ ಕಾಲ್ನಡಿಗೆ ಮುಂದುವರಿಸುತ್ತಿದ್ದೇವೆ’ ಎನ್ನುವ ಅರುಣ್, ಸಾಕ್ಷರತೆಯ ಅರಿವು ಮೂಡಿಸುವಲ್ಲಿ ಇದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry