7

ತ್ಯಾಜ್ಯ ತುಂಬಿದ ದಾರಿ ಈಗ ಸ್ವಚ್ಛ ನಿರ್ಮಲ

Published:
Updated:

ಮಂಗಳೂರು: ರಾಮಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಭಾನುವಾರ ನಗರದ ಕಾಸ್ಸಿಯಾ ಶಾಲೆಯ ಎದುರಿನ ರಸ್ತೆಯಲ್ಲಿ ನಡೆಯಿತು. ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ ಪ್ರತಿ ಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ ಕಾರ್ಣಿಕ್ ಹಾಗೂ ಕಾಸ್ಸಿಯಾ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಎವರಿಸ್ಟ್ ಕ್ರೇಸ್ಟಾ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಅಭಿಯಾನದ ಪ್ರಧಾನ ಸಂಯೋಜಕ ದಿಲ್ ರಾಜ್ ಆಳ್ವ, ಸೌರಜ್, ಸುರೇಶ್ ಶೆಟ್ಟಿ, ಬಜ್ಪೆ ಪೊಲೀಸ್ ಠಾಣೆಯ ಅಧಿಕಾರಿ ಮದನ್ ಇದ್ದರು.

ಕಾಸ್ಸಿಯಾ ವಿದ್ಯಾರ್ಥಿಗಳು ಶಾಲೆಯ ಮುಂಭಾಗದ ಗೋಡೆ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು. ನಿವೇದಿತಾ ಬಳಗದ ಸದಸ್ಯರು ರಸ್ತೆಯ ಎರಡೂ ಬದಿಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಲ್ಲು ರಾಶಿ ಹಾಗೂ ರಸ್ತೆ ಮೇಲೆ ಹರಡಿ ಕೊಂಡಿದ್ದ ಮರಳು ತೆಗೆದು ಶುಚಿ ಮಾಡಿದರು. ಎಸ್ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಮನೆ ಮನೆ ಭೇಟಿ ನೀಡಿ ಸ್ವಚ್ಛತಾ ಕರಪತ್ರ ಹಂಚಿದರು.

ಶಾಲೆಯ ಎದುರಿನ ಕಾಲುದಾರಿಗೆ ನಿಗದಿ ಪಡಿಸಿದ ಸ್ಥಳದಲ್ಲಿ ತ್ಯಾಜ್ಯವೇ ತುಂಬಿತ್ತು. ಬಿಸಾಡುವ ಸ್ಥಳವಾಗಿತ್ತು. ವಿದ್ಯಾರ್ಥಿಗಳು ಹಾಗೂ ದಾರಿಹೋಕರು ಕಾಲುದಾರಿ ಬಳಸಲಾಗದೆ ಪರದಾಡುತ್ತಿದ್ದರು. ಅಲ್ಲದೇ ಆ ವಾತಾವರಣ ದುರ್ನಾತ ಬೀರುತ್ತ ಅಸಹ್ಯವಾಗಿತ್ತು. ಎರಡು ದಿನಗಳಿಂದ ಆ ಸ್ಥಳದಿಂದ ನಾಲ್ಕು ಟಿಪ್ಪರ್ ಕಟ್ಟಡ ತ್ಯಾಜ್ಯ ಹಾಗೂ ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಅಲ್ಲಿ ಇಂದು ಇಂಟರ್ ಲಾಕ್ ಹಾಕಿ ಕಾಲುದಾರಿಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಮುಂದಿನ ವಾರದಲ್ಲಿ ಹೂವಿನ ಗಿಡಗಳನ್ನು ನೆಟ್ಟು ಸುಂದರಗೊಳಿಸಲಾಗುವುದು.

ಹಿಂದೂ ವಾರಿಯರ್ಸ್ ಯುವಕರು ಮಾರ್ನಮಿಕಟ್ಟೆಯ ಹತ್ತಿರವಿರುವ ಬಸ್ ತಂಗುದಾಣವನ್ನು ಸ್ವಚ್ಛ ಮಾಡಿದರು. ನಂತರ ಸುಣ್ಣ ಬಣ್ಣ ಹಚ್ಚಿ ಸುಂದರಗೊಳಿಸಿದರು. ನುರಿತ ಗಾರೆ ಕೆಲಸದವರಿಂದ ನೆಲಹಾಸನ್ನು ಹೊಸ ಕಾಂಕ್ರಿಟ್ ಹಾಕಿ ಸಮತಟ್ಟು ಗೊಳಿಸಲಾಯಿತು. ನಂತರ ಅದರ ಎದುರಿನ ವೃತ್ತಕ್ಕೆ ಬಣ್ಣ ಬಳಿದು ಅಂದ ಹೆಚ್ಚಿಸಲು ಪ್ರಯತ್ನಿಸಿಲಾಯಿತು.

ನೂರಕ್ಕೂ ಅಧಿಕ ಅನಧಿಕೃತ ಫ್ಲೆಕ್ಸ್ ಬ್ಯಾನರ್ ಗಳನ್ನು ಸ್ವಚ್ಛ ಪುತ್ತೂರು ಕಾರ್ಯಕರ್ತರು ಶ್ಯಾಮ್ ಸುದರ್ಶನ್ ಭಟ್ ನಿರ್ದೇಶನದಲ್ಲಿ ತೆರವು ಮಾಡಿದರು. ಜೆಪ್ಪು, ಮಂಗಳಾದೇವಿ ಹಾಗೂ ಮೋರ್ಗನ್ಸ್ ಗೇಟ್ ಮತ್ತಿತರ ಪ್ರದೇಶಗಳಲ್ಲಿ ಈ ಕಾರ್ಯ ನಡೆಯಿತು.

ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನದ ಪ್ರಯುಕ್ತ ಭಾನುವಾರ ಮಂಗಳೂರು ತಾಲ್ಲೂಕಿನ ಮಳವೂರು, ಮೂಡುಶೆಡ್ಡೆ, ಐಕಳ, ಕಟೀಲು, ಪಿಲಾತುಬೆಟ್ಟು, ಕೆಮ್ರಾಲ್, ಮುಂತಾದ ಸುಮಾರು 30 ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 1,300 ಕಾರ್ಯಕರ್ತರು ಪಾಲ್ಗೊಂಡರು. ಸ್ವಚ್ಛತೆಗೆ ಬೇಕಾದ ಸಲಕರಣೆಗಳು, ಟೀಶರ್ಟ್ ಗಳು, ಬ್ಯಾನರ್ ಮತ್ತಿತರ ಸಾಮಗ್ರಿಗಳನ್ನು ಹಾಗೂ ಎಲ್ಲ ಸ್ವಯಂ ಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನೂ ರಾಮಕೃಷ್ಣ ಮಿಷನ್ ವತಿಯಿಂದ ಒದಗಿಸಲಾಗಿತ್ತು. ದ.ಕ ಜಿಲ್ಲಾ ಪಂಚಾಯಿತಿ ಈ ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನಕ್ಕೆ ಸಹಕಾರ ನೀಡುತ್ತಿದೆ.ಈ ಅಭಿಯಾನಕ್ಕೆ ಎಂಆರ್‍ಪಿಎಲ್‌ನ ಪ್ರಾಯೋಜಕತ್ವ ಇದೆ.

ಸ್ವಚ್ಛ ಮನಸ್ಸು ಅಭಿಯಾನ

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮನಸ್ಸು ಅಭಿಯಾನ ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ನಿರಂತರವಾಗಿ ನಡೆಯುತ್ತಿದೆ. 20 ದಿನಗಳಲ್ಲಿ 73 ಪ್ರೌಢಶಾಲೆಗಳಲ್ಲಿ ಸ್ವಚ್ಛ ಮನಸ್ಸು ಎಂಬ ಜಾಗೃತಿ ಅಭಿಯಾನವನ್ನು ಏರ್ಪಡಿಸಲಾಗಿತ್ತು. ಇಂದಿನವರೆಗೆ 73 ಶಾಲೆಗಳಿಂದ 6,988 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ‘ಸ್ವಚ್ಛತಾ ಸೇನಾನಿ” ಎಂಬ ವಿಶೇಷ ಬ್ಯಾಡ್ಜ್ ನೀಡಲಾಗಿದೆ. ಸುಮಾರು 60 ಜನ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕರಾದ ಎಂ ಆರ್ ವಾಸುದೇವ್ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯುತ್ತಿದೆ. ಒಟ್ಟು 101 ಶಾಲೆಗಳು ನೋಂದಣಿ ಮಾಡಿಕೊಂಡಿದ್ದು 10,358 ವಿದ್ಯಾರ್ಥಿಗಳನ್ನು ಸ್ವಚ್ಛತಾ ಸೇನಾನಿಗಳೆಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry