7

ಬಂದ ದಾರಿಗೆ ಕಡಿಮೆ ಸುಂಕ...

Published:
Updated:
ಬಂದ ದಾರಿಗೆ ಕಡಿಮೆ ಸುಂಕ...

ಮೈಸೂರು: ‘ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೀರೆ ಮಳಿಗೆ ಹಾಕುತ್ತಿದ್ದೇವೆ. ಈ ಬಾರಿ 70 ಸೀರೆ ಮಾತ್ರ ಮಾರಾಟವಾಗಿವೆ. ವ್ಯಾಪಾರಕ್ಕೆ ನೀಡಿದ ಸ್ಥಳ ಸೂಕ್ತವಾಗಿಲ್ಲದಿರುವುದು ಹಾಗೂ ರಸ್ತೆ ಬದಿ ವ್ಯಾಪಾರಿಗಳನ್ನು ನಿಯಂತ್ರಿಸದಿರುವುದು ಇದಕ್ಕೆ ಕಾರಣ...’

ಸಾಹಿತ್ಯ ಸಮ್ಮೇಳನ ಅಂಗವಾಗಿ ಇಲ್ಲಿನ ಸ್ಫೋರ್ಟ್ಸ್‌ ಪೆವಿಲಿಯನ್‌ ಮೈದಾನದಲ್ಲಿ ಹಾಕಿದ ವಾಣಿಜ್ಯ ಮಳಿಗೆಗಳಲ್ಲಿ ಇಳಕಲ್‌ ಸೀರೆ ಮಾರಾಟ ಮಾಡಿದ ವ್ಯಾಪಾರಿಗಳ ಮಾತಿದು.

ಈ ಮೈದಾನಕ್ಕೆ ಬರುವ ಮುನ್ನ ಪುಸ್ತಕ ಮಳಿಗೆ ನೋಡಿಕೊಂಡೇ ಬರಬೇಕಾಯಿತು. ಮಹಾದ್ವಾರದ ಮುಂದಿನ ಗೇಟ್‌ನಲ್ಲಿ ಒಬ್ಬರು ಮಾತ್ರ ಸಂಚರಿಸಲು ಸಾಧ್ಯ. ಆವರಣದಲ್ಲಿ ಮಳಿಗೆಗಳಿಗೆ ಸಾಕಷ್ಟು ಜಾಗವಿದ್ದರೂ ಒಳಪ್ರವೇಶಕ್ಕೆ ತೀರ ಇಕ್ಕಟ್ಟು ಮಾಡಲಾಗಿದೆ. ಇದರಿಂದ ಜನರು ಪುಸ್ತಕಗಳ ಮೇಲೆ ತೋರಿದಷ್ಟು ಆಸಕ್ತಿಯನ್ನು ಇತರ ವಸ್ತುಗಳ ಮೇಲೆ ತೋರಲಿಲ್ಲ ಎಂಬುದು ಅವರ ವಾದ.

ಪುಟ್ಟ ಕರವಸ್ತ್ರದಿಂದ ಹಿಡಿದು ರೇಷ್ಮೆ ಸೀರೆ, ಕಾಟನ್‌ ಸೀರೆ, ಎಲ್ಲ ತರದ ಬಟ್ಟೆಗಳನ್ನೂ ಇಲ್ಲಿ ಮಾರಾಟಕ್ಕಿಡಲಾಗಿತ್ತು. ವಿವಿಧ ಗೃಹೋಪಯೋಗಿ ವಸ್ತುಗಳು, ಪೂಜಾ ಸಾಮಗ್ರಿಗಳು, ಮಕ್ಕಳಿಗಾಗಿ ಆಟಿಕೆ ಸಾಮಾನುಗಳು, ಖಾದಿ ಜೀನ್ಸ್‌, ಟಿ–ಷರ್ಟ್‌, ಚೂಡಿದಾರ, ನೀರಿನ ಫಿಲ್ಟರ್‌, ಏರ್‌ಕೂಲರ್‌, ಎಮರ್ಜೆನ್ಸಿ ಲ್ಯಾಂಪ್‌, ಪ್ರಕೃತಿ ಚಿಕಿತ್ಸಾ ಔಷಧಿಗಳ ಮಾರಾಟ ಕೂಡ ನಡೆಯಿತು.

ಬಿಸಿಲಿನಿಂದ ಬಸವಳಿದವರಿಗೆ ಎಳನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಐಸ್ಕ್ರೀಂ, ತಂಪು ಪಾನೀಯಗಳು, ಇಳಿಸಂಜೆಗೆ ಬಿಸಿಬಿಸಿ ಭಜ್ಜಿ, ಪಕೋಡಾ, ಬೋಂಡಾ, ಚುರುಮುರಿ, ಗೋಬಿ ಮಂಚೂರಿಯಂಥ ತಿನಿಸುಗಳು ಜನರನ್ನು ಸೆಳೆದವು.

ಬೆಂಗಳೂರಿನ ಫ್ಯಾಷನ್‌ ಡ್ರೆಸ್‌, ಇಳಕಲ್‌ ಸೀರೆಗಳು, ಬೆಳಗಾವಿಯ ಕುಂದಾ, ಗೋಕಾಕ್ ಕರದಂಟು, ಕೊಡಗಿನ ಚಾಕೊಲೇಟ್‌– ಕೇಕ್– ಜೇನು, ಹಾಪ್‌ಕಾಮ್ಸ್‌ನ ಜ್ಯೂಸ್‌, ಕೇರಳದ ಸ್ಪೆಷಲ್‌ ಚಿಪ್ಸ್‌ಗಳು– ಹಲ್ವಾ... ಹೀಗೆ ಒಂದೊಂದು ಊರಿನ ಒಂದೊಂದು ವಿಶೇಷ ಸಿಹಿ– ಖಾರದ ತಿನಿಸುಗಳು ಸಾಹಿತ್ಯಾಸಕ್ತರ ನಾಲಿಗೆಗೆ ರುಚಿ ಹಚ್ಚಿದವು.

ವಿವಿಧ ರಿಯಾಯಿತಿ ಹಾಗೂ ಫ್ರೀ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ವರ್ತಕರು ಯತ್ನಿಸಿದರು. ಸೀರೆ, ಬಟ್ಟೆ ಅಂಗಡಿ ಹಾಗೂ ಬಿಂಟೆಕ್ಸ್‌ ವಸ್ತುಗಳ ಮಳಿಗೆಯಲ್ಲಿ ಮಾತ್ರ ಮಹಿಳೆಯರು, ಯುವತಿಯರ ದಂಡೇ ಕಾಣಿಸಿತು.

ಗಮನ ಸೆಳೆದ ದೇಸಿ ಬಾಯ್ಲರ್‌: ಬೆಳಗಾವಿಯಿಂದ ಬಂದಿದ್ದ ವ್ಯಾಪಾರಿ ಯೊಬ್ಬರು ದೇಸಿ ಬಾಯ್ಲರ್‌ ಪ್ರದರ್ಶನ ಮಾಡಿ ಗಮನ ಸೆಳೆದರು. ಕಟ್ಟಿಗೆ ಅಥವಾ ಇದ್ದಿಲು ಹಾಕಿ ಹೊತ್ತಿಸುವ ಈ ಬಾಯ್ಲರ್‌ ಹೊಗೆರಹಿತವಾದ ಸಾಧನ. ನೀರು ಕಾಯಿಸಿಕೊಳ್ಳಲು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಸಾಧನವನ್ನು ತುಸು ಮಾರ್ಪಾಡಿನೊಂದಿಗೆ ತಂದಿದ್ದು ವಿಶಿಷ್ಟವಾಗಿತ್ತು.

ಮಾರುಕಟ್ಟೆಯಾದ ರಸ್ತೆಗಳು: ಸ್ತೆಬದಿಯ ವ್ಯಾಪಾರಿಗಳು ಮಾತ್ರ ವಾಣಿಜ್ಯ ಮಳಿಗೆಯಲ್ಲಿನ ವ್ಯಾಪಾರಿಗಳಿಗೆ ಸೆಡ್ಡು ಹೊಡೆಯುವ ರೀತಿ ಲಾಭ ಮಾಡಿಕೊಂಡರು. ಸಮ್ಮೇಳನ ನಡೆದ ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಎಲ್ಲ ರಸ್ತೆಗಳ ಫುಟ್‌ಪಾತ್‌ಗಳು ಈ ವ್ಯಾಪಾರಿಗಳಿಂದಲೇ ತುಂಬಿ ಹೋದವು. ಮೊದಲ ಹಾಗೂ ಎರಡನೇ ದಿನ ಇವರು ಭರ್ಜರಿ ಹಣ ಗಳಿಸಿಕೊಂಡರು.

ಮೈದಾನದ ನಾಲ್ಕೂ ದಿಕ್ಕಿನ ರಸ್ತೆ– ಫುಟ್‌ಪಾತ್‌ಗಳನ್ನು ಒಂದಿಂಚೂ  ಬಿಡದಂತೆ ಕಬಳಿಸಿಕೊಂಡರು. ಜೀವನೋಪಾಯಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಮಾರಾಟಕ್ಕೆ ಇಟ್ಟರು. ಮೂರನೇ ದಿನವಾದ ಭಾನುವಾರ ರಸ್ತೆ ಬದಿ ವ್ಯಾಪಾರಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಮಳಿಗೆಗಳಲ್ಲೇ ಜನಸಂದಣಿ ಹೆಚ್ಚಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry