6

ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾಗಲಿ

Published:
Updated:

ಕಂಪ್ಲಿ: ‘ಇಂಗ್ಲಿಷ್ ಕಲಿತರೆ ಮಾತ್ರ ಕೈ ತುಂಬ ಸಂಬಳ ಎನ್ನುವ ಭ್ರಮೆಯಿಂದ ಜನರು ಹೊರಬರಬೇಕು. ಹಾಗೆಯೇ ಕನ್ನಡವನ್ನು ನಂಬಿ ಬದುಕುತ್ತಿರುವವರಿಗೆ ಮಾತ್ರ ಉದ್ಯೋಗ ಎಂಬ ಭರವಸೆ ಸರ್ಕಾರ ಮೂಡಿಸಿದಾಗಲೇ ಕನ್ನಡ ಬಾಷೆ ಬಳಕೆ ಆಗುತ್ತದೆ’ ಎಂದು ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಕೆ.ಎಸ್‌.ಸಿ ಮಹಿಳಾ ಕಾಲೇಜು ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದರು.

ಇಲ್ಲಿಯ ಕನ್ನಡ ಹಿತರಕ್ಷಕ ಸಂಘ ಭಾರತಿ ಶಿಶು ವಿದ್ಯಾಲಯದ ಆವರಣದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ 62ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 46ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಕನ್ನಡ ಕೇವಲ ಬಡಾಯಿ ಭಾಷೆಯಾಗದೆ ತಿನ್ನುವ ಅನ್ನದ ಪ್ರಶ್ನೆಯಾದಾಗ ಮಾತ್ರ ಕನ್ನಡ ಉಳಿದೀತು’ ಎಂದರು.

‘ಮಾಧ್ಯಮವನ್ನು ಪಾಲಕರೇ ನಿರ್ಧರಿಸಲಿ ಎನ್ನುವ ಸುಪ್ರೀಂಕೋರ್ಟ್‌ ತೀರ್ಪನ್ನು ಎಲ್ಲಾ ರಾಜ್ಯಗಳು ಒಗ್ಗೂಡಿ ಸುಗ್ರಿವಾಜ್ಞೆ ಮೂಲಕ ತಡೆ ಹಿಡಿಯಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾಗಬೇಕು’ ಎಂದು ಪ್ರತಿಪಾದಿಸಿದರು.

ಗಂಗಾವತಿ ಜೆ.ಎಸ್‌.ಎಸ್ ಕಾಲೇಜು ಉಪನ್ಯಾಸಕ ಆಜ್ಮೀರ್ ನಂದಾಪುರ ಮಾತನಾಡಿ, ‘ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವ ಪ್ರವೃತ್ತಿ ನಿಲ್ಲಬೇಕು. ಆತಂಕ, ನಾಚಿಕೆ, ಹಿಂಜರಿಕೆ ಇಲ್ಲದೆ ಕನ್ನಡ ಭಾಷೆಯನ್ನು ಬದುಕಿನ ಎಲ್ಲಾ ಹಂತಗಳಲ್ಲಿ ಮತ್ತು ಆಡಳಿತದ ಎಲ್ಲ ಸ್ತರಗಳಲ್ಲಿ ನಿರ್ಭೀತಿಯಿಂದ ಬಳಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಪುರಸಭೆ ಅಧ್ಯಕ್ಷ ಎಂ. ಸುಧೀರ್, ಕಂಪ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಗುಡಿ ವಿಶ್ವನಾಥ, ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಬೂದಗುಂಪಿ ಹುಸೇನ್‌ಸಾಬ್, ಜಿ.ಜಿ. ಆನಂದಮೂರ್ತಿ, ಸಿ. ಯಂಕಪ್ಪ, ಮಾ. ಶ್ರೀನಿವಾಸ್, ಕೆ. ಮೆಹಬೂಬ್, ಕ. ಯಂಕಾರೆಡ್ಡಿ, ಕವಿತಾಳ ಬಸವರಾಜ, ಕ. ಶಂಕ್ರಪ್ಪ ಉಪಸ್ಥಿತರಿದ್ದರು.

ಸನ್ಮಾನ: ಸಂಘದ ಹಿರಿಯ ಸದಸ್ಯ ಕೆ. ಮೆಹಬೂಬ್, ಸ್ಥಳೀಯ ಕಲಾವಿದರಾದ ಹಿಮ್ಮೇಳ ವಾದಕ ಜಡೆ ದೊಡ್ಡ ಬಸಪ್ಪ, ಬಯಲಾಟ ಕಲಾವಿದರಾದ ಉಪ್ಪಾರ ದೊಡ್ಡ ಬಸಪ್ಪ, ಹೂಗಾರ ರವಿ, ಕುಸ್ತಿಪಟು ಉಸ್ತಾದ್ ಮಕಾನ್‌ದಾರ್ ಶಬ್ಬೀರ್, ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ಹೋರಾಟ ಸಮಿತಿ ಸಂಚಾಲಕ ಧಾರವಾಡದ ಭಾರತ ಮಾಲತೇಶ ಮಗದೂರು, ಕರವೇ(ನಾರಾಯಣಗೌಡ) ಅಧ್ಯಕ್ಷ ಮಾದನೂರು ಮಹೇಶ್, ಕರವೇ(ಪ್ರವೀಣಶೆಟ್ಟಿ ಬಣ)ಅಧ್ಯಕ್ಷ ಬಿ. ರಮೇಶ್, ಕಸಾಪ ಹೋಬಳಿ ಘಟಕ ಅಧ್ಯಕ್ಷ ಜಿ. ಚಂದ್ರಶೇಖರಗೌಡ, ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಪಲ್ಲವಿ ಪ್ರಹ್ಲಾದ್ ಅವರಿಂದ ಸುಗಮ ಸಂಗೀತ, ಕಂಪ್ಲಿ ನಾಟ್ಯಲಕ್ಷ್ಮಿ ಕಲಾ ಕೇಂದ್ರದ ಬಿ. ಲಕ್ಷ್ಮಿ ತಂಡ ಹಾಗೂ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry