7

ಸ್ಮಾರ್ಟ್ ಸಿಟಿ ಮಾಹಿತಿಯೇ ಇಲ್ಲ

Published:
Updated:
ಸ್ಮಾರ್ಟ್ ಸಿಟಿ ಮಾಹಿತಿಯೇ ಇಲ್ಲ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಪಾಲಿಕೆಯ ಸದಸ್ಯರನ್ನು ಕತ್ತಲೆಯಲ್ಲಿ ಇಡಲಾಗುತ್ತಿದ್ದು, ಯೋಜನೆಯ ಕುರಿತಾದ ಯಾವುದೇ ಮಾಹಿತಿ ಸದಸ್ಯರಿಗೆ ಸಿಗುತ್ತಿಲ್ಲ. ವಿವರವಾದ ವರದಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಮಹಾನಗರ ಪಾಲಿಕೆಯ ಸದಸ್ಯರು, ಪಕ್ಷಭೇದ ಮರೆತು, ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯರಾದ ಮಹಾಬಲ ಮಾರ್ಲ, ದೀಪಕ್ ಪೂಜಾರಿ, ಮುಹಮ್ಮದ್‌, ಸ್ಮಾರ್ಟ್‌ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಪಾಲಿಕೆಯ ಸದಸ್ಯರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ನಗರದಲ್ಲಿ ಅನುಷ್ಠಾನ ಆಗುತ್ತಿರುವ ಯೋಜನೆಯ ಕುರಿತು ಪಾಲಿಕೆ ಸದಸ್ಯರಿಗೆ ಮಾಹಿತಿ ಸಿಗದಿದ್ದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌, ಕೆಯುಡಿಎಫ್‌ಸಿಯನ್ನು ನೋಡಲ್‌ ಏಜೆನ್ಸಿಯಾಗಿ ನೇಮಿಸಲಾಗಿದೆ. ಜಾಗತಿಕ ಟೆಂಡರ್‌ ಮೂಲಕ ವಾದಿಯಾ ಟೆಕ್ನಾಲಜಿಯು, ಈ ಯೋಜನೆಯ ನಿರ್ವಹಣಾ ಏಜೆನ್ಸಿ ಗುತ್ತಿಗೆ ಪಡೆದಿದೆ. ಮೊದಲ ಹಂತದಲ್ಲಿ ₹218.5 ಕೋಟಿ ಅನುದಾನವನ್ನು ನೀರು ಪೂರೈಕೆ ಹಾಗೂ ₹195 ಕೋಟಿಯನ್ನು ಒಳಚರಂಡಿ ಕಾಮಗಾರಿಗೆ ಮೀಸಲಿಡಲಾಗಿದೆ. ಫುಟ್‌ಪಾತ್‌, ಇಂಟರ್‌ಲಾಕಿಂಗ್‌ ಸೇರಿದಂತೆ 8 ವಾರ್ಡ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆಯಲಿವೆ. ಈ ಕುರಿತು ಪ್ರಸ್ತಾವನೆಯನ್ನು ತಾಂತ್ರಿಕ ಅನುಮೋದನೆಗಾಗಿ ಕೆಯುಡಿಎಫ್‌ಸಿಗೆ ಕಳುಹಿಸಲಾಗಿದೆ ಎಂದು ವಿವರಣೆ ನೀಡಿದರು.

ಎರಡನೇ ಹಂತದಲ್ಲಿ ₹293 ಕೋಟಿ ಅನುದಾನವನ್ನು ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಬಳಸಲಾಗುವುದು. ಜತೆಗೆ ಸ್ಮಾರ್ಟ್‌ ನೀರು ಪೂರೈಕೆ, ಮೆಸ್ಕಾಂನ ಸ್ಮಾರ್ಟ್‌ ವಿದ್ಯುತ್‌ ಮೀಟರ್‌, ಸ್ಮಾರ್ಟ್‌ ಬಸ್‌ ಶೆಲ್ಟರ್‌, ಸೌರ ಚಾವಣಿ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಚ್ಛತೆ ಇಲ್ಲ: ಪ್ರತಿಪಕ್ಷದ ನಾಯಕ ಗಣೇಶ್ ಹೊಸಬೆಟ್ಟು ಮಾತನಾಡಿ, ಸುರತ್ಕಲ್ ಪ್ರದೇಶದಲ್ಲಿ 10 ದಿನಗಳಿಂದ ಒಳಚರಂಡಿಯ ನೀರಿನ ಪಂಪಿಂಗ್ ಮಾಡಿಲ್ಲ. ಇದರಿಂದ ಪ್ರದೇಶದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಎಂಜಿನಿಯರ್, ವಿದ್ಯುತ್‌ ಸಮಸ್ಯೆಯಿಂದಾಗಿ ಪಂಪಿಂಗ್‌ ಮಾಡಿಲ್ಲ. ಇದೀಗ ಎಲ್ಲ ಕಡೆಗಳಲ್ಲೂ ಪಂಪಿಂಗ್‌ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಚರ್ಚೆಗೆ ಉತ್ತರಿಸಿದ ಆಯುಕ್ತ ಮುಹಮ್ಮದ್‌ ನಜೀರ್‌, ಆ್ಯಂಟನಿ ವೇಸ್ಟ್‌ ಕಂಪೆನಿಗೆ ಪಾಲಿಕೆಯಿಂದ ಸೆಪ್ಟೆಂಬರ್‌ವರೆಗೆ ನೀಡಬೇಕಿದ್ದ ಬಾಕಿ ಹಣವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.

ಉಪ ಮೇಯರ್‌ ರಜನೀಶ್‌ ಕಾಪಿಕಾಡ್‌, ಸ್ಥಾಯಿ ಸಮಿತಿ ಸದಸ್ಯರಾದ ಅಬ್ದುಲ್‌ ರವೂಫ್‌, ನಾಗವೇಣಿ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್‌, ಸದಸ್ಯರು, ಅಧಿಕಾರಿಗಳು ಇದ್ದರು.

ಪಂಪ್‌ವೆಲ್ ಬಸ್‌ನಿಲ್ದಾಣ: ಎಸ್‌ಪಿವಿಗೆ ಪ್ರಸ್ತಾವನೆ

ನಗರದ ಪಂಪ್‌ವೆಲ್‌ ಬಳಿ ಖಾಸಗಿ ಸಹಭಾಗಿತ್ವದಲ್ಲಿ ಬಸ್‌ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸುವ ಪ್ರಸ್ತಾವನೆಯನ್ನು ಎಸ್‌ಪಿವಿಗೆ ಕಳುಹಿಸಲು ಪಾಲಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸುಸಜ್ಜಿತ ಬಸ್‌ ನಿಲ್ದಾಣದ ಅವಶ್ಯಕತೆ ಇದ್ದು, ಇದನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಬುಧವಾರ (ಇದೇ 29) ರಂದು ಬೆಂಗಳೂರಿನಲ್ಲಿ ನಡೆಯುವ ಎಸ್‌ಪಿವಿ ಸಭೆಯಲ್ಲಿ ಮಂಡಿಸಲು ನಿರ್ಣಯಿಸಲಾಯಿತು.

ವಿನ್ಯಾಸ, ನಿರ್ಮಾಣ, ಹಣಕಾಸು ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವ ಈ ಬಸ್‌ ನಿಲ್ದಾಣದ ಪ್ರಥಮ ಮತ್ತು ದ್ವಿತೀಯ ಮಹಡಿಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಿಲುಗಡೆ, ಮೇಲಿನ ಮಹಡಿಯಲ್ಲಿ ವಾಣಿಜ್ಯ ಮಳಿಗೆ, ಥಿಯೇಟರ್‌, ಕಾರ್‌ ಪಾರ್ಕಿಂಗ್, ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 33 ವರ್ಷಗಳಲ್ಲಿ ಸಂಪೂರ್ಣ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಯೋಜನೆ ಹೊಂದಿದೆ ಎಂದು ಆಯುಕ್ತ ಮುಹಮ್ಮದ್‌ ನಜೀರ್‌ ತಿಳಿಸಿದರು.

* * 

ನೀರಿನ ಬಿಲ್‌ಗಾಗಿ ಹೊಸ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಜನವರಿಯಿಂದ ಜಾರಿಗೆ ಬರಲಿದೆ. ಬಾಕಿ ವಸೂಲಿಗೆ ವಿಶೇಷ ತಂಡ ರಚಿಸಲಾಗಿದೆ.

ಮುಹಮ್ಮದ್‌ ನಜೀರ್‌ ಪಾಲಿಕೆ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry