5

ಫಲಾನುಭವಿಗಳ ಮನೆಗೆ ಆಹಾರ ಧಾನ್ಯ ತಲುಪಿಸಿ

Published:
Updated:
ಫಲಾನುಭವಿಗಳ ಮನೆಗೆ ಆಹಾರ ಧಾನ್ಯ ತಲುಪಿಸಿ

ಕಾರವಾರ: ಗರ್ಭಿಣಿ ಮತ್ತು ಬಾಣಂತಿ ಯರಿಗೆ ಪೌಷ್ಟಿಕ ಆಹಾರ ಒದಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಮಾತೃಪೂರ್ಣ’ ಯೋಜನೆಯು ಜಿಲ್ಲೆ ಯಲ್ಲಿ ಕೇವಲ ಶೇ 30ರಷ್ಟು ಪ್ರಗತಿ ಸಾಧಿಸಿದೆ. ಹೀಗಾಗಿ ಮೊದಲಿದ್ದಂತೆ ಫಲಾನುಭವಿಗಳ ಮನೆಗಳಿಗೆ ಪೌಷ್ಟಿಕ ಆಹಾರ ಧಾನ್ಯಗಳನ್ನು ಒದಗಿಸ ಬೇಕು ಎಂದು ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಆಗ್ರಹಿಸಿದರು.

ಸದಸ್ಯ ಅಲ್ಬರ್ಟ್‌ ಡಿಕೋಸ್ತಾ ವಿಷಯ ಪ್ರಸ್ತಾಪಿಸಿ, ‘ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲಿ ಸೆಕೆ ಹೆಚ್ಚಿದ್ದು, ಘಟ್ಟದ ಮೇಲಿನ ಭಾಗ ಅರಣ್ಯದಿಂದ ಕೂಡಿದೆ. ಹೀಗಾಗಿ ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪೌಷ್ಟಿಕ ಆಹಾರ ಸೇವಿಸುವುದು ತುಂಬಾ ಕಷ್ಟಕರ’ ಎಂದು ಹೇಳಿದರು. ಇದಕ್ಕೆ ಸದಸ್ಯ ಜಿ.ಎನ್‌.ಹೆಗಡೆ ಮುರೇಗಾರ ಸೇರಿದಂತೆ ಹಲವರು ದನಿಗೂಡಿಸಿದರು.

ಮನವರಿಕೆಗೆ ಪ್ರಯತ್ನ: ‘ಮಾತೃಪೂರ್ಣ ಯೋಜನೆ ಅನುಷ್ಠಾನ ಸಂಬಂಧ ಇದೇ 30ರಂದು ಉತ್ತರ ಕನ್ನಡ, ಕೊಡಗು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಯೋಜನಾ ನಿರ್ದೇಶಕರು ಹಾಗೂ ಉನ್ನತ ಅಧಿಕಾರಿಗಳು ಭಾಗ ವಹಿಸುವರು. ಈ ಸಂದರ್ಭದಲ್ಲಿ ಜಿಲ್ಲೆಯ ವಸ್ತುಸ್ಥಿತಿ ಕುರಿತು ಮನವರಿಕೆ ಮಾಡಲಾಗುವುದು’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌.ಚಂದ್ರಶೇಖರ ನಾಯ್ಕ ಹೇಳಿದರು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲೆಗಳಿಗೆ ನೀಡಲಾಗುವ ಕ್ರೀಡಾ ಸಾಮಗ್ರಿಗಳು ವರ್ಷ ಉರುಳಿದರೂ ಒದಗಿಸಿಲ್ಲ’ ಎಂದು ಅಲ್ಬರ್ಟ್ ಡಿಕೋಸ್ತಾ ಕಿಡಿಕಾರಿದರು. 0‘ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಅಧ್ಯಕ್ಷೆ ಜಯಶ್ರೀ ಮೊಗೇರ ಸಮಾಧಾನಿಸಲು ಯತ್ನಿಸಿದರು, ‘ನೀವು ಕಟ್ಟುನಿಟ್ಟಾಗಿ ನಿರ್ಣಯ ಕೈಗೊಳ್ಳುವವರೆಗೂ ಜಿಲ್ಲಾ ಪಂಚಾ ಯ್ತಿಯಲ್ಲಿ ಇವೆಲ್ಲವೂ ಹೀಗೆ ಮುಂದು ವರಿಯುತ್ತಿರುತ್ತದೆ’ ಎಂದು ಡಿಕೋಸ್ತಾ ದೂರಿದರು.  

‘ಇದೇ 22ರ ಒಳಗೆ ಎಲ್ಲ ವನ್ನೂ ಸರಬರಾಜು ಮಾಡುವುದಾಗಿ ತಿಳಿಸಿದ್ದೀರಿ. ಈವರೆಗೆ ಅದು ಸಾಧ್ಯ ವಾಗದಿರಲು ಕಾರಣವೇನು? ಅದರ ಸರಬರಾಜನ್ನು ನೀಡಿರುವ ಗುತ್ತಿಗೆ ದಾರರ ಟೆಂಡರ್‌ ಅನ್ನು ರದ್ದುಮಾಡಿ. ಇಲ್ಲವಾದಲ್ಲಿ ವಾರದ ಒಳಗೆ ಎಲ್ಲ ಶಾಲೆಗಳಿಗೂ ಕ್ರೀಡಾ ಸಾಮಗ್ರಿ ಒದಗಿಸಲು ಕ್ರಮ ಕೈಗೊಳ್ಳಿ’ ಎಂದು ಜಯಶ್ರೀ ಮೊಗೇರ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿಗೆ ಸೂಚಿಸಿದರು.

ಇ–ಸ್ವತ್ತು ಸಮಸ್ಯೆ ಪರಿಹರಿಸಿ: ‘ಇ– ಸ್ವತ್ತು ಯೋಜನೆಯು ನಗರ ಪ್ರದೇಶಗಳಲ್ಲಿ ಜಾರಿಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ. ಇ– ಸ್ವತ್ತು ಜಾರಿಯಿಂದ ಗ್ರಾಮೀಣ ಭಾಗದವರು ಅಧಿಕಾರಿಗಳಿಂದ ನಮೂನೆ ನಂ.3ನ್ನು ಪಡೆದುಕೊಳ್ಳುವುದು ಕಠಿಣವಾಗಿದೆ. ಅವಶ್ಯ ಇದ್ದವರು ಲಕ್ಷಾಂತರ ರೂಪಾಯಿ ಲಂಚ ನೀಡಿ ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಶಿರಸಿ ನಗರಸಭೆಯಲ್ಲಿ ನಮೂನೆ ನಂ.3ಕ್ಕಾಗಿ ಅಧಿಕಾರಿಗಳು ಒಂದು ಲಕ್ಷ ರೂಪಾಯಿ ಪಡೆದು ಮಂಜೂರಿಸಿದ್ದಾರೆ’ ಎಂದು ಜಿ.ಎನ್.ಹೆಗಡೆ ಮುರೇಗಾರ ಗಂಭೀರ ಆರೋಪ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಪ್ರತಿಕ್ರಿಯಿಸಿ, ‘ಇ– ಸ್ವತ್ತು ಈಗಾಗಲೇ ಆಫ್‌ಲೈನ್‌ ಆಗಿದೆ. ಅಲ್ಲದೇ ಭೂ ಮಾಲೀಕರು ಎನ್‌.ಎ ಮಾಡಿಕೊಂಡು ಜಮೀನನ್ನು ತುಂಡರಿಸಿ, ಅದರ ಭಾಗವನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದ್ದಾರೆ. ಹೀಗಾದಾಗ ನಮೂನೆ ನಂ.3 ಅನ್ವಯ ಆಗುವುದಿಲ್ಲ. ಎನ್‌ಎ ರದ್ದು ಮಾಡಿಸಿ, ಮತ್ತೆ ಅದನ್ನು ಮರು ಮಾಡಿಕೊಂಡು ಬಳಿಕ ನಮೂನೆ ನಂ.3ನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ ಜನರು ಮತ್ತು ಅಧಿಕಾರಿಗಳ ನಡುವೆ ಸಂಬಂಧ ಹದಗೆಡುತ್ತಿದೆ. ಜತೆಗೆ ಲಂಚ ಪಡೆದ ನಿರ್ದಿಷ್ಟ ಪ್ರಕರಣವನ್ನು ತಿಳಿಸಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆ’ ಎಂದರು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಅದಕ್ಕೆ ಕೆಲವರ ಪ್ರಾಯೋಜಕತ್ವ ಕೂಡ ಪಡೆದುಕೊಳ್ಳುತ್ತಿದೆ. ಜತೆಗೆ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳನ್ನು ಆಹ್ವಾನಿಸಿದೇ, ಅವರು ನಿಯಮಗಳನ್ನೇ ಬದಲಾಯಿಸುತ್ತಿದ್ದಾರೆ’ ಎಂದು ಸದಸ್ಯೆ ಚೈತ್ರಾ ಕೊಠಾರಕರ ಆರೋಪಿಸಿದರು.

‘ಶಾಲಾ– ಕಾಲೇಜು ಸಮಯದಲ್ಲಿ ಅನೇಕ ಬಸ್ಸುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿಯವರು ಗಮನ ಹರಿಸಬೇಕು’ ಎಂದು ಸದಸ್ಯ ಜಗದೀಶ ನಾಯಕ ಒತ್ತಾಯಿಸಿದರು. ಜತೆಗೆ, ‘ಅಂಕೋಲಾ ತಾಲ್ಲೂಕಿನ ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿಯಲ್ಲಿದ್ದು, ಕಟ್ಟಡ ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ವರ್ಷದಿಂದಲೇ ಶಿಕ್ಷಣ ಇಲಾಖೆಗೆ ತಿಳಿಸುತ್ತಾ ಬಂದಿದ್ದರೂ ಕೂಡ ಈವರೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಕಟ್ಟಡ ಮುರಿದು ಬಿದ್ದು, ಜೀವ ಹಾನಿ ಉಂಟಾದರೆ ಮಾತ್ರ ಇಲಾಖೆ ಅದರ ದುರಸ್ತಿ ಕೈಗೊಳ್ಳುವಂತೆ ಕಾಣುತ್ತಿದೆ’ ಎಂದು ಕಿಡಿಕಾರಿದರು.

‌ದಾಖಲೆ ಕೇಳುತ್ತಾರೆ:  ‘ಪಶುಭಾಗ್ಯ ಫಲಾನುಭವಿಗಳಿಗೆ ದಾಸನಕೊಪ್ಪ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನವರು ಸಾಲ ನೀಡಲು ಅನಗತ್ಯ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಸರ್ಕಾರದ ಸವಲತ್ತು ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಕೇಳಿದರೆ ಬ್ಯಾಂಕ್‌ ವ್ಯವಸ್ಥಾಪಕರು ಉದ್ಧಟತನದಿಂದ ಮಾತನಾಡುತ್ತಾರೆ’ ಎಂದು ಸದಸ್ಯೆ ಉಷಾ ಹೆಗಡೆ ಆರೋಪಿಸಿದರು. ‘ಲೀಡ್‌ ಬ್ಯಾಂಕ್‌ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅಗತ್ಯ ಸೂಚನೆಗಳನ್ನು ಹೊರಡಿಸಿ, ಸಮಸ್ಯೆ ಪರಿಹರಿಸಲಾಗುವುದು’ ಎಂದು ಚಂದ್ರಶೇಖರ ನಾಯಕ ಹೇಳಿದರು.

ವಿಶೇಷ ಅನುದಾನಕ್ಕೆ ಮನವಿ

‘ಜಿಲ್ಲೆಯ ಕುಮಟಾ, ಗೋಕರ್ಣ ಭಾಗಗಳಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದ್ದು, ದಿನಬಳಕೆಗೆ ಹಾಗೂ ಕುಡಿಯುಲು ಕೂಡ ನೀರಿಲ್ಲದೇ ಜನ ಪರದಾಡುವ ಪರಿಸ್ಥಿತಿ ಬಂದೊದಗಲಿದೆ. ಮುಖ್ಯಮಂತ್ರಿಯವರು ಜಿಲ್ಲೆಗೆ ಬಂದ ವೇಳೆ ಜಿಲ್ಲಾ ಪಂಚಾಯ್ತಿ ನಿಯೋಗವೊಂದು ಅವರನ್ನು ಭೇಟಿಯಾಗಿ, ಕುಡಿಯುವ ನೀರಿನ ಸಲುವಾಗಿ ವಿಶೇಷ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರದೀಪ ನಾಯಕ ಒತ್ತಾಯಿಸಿದರು. ಇದಕ್ಕೆ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದರು. ಅದನ್ನು ಅನುಸರಿಸುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಭರವಸೆ ನೀಡಿದರು.

* * 

ಇ– ಸ್ವತ್ತು ನಿಯಮಗಳನ್ನು ಸಡಿಲಗೊಳಿಸಿ, ಈ ಹಿಂದಿನಂತೆ ಕೈಬರಹ ಪದ್ಧತಿಯನ್ನು ಮುಂದುವರಿಸಬೇಕು. ಜತೆಗೆ ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸದ ವೇಳೆ ಅವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ಅದರ ಸಡಿಲಿಕೆಗೆ ಒತ್ತಾಯಿಸಬೇಕು.

ಜಿ.ಎನ್‌.ಮುರೇಗಾರ್‌, ಜಿಲ್ಲಾ ಪಂಚಾಯ್ತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry