7

ಮಚ್ಚೆ ರೋಗಕ್ಕೆ ಕಂಗೆಟ್ಟ ಹೂ ಬೆಳೆಗಾರ

Published:
Updated:
ಮಚ್ಚೆ ರೋಗಕ್ಕೆ ಕಂಗೆಟ್ಟ ಹೂ ಬೆಳೆಗಾರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ವಾತಾವರಣ ವೈಪರೀತ್ಯದಿಂದಾಗಿ ಚೆಂಡು ಹಾಗೂ ಸೇವಂತಿಗೆ ಹೂವಿಗೆ ಮಚ್ಚೆ ರೋಗ ಕಾಣಿಸಿಕೊಂಡಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದ್ದು, ಸಂಕಷ್ಟಕ್ಕೆ ಇಳಗಾಗಿದ್ದಾರೆ.

ತಾಲ್ಲೂಕಿನ ರೈತರು ಪುಷ್ಪ ಕೃಷಿಗೆ ಒತ್ತು ನೀಡಿದ್ದಾರೆ. ಕೊಳವೆ ಬಾವಿಗಳ ಆಶ್ರಯದಲ್ಲಿ ಚೆಂಡು ಹಾಗೂ ಸೇವಂತಿಗೆ ಹೂ ಬೆಳೆಯಲಾಗಿದೆ. ಈ ಹಿಂದೆ ಸುಮಾರು ಒಂದು ತಿಂಗಳ ಕಾಲ ಸುರಿದ ಜಡಿ ಮಳೆ ಹಾಗೂ ಮೋಡ ಮುಸುಗಿದ ವಾತಾವರಣದ ಪರಿಣಾಮವಾಗಿ ಹೂಗಿಡಗಳಿಗೆ ಅಂಗಮಾರಿ ರೋಗ ಆವರಿಸಿತ್ತು. ಅದರಿಂದ ರೆಂಬೆ, ಕೊಂಬೆ ಹಾಗೂ ಎಲೆಗಳು ಕೊಳೆತು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಹೂ ಸಹ ಕೊಳೆ ರೋಗಕ್ಕೆ ತುತ್ತಾಗಿ, ಬೆಳೆಗಾರರ ನಷ್ಟ ಅನುಭವಿಸಬೇಕಾಯಿತು.

ಈಗಲೂ ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಇದು ಪುಷ್ಪ ಕೃಷಿಗೆ ಮುಳುವಾಗಿ ಪರಿಣಮಿಸಿದೆ. ಗಿಡಗಳಲ್ಲಿ ತೀರಾ ಕಡಿಮೆ ಫಸಲು ಬಂದಿದೆ. ಉತ್ತಮ ಗುಣಮಟ್ಟದ ಹೂವು ಸಿಗುತ್ತಿಲ್ಲ. ರೋಗ ಪೀಡಿತ ಹೂವಿಗೆ ಮಾರುಕಟ್ಟೆಯಲ್ಲಿ ಮಾನ್ಯತೆ ಇಲ್ಲ. ಈಗ ಚೆಂಡು ಹೂ ಹಾಗೂ ಸೆವಂತಿಗೆ ಹೂವಿಗೆ ಹೇಳಿಕೊಳ್ಳುವಂಥ ಬೆಲೆಯೂ ಇಲ್ಲದಾಗಿದೆ.

ಟೊಮೆಟೊ ಬೆಲೆಯ ಅನಿಶ್ಚಿತತೆಯಿಂದ ಬೇಸತ್ತ ರೈತರು, ಟೊಮೆಟೊಗೆ ಪರ್ಯಾಯವಾಗಿ ಹೂವನ್ನು ಬೆಳೆದಿದ್ದಾರೆ. ಬೇರೆ ತರಕಾರಿ ಬೆಳೆಗಳಿಗೆ ಹೋಲಿಸಿದರೆ, ಈ ಹೂವಿನ ಬೆಳೆಗೆ ತಗಲುವ ಖರ್ಚು ಕಡಿಮೆ. ಹಾಗಾಗಿ ಬಂಡವಾಳದ ಕೊರತೆ ಇರುವ ರೈತರೂ ಸಹ ಪುಷ್ಪ ಕೃಷಿಗೆ ಕೈ ಹಾಕಿದ್ದಾರೆ. ಆದರೆ ಈಗ ಇಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇದರಿಂದ ಬೆಳೆಗಾರರು ಚಿಂತೆಗೆ ಒಳಗಾಗಿದ್ದಾರೆ.

* * 

ಸೇವಂತಿಗೆ ಹೂವಿನ ಬೆಳೆಗೆ ಮಾರಕ ಅಂಗಮಾರಿ ಆವರಿಸಿದೆ. ಹೂವಿನ ಮೇಲೂ ಮಚ್ಚೆ ಬರುತ್ತಿದೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಇಲ್ಲದ ಕಾರಣ ಅಂತಹ ಹೂವುಗಳು ದನಗಳ ಹೊಟ್ಟೆಗೆ ಆಹಾರವಾಗುತ್ತಿದೆ

ರಾಮಚಂದ್ರಾರೆಡ್ಡಿ, ಕೃಷಿಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry