7

ಮತ್ತೆ ಬಾಲ್ಯಕ್ಕೆ ಜಾರೋಣ

Published:
Updated:
ಮತ್ತೆ ಬಾಲ್ಯಕ್ಕೆ ಜಾರೋಣ

ಬಾಲ್ಯದ ಸಂತಸ ಕೋಡಿ ಒಡೆದಿತ್ತು...

ನಾನು ಹುಟ್ಟಿದ ಊರು ತುಂಬಾ ಸುಂದರವಾದ ಹಳ್ಳಿ. ಊರಿನ ಉತ್ತರಕ್ಕೆ ಒಂದು ಕೆರೆ, ದಕ್ಷಿಣಕ್ಕೆ ಬೆಟ್ಟ. ನಮ್ಮ ಆಟ ಪಾಠ ಹೆಚ್ಚು ಬೆಟ್ಟದಲ್ಲೇ. ಬೆಟ್ಟವೆಂದರೆ ಬಾಲ್ಯದ ಒಂದು ಪಾಲು. ಪ್ರತಿ ಸೋಮವಾರ ಕೆರೆಯ ದಂಡೆ ಮೇಲೆ ಸಂತೆ ನೆರೆಯುತ್ತಿತ್ತು. ಅದು ಮತ್ತೂ ಮಜ. ಮಳೆಗಾಲದಲ್ಲಿ ಬಿದ್ದ ಮಳೆ ನೀರು ಹರಿದು ಊರ ಕೆರೆ ಸೇರುತ್ತಿತ್ತು. ಪ್ರತಿ ದಿನ ಮಳೆ ಬಂದಲ್ಲಿ ಕೆರೆಗೆ ಎಷ್ಟು ನೀರು ಬಂದಿದೆ ಎಂದು ಬೆಳಿಗ್ಗೆ ಬೇಗ ಎದ್ದು ನಾವು ಗೆಳೆಯರೆಲ್ಲ ನೋಡಿಕೊಂಡು ಬರುತ್ತಿದ್ದೆವು. ಕೆರೆ ಕೋಡಿ ಬೀಳಲು ಇನ್ನು ಎಷ್ಟು ನೀರು ಬರಬೇಕು ಎಂದು ಅಂದಾಜಿಸುತ್ತಿದ್ದೆವು. ಕೋಡಿ ಬಿದ್ದ ದಿನ ಸಂಭ್ರಮವೋ ಸಂಭ್ರಮ.

ನಮ್ಮೂರಿಗೆ ಬಸ್‌ ಸೌಕರ್ಯವಿರಲಿಲ್ಲ. ಬೆಂಗಳೂರು ಪೂನಾ ರೈಲ್ವೆ ಲೈನ್‌ ನಮ್ಮೂರ ಮೇಲೆ ಹಾದು ಹೋಗಿತ್ತು. ರೈಲ್ವೆ ಸ್ಟೇಷನ್‌, ಬೆಳಗಿನ ಮೇಲ್‌, ಪ್ಯಾಸೆಂಜರ್‌, ಲೋಕಲ್‌ ಮಾತ್ರ ನಮ್ಮೂರಲ್ಲಿ ನಿಲ್ಲುತ್ತಿದ್ದವು. ಅಲ್ಲೂ ನಮ್ಮ ಆಟ. ರೈಲ್ವೆ ಹಳಿಮೇಲೆ ನಾಣ್ಯ ಇಟ್ಟು ರೈಲು ಹೋದಮೇಲೆ ನಾಣ್ಯ ಹುಡುಕುವ ಆಟ ಕುತೂಹಲ ಎನಿಸುತ್ತಿತ್ತು. ನಮ್ಮೂರ ಹತ್ತಿರವೇ ಹಲಸಿನಕೆರೆ ಇತ್ತು. ರಜೆ ಬಂತೆಂದರೆ ಅಲ್ಲಿಗೆ ಬೆಳಿಗ್ಗೆ ತಿಂಡಿ ತಿಂದು ಹೋದವರು ಸಂಜೆ ಬರುತ್ತಿದ್ದೆವು. ಮರ ಕೋತಿ ಆಟ, ನೇರಲೆ ಹಣ್ಣು, ಬೇಲದ ಹಣ್ಣು ಗಳನ್ನು ಕಲ್ಲು ಹೊಡೆದು ಕೀಳುವುದೇ ಬಹು ದೊಡ್ಡ ಖುಷಿ.

ಊರ ಸುತ್ತ ಫಸಲು ಬೆಳೆದು ನಿಂತ ಹೊಲಗಳು. ಅಲ್ಲಿ ಶೇಂಗಾ, ಅವರೆಕಾಯಿ ಸೀಸನ್‌ನಲ್ಲಿ ಸುಟ್ಟು ತಿಂದ ಬೆಚ್ಚನೆಯ ನೆನಪು. ರಾಗಿ ತೆನೆ ಕಿತ್ತು ಬೆಳಸೆ ಮಾಡಿ ತಿಂದಿದ್ದೆವು. ಹುಣಸೆಹಣ್ಣು, ಬೆಲ್ಲ, ಜೀರಿಗೆ, ಉಪ್ಪು, ಬೆಳ್ಳುಳ್ಳಿ ಕದ್ದು ತಂದು ಕುಟ್ಟಂಡಿ ಮಾಡಿ ಕಡ್ಡಿಗೆ ಸಿಕ್ಕಿಸಿ ತಿಂದದ್ದನ್ನು ನೆನೆಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.

ಹಬ್ಬಗಳು ಬಂತೆಂದರೆ ಟೈಲರ್‌ ಅಂಗಡಿಗೆ ಓಡಾಡಿದ್ದೇ ಓಡಾಡಿದ್ದು, ಬಟ್ಟೆ ಹೊಲಿದು ಕೊಡುವವರೆಗೂ ಅವನ ಮನೆಗೆ ಎಷ್ಟು ಸಾರಿ ಹೋಗಿ ಬರುತ್ತಿದ್ದೆವೋ. ಬಸವನ ಜಯಂತಿ ಬಂತೆಂದರೆ ಫೋಟೊ ಹಿಡಿದು ಮನೆ ಮನೆ ಸುತ್ತಿ ವಂತಿಗೆ ಸಂಗ್ರಹಿಸಿ ಹಬ್ಬ ಆಚರಿಸುತ್ತಿದ್ದೆವು. ಚುಮುಚುಮು ಬೆಳಗಿನ ಜಾವವೇ ಎದ್ದು ಅಕ್ಕ ತಾಲೀಪಟ್ಟು ಮಾಡಿಕೊಂಡು, ಬಟ್ಟೆಗಳನ್ನು ಒಗೆದು ತರುತ್ತಿದ್ದು, ನಾನೂ ಜೊತೆಯಿರುತ್ತಿದ್ದೆ. ಪುಟ್ಟ ಪುಟ್ಟ ಸಂಗತಿಗಳೂ ನಮಗೆ ಖುಷಿಯ ಖನಿಗಳಾಗಿದ್ದವು. ಹೀಗಿತ್ತು ನಮ್ಮ ಬಾಲ್ಯ. ಈಗಲೂ ಹಳ್ಳಿಗೆ ಹೋದರೆ ಹಳೆ ಸ್ನೇಹಿತರು ಸಿಗುತ್ತಾರೆ, ಈ ನೆನಪುಗಳನ್ನು ನೆನೆದು ಸಂಭ್ರಮಿಸುತ್ತೇವೆ.

ಆರ್‌.ಎಸ್‌.ಎಂ. ರಾವ್‌ ಬೆಂಗಳೂರು

* * 

ನೊರೆ ಹಾಲಿನ ಕಳ್ಳ

ನನಗಾಗ 9 ರಿಂದ 10 ವರ್ಷವಿರಬಹುದು. ನಮ್ಮ ಅಜ್ಜಿ  ಮನೆಯಲ್ಲಿ ಪ್ರೀತಿಯ ಮೊಮ್ಮಗನಾಗಿ ಆಟವಾಡಿಕೊಂಡಿದ್ದೆ. ಅಜ್ಜಿಯದ್ದು ದೊಡ್ಡ ಕುಟುಂಬ. ಮನೆಯಲ್ಲಿ ಹತ್ತಾರು ಹಸು–ಕರು, ಎತ್ತು–ಎಮ್ಮೆಗಳು ಇದ್ದವು. ದಿನನಿತ್ಯ 8 ರಿಂದ 10 ಹಸು, ಎಮ್ಮೆಗಳು ಹಾಲು ಕರೆಯುತ್ತಿದ್ದವು.

ನಮ್ಮ ದೊಡ್ಡಮ್ಮನ ಮಗ ನನಗಿಂತ 7–8 ವರ್ಷ ದೊಡ್ಡವ. ಆತನದ್ದು ಬೆಳಿಗ್ಗೆ 5 ರಿಂದ 7 ಗಂಟೆಯವರೆಗೆ ಹಾಲು ಕರೆಯುವ ಕಾಯಕ. ನಾನು ಆತನಿಗೆ ಹಾಲು ಕರೆಯಲು ಸಹಾಯ ಮಾಡುತ್ತಿದ್ದೆ. ಕರೆದ ಹಾಲಿನಲ್ಲಿ,  ಹಸುವಿನ ಹಾಲು ಒಂದು ಪಾತ್ರೆಗೆ, ಎಮ್ಮೆ ಹಾಲು ಒಂದು ಪಾತ್ರೆಗೆ ಹಾಕುವುದು, ಎಮ್ಮೆ, ಹಸುವಿನ ಕರುಗಳನ್ನು ಬಿಡುವುದು, ಕಟ್ಟುವುದು ನನ್ನ ಕೆಲಸ.

ದಿನಗಳೆದಂತೆ ಮತ್ತೊಂದು ಎಮ್ಮೆ ಕರು ಹಾಕಿತು. ಆಗ ನನ್ನ ಸರದಿ ಬಂತು. ಆ ಎಮ್ಮೆಯ ಹಾಲನ್ನು ಕರೆಯಲು ನಮ್ಮಣ್ಣ ನನಗೆ ಜವಾಬ್ದಾರಿ ಕೊಟ್ಟ. ನನಗೂ ಹಾಲು ಕರೆಯಲು ತುಂಬಾ ಆಸೆಯಿತ್ತು. ಸರಿ, ನಾನೂ ಖುಷಿಯಿಂದಲೇ ಎಮ್ಮೆ ಹಾಲು ಕರೆಯಲು ಶುರು ಮಾಡಿದೆ. ಒಂದು ದಿನ ನಾನು ಹಾಲು ಕರೆಯುತ್ತಿದ್ದ ಹಾಲಿನ ಕುಡಿಕೆ ತುಂಬಿಹೋಯಿತು. ಕೆಚ್ಚಲಲ್ಲಿ ಇನ್ನೂ ಹಾಲಿತ್ತು. ಆಗ ಆ ಹಾಲನ್ನು ಪಾತ್ರೆಗೆ ಹಾಕುವ ಬದಲು ನೊರೆ ಹಾಲನ್ನು ಕುಡಿದು, ಮತ್ತೆ ಹಾಲು ಕರೆಯಲು ಶುರು ಮಾಡಿದೆ. ನೊರೆ ಹಾಲಿನ ರುಚಿ ಬಹಳ ಚೆನ್ನಾಗಿತ್ತು.

ದಿವಸ ಅದೇ ಕೆಲಸ ಮಾಡಲು ಪ್ರಾರಂಭಿಸಿದೆ. ಹಾಗೆ ಜಾಸ್ತಿ ಜಾಸ್ತಿ ಹಾಲು ಕುಡಿಯಲು ಶುರು ಮಾಡಿದೆ. ದಿನೇ ದಿನೇ ಅದರ ಪ್ರಮಾಣ ಹೆಚ್ಚುತ್ತಾ ಹೋಯಿತು. ಹಾಲು ಕಡಿಮೆ ಕಾಣಿಸಬಹುದು ಎಂದು ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದಿಂದ ಅರ್ಧ ಕುಡಿಕೆ ನೀರನ್ನು ಮೊದಲೇ ತುಂಬಿಸಿಕೊಂಡು ಬಂದು ಅದರೊಳಗೆ ಹಾಲು ಕರೆಯುತ್ತಿದ್ದೆ. ನಾನು ಎಷ್ಟು ನೀರು ತರುತ್ತಿದ್ದೆನೋ ಅಷ್ಟು ಹಾಲನ್ನು ಕುಡಿಯಲು ಪ್ರಾರಂಭಿಸಿದೆ. ಹೀಗೇ ದಿನ ಸಾಗುತ್ತಿರುವಾಗ, ಒಂದು ದಿನ ಈ ವಿಷಯ ನಮ್ಮಣ್ಣನಿಗೆ ತಿಳಿದೇಬಿಟ್ಟಿತು.

ಆಗ ನಾನು, ಅಜ್ಜಿ ನನಗೆ ತಿನ್ನಲು ಕೊಟ್ಟ ಕುರುಕಲು ತಿಂಡಿಯಲ್ಲಿ ಅರ್ಧ ಪಾಲು ಆತನಿಗೆ ಕೊಡುವುದಾಗಿ ಆಮಿಷ ಒಡ್ಡಿ ನನ್ನ ಕೆಲಸವನ್ನು ಮುಂದುವರೆಸಿದೆ. ಆದರೆ  ‘ನೊರೆ ಹಾಲು ಕಳ್ಳ’ ಎಂಬ ಗೇಲಿ ಮಾತ್ರ ಬಾಲ್ಯದ ನೆನಪಾಗಿ ಉಳಿದೇಬಿಟ್ಟಿತು.

ಟಿ. ರಾಮಕೃಷ್ಣ ತುಮಕೂರು

* *

ರಾಶಿ ಊಟದ ಗಮ್ಮತ್ತು

ನಾನು ಹುಟ್ಟಿ ಬೆಳೆದಿದ್ದು ಸುತ್ತಲು ಹಸಿರು ತುಂಬಿದ ಊರಿನಲ್ಲಿ. ಹಸಿರಾಗಿ ಕಾಣುವ ಕಪ್ಪತಗುಡ್ಡ ಊರು, ಹರಿಯುವ ಹಳ್ಳಗಳ ನಡುವೆ ಬಾಲ್ಯದ ಘಮಲೂ ತುಂಬಿಕೊಂಡಿತ್ತು. ಒಮ್ಮೆ ಗೆಳೆಯರೆಲ್ಲ ಕೂಡಿ ಮಧ್ಯಾಹ್ನದ ವಿಶ್ರಾಂತಿ ಸಮಯ, ಶಾಲೆಯ ಮುಂದಿರುವ ಮರದಲ್ಲಿ ಮರಕೋತಿ ಆಟ ಆಡುವಾಗ ಗೆಳೆಯನೊಬ್ಬ ಮರದಿಂದ ಬಿದ್ದು ಕೈ ಮುರಿದುಕೊಂಡ. ಇದರಿಂದ ನಮ್ಮ ಗುರುಗಳಿಂದ ಬೆತ್ತದೇಟು ಸಿಕ್ಕಿದ್ದಲ್ಲದೇ ಮನೆಯಲ್ಲೂ ಅದೇ ಬೆತ್ತದೇಟು. ಆದರೂ ನಮ್ಮ ಚೇಷ್ಟೆ ನಿಲ್ಲಲಿಲ್ಲ.

ಇನ್ನೊಂದು ಮಧ್ಯಾಹ್ನ ನಾನು ಮತ್ತು ನನ್ನ ಗೆಳೆಯ ಪೇರು ತೋಟಕ್ಕೆ ಹೋಗಿ ಕದ್ದು ಹಣ್ಣನ್ನು ಹರಿಯುವಾಗ ತೋಟದ ಯಜಮಾನನ ಕೈಲಿ ಸಿಕ್ಕಿಬಿದ್ದೆವು. ಹಣ್ಣುಗಳನ್ನು ಕಿತ್ತಿದ್ದಕ್ಕಾಗಿ ಮೂರು ಬುಟ್ಟಿ ಹಣ್ಣುಗಳನ್ನು ಯಜಮಾನನಿಗೇ ಕಿತ್ತು ಕೊಟ್ಟೆವು.

ಕಪ್ಪತ ಗುಡ್ಡದಲ್ಲಿ ಸಿಗುವ ಕವಳಿ, ಕಾರಿ, ಬಾರಿ, ನೇರಳೆ, ಪೇರಲ, ಸೀತಾಫಲ ಮತ್ತು ಡಬ್ಬಗೊಳ್ಳಿ ಹಣ್ಣುಗಳಂತೂ ನಮಗೆ ಲೆಕ್ಕಕ್ಕೇ ಇಲ್ಲ. ಇವೆಲ್ಲಾ ನಮ್ಮ ಬಾಲ್ಯದ ತಿಂಡಿಗಳು.

ಗಿರಣಿಗೆ ಜೋಳದ ಹಿಟ್ಟನ್ನು ಹಾಕಿಸಲು ಹೋದಾಗ ಅದರಲ್ಲಿಯ ಒಂದು ಚಟಾಕ ಜೋಳವನ್ನು ಕದ್ದು ಮೆಣಸಿನಕಾಯಿ ಬಜಿಯನ್ನು ತಿಂದಿದ್ದೆವು. ಮನೆಯಲ್ಲಿ ಹಿಟ್ಟು ಕಡಿಮೆ ಏಕೆಂದು ಅವ್ವ ಕೇಳಿದಾಗ ರಮಾಣಿಯವರ ಗಿರಣಿಯ ಕಲ್ಲು ಹಿಟ್ಟು ತಿನ್ನುತ್ತದೆ ಎಂದು ಸುಳ್ಳು ಹೇಳಿ ಅವ್ವನನ್ನು ನಂಬಿಸಿದ್ದು ಈಗಲೂ ನಗು ತರುತ್ತದೆ.

ಬೇಸಿಗೆಯಲ್ಲಿ ಎಲ್ಲ ಗೆಳೆಯರು ಕೂಡಿ ಈಜಲು ಹಳ್ಳಕ್ಕೆ ಹೋಗುತ್ತಿದ್ದೆವು. ಈಜಾಡಿದ ಮೇಲೆ ನಮ್ಮ ಕೆಲಸ ಹಳ್ಳದ ಗುಂಟ ಬೆಳೆದ ಕಂಟಿಗಳಲ್ಲಿ ಜೇನು ಬಿಡಿಸುವುದು. ಜೋಳದ ರಾಶಿ ಮಾಡುವ ರಾತ್ರಿಯ ಸಮಯದಲ್ಲಿ ನಮ್ಮ ಗುರುಗಳ ಜೊತೆಯಲ್ಲಿ ರಾಶಿ ಊಟಕ್ಕೆ ಹೋಗುತ್ತಿದ್ದೆವು. ಅಲ್ಲಿ ಗೋಧಿ ಹುಗ್ಗಿ, ಜೋಳದ ಬಾನ ಊಟವನ್ನು ಎಂದೂ ಮರೆಯಲಾಗದು.

ಈಗ ಕಣಗಳೂ ಇಲ್ಲ, ರಾಶಿ ಮಾಡುವವರೂ ಇಲ್ಲ. ಹಂತಿಪದವನ್ನು ಹಾಡುವವರು ಇಲ್ಲವೇ ಇಲ್ಲ. ಈಗ ಬಹುತೇಕ ಹಳ್ಳಿಗಳಲ್ಲಿ ಒಕ್ಕುಲತನ ಮಾಯವಾಗಿದೆ. ಆದರೆ ಅಂಥ ಬಾಲ್ಯ ನಮ್ಮದೆಂಬ ಹೆಮ್ಮೆಯಂತೂ ಇದೆ.

ಎಂ. ಎ. ಪಾಟೀಲ ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry