6
ರಾಜ್ಯಮಟ್ಟದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಎಸ್‌.ವಿ.ಸಂಕನೂರ ಆತಂಕ

ಮೂಲವಿಜ್ಞಾನದಿಂದ ದೂರವಾದ ಮಕ್ಕಳು

Published:
Updated:
ಮೂಲವಿಜ್ಞಾನದಿಂದ ದೂರವಾದ ಮಕ್ಕಳು

ಮೈಸೂರು: ಮೂಲವಿಜ್ಞಾನ ಅಧ್ಯಯನ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಸಂಕನೂರ ಆಗ್ರಹಿಸಿದರು.

ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಗುರುವಾರ ಮೈಸೂರು ವಿ.ವಿ ಸೆನೆಟ್ ಭವನದಲ್ಲಿ ಆರಂಭವಾದ ರಾಜ್ಯಮಟ್ಟದ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಮೂಲ ವಿಜ್ಞಾನ ವನ್ನು ಅಧ್ಯಯನಕ್ಕೆ ಆಯ್ದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನೂರು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪಾಸಾದರೆ ಅವರಲ್ಲಿ 50 ಮಂದಿ ಕಲಾ ವಿಭಾಗಕ್ಕೆ ಸೇರುತ್ತಿದ್ದಾರೆ. 30 ವಿದ್ಯಾರ್ಥಿಗಳು ಮಾತ್ರ ವಿಜ್ಞಾನ ವಿಭಾಗ ಸೇರುತ್ತಾರೆ ಎಂದರು.

ಅಭಿವೃದ್ಧಿಯ ಜತೆಜತೆಗೆ ಪರಿಸರ ಹಾಗೂ ಸಂಪನ್ಮೂಲ ಉಳಿಸಿಕೊಳ್ಳ ಬೇಕಿದೆ. ಪರಿಸರ ನಾಶವಾಗದಂತೆ ಪ್ರಗತಿ ಪಥದಲ್ಲಿ ಸಮಾಜವನ್ನು ಕರೆದೊಯ್ಯಬೇಕಿದೆ ಎಂದು ಹೇಳಿದರು.

ವಿಜ್ಞಾನ ಪದವಿ ಪಡೆಯುವ ಬಹುತೇಕ ಮಂದಿ ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವದ ಜತೆಗೆ, ಸಂಶೋಧನೆ ಗಳತ್ತಲೂ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ‘ತಿ.ನರಸೀಪುರ, ನಂಜನಗೂಡು, ವರುಣಾ ಕ್ಷೇತ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಬೃಹತ್ ವಿಜ್ಞಾನ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಯುವ ವಿಜ್ಞಾನಿ ಪವನ್, ಶಾಸಕ ವಾಸು, ಸಮಾವೇಶದ ಸಂಯೋಜಕ ಎಚ್.ಜಿ.ಹುದ್ದಾರ್, ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ಹರಿಪ್ರಸಾದ್, ಉಪಾಧ್ಯಕ್ಷ ಎಸ್.ಎಂ.ಗುರುನಂಜಯ್ಯ, ಗೌರವ ಕಾರ್ಯ ದರ್ಶಿ ಗಿರೀಶ ಕಡ್ಲೆವಾಡ, ಮುಖಂಡ ವೆಂಕಟರಾಮಯ್ಯ, ಜಿ.ಪಂ. ಅಧ್ಯಕ್ಷೆ ನಯೀಮಾ ಸುಲ್ತಾನ, ಜಿಲ್ಲಾಧಿಕಾರಿ ಡಿ.ರಂದೀಪ್ ವೇದಿಕೆಯಲ್ಲಿದ್ದರು.

ಗಣಿತ, ವಿಜ್ಞಾನಕ್ಕೆ ಒತ್ತು

ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಆದ್ಯತೆ ಕಡಿಮೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್ ತಿಳಿಸಿದರು.

ಇದಕ್ಕೆ ಮುಂದಿನ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲೂ 4ರಿಂದ 9ನೇ ತರಗತಿವರೆಗೆ ವಿಜ್ಞಾನ ಮತ್ತು ಗಣಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದರು.

ಜನಪ್ರತಿನಿಧಿಗಳ ಗೈರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರಿತ್ತು. ಆದರೆ, ಇವರಿಬ್ಬರು ಸಮಾರಂಭದಿಂದ ದೂರ ಉಳಿದರು.

ಜನಪ್ರತಿನಿಧಿಗಳಿಗೆ ಕಾಯದೆ ಆಯೋಜಕರು ಕಾರ್ಯಕ್ರಮ ಆರಂಭಿಸಿದರು. ಒಂದು ಗಂಟೆ ತಡವಾಗಿ ಸಚಿವ ತನ್ವೀರ್‌ ಸೇಠ್, ಶಾಸಕರಾದ ವಾಸು, ಜಿ.ಟಿ.ದೇವೇಗೌಡ ಬಂದರು. ಈ ವೇಳೆ ಮಾತನಾಡುತ್ತಾ ತನ್ವೀರ್ ಸೇಠ್, ‘ಅತಿಥಿಗಳು ಬಂದಿಲ್ಲ ಎಂದು ಸಮಾರಂಭಕ್ಕೆ ಬಂದೆ’ ಎಂದರು.

*

ವಿಜ್ಞಾನ ಕ್ಷೇತ್ರದಲ್ಲಿ ಭಾರತ 68ನೇ ಸ್ಥಾನದಲ್ಲಿದೆ. ಇತರ ದೇಶಗಳಂತೆ ಮುಂಚೂಣಿಗೆ ಬರಲು ಶಾಲಾ ಪಠ್ಯದಲ್ಲಿ ವಿಜ್ಞಾನವನ್ನು ಹೆಚ್ಚು ಅಳವಡಿಸಬೇಕು.

–ಜಿ.ಟಿ.ದೇವಗೌಡ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry