ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳು ಅಂಕ ಗಳಿಕೆ ಯಂತ್ರವಲ್ಲ’

Last Updated 1 ಡಿಸೆಂಬರ್ 2017, 4:28 IST
ಅಕ್ಷರ ಗಾತ್ರ

ಮೂಡುಬಿದಿರೆ: ಇತ್ತೀಚೆಗೆ ಶಿಕ್ಷಣದ ದಿಕ್ಕು ಬದಲಾಗುತ್ತಿದ್ದು, ಒಂದೆಡೆ ಇಡೀ ವಿಶ್ವವು ತನ್ನ ಸಂಸ್ಕೃತಿಯನ್ನು ಬೆಳೆಸುವತ್ತಾ ಸಾಗಿದರೆ ಇನ್ನೊಂದೆಡೆ ನಮ್ಮ ಶಿಕ್ಷಣ ಪದ್ಧತಿಯೂ ಅದೇ ಸಂಸ್ಕೃತಿಯ ಮಹತ್ವವನ್ನು ಕಡೆಗಣಿಸುತ್ತಿದೆ. ಈಗಲಾದರೂ ನಮ್ಮ ಶಿಕ್ಷಣ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಉಡುಪಿ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ವಿದ್ಯಾರ್ಥಿ ನಚಿಕೇತ್ ನಾಯಕ್ ಅಭಿಪ್ರಾಯಪಟ್ಟರು.

ಆಳ್ವಾಸ್ ನುಡಿಸಿರಿ-2017ರ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಸಿರಿ ಸಮಾರೋಪದಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸದೇ, ಅವರಲ್ಲಿ ಬರಿ ಅಂಕ ಗಳಿಕೆಯ ಮನಸ್ಥಿತಿ ಬೆಳೆಸದೇ ಮೊದಲು ಮಾನವೀಯತೆ ಮೂಡಿಸುವ ಕಾರ್ಯ ನಡೆಯಬೇಕು’ ಎಂದರು.

‘ಇಂದಿನ ವಿದ್ಯಾರ್ಥಿಗಳು ಕನ್ನಡದ ಸೊಗಡನ್ನು ಕಾಯ್ದುಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ ತುಳುನಾಡಿನ ಭೂತಾರಾಧನೆ ಮತ್ತು ನಾಗಮಂಡಲ ಎಂಬ ಪದಗಳು ಇಂದು ದೆವ್ವದ ಪೂಜೆ, ಹಾವಿನ ಪೂಜೆ ಎಂದು ಕರೆಯಲ್ಪಡುವುದು ದುರದೃಷ್ಟಕರ’ ಎಂದು ಅವರು ಹೇಳಿದರು.

ವಿದ್ಯಾರ್ಥಿಸಿರಿಯ ಅಧ್ಯಕ್ಷತೆ ವಹಿಸಿದ್ದ ಅರ್ಜುನ್ ಶೆಣೈ ಮಾತನಾಡಿ ‘ವಿದ್ಯಾರ್ಥಿಗಳು ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸದಾ ಸಾಂಸ್ಕೃತಿಕ ಮನೋಭಾವದೆಡೆಗೆ ತುಡಿತವಿರಬೇಕು’ ಎಂದು ಪ್ರತಿಪಾದಿಸಿದರು.

‘ಸಾಮಾಜಿಕ ಜಾಲತಾಣ: ಅರಿತು ಬಳಸಿ’
ಮೂಡಬಿದಿರೆ: ಸಾಮಾಜಿಕ ಜಾಲ ತಾಣದ ಬಗೆಗಿನ ಚರ್ಚೆಗಳು ಇಂದು ನಿನ್ನೆಯದಲ್ಲ. ಹಾಗಾಗಿ ಇಂತಹ ಗಂಭೀರ ವಿಷಯಗಳ ಚರ್ಚೆಗೂ ವಿದ್ಯಾರ್ಥಿಸಿರಿ ವೇದಿಕೆಯಾಯಿತು. ಪಣಂಬೂರಿನ ಎನ್.ಎಂ.ಪಿ.ಓ ಶಾಲೆ ಯ ವಿದ್ಯಾರ್ಥಿನಿ ಭೂಮಿಕಾ ಪ್ರಿಯದರ್ಶಿನಿ ‘ಸಾಮಾಜಿಕ ಜಾಲತಾಣಗಳು:ಅರಿತು ಬಳಸಿದರೆ ಚೆನ್ನ’ವಿಷಯ ಕುರಿತು ಉಪನ್ಯಾಸ ನೀಡಿದರು.

‘ತಂತ್ರಜ್ಞಾನ ಎಂಬುದು ಎರಡು ಅಲಗಿನ ಕತ್ತಿ ಇದ್ದ ಹಾಗೆ, ಅದು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನೂ ಒಳಗೊಂಡಿರುತ್ತದೆ. ಅದನ್ನು ಅರಿತು ಬಳಸುವುದು ನಮ್ಮ ಜವಾಬ್ದಾರಿ' ಎಂದು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿನಿ ಭೂಮಿಕಾ ಪ್ರಿಯದರ್ಶಿನಿ ತಿಳಿಸಿದರು.

‘ಸಾಮಾಜಿಕ ಜಾಲತಾಣಗಳು ಇಂದು ಯುವಜನತೆಯಲ್ಲಿ ವ್ಯಸನವಾಗಿ ರೂಪುಗೊಳ್ಳುತ್ತಿದೆ. ಅನೈತಿಕ, ಅಶ್ಲೀಲ ವಿಷಯಗಳು ಸುಲಭವಾಗಿ ಜಾಲತಾಣಗಳಲ್ಲಿ ದೊರೆಯುತ್ತಿರುವುದರಿಂದ, ಮಕ್ಕಳು ಹೆಚ್ಚಾಗಿ ಅವುಗಳಿಗೆ ಬಲಿಯಾಗುತ್ತಿದ್ದಾರೆ. 'ಬ್ಲೂ ವೇಲ್'ನಂತಹ ಆಟಗಳು ಸಾಮಾಜಿಕ ಮಾಧ್ಯಮದ ದುರ್ಬಳಕೆಗೆ ಜ್ವಲಂತ ಸಮಸ್ಯೆಗಳಾಗಿ ನಿಲ್ಲುತ್ತಿವೆ. ದೇಶ ಕಟ್ಟಬೇಕಾದ ಯುವಜನತೆ ಇಂದು ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮೈಮರೆಯುತ್ತಿದ್ದಾರೆ’ ಎಂದರು.

ಮುಂದೆ ಸಾಮಾಜಿಕ ಜಾಲತಾಣದ ಸಕಾರಾತ್ಮಕ ಆಯಾಮದ ಮೇಲೆ ಬೆಳಕು ಚೆಲ್ಲಿದ ಅವರು, "ಸಾಮಾಜಿಕ ಜಾಲತಾಣವೆಂದರೆ ಕೇವಲ ವಾಟ್ಸಾಪ್, ಫೇಸ್‌ಬುಕ್‌ ಇತ್ಯಾದಿ ಎಂಬ ಮನೋಭಾವ ತೊರೆದು, ಅದರ ಉಪಯೋಗಗಳ ಕಡೆಗೆ ಗಮನ ಹರಿಸಬೇಕಿದೆ.

ಜಾಲತಾಣಗಳು ಜಗತ್ತಿನ ಯಾವುದೇ ವಿಷಯದ ಕುರಿತು ಮಾಹಿತಿ ಪಡೆದುಕೊಳ್ಳಲು ಉತ್ತಮ ಮಾಧ್ಯಮ. ನಮ್ಮ ಪರೀಕ್ಷಾ ತಯಾರಿಕೆಗೆ, ತಜ್ಞರ ಜೊತೆ ಸಂವಹನಿಸುವುದಕ್ಕೆ, ನಮ್ಮ ಇತರ ನೆಚ್ಚಿನ ವಿಷಯಗಳ ಬಗೆಗೆ ಮಾಹಿತಿ ಪಡೆಯಲು ಬಳಸಬಹುದಾಗಿದೆ. ಇದನ್ನು ಅರಿಯಬೇಕಾದ ಅನಿವಾರ್ಯತೆ ಇಂದಿನ ಯುವಜನತೆಗೆ ಇದೆ’ ಎಂದು ಹೇಳಿದರು. ಮೂಡಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶರಣ್ಯ ಉಪನ್ಯಾಸ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.

ರೂಬಿಕ್ ಕ್ಯೂಬ್‌ನಲ್ಲಿ ಮೋಹನ ಆಳ್ವ
ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ವಿದ್ಯಾರ್ಥಿ ಸಿರಿ ಸಮ್ಮೇಳನ ಸಾಕಷ್ಟು ವಿದ್ಯಾರ್ಥಿ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ವೇದಿಕೆಯನ್ನು ಒದಗಿಸಿತು. ರೋಮಾಂಚನಕಾರಿಯಾದ, ವೈವಿಧ್ಯಮಯ ಪ್ರಯತ್ನಗಳು ಒಗ್ಗೂಡಿದ ಈ ಪ್ರತಿಭಾ ಪ್ರದರ್ಶನ ವಿದ್ಯಾರ್ಥಿ ಸಿರಿಗೆ ಸಾರ್ಥಕ್ಯದ ಭಾವ ತಂದುಕೊಟ್ಟಿತು.

ಕುಂಚ ಮತ್ತು ಬಣ್ಣಗಳನ್ನು ಉಪಯೋಗಿಸಿ ಚಿತ್ರ ರಚಿಸುವವರ ನಡುವೆ ವಿಭಿನ್ನವಾಗಿ ನಿಲ್ಲುತ್ತಾರೆ ಪ್ರಥ್ವೀಶ್ ಕೆ ಪೇತ್ರಿ. ಅವರು ರೂಬಿಕ್ ಕ್ಯೂಬ್‌ಗಳಿಂದ ಚಿತ್ರ ರಚಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಆಳ್ವಾಸ್ ನುಡಿಸಿರಿಯ ಭಾಗವಾಗಿ ಗುರುವಾರ ನಡೆದ ವಿದ್ಯಾರ್ಥಿಸಿರಿಯಲ್ಲಿ ಭಾಗವಹಿಸಿದ ಇವರು 8 ನಿಮಿಷಗಳಲ್ಲಿ 450 3ಇಂಟು 3 ಕ್ಯೂಬ್‌ಗಳನ್ನು ಉಪಯೋಗಿಸಿ ರಚಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವರ ಚಿತ್ರ ನೆರೆದವರನ್ನು ನಿಬ್ಬೆರಗಾಗಿಸಿತು.

ಪ್ರಸ್ತುತ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಎಂ.ಇ ವ್ಯಾಸಂಗ ಮಾಡುತ್ತಿರುವ ಇವರು, ರ್‍್ಯೂಬಿಕ್ ಕ್ಯೂಬ್‌ಗಳಿಂದ ಭಾವಚಿತ್ರ ರಚಿಸಿದ ಏಕೈಕ ಪ್ರತಿಭೆ. ಇದುವರೆಗೂ 25ಕ್ಕಿಂತ ಹೆಚ್ಚು ಈ ರೀತಿಯ ಪ್ರದರ್ಶನ ನೀಡಿರುವ ಇವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಹಂಬಲ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT