7

ಅಧಿಕಾರಿಗಳ ವಿರುದ್ಧ ಅವ್ಯವಹಾರದ ಆರೋಪ

Published:
Updated:

ಕಾರವಾರ: ಕಸ ಸಾಗಣೆ ವಾಹನ ಖರೀದಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ನಗರಸಭೆ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ವಿಷಯವು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯಾಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಸಂದೀಪ ತಳೇಕರ್, ‘ನಗರಸಭೆಯ ಕಸ ಸಾಗಣೆ ವಾಹನ ಖರೀದಿಯಲ್ಲಿ ಅಧಿಕಾರಿಗಳು ಅವ್ಯವಹಾರ ನಡೆಸಿದ್ದರು. 6 ಚಕ್ರದ ವಾಹನ ಖರೀದಿಸಲು ಮಾಡಿದ್ದ ಠರಾವನ್ನು ಧಿಕ್ಕರಿಸಿ 4 ಚಕ್ರದ ವಾಹನವನ್ನು ಖರೀದಿ ಮಾಡಲಾಗಿತ್ತು. ಅದರಲ್ಲಿಯೂ ಕೂಡ ಅವ್ಯವಹಾರ ನಡೆಸಲಾಗಿತ್ತು.

ಜತೆಗೆ ಮನೆಗಳ ಕಸ ಸಂಗ್ರಹಣೆಗೆ ಬಾರ್ ಕೋಡ್ ವ್ಯವಸ್ಥೆ, ಕೋಡಿಬಾಗ ರಸ್ತೆಯ ಮ್ಯಾನ್‌ಹೋಲ್‌ಗೆ ಕಳಪೆ ಮಟ್ಟದ ಮುಚ್ಚಳ ಅಳವಡಿಕೆ ಹಾಗೂ ಇನ್ನೆರಡು ಪ್ರಕರಣಗಳಲ್ಲಿ ನಡೆದಿರುವ ಅವ್ಯವಹಾರದ ಕುರಿತ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡುವಂತೆ ಒತ್ತಾಯಿಸಿ ಕಳೆದ ಸಭೆಯಲ್ಲಿ ಠರಾವು ಮಾಡಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಆರೋಪ ಹೊತ್ತ ಅಧಿಕಾರಿಗಳು ತಮ್ಮ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ’ ಎಂದು ದೂರಿದರು.

ಪೌರಾಯುಕ್ತ ಯೋಗೇಶ್ವರ ಪ್ರತಿಕ್ರಿಯಿಸಿ, ‘ನಗರಸಭೆಯಲ್ಲಿ ಅಧಿಕಾರಿಗಳು ನಡೆಸಿದ ಅವ್ಯವಹಾರಗಳ ಕುರಿತಾಗಿ ಲೋಕಾಯುಕ್ತ ತನಿಖೆಗೆ ನೇರವಾಗಿ ನಾವೇ ನೀಡುವ ಅಧಿಕಾರ ಇಲ್ಲ. ಇಲ್ಲಿನ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಯಾರಿಗೆ ಅಧಿಕಾರವಿದೆಯೋ ಅವರೇ ವಜಾ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗಿದೆ. ಅವರು ಪೌರಾಡಳಿತ ನಿರ್ದೇಶನಾಲಯಕ್ಕೆ (ಡಿಎಂಎ) ತನಿಖೆಗೆ ಕಳುಹಿಸುತ್ತಾರೆ’ ಎಂದರು.

‘ಈಗಾಗಲೇ ಈ ಕುರಿತಂತೆ ಮೂರನೇ ವ್ಯಕ್ತಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತಾಂತ್ರಿಕ ತಜ್ಞರು ತನಿಖೆ ನಡೆಸಬೇಕಿದೆ. ಅವ್ಯವಹಾರದ ಆರೋಪದ ಕುರಿತಂತೆ ನಗರಸಭೆಯಿಂದ ಜಾರಿ ಮಾಡಲಾಗಿದ್ದ ನೋಟಿಸ್‌ಗೆ ಅಧಿಕಾರಿಗಳು 5 ಪ್ರಕರಣಗಳಲ್ಲಿ 3ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೆರಡಕ್ಕೆ ಉತ್ತರ ನೀಡಬೇಕಿದೆ’ ಎಂದು ವಿವರಿಸಿದರು.

ಇದಕ್ಕೆ ಕೆಂಡಾಮಂಡಲವಾದ ಸಂದೀಪ್, ‘ಕಳೆದ 9 ವರ್ಷಗಳಿಂದ ಇಲ್ಲಿನ ಆಡಳಿತವನ್ನು, ಅಧಿಕಾರಿಗಳನ್ನು ನೋಡುತ್ತಿದ್ದೇನೆ. ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಇಲ್ಲಿ ಯಾವುದೇ ಕ್ರಮ ಆಗುತ್ತಿಲ್ಲ. ಪರಿಸರ ಎಂಜಿನಿಯರ್ ಮಲ್ಲಿಕಾರ್ಜುನ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದರೂ ಕೂಡ ಅವರನ್ನು ಇನ್ನೂ ಒಂದು ತಿಂಗಳು ಎಂದು ಮುಂದುವರಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಆಡಳಿತ ಪಕ್ಷದವರು ಭಾಗಿ: ಸದಸ್ಯ ಗಣಪತಿ ಉಳ್ವೇಕರ್ ಇದಕ್ಕೆ ದನಿಗೂಡಿಸಿ, ‘ನಗರಸಭೆಯ ಅವ್ಯವಹಾರಗಳಲ್ಲಿ ಇಲ್ಲಿನ ಆಡಳಿತ ಪಕ್ಷದವರು ಭಾಗಿಯಾಗಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು. ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ಇನ್ನಿತರ ಸದಸ್ಯರು ‘ಅಧಿಕಾರಿಗಳ ಅವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ನಾವು ಅದರಲ್ಲಿ ಭಾಗಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಸತಿನಿಲಯದ ಉದ್ಘಾಟನೆಗೆ ವಿರೋಧ: ‘ಖುರ್ಸಾವಾಡದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಕಟ್ಟಡವನ್ನು ಅಸಮರ್ಪಕವಾಗಿ ನಿರ್ಮಾಣ ಮಾಡಲಾಗಿದೆ. ಶೌಚಾಲಯದ ಟ್ಯಾಂಕ್‌ಗಳನ್ನು ನಿರ್ಮಿಸದೇ ಮಲಿನ ನೀರನ್ನು ನಗರಸಭೆಯ ಚರಂಡಿಗೆ ಬಿಡಲಾಗುತ್ತಿದೆ. ಇದು ರಸ್ತೆಯ ಮೇಲೆಯೂ ಕೂಡ ಹರಿಯುತ್ತಿದ್ದು, ಸುತ್ತಮುತ್ತಲಿನ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ. ಹೀಗಾಗಿ ಈ ಕಟ್ಟಡವನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸುವುದಕ್ಕೆ ವಸತಿನಿಲಯದ ವಿದ್ಯಾರ್ಥಿಗಳ ವಿರೋಧಿವಿದೆ’ ಎಂದು ಸದಸ್ಯ ರತ್ನಾಕರ ನಾಯ್ಕ ತಿಳಿಸಿದರು.

‘ವೈದ್ಯಕೀಯ ಕಾಲೇಜಿನ ವಸತಿನಿಲಯದ ಮಲಿನ ನೀರನ್ನು ಕೂಡ ಇದೇ ರೀತಿ ಬೇಕಾಬಿಟ್ಟಿ ನಗರಸಭೆಯ ಚರಂಡಿಗೆ ಬಿಡಲಾಗುತ್ತದೆ. ಅದಕ್ಕೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸದೇ ಅವ್ಯವಸ್ಥೆಯ ಆಗರವನ್ನಾಗಿ ಮಾಡಿಬಿಟ್ಟಿದ್ದಾರೆ. ಸರ್ಕಾರಿ ಕಟ್ಟಡಗಳ ಗತಿಯೇ ಹೀಗಾದರೆ ಹೇಗೆ?’ ಎಂದು ಸದಸ್ಯ ಡಾ.ನಿತಿನ್ ಪಿಕಳೆ ಪ್ರಶ್ನಿಸಿದರು. ‘ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿಕೊಡುತ್ತೇನೆ’ ಎಂದು ಯೋಗೇಶ್ವರ್ ಭರವಸೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಸಾವಂತ ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ನಿಂದನೆ

ತಡವಾಗಿ ಸಭೆಗೆ ಬಂದ ಸದಸ್ಯ ನಂದಾ ಸಾವಂತ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ‘ಚಿಂದಿಚೋರ್‌ಗಳು (ಕಳ್ಳ ನನ್ಮಕ್ಳು) ಸಭೆ ನಡೆಸುತ್ತಾರೆ. ಅಧಿಕಾರಿಗಳು ಅವ್ಯವಹಾರ ನಡೆಸಿದರು ಕ್ರಮ ಕೈಗೊಳ್ಳಲ್ಲ. ಎಲ್ಲವನ್ನೂ ಅವರೇ ಲೂಟಿ ಹೊಡೆಯುತ್ತಿದ್ದಾರೆ. ನಗರಸಭೆಯ ಯಾವ ಕಾಮಗಾರಿಯೂ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದರು. ಬಳಿಕ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯರಾದ ಗಣಪತಿ ಉಳ್ವೇಕರ್, ಡಾ.ನಿತೀನ್ ಪಿಕಳೆ, ‘ಈ ರೀತಿ ಸಭೆಯಲ್ಲಿ ನಿಂದಿಸುವುದು ಸರಿಯಲ್ಲ. ಕುಳಿತುಕೊಂಡು ಚರ್ಚಿಸೋಣ’ ಎಂದು ಸಮಾಧಾನ ಪಡಿಸಲು ಮುಂದಾದರು. ‘ಇಲ್ಲಿ ಯಾವುದೇ ಕೆಲಸ ಆಗಲ್ಲ. ಠರಾವು ಮಾಡಿದ್ದೆಲ್ಲವೂ ಹಾಗೆಯೇ ಇರುತ್ತದೆ. ನನಗೆ ಸಭೆ ಬೇಡ. ನಾನು ಕುಳಿತುಕೊಳ್ಳಲ್ಲ’ ಎಂದು ನಂದ ಸಾವಂತ ಹೊರ ನಡೆದರು.ಮುಖ್ಯಮಂತ್ರಿಗೆ ಮನವಿ

‘ನಗರಸಭೆಯ ಕಟ್ಟಡ, ಮೀನು ಮಾರುಕಟ್ಟೆ, ನಗರೋತ್ಥಾನ ಕಾಮಗಾರಿಗಳು ಹಾಗೂ ಅಂಕೋಲಾ ಪುರಸಭೆ ಕಟ್ಟಡಗಳಿಗೆ ಅಡಿಗಲ್ಲು ಸಮಾರಂಭವನ್ನು ಮುಖ್ಯಮಂತ್ರಿಯವರು ಜಿಲ್ಲಾ ಪ್ರವಾಸ ಕೈಗೊಂಡ ವೇಳೆ ನೆರವೇರಿಸಲಿದ್ದಾರೆ. ಹೀಗಾಗಿ ಅವರಿಗೆ ನಗರಸಭೆ ವತಿಯಿಂದ ಪೌರ ಸನ್ಮಾನವನ್ನು ಮಾಡಲಿದ್ದೇವೆ. ಜತೆಗೆ ನಗರದ ಸಮಗ್ರ ಅಭಿವೃದ್ಧಿಯ ಕುರಿತ ರೂಪರೇಷೆ ತಯಾರಿಸಿ, ಅವರಿಗೆ ಮನವಿ ನೀಡಲು ಇದೇ 4ರಂದು ಸಭೆ ಸೇರಿ ಚರ್ಚಿಸೋಣ’ ಎಂದು ಯೋಗೇಶ್ವರ್ ಹೇಳಿದರು.

* *

ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಉತ್ತರಕ್ಕಾಗಿ ಇನ್ನೊಂದು ತಿಂಗಳು ಕಾಯುತ್ತೇವೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಎಸ್‌.ಯೋಗೇಶ್ವರ್

ಪೌರಾಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry